Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಅಂಬಾರಿ ಮುಗಿದ ಮೇಲೆಯೇ ಮೈಸೂರಿಗರ ದಸರಾ ಸಂಭ್ರಮ

ಸಿರಿ ಮೈಸೂರು

ಮೈಸೂರು ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ವಿಶಾಲ ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲಿನ ಬೃಹದಾಕಾರದ ಮರಗಳು, ಟ್ರಾಫಿಕ್ ಇಲ್ಲದ ಜೀವನ, ಶಾಂತಿ-ಸಮಾಧಾನ ತುಂಬಿದ ಬದುಕು. ಆದರೆ everyday is not Sunday ಎನ್ನುವ ಹಾಗೆ ವರ್ಷಪೂರ್ತಿ ಪರಿಸ್ಥಿತಿ ಇದೇ ರೀತಿ ಇರುವುದಿಲ್ಲ.

ದಸರಾ ಹಬ್ಬ ಬಂದರೆ ಮದುವಣಿಗಿತ್ತಿಯಂತೆ ಸಿಂಗಾರಗೊಳ್ಳುವ ಮೈಸೂರಿನಲ್ಲಿ ಹೆಚ್ಚೂಕಡಿಮೆ ಒಂದು ವಾರ ಜನಸಾಗರ. ಅರಮನೆ ಸುತ್ತಮುತ್ತ ಅಂತೂ ಕಾಲಿಡಲು ಸಹ ಜಾಗ ಇರುವುದಿಲ್ಲ. ದೀಪಾಲಂಕಾರ ನೋಡಲು ಒಮ್ಮೆ ಹೋದರೆ ಟ್ರಾಫಿಕ್‌ನಲ್ಲಿ ಸಿಲುಕಿ, ಉಸಿರಾಡಲೂ ಜಾಗವಿರದಂತಹ ಒಂದಷ್ಟು ರಸ್ತೆಗಳನ್ನು ನೋಡಿಕೊಂಡು, ಎಲ್ಲ ಒನ್ ವೇಗಳನ್ನೂ ದಾಟಿ ಮತ್ತೆ ಮನೆ ತಲುಪುವ ಹೊತ್ತಿಗೆ ಸರಿರಾತ್ರಿಯಾಗಿದ್ದರೂ ಆಶ್ಚರ್ಯವಿಲ್ಲ. ಮೂಲತಃ ಮೈಸೂರಿನವರೇ ಆಗಿರುವ ಜನರಲ್ಲಿ ಬಹುಪಾಲು ಜನರು ದಸರಾ ಸಮಯದಲ್ಲಿ ನಗರದ ಹೃದಯದ ಭಾಗದ ಬಳಿ ಸುಳಿಯುವುದೇ ಇಲ್ಲ ಎಂದರೆ ನೀವು ನಂಬಲೇಬೇಕು. ಆ ಪೈಕಿ ನಾನೂ ಒಬ್ಬಳು. ನಾವು ಮೈಸೂರಿನವರು. ಮೈಸೂರನ್ನು ಶಾಂತವಾಗಿ, ಪ್ರಶಾಂತವಾಗಿ, ಜಂಜಾಟವಿಲ್ಲದೆ ನೋಡುವುದು ಮಾತ್ರ ನಮಗೆ ಸಾಧ್ಯ. ಎಲ್ಲೆಲ್ಲೂ ಜನರು, ಟ್ರಾಫಿಕ್, ಗಲಾಟೆ, ಕಾಲಿಡಲು ಜಾಗವಿಲ್ಲದೆ ಅರಮನೆ ಅಂಗಳ, ಜನರೇ ತುಂಬಿದ ಆಹಾರ ಮೇಳ ಹಾಗೂ ಎಕ್ಸಿಬಿಷನ್ ನೋಡಲು ನಮ್ಮ ಮನಸ್ಸು ಒಪ್ಪುವುದಿಲ್ಲ. ದಸರಾ ಶುರುವಾಗುತ್ತಿದೆ ಎಂದರೆ ನಮ್ಮ ದಿನನಿತ್ಯದ ಅಗತ್ಯಗಳಿಗಷ್ಟೇ ಓಡಾಡುವ ನಾವು ಜನನಿಬಿಡ ಪ್ರದೇಶಗಳಿಂದ ಸಾಧ್ಯವಾದಷ್ಟು ಮಟ್ಟಕ್ಕೆ ದೂರವೇ ಉಳಿಯುತ್ತೇವೆ! ಹಾಗಿದ್ದರೆ ರಸ್ತೆಯ ತುಂಬೆಲ್ಲಾ ತುಂಬಿಕೊಂಡು ದಸರಾ ನೋಡುವ ಜನರು ಯಾರು? ಬಹುಪಾಲು ಹೊರಗಿನವರು. ನಾವೂ ಬೇರೆ ಊರಿಗೆ ಹೋದಾಗ ಹೀಗೆ ಜನರ ಮಧ್ಯೆ ಯಾವುದಾದರೂ ಉತ್ಸವ ನೋಡಿದರೆ ಖುಷಿ ಅನಿಸುತ್ತದೋ ಏನೋ. ಆದರೆ ನಮ್ಮ ಊರಿನಲ್ಲಿ, ನಮ್ಮ ಅನುಕೂಲದಲ್ಲಿ ಇರುವಾಗ ರಸ್ತೆಗಿಳಿದು ಇಲ್ಲದ ಗೋಜಲಿಗೆ ಸಿಕ್ಕಿಕೊಳ್ಳುವುದೇಕೆ? ಹೇಗೂ ದಸರಾ ಮುಗಿದ ಮೇಲೆ ಇನ್ನೊಂದಷ್ಟು ದಿನ ದೀಪಾಲಂಕಾರ ಇದ್ದೇ ಇರುತ್ತದೆ. ಎಕ್ಸಿಬಿಷನ್ ಕೂಡ ಇರುತ್ತದೆ. ಇನ್ನು ಅರಮನೆಯಂತೂ ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ವಾರ ತೆರೆದ ಬಾಹುವಿನಿಂದ ನಮ್ಮನ್ನು ಸ್ವಾಗತಿಸುತ್ತದೆ. ಇಷ್ಟೊಂದು ಅನುಕೂಲ ಇರುವಾಗ ಈ ಗಲಾಟೆಯಲ್ಲಿ ಹೋಗಿ ಸೊರಗುವುದೇಕೆ? ಇನ್ನು ವಿಜಯದಶಮಿ ಮೆರವಣಿಗೆಯಂತೂ ದಿನವೆಲ್ಲಾ ಕುಳಿತು ಟಿವಿಯಲ್ಲಿ ನೋಡುವುದೇ ಚೆಂದ. ಅಲ್ಲಿ ಹೋಗಿ ಎಲ್ಲರ ಮಧ್ಯೆ ಮೆರವಣಿಗೆ ನೋಡಿದರೆ ಯಾವ ರೀತಿಯಲ್ಲಿ ಖುಷಿಯಾಗುತ್ತದೆ ಎಂಬುದರ ಬಗ್ಗೆ ನನಗಂತೂ ಅರಿವು ಕಡಿಮೆ. ಮನೆಯಲ್ಲಿ ಕೂತು ಟಿವಿಯಲ್ಲಿ ಮೆರವಣಿಗೆ ನೋಡಿದರೂ ಧನ್ಯತಾಭಾವ ಮೂಡುತ್ತದೆ ಎಂಬುದು ಸುಳ್ಳಲ್ಲ. ಮೈಸೂರಿನ ಬಹುಪಾಲು ಜನರು ಹೀಗೇ ಯೋಚಿಸುತ್ತಾರೆ ಎಂಬುದು ನನ್ನ ಅನುಭವಕ್ಕೆ ಬಂದಿರುವ ಸಂಗತಿ. ನಾವೆಲ್ಲರೂ ಆರಾಮದಾಯಕ ದಿನಚರಿಗೆ ಒಗ್ಗಿರುವವರು. ತೀರಾ ಅವಶ್ಯವಿರುವಾಗ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಟ್ರಾಫಿಕ್‌ನಂತಹ ಗಲಾಟೆಯಲ್ಲಿ ಸಿಲುಕಿಕೊಳ್ಳ ದಿರುವವರು. ನಮ್ಮ ನಗರವನ್ನು ಪ್ರಶಾಂತವಾಗಿ ಮಾತ್ರ ನೋಡಲು ಇಚ್ಛಿಸುವವರು. ನಾನು ಕೇಳಿರುವವರ ಪೈಕಿ ಶೇ.೯೦ರಷ್ಟು ಮೈಸೂರಿನ ಜನರು ಈವರೆಗೂ ವಿಜಯದಶಮಿ ಮೆರವಣಿಗೆಗೆ ಹೋಗಿಲ್ಲ. ಆ ದಾರಿಯಲ್ಲಿ ಮನೆ ಇದ್ದರೆ ನೋಡಿರುತ್ತಾರಷ್ಟೇ. ಇನ್ನು ಬಹಳ ಹಿರಿಯರು ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲಾ ಜನರು ಸೇರದ ಸಂದರ್ಭಗಳಲ್ಲಿ ಅಂಬಾರಿ ಕಣ್ತುಂಬಿಕೊಂಡಿರುತ್ತಾರೆ. ಯಾರ್ಯಾರೋ ಯಾಕೆ, ಸ್ವತಃ ನಾನೇ ಈವರೆಗೂ ಆಹಾರ ಮೇಳಕ್ಕೆ ಒಂದು ಬಾರಿಯೂ ಹೋಗಿಲ್ಲ. ಪತ್ರಕರ್ತೆಯಾಗಿದ್ದಾಗ ಸುದ್ದಿ ಮಾಡಲೇಬೇಕಾದ್ದರಿಂದ ವಿವಿಧ ಕಾರ್ಯಕ್ರಮಗಳಿಗೆ ಹೋಗುತ್ತಿದ್ದುದನ್ನು ಹೊರತುಪಡಿಸಿ, ಬೇರೆ ವರ್ಷಗಳಲ್ಲಿ ಒಂಬತ್ತು ದಿನಗಳೂ ಆ ಕಡೆ ಸುಳಿದಿಲ್ಲ. ನಾವೆಲ್ಲಾ ಮೈಸೂರಿನವರು. ನಮ್ಮ ಸಂಭ್ರಮ ಏನಿದ್ದರೂ ಪ್ರಶಾಂತತೆಯಲ್ಲಿ ಮಾತ್ರ. ಮೈಸೂರಿನವರ ದಸರಾ ಸಂಭ್ರಮ ಏನಿದ್ದರೂ ದಸರಾ ಮುಗಿದ ಮೇಲಷ್ಟೇ!

” ಮೂಲತಃ ಮೈಸೂರಿನವರೇ ಆಗಿರುವ ಜನರಲ್ಲಿ ಬಹುಪಾಲು ಜನರು ದಸರಾ ಸಮಯದಲ್ಲಿ ನಗರದ ಹೃದಯದ ಭಾಗದ ಬಳಿ ಸುಳಿಯುವುದೇ ಇಲ್ಲ ಎಂದರೆ ನೀವು ನಂಬಲೇಬೇಕು. ಆ ಪೈಕಿ ನಾನೂ ಒಬ್ಬಳು”

Tags:
error: Content is protected !!