ದಿಲೀಪ್ ಎನ್ಕೆ
ಮಂಟೇಸ್ವಾಮಿ ತಾವು ಜಂಗಮರಾಗಿ ಅಲೆದಾಡಿದ ಕಡೆಗಳಲ್ಲೆಲ್ಲ ಅರಿವು ಎಂಬ ಪರಂಜ್ಯೋತಿಯನ್ನು ಬೆಳಗುತ್ತಾ ನಡೆದವರು. ಧರೆಗೆ ದೊಡ್ಡವರು, ಕಂಡಾಯದ ಒಡೆಯ, ನೀಲಗಾರರ ಆದಿಗುರು. ಮೇಲಾಗಿ ಅಲ್ಲಮಪ್ರಭುವಿನ ಉತ್ತರಾಧಿಕಾರಿಯಾಗಿ ಬಂದಂತಹ ಶ್ರೇಷ್ಠ ಕಾಲಜ್ಞಾನಿ. ಈ ಯುಗಾದಿ ಹಬ್ಬಕ್ಕೂ ಈ ಮಂಟೇಸ್ವಾಮಿಯವರಿಗೂ ಏನು ಸಂಬಂಧ? ಸಂಬಂಧ ಇದೆ. ಇದೇ ಯುಗಾದಿ ಹಬ್ಬದ ದಿನದಂದು ಸರಿಸುಮಾರು ಸಂಜೆಯಷ್ಟರ ಹೊತ್ತಿಗೆ ಈ ಮಂಟೇಸ್ವಾಮಿಯವರ ಐಭೋಗದ ಹೂವು ಹೊಂಬಾಳೆಯಿಂದ ಅಲಂಕೃತಗೊಂಡ ಕಂಡಾಯವು ನೀಲಗಾರರು, ದೇವರ ಗುಡ್ಡರು, ಮಂಟೇಸ್ವಾಮಿ – ಸಿದ್ದಪ್ಪಾಜಿ ಒಕ್ಕಲಿನವರ ಮುಂದಾಳುತನದಲ್ಲಿ ಊರುಕೇರಿಯನ್ನು ಪ್ರವೇಶಿಸುತ್ತದೆ.
ಅದುವೇ ನಮಗೆ ಯುಗಾದಿ. ಅದುವೇ ನಮ್ಮ ಯುಗಾದಿ ಹಬ್ಬದ ಮಹಿಮೆ. ಈ ಮೇಲೆ ಹೇಳಿದ ನೀಲಗಾರರು, ದೇವರಗುಡ್ಡರು, ಮಂಟೇಸ್ವಾಮಿ – ಸಿದ್ದಪ್ಪಾಜಿ ಒಕ್ಕಲಿನವರು ಹತ್ತು ಹನ್ನೆರಡು ದಿನಗಳ ಹಿಂದೆಯೇ ಕಪ್ಪಡಿ ಶ್ರೀ ಕ್ಷೇತ್ರಕ್ಕೆ ಭೇಟಿಕೊಟ್ಟು, ಅಲ್ಲಿನ ಕಡೇ ದಿನದ ‘ಮಾದಲಿ ಸೇವೆ’ಯನ್ನೂ ನಂತರದ ದಿನದ ರಾಚಪ್ಪಾಜಿ ಚೆನ್ನಾಜಮ್ಮರ ಗದ್ದುಗೆಗೆ ಮಾಡುವ ಎಳನೀರಿನ ಮಜ್ಜನವನ್ನೂ ಮುಗಿಸಿ ಹೊರಟಂತಹವರು. ಅಲ್ಲಿಂದ ಹೊರಟು, ಮುಟ್ಟನಹಳ್ಳಿಯಲ್ಲಿರುವ ದೊಡ್ಡಮ್ಮತಾಯಿ ತೋಪಿನಲ್ಲಿ ಸೇರಿ ಬೊಪ್ಪೇಗೌಡನಪುರದ ಮಂಟೇಸ್ವಾಮಿಯ ಮಠ ವನ್ನು ಪ್ರವೇಶಿಸಿ, ಅಲ್ಲಿ ‘ಕಟ್ನಳ್ಕ ಬ್ಯಾಳ’ ಪ್ರಸಾದವನ್ನು ಸ್ವೀಕರಿಸಿ ಹೊರಟು ಬಂದಂಥವರು. ಅಲ್ಲಿಂದ ತಮ್ಮ ತಮ್ಮ ಊರುಗಳ ದಾರಿ ಹಿಡಿದು ಬಂದು, ಊರಿನ ಹೊರಭಾಗದಲ್ಲಿ ಅಲ್ಲಲ್ಲಿ ತಂಗಿದ್ದು ಯುಗಾದಿಯ ದಿನವಾದ ಇಂದು ಕಾವೇರಿ ಪವಿತ್ರ ಜಲದಲ್ಲಿ ಮಿಂದುಟ್ಟು, ಕಂಡಾಯವನ್ನು ಶುಚಿಗೊಳಿಸಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ, ಆಮೇಲೆ ಊರನ್ನು ಪ್ರವೇಶಿಸುತ್ತಾರೆ.
ಇವರು ಈ ಕೈಂಕರ್ಯವನ್ನೆಲ್ಲ ಮುಗಿಸಿ ಯುಗಾದಿಯ ದಿನದಂದು ಊರು-ಕೇರಿಯನ್ನು ಪ್ರವೇಶಿಸುವ ಹೊತ್ತಿಗೆ ಹೆಚ್ಚೂಕಡಿಮೆ ಮಧ್ಯಾಹ್ನ ಕಳೆದಿರುತ್ತದೆ. ಕಂಡಾಯದ ಉತ್ಸವದೊಂದಿಗೆ ಬರುವ ಜನರ ಪಾದಗಳು ತಣ್ಣಗಾಗಲಿ ಎಂದು ರಸ್ತೆ ರಸ್ತೆಗಳಲ್ಲಿ ಹಾಕಿದ ಮಣ್ಣು ನೀರಿನಿಂದಾಗಿ ಎದ್ದು, ತನ್ನ ಘಮಲಿಂದ ಮತ್ತೇರಿಸುತ್ತಿರುತ್ತದೆ. ಮನೆಮನೆಯಲ್ಲೆಲ್ಲಾ ತಳಿರು-ತೋರಣಗಳು, ಮನೆಯ ಮುಂದೆಲ್ಲಾ ವಯ್ಯಾರದ ರಂಗೋಲಿಗಳು, ಕತ್ತೆತ್ತಿದ್ದರೆ ಜಿಲಿಜಿಲಿ ಬಣ್ಣದ ಪೇಪರ್‌ಗಳ ದಾಳಗಳು, ಅನುಕೂಲಕ್ಕೆ ತಕ್ಕಂತೆ ಹೊಸ ಬಟ್ಟೆ ಧರಿಸಿ ಕಿಲುಗುಟ್ಟುವ ಮಕ್ಕ ಮರಿಗಳು. ಅಲ್ಲಲ್ಲಿ ನವವಧುವಿನಂತೆ ಸಿಂಗಾರಗೊಂಡ ಹೊನ್ನೇರುಗಳು, ಎತ್ತುಗಳಿಗೆ ಬಳಿದ ಬಣ್ಣಗಳು, ಕೊಂಬಿನಲ್ಲಿ ರಾರಾಜಿಸುವ ಕುಚ್ಚುಗಳು ಗುನ್ನಂಪಟಗಳು ಬರುವ ಭಕ್ತಾದಿಗಳು ದಣಿವಾರಿಸಿಕೊಳ್ಳಲು ಮನೆ ಮನೆಗಳ ಜಗುಲಿಯ ಮೇಲೆ ಪಾನಕ, ಶರಬತ್ತು, ಕೋಸಂಬರಿ, ಬೆಲ್ಲದ ಅನ್ನ, ಮೊಸರನ್ನದ ಅಂಡೆ, ಗುಂಡಿ, ಕಡಾಯಗಳು ಕಾಯುತ್ತವೆ. ಅದೋ… ವಾಲಗ ಕೇಳುತ್ತಿದೆ.
ಮಂಟೇಸ್ವಾಮಿಯವರ ಐಭೋಗದ ಹೂವು- ಹೊಂಬಾಳೆಯಿಂದ ಅಲಂಕೃತಗೊಂಡ ಕಂಡಾಯವು ನೀಲಗಾರರು, ದೇವರಗುಡ್ಡರು ಭಕ್ತಾದಿಗಳ ಮುಂದಾಳುತನದಲ್ಲಿ ಊರೊಳಕ್ಕೆ ಧಾವಿಸಿತು. ಕಂಡಾಯಕ್ಕೆ ಕೈ ಮುಗಿದು ಅಡ್ಡ ಬೀಳುವವರೆಷ್ಟೋ, ಹಣ್ಣು-ಕಾಯಿ ಮಾಡಿಸುವವರೆಷ್ಟೋ! ಕಂಡಾಯವನ್ನು ಹೊತ್ತವರು ನಮ್ಮನ್ನು ದಾಟಿದರೆ ಕಪ್ಪಡಿ, ಬೊಪ್ಪಣಪುರಕ್ಕೇ ಹೋಗಿ ಬಂದಂತೆ ಎಂದು ದಾರಿಗುಂಟ ಮಗ್ಗುಲಲ್ಲಿ ಮಲಗುವ ಮಕ್ಕ ಮರಿಗಳು, ಯಮ್ಕಗಳು, ಗಂಡಸರು… ಆ ವಾಲಗದ ತಲೆದೂಗಿಸುವ ಸದ್ದಿಗೆ ಥರಾವರಿ ಹೆಜ್ಜೆಯ ಮಾರಿಕುಣಿತ ಕುಣೀತಾ ಹೆಣ್ಣುಗಳ ಕಣ್ಣು ಸೆಳೆಯಲೆತ್ನಿಸುವ ಪೋರರು, ನಾಚಿಕೆಯಿಂದಲೇ ವಯ್ಯಾರ ಮಾಡುವ ಪೋರೀರು ಯುಗಾದಿಯ ದಿನ ಊರುಕೇರಿ ಎಲ್ಲವೂ ಫಳ್ ಫಳ್ ಫಳಾರ್ ಎನ್ನುತ್ತಿರುತ್ತದೆ.
” ಇಂದು ಅಪರಾಹ್ನದ ಹೊತ್ತು ಮಂಟೇಸ್ವಾಮಿ ಯವರ ಕಂಡಾಯವು ಊರುಕೇರಿಯನ್ನು ಪ್ರವೇಶಿಸುತ್ತದೆ. ಇದುವೇ ನಮಗೆ ಯುಗಾದಿ”




