• ಡಾ.ಶುಭಶ್ರೀ ಪ್ರಸಾದ್
ಕಳೆದ ವಾರ ಜೋರು ಸೆಕೆಯ ನಡುವೆ ಕಾದ ನೆಲದ ಮೇಲೆ ಮಳೆಹನಿ ಇಣುಕಿ, ಧರೆಯನ್ನು ಕೆಣಕಿ, ಮೂಗೆಲ್ಲಾ ಘಮ್ ಎನ್ನುವ ವೇಳೆಗೆ ಎಳೆವಯಸ್ಸಿನ ತಾಯಿಯೊಬ್ಬರು ನನ್ನ ಕೌಂಟರಿನ ಮುಂದೆ ಬಂದು ನಿಂತರು. ಆಕೆಯ ಕೈ ಹಿಡಿದು ಅರಳುಗಣ್ಣಿನಿಂದ ಹೊಸತನ್ನು ನೋಡುವ ಕುತೂಹಲ ತೋರುತ್ತಿದ್ದ ಪುಟ್ಟ ಬಾಲಕಿಯೂ ಜೊತೆಗಿದ್ದಳು. ಮಳೆಹನಿ ಇಣುಕುತ್ತಿದ್ದರಿಂದ ಬ್ಯಾಂಕಿನಲ್ಲಿ ಒಂದಿಪ್ಪತ್ತು ಪರ್ಸೆಂಟ್ ರಶ್ ಕಡಿಮೆಯಾಗಿತ್ತು. ‘ಚಿನ್ನದ: – ಸಾಲ ಬೇಕಿತ್ತು’ ಎಂದಳಾಕೆ. ‘ಸರಿ ಅಕ್ಕಸಾಲಿಯವರನ್ನು ಕರೆಸ್ತೇನೆ ಕೂತೊಳಿ’ ಎಂದೆ. ‘ಸ್ಕೂಲು ರಜಾನಾ? ಅದಕ್ಕೇ ಅಮ್ಮ ಜೊತೆ ಬಂದಿದ್ದೀಯಾ?’ ಎಂದು ಮಗುವನ್ನು ಕೇಳಿದೆ. ಮೆಲುನಕ್ಕು ‘ಹೂ’ ಎಂದಿತು. ಇದೇ ಮೊದಲು ಬ್ಯಾಂಕಿಗೆ ಬಂದದ್ದಿರಬೇಕು. ಎಲ್ಲ ಕಡೆಯೂ ನೋಡುತ್ತಿದ್ದಳು. ಚಿನ್ನ ಪರೀಕ್ಷಿಸುವ ಅಕ್ಕಸಾಲಿ ಬಂದ ಮೇಲೆ ಆಕೆ ಒಡವೆಗಳನ್ನು ಪರ್ಸಿನಿಂದ ತೆಗೆದುಕೊಟ್ಟರು. ಆ ಒಡವೆಗಳನ್ನು ಒರೆಗಲ್ಲಿಗೆ ತಿಕ್ಕಲು ತೆಗೆದುಕೊಂಡ ತಕ್ಷಣವೇ ಆ ಪುಟ್ಟ ಹೆಣ್ಣುಮಗುವಿನ ಕಣ್ಣಲ್ಲಿ ನೀರು ತುಳುಕಿಬಿಟ್ಟಿತು. ಒಂದು ಕ್ಷಣ ನಾನಾಗಲೀ, ಮಗುವಿನ ತಾಯಿಯಾಗಲೀ, ಚಿನ್ನ ಪರಿಶೋಧಕರಾಗಲೀ ಮೌನವಾದವು. ಕ್ಷಣ ಸುಧಾರಿಸಿಕೊಂಡು ಏಕೆಂದು ಕೇಳಲು ‘ಇದು ಮೊನ್ನೆ ಅಕ್ಷಯ ತದಿಗೆಗೆ ಎಂದು ಅಮ್ಮ ನನಗೆ ತೆಗೆಸಿಕೊಟ್ಟ ಹೊಸಾ ಬ್ರೇಸ್‌ಲೆಟ್. ಅದನ್ನೂ ಬ್ಯಾಂಕಿಗೇ ಕೊಟ್ಟು ಬಿಡುತ್ತೀಯಾ ಮಮ್ಮಿ?’ ಎನ್ನುವಷ್ಟರಲ್ಲಿ ಗಂಗೆ ಯಮುನೆ ಹರಿದುಬಿಟ್ಟರು. ಕೂಡಲೇ ತಾಯಿ ಮಗುವಿನ ಬ್ರೇಸ್‌ಲೆಟ್ ವಾಪಸ್ ಪಡೆದುಕೊಂಡು ಆಕೆಯ ಗಂಡನ ಬ್ರೇಸ್ ಲೆಟ್ಟನ್ನು ಆಡ ಇಟ್ಟರು. ಆಗ ಆ ಮಗುವಿನ ಮುಖವನ್ನು ನೋಡಬೇಕಿತ್ತು. ಯಾರೋ ಕಿತ್ತುಕೊಂಡ ಚಾಕಲೇಟನ್ನು ಕಿತ್ತುಕೊಂಡವರೇ ವಾಪಸ್ಸು ಕೊಟ್ಟ ಹಾಗಿತ್ತು. ಚಿನ್ನದೊಂದಿಗಿನ ಭಾವನಾತ್ಮಕ ಸಂಬಂಧವೇ ಅಂಥದ್ದು. ಎಂತಹ ಕಡುಬಡವರಾದರೂ ಕಡೆಯಪಕ್ಷ ತಾಳಿಯಾದರೂ ಚಿನ್ನವೇ ಇರಬೇಕೆಂದು ಶ್ರಮಿಸುತ್ತಾರೆ.
ಚಿನ್ನದ ಮಹತ್ವ ಅಂಥದ್ದು. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಅದು ಸಾಲದ ರೂಪದಲ್ಲಿಯೋ ಮಾರಾಟದ ರೂಪದಲ್ಲಿಯೋ ಬಹುಬೇಗನೆ ಧನವಾಗಿ ಪರಿವರ್ತಿತವಾಗುತ್ತದೆ. ನಮ್ಮ ಮೈಸೂರಿನ ಒಡೆಯರು ಕನ್ನಂಬಾಡಿ ಕಟ್ಟೆಯನ್ನು ಕಟ್ಟುವಾಗ ಅರಸಿ ತಮ್ಮ ಚಿನ್ನದ ಒಡವೆಗಳನ್ನು ಮಾರಿ ಕ ಕಟ್ಟೆ ಕಟ್ಟಿ ಎಂದು ಕೊಟ್ಟರಂತೆ. ಇದನ್ನು ತನ್ನು ಕೇಳಿ ಅನೇಕರು ಸಮಾಜ ಸೇವೆ ಎಂದು ತಮ್ಮ ಚಿನ್ನವನ್ನು ಕೊಟ್ಟಿದ್ದರಂತೆ. ಚಿನ್ನ ಆಪದ್ಧನವೆಂಬುದಂತೂ ಸತ್ಯ. ಅದಕ್ಕೆಂದೇ ಚಿನ್ನ ಅಡಮಾನದ ಸಾಲ ಸಂಸ್ಥೆಗಳು ಹೆಚ್ಚುತ್ತಿವೆ. ಚಿನ್ನ ಅಡಮಾನ ಸಾಲ ಹೊಸತೇನಲ್ಲ.
ಕಣ್ಣೀರಿಡುತ್ತಾ ತಮ್ಮ ತಾಳಿ ಗುಂಡುಗಳನ್ನೂ ಅಡ ಇಟ್ಟು ಬದುಕು ಸಾಗಿಸಿರುವ ಅನೇಕ ನಿದರ್ಶನಗಳೂ ಇತಿಹಾಸದಲ್ಲಿವೆ. ಈಗಲೂ ಚಿನ್ನ ಅಡಮಾನ ಸಾಲವೇ ಅತ್ಯಂತ ಸುಲಭದ ಸಾಲಮಾಧ್ಯಮ. ಚಿನ್ನದ ಸಾಲ ಎಂದಾಗ ಕೆಲ ಘಟನೆಗಳು ನನ್ನ ಸ್ಮೃತಿಪಟಲದಲ್ಲಿ ಹಾದುಹೋಗುತ್ತವೆ. ಇತ್ತೀಚಿನ
ವರ್ಷಗಳಲ್ಲಿ ನಾನು: ೦ ಚಿನ್ನದ ಸಾಲದ ವಿಭಾಗದಲ್ಲಿ ಕೆಲಸ ಸ ಮಾಡುತ್ತಿದ್ದೇನೆ. ಬಹುತೇಕ ಜಮೀನು ಖರೀದಿಗೋ, ಸೈಟ್ ಖರೀದಿಗೋ, ಮನೆ ಖರೀದಿಗೋ ಇಲ್ಲಾ ಹೊರಗಿನ ಸಾಲವನ್ನು ತೀರಿಸಲೋ ಚಿನ್ನದ ಸಾಲವನ್ನು ಪಡೆಯಲಾಗುತ್ತದೆ. ಅಲ್ಲಿನ ಅನುಭವಗಳು ವಿಶೇಷವೇ. ಕಷ್ಟಪಟ್ಟು ಮತ್ತು ಇಷ್ಟಪಟ್ಟು ಮಾಡಿಸಿದ ಚಿನ್ನವನ್ನು ಚಿನ್ನ ಪರಿಶೋಧಕರು ಒರೆಗಲ್ಲಿಗೆ ಒರೆಹಚ್ಚಿ ನೋಡುವಾಗ ಬಹುತೇಕ ಒಡವೆಯ ಮಾಲೀಕರು ಮುಖಹಿಂಡುತ್ತಾರೆ, ಇಂಜೆಕ್ಷನ್ ಚುಚ್ಚಿದ ಹಾಗೆ ನೋವನ್ನು ತೋರುತ್ತಾರೆ, ಕೆಲವರು ಪ್ರತಿರೋಧವನ್ನೂ ವ್ಯಕ್ತಪಡಿಸುತ್ತಾರೆ. ನಮ್ಮ ಹಿಂದಿನ ಶಾಖೆಯ ಚಿನ್ನ ಪರಿಶೋಧಕಿ ಹೇಳುತ್ತಿದ್ದರು ‘ಕಾಯಿಲೆ ಯಾವುದು ಎಂದು ಪರೀಕ್ಷೆ ಮಾಡಬೇಕಾದರೆ ರಕ್ತವನ್ನು ನಿಮ್ಮ ಮೈಯಿಂದ ತೆಗೆದುಕೊಳ್ಳಲೇಬೇಕಲ್ಲವೇ? ಇಲ್ಲವಾದರೆ ಖಾಯಿಲೆ ಯಾವುದೆಂದು ಪತ್ತೆ ಹಚ್ಚುವುದು ಹೇಗೆ? ಇದೂ ಹಾಗೇನೇ, ಪರೀಕ್ಷೆಯಷ್ಟೇ. ನಿಮ್ಮ ಚಿನ್ನ ಸವೆದುಹೋಗುವುದಿಲ್ಲ’ ಎಂದು ಕುಶಾಲಿಯಿಂದ ಹೇಳುತ್ತಿದ್ದರು.
ಒಂದು ಹೆಂಗಸು ಸುಮಾರು ಮುವ್ವತ್ತೈದು ವರ್ಷಗಳಿರಬಹುದು ಆಕೆ. ಚಿನ್ನದ ಸಾಲಕ್ಕಾಗಿ ನಮ್ಮಲ್ಲಿಗೆ ಬಂದಿದ್ದರು. ಆಭರಣಗಳೆಲ್ಲವೂ ಫಳಫಳ ಹೊಳೆಯುತ್ತಿದ್ದವು. ಆಕೆಯ ಕತ್ತಿನಲ್ಲಿದ್ದ ಬಂಗಾರ ಅಷ್ಟು ಹೊಳಪಿನದ್ದಾಗಿರಲಿಲ್ಲ. ಕುತೂಹಲಕ್ಕೆಂದು ಕೇಳಿದಾಗ ಅದು ತನ್ನ ಆರು ವರ್ಷದ ಪುಟ್ಟ ಮಗಳ ಮದುವೆಗೆಂದು ಮಾಡಿಸಿದ್ದು ಎಂದು ಹೇಳಿದಳು. ಆಕೆಯ ಕತ್ತಿನಲ್ಲಿದ್ದುದು ಆಕೆಯ ತಾಯಿಯ ಒಡವೆಗಳು, ತಾಯಿಯ ಮನೆಯವರು ಕಷ್ಟದಲ್ಲಿ ಇದ್ದುದರಿಂದ ಆಕೆಯ ತಾಯಿ ತಮ್ಮ ಒಡವೆಗಳನ್ನೇ ಮಗಳಿಗೆ ಇಟ್ಟು ಮದುವೆ ಮಾಡಿದ್ದರು. ಈಕೆ ಆಗಲೇ ತನ್ನ ಮಗಳ ಮದುವೆಗಾಗಿ ಒಡವೆ ಮಾಡಿಸಿದ್ದಾರೆ. ಒಡವೆಗೂ ಹೆಣ್ಣುಮಕ್ಕಳ ಮದುವೆಗೂ ಎದ್ದುಕಾಣುವ ನಂಟಿದೆ. ಹೆಣ್ಣುಮಗುವಿನ ತಂದೆತಾಯಿ ಎಂದಾಕ್ಷಣ ಆ ಮಗುವಿನ ಶಿಕಾಕ್ಕಿಂತ ಮೊದಲು ಆ ಮಗುವಿನ ಮದುವೆಗೆ ಬೇಕಾದ ಚಿನ್ನದ ಬಗ್ಗೆಯೇ ಅವರ ಕನಸು ಮನಸು. ಪಳ್ಳಿಗಳಲ್ಲಿಯಂತೂ ಚಿನ್ನದ ಸಾಲ ಎಂದರೆ ಬೆಕ್ಕು ಪಕ್ಕದ ಮನೆಗೆ ಹೋಗಿ ಹಾಲು ಕುಡಿದು ಬಂದಷ್ಟು ಸಲೀಸು. ಮಳೆ ಶುರುವಾಗುತ್ತಿದೆ ಎಂದರೆ ಕೃಷಿ ಚಟುವಟಿಕೆಗೆ ಜೀವ ಬಂದುಬಿಡುತ್ತದೆ. ಹಿಂದೆಲ್ಲ ಊರ ಜಮೀನ್ದಾರರು ಚಿನ್ನ ಅಡ ಇಟ್ಟುಕೊಂಡು ಬಡವರಿಗೆ ಸಾಲ ನೀಡುತ್ತಿದ್ದರು. ಒಂದಕ್ಕೆರಡು ಬಡ್ಡಿ ಹಾಕಿ ಆ ಚಿನ್ನವನ್ನು ಬಹುತೇಕ ತಮ್ಮಲ್ಲಿಯೇ ಮುಟ್ಟುಗೋಲು ಹಾಕುತ್ತಿದ್ದರು. ಈಗ ಚಿನ್ನದ ಸಾಲ ನೀಡಲು ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಮುಗಿಬೀಳುತ್ತಿವೆ. ಈಗೆಲ್ಲ ಕೃಷಿ ಚಟುವಟಿಕೆಗಳಿಗೆ ಎಲ್ಲಿಯೋ ಕೈಸಾಲ ಮಾಡುವುದರ ಬದಲು ಬ್ಯಾಂಕುಗಳಲ್ಲಿಯೇ ಚಿನ್ನದ ಸಾಲ ಪಡೆಯುತ್ತಾರೆ. ನಾಳೆ ನೆಂಟರ ಮದುವೆ ಎಂದರೆ ಇವತ್ತು ಸಾಲ ತೀರಿಸಿ, ನಾಳೆ ನಾಡಿದ್ದು ಮದುವೆ ಮುಗಿಸಿಕೊಂಡು ಬಂದು ಮೂರು ದಿನ
ಬಿಟ್ಟು ಮತ್ತೆ ಅದೇ ಒಡವೆ ಅಡ ಇಟ್ಟು ಸಾಲ ಪಡೆಯುತ್ತಾರೆ. ಇಲ್ಲಾ ಮಗಳ ಚಿನ್ನ ಅಡ ಇಟ್ಟು ಪಡೆದದ್ದು ಆಕೆ
ಊರಿಗೆ ಹೊರಟಾಗಲೋ, ಮೊಮ್ಮಗುವಿನ ನಾಮಕರಣವೋ ಆದಾಗ ಓಡಿ ಬಂದು ಬಿಡಿಸಿಕೊಳ್ಳುವ ಪರಿಪಾಠವೂ ಹೊಸತಲ್ಲ. ಇದು ನಮ್ಮ ಹಳ್ಳಿಯ ಶಾಖೆಗಳಲ್ಲಿ ಪುನರಾವರ್ತನೆ ಆಗುತ್ತಲೇ ಇರುತ್ತದೆ.
ಚಿನ್ನಕ್ಕೆ ಎಂದಿಗೂ ಮೌಲ್ಯ ಜಾಸ್ತಿಯಾಗುತ್ತಲೇ ಹೋಗುತ್ತದೆಯಾದ್ದರಿಂದಲೇ ಅದು ಆಪದ್ಧನ. ನಮ್ಮ ಹಿರಿಯರು ತಮ್ಮ ದೂರದರ್ಶಿತ್ವದಿಂದ ಚಿನ್ನವನ್ನು ತಿಜೋರಿಯಲ್ಲಿಯೋ, ಮನೆಗಳ ನೆಲಮಾಳಿಗೆಯಲ್ಲಿಯೋ, ಗೋಡೆಗಳಲ್ಲಿಯೋ, ನೆಲದಲ್ಲಿಯೋ ಅವಿತಿಡುತ್ತಿದ್ದರು. ತಮ್ಮ ಮುಂದಿನ ತಲೆಮಾರನ್ನು ಅದು ಕಾಯುತ್ತದೆ ಎಂಬ ದೂರಾಲೋಚನೆ.
ಬಹುತೇಕ ಈಗಲೂ ನಮ್ಮ ಸಮಾಜದಲ್ಲಿ ಮದುವೆಯಾಗುವಾಗ ಹುಡುಗಿ ಮನೆಯವರು ಹುಡುಗಿಗೆ ಎಷ್ಟು ಚಿನ್ನ ಹಾಕುತ್ತಾರೆ ಎಂಬುದರ ಮೇಲೆ ಮದುವೆ ಮಾತುಕತೆ ಮುಂದುವರಿಯುತ್ತದೆ. ಹೆಣ್ಣುಮಗಳು ಮತ್ತು ಚಿನ್ನ ಎರಡನ್ನೂ ಒಂದೇ ರೀತಿ ಅಳೆಯುವುದು ಗ್ರಾಮೀಣ ಭಾಗದಲ್ಲಿ ಉಂಟು. ಇಲ್ಲಿ ಚಿನ್ನ ಮಾತ್ರವೇ ವ್ಯವಹಾರದ ಭಾಗವಲ್ಲ, ಅದನ್ನು ಧರಿಸುವ ಹೆಣ್ಣುಮಗಳೂ ಆ ವ್ಯವಹಾರದ ಭಾಗವೇ ಆಗುವುದು ನೋವಿನ ಸಂಗತಿ.
ಕೆಲ ಮನೆಗಳಲ್ಲಿ ಬೆಳ್ಳಿಯ ತಟ್ಟೆಯಲ್ಲಿ ಚಿನ್ನದ ನಾಣ್ಯವನ್ನು ಹೂಳಿಸಿ ಅದರಲ್ಲಿ ನಿತ್ಯವೂ ಆಹಾರ ಸೇವನೆ · ಮಾಡುವುದುಂಟು. ಚಿನ್ನದ ನೀರು ಮೈಗೆ ಒಳ್ಳೆಯದು ಎಂದೂ ಹಿರಿಯರು ಹೇಳುತ್ತಿದ್ದುದುಂಟು. ಕೆಲವು ಬಾರಿ ಆಹಾರದಲ್ಲಿ ಮತ್ತು ಔಷಧಿಗಳಲ್ಲಿ ಅಲ್ಪಪ್ರಮಾಣದ ಚಿನ್ನವನ್ನು ಬಳಸಲಾಗುತ್ತದೆ. ಉದಾ: ನಮ್ಮಲ್ಲಿ ನಾಮಕರಣ ಮುಹೂರ್ತದಲ್ಲಿ ಮಗುವಿಗೆ ಚಿನ್ನದ ಉಂಗುರದಿಂದ ಸಿಹಿಯನ್ನು ತಿನಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಸರ್ಕಾರವು ‘ಸ್ವರ್ಣಬಿಂದು ಪ್ರಾಶನ’ ಎಂಬ ಯೋಜನೆಯನ್ನು ರೂಪಿಸಿದೆ. ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ. ಸ್ವರ್ಣಪ್ರಾಶನವು ಆಯುರ್ವೇದದಲ್ಲಿ ವಿವರಿಸಲಾದ 16 ಸಂಸ್ಕಾರಗಳಲ್ಲಿ ಒಂದು.
ರೇಷಿಮೆ ಸೀರೆಗಳ ಜರಿಯಲ್ಲಿ ಹಾಗೂ ಚಿತ್ರಕಲೆಯಲ್ಲಿಯೂ ಚಿನ್ನದ ಅಂಶವನ್ನು ಬಳಸುತ್ತಾರೆ. ಹಲ್ಲುಕುಳಿಗಳನ್ನು ಮುಚ್ಚಲು ಅಥವಾ ಹೊಸ ಹಲ್ಲುಗಳನ್ನು ಕಟ್ಟಲು ದಂತವೈದ್ಯದಲ್ಲಿ ಈಚೆಗೆ ಚಿನ್ನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಈಗಲೂ ಅನೇಕ ಧಾರ್ಮಿಕ ಕ್ರಿಯೆಗಳಲ್ಲಿ ಚಿನ್ನದ ಉಪಯೋಗ ಇದೆ. ಹೊಸಮನೆಯ ಪಾಯ ತೆಗೆಸುವಾಗ ಚಿನ್ನ, ಬೆಳ್ಳಿ, ತಾಮ್ರಗಳಂತಹ ಲೋಹಗಳನ್ನು ಹೂಳಿಸಲಾಗುತ್ತದೆ. ದೇವರ ಮನೆಯನ್ನು ರೂಪಿಸುವಲ್ಲೂ ಇಂಥದ್ದೇ ಚರ್ಯೆಗಳಿರುತ್ತದೆ. ಹರಕೆಯ ತುಲಾಭಾರದಲ್ಲಿಯೂ ಇದರ ಉಪಯೋಗ. ನಮ್ಮ ದೇಶದಲ್ಲಿ ಅಂತ್ಯಸಂಸ್ಕಾರದ ವೇಳೆಯೂ ಕೆಲವು ಬಾರಿ ಚಿನ್ನದ ಉಪಯೋಗ ಉಂಟು. ಪುನರ್ಜನ್ಮದ ನಂಬಿಕೆ ಮತ್ತು ಸ್ವರ್ಗದ ನಂಬಿಕೆಯಿಂದಾಗಿ ಸತ್ತವರನ್ನು ಪುಟ್ಟ ಚಿನ್ನದ ಆಭರಣದೊಂದಿಗೆ ಹೂಳಲಾಗುತ್ತದೆ.
ಈಜಿಪ್ಟಿನ ಮಮ್ಮಿಯಲ್ಲಿಯೂ ಇದರ ಪ್ರಯೋಗವನ್ನು ನೆನಪಿಸಿಕೊಳ್ಳಬಹುದು. ಹೀಗೆ ಹೇಳುವಾಗ ನನಗೆ ನಮ್ಮ ಬ್ಯಾಂಕಿನಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತಿದೆ. ನಮ್ಮ ಸಹೋದ್ಯೋಗಿಯೊಬ್ಬನಿಗೆ ಚಿನ್ನದ ಗೀಳು ಬಹಳ. ಯಾರ ಚಂದದ ಒಡವೆ ಕಂಡರೂ ಇಂಥದ್ದು
ನನಗೂ ಬೇಕು ಎನ್ನುವ ಬಯಕೆ. ಎಷ್ಟು ಚಿನ್ನ ಇದ್ದರೆ ಜನ ಅವರನ್ನು ಅಷ್ಟು ದೊಡ್ಡವರೆಂದು ಕಾಣುತ್ತಾರೆಂದು ಅವರ ನಂಬಿಕೆ. ಇದು ದುರಾಸೆ ಎಂದು ನಾವೆಲ್ಲಾ ಎಷ್ಟು ಹೇಳಿದರೂ ಕೇಳದೆ ‘ನಾನು ಬದುಕಿರಬೇಕಾದರೆ ಎಷ್ಟು ಸಾಧ್ಯವೋ ಅಷ್ಟು ಚಿನ್ನ ತೊಗೊಳ್ತಿನಿ. ನನಗೆ ಚಿನ್ನ ಅಂದರೆ ಅಷ್ಟು ಇಷ್ಟ. ನಾನು ಸತ್ತ ಮೇಲೆ ನನ್ನ ಸಮಾಧಿಯೊಳಗೆ ಸ್ವಲ್ಪವಾದರೂ ಚಿನ್ನ ಹಾಕದಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ನಾನು ದೆವ್ವ ಆಗಿಯಾದರೂ ಚಿನ್ನ ಹಾಕಿಕೊಳ್ಳುತ್ತೇನೆ. ನಾನು ದೆವ್ವ ಆಗಬಾರದು ಎಂದರೆ ನನ್ನ ಸಮಾಧಿಗೆ ಚಿನ್ನ ಹಾಕಿಯೇ ನನ್ನನ್ನು ಕಳಿಸಬೇಕು’ ಎಂದದ್ದು ಈಗಲೂ ನೆನಪಿದೆ.
ನಂಬಿಕೆ ಎನ್ನುವುದು ಮನುಷ್ಯನ ಮನಸ್ಸಿನಲ್ಲಿ ಏನೆಲ್ಲಾ ಕೆಲಸ ಮಾಡುತ್ತದೆ ಎಂದರೆ ಹಿಂದೆ ಪಾಶ್ಚಾತ್ಯ ದೇಶವೊಂದರಲ್ಲಿ ಶುದ್ದೀಕರಿಸಿದ ನಂತರ ಚಿನ್ನ ರಾಜರಲ್ಲದವರಿಗೆ, ಬೇರೆಯವರಿಗೆ ತಾಕಿದರೆ ಸಾವು ಬರುತ್ತದೆ ಎಂದಿತ್ತಂತೆ. ಅಕ್ಕಸಾಲಿಗರೂ ಕೂಡ ಚಿನ್ನವನ್ನು ಕೈಗವಸು ಹಾಕಿಕೊಂಡೇ ಮುಟ್ಟುತ್ತಿದ್ದರಂತೆ. ಈಗಲೂ ನಮ್ಮಲ್ಲಿ ಚಿನ್ನದ ಕಾಲ್ಲೆಜ್ಜೆ, ಚಿನ್ನದ ಕಾಲುಂಗುರ ಅರಸು ಮನೆತನಕ್ಕೆ ಮಾತ್ರವೇ ಮೀಸಲು. ಹರಕೆಗಳಲ್ಲಿಯೂ ಚಿನ್ನದ ಪಾತ್ರವಿದೆ. ನನಗೆ ಇಂಥ ಕೆಲಸವಾದರೆ ದೇವರೇ ನಿನಗೆ ಚಿನ್ನದ ಕಿರೀಟ ಮಾಡಿಸಿಕೊಡುತ್ತೇನೆ ಎಂತಲೋ, ಚಿನ್ನದ ಮೂಗುತಿ ಮಾಡಿಸಿಕೊಡುತ್ತೇನೆ ಎಂತಲೋ, ಚಿನ್ನದ ತಾಳಿ ಹಾಕಿಸುತ್ತೇನೆ ಎಂತಲೋ ಹರಕೆ ಹೊರುವುದುಂಟು. ಚಿನ್ನ ಎಂದರೆ ಶ್ರೇಷ್ಠ ಎಂಬರ್ಥ. ಆದರೆ ಧರ್ಮ, ದೇವರು, ನಂಬಿಕೆ, ಭಯ ಎನ್ನುವುದು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಚಿನ್ನದ ಮೌಲ್ಯದ ಮೇಲಿನ ಮೋಹದಿಂದಾಗಿ ದೇವರ ವಿಗ್ರಹವನ್ನೋ, ದೇವರ ಮೇಲಿನ ಚಿನ್ನದ ಆಭರಣಗಳನ್ನೋ ಕದಿಯುವ/ದೋಚುವ ಸ್ಥಿತಿ ನಿರ್ಮಾಣವಾಗಿದೆ.
ನಮ್ಮ ಬ್ಯಾಂಕಿನ ಮ್ಯಾನೇಜರ್ ಅವರು ವಿದೇಶ ಪ್ರವಾಸಕ್ಕೆ ಹೋಗಿ ಬರುವಾಗ ಚಿನ್ನದ ಹಾರವನ್ನು ಕೊಂಡು ತಂದಿದ್ದರು. ಅದನ್ನು ತಮ್ಮ ಕ್ಯಾಬಿನ್ ಬ್ಯಾಗಿನಲ್ಲಿ ಇಡದೆ ಲಗ್ಗೇಜ್ ಬ್ಯಾಗಿನಲ್ಲಿ ಇಟ್ಟಿದ್ದರು. ಅದು ಹೇಗೋ ಏನೋ ಇವರ ಬ್ಯಾಗ್ ಬೇರೆಯವರಿಗೆ ಹೋಗಿಬಿಟ್ಟಿತು. ಬರಿದೇ ಬಟ್ಟೆಯಾಗಿದ್ದರೂ ನಮ್ಮ ಬಟ್ಟೆ ಹೋಯಿತಲ್ಲಾ ಎಂದು ಕೊರಗು ಹತ್ತುವಾಗ, ಚಿನ್ನ ಇರುವ ಬ್ಯಾಗ್ ಎಲ್ಲೋ ಯಾರಿಗೋ ಹೋಗಿಬಿಟ್ಟಿತಲ್ಲಾ ಎಂಬ ಕೊರಗು ಸಹಜವೇ. ಅದು ಯಾರಿಗೆ ಹೋಗಿದೆ ಎಂದು ತಿಳಿದುಕೊಂಡು ವಾಪಸ್ ಪಡೆಯುವಷ್ಟರಲ್ಲಿ ಮತ್ತೆ ವಿದೇಶಕ್ಕೆ ಹೋಗಿ ಬಂದಷ್ಟು ತ್ರಾಸಾಗಿತ್ತು ಎಂದು ಹೇಳಿ ನಗುವಾಗ ಪಟ್ಟ ಕಷ್ಟ ಕರಗಿಹೋಗಿತ್ತು.
ಚಿನ್ನ ಸಿಕ್ಕರೆ ಚಿಂತೆ ಸಿಕ್ಕ ಹಾಗೆ ಎನ್ನುವ ಮಾತಿದೆ. ಅದೆಷ್ಟು ನಿಜವೋ ಕಾಣೆ. ಆದರೆ ನನ್ನ ವೈಯಕ್ತಿಕ ಅನುಭವವಂತೂ ಅದಕ್ಕೆ ಪೂರಕವೇ ಆಯಿತು. ಒಂದು ಕಾರ್ಯಕ್ರಮ ನಿರೂಪಣೆ ಮಾಡುವಾಗ ಒಂದು ಚಿನ್ನದ ಚೈನು ಜೊತೆಗೊಂದು ಡಾಲರ್ ಸಿಕ್ಕಿತು. ಅದು ಯಾರದ್ದೆಂದು ಕಂಡುಹಿಡಿಯುವುದೇ ದೊಡ್ಡ ಸಾಹಸ ಆಯಿತು. ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟೆ. ಯಾರ್ಯಾರೋ ಕರೆ ಮಾಡಲು ಶುರು ಮಾಡಿದರು ಅದು ತಮ್ಮದೇ ಎಂದು. ನಿಜವನ್ನು ಕಂಡುಹಿಡಿಯುವುದು ಹೇಗೆ? ಪೊಲೀಸ್ ಅಧೀಕ್ಷಕರ ಕಚೇರಿಗೆ ಭೇಟಿ ಕೊಟ್ಟು ವಿಷಯ ತಿಳಿಸಿದೆ. ಆಕೆ ನನ್ನ ಮಾತಿಗೆ ಕಿಮ್ಮತ್ತಿನ ಬೆಲೆಯನ್ನೂ ಕೊಡದೆ, ನಾನು ಬ್ಯುಸಿ. ಇನ್ನೊಮ್ಮೆ ನೋಡೋಣ ಎಂದುಬಿಟ್ಟರು. ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ ಎನಿಸಿಬಿಟ್ಟಿತು. ಹಾಗೊಂದು ದಿನ ಪೊಲೀಸ್ ಸ್ಟೇಷನ್‌ನಿಂದ ಕರೆಬಂದಿತು. ನಿಮಗೆ ಸಿಕ್ಕ ಚೈನಿನ ಮಾಲೀಕರು ಇಲ್ಲೇ ಇದ್ದಾರೆ ಬಂದು ಕೊಡಿ ಎಂದು. ಪೊಲೀಸಿನವೂ ಶಾಮೀಲಾಗಿ ಬೇರೆ ಯಾರಿಗಾದರೂ ಅದು ಹೋದರೆ ಎನ್ನುವ ಅಸಹಾಯಕತೆಯೂ ಇಣುಕಿತು. ಯಾಕಾದರೂ ಚಿನ್ನ ಸಿಕ್ಕಿತೋ? ನಾಲ್ಕು ದಿನ ನೆಮ್ಮದಿಯನ್ನೇ ಕಸಿದುಕೊಂಡಿತಲ್ಲಾ ಎನಿಸಿಬಿಟ್ಟಿತ್ತು. ಅವರನ್ನೇ ಮನೆಗೆ ಕಳಿಸಿ. ನಾ ಬರಲೊಲ್ಲೆ ಎಂದೆ. ಒಬ್ಬಾತ ಬಂದರು. ಚೈನಿನ ಗುರುತು ಹೇಳಿ ಎಂದು ಕೇಳಿದೆ. ಆತ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಾ ಇದ್ದವ. ಸಾವಧಾನದಿಂದ ಚೈನಿನ ಗುರುತು, ಅದರೊಂದಿಗಿನ ಭಾವನಾತ್ಮಕ ಸಂಬಂಧ ಎಲ್ಲವನ್ನೂ ಹೇಳಿದರು. ನಂಬಿಕೆ ಬಂದಿತು ಕೊಟ್ಟು ಕಳಿಸಿದೆ. ತದನಂತರ ಬಹುತೇಕರು ಆತನ ವಿಷಯದಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದರಿಂದ ಮಾಲೀಕನಿಗೇ ತಲುಪಿತು ಎಂಬ ಸಮಾಧಾನ ಸಿಕ್ಕಿತು. ಅದಾಗಿ ಒಂದು ವಾರದಲ್ಲಿ ಎರಡು ಮೂರು ಪತ್ರಿಕೆಗಳಲ್ಲಿ ‘ಪ್ರಾಮಾಣಿಕತೆ ಮೆರೆದ ನಿರೂಪಕಿ’ ಎಂಬ ತಲೆಬರಹದಲ್ಲಿ ಈ ವಿಷಯ ಅಚ್ಚಾಗಿತ್ತು.
shubhashreeprasadmandya@gmail.com