Mysore
27
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಒಂದು ಪುಟ್ಟ ಹಲಸಿನ ಕಾಯಿಗಾಗಿ ಒಂದು ಜೀವ ಬಲಿ

ನಯನ ಮನೋಹರ ಕೊಡಗು ದಕ್ಷಿಣದ ಕಾಶ್ಮೀರ ಎಂದೇ ಹೆಸರುವಾಸಿ. ಆದರೆ ಈ ಸೌಂದರ್ಯದ ಹಿಂದಿರುವ ಕೆಲವು
ಕ್ರೌರ್ಯದ ಕಥೆಗಳು ಮಾತ್ರ ಊಹಿಸಲೂ ಅಸಾಧ್ಯ.

• ಕೀರ್ತಿ ಬೈಂದೂರು

ಕೊಡಗು ಜಿಲ್ಲೆ ಮೂರ್ನಾಡಿನ ಪಣಿ ಎರವರ ಸುಮಿ ಮತ್ತು ತಮ್ಮು ದಂಪತಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನು ಪೊನ್ನಣ್ಣ, ಸಣ್ಣವನು ಪೂವಣ್ಣ, ಪೊನ್ನಣ್ಣ ಒಂಬತ್ತನೇ ತರಗತಿ ಪಾಸಾಗಿ ಓದು ನಿಲ್ಲಿಸಿ ಎಲ್ಲ ಆದಿವಾಸಿ ತರುಣರ ಹಾಗೆ ಕಾಫಿ ತೋಟದ ಕೆಲಸಕ್ಕೆ ಸೇರಿಕೊಂಡ. ಆರು ತಿಂಗಳ ಹಿಂದಷ್ಟೆ ಮದುವೆಯೂ ಆಗಿದ್ದ. ಮದುವೆಯಾದ ಹೊಸತು. ಹೆಂಡತಿಗೆ ಎಳೆಯ ಹಲಸಿನಕಾಯಿಯ ಗುಜ್ಜೆ ಪಲ್ಯ ಇಷ್ಟ ಎಂದು ತೋಟದ ಸಾಹುಕಾರರ ಮನೆಯ ಎದುರಿಗಿದ್ದ ಹಲಸಿನ ಮರದಲ್ಲಿ ತೂಗುಬಿದ್ದಿದ್ದ ಒಂದು ಪುಟ್ಟ ಕಾಯಿ ಕಿತ್ತ. ಅಷ್ಟೇ…..

ಇತ್ತ ತೋಟದ ಲೈನಿನ ಮನೆಯಲ್ಲಿ ಪಲ್ಯಕ್ಕೆ ಬೇಕಾದ ಹಲಸಿನ ಎಳೆಗಾಯಿಗೆ ಕಾಯುತ್ತಿದ್ದ ಹೆಂಡತಿ ಗೀತಾಳಿಗೆ ಎರಡೆರಡು ಗುಂಡಿನ ಸದ್ದು ಕೇಳಿಸಿತು. ಬೆಚ್ಚಿ, ಹೊರಗೆ ಬಂದು ನೋಡಿದರೆ ಪೊನ್ನಣ್ಣ ದೇಹಪೂರ್ತಿ ರಕ್ತಮಯ! ಒದ್ದಾಟ, ಚೀರಾಟ,
ನರಳಾಟ…

ಪೊನ್ನಣ್ಣನ ಎಡತೊಡೆಗೆ ಬಿದ್ದ ಗುಂಡು ತೊಡೆಯನ್ನು ಸೀಳಿ ಹೊಟ್ಟೆಗೆ ತಗುಲಿತ್ತು. ಇನ್ನೊಂದು ಗುಂಡು ಹೊಟ್ಟೆಯನ್ನೂ ಸೀಳಿಕೊಂಡು ಪಕ್ಕದ ಹಲಸಿನ ಕಾಯಿಗೆ ತಾಗಿತ್ತು! ಆಸ್ಪತ್ರೆಗೆ ದಾಖಲಿಸುವುದರೊಳಗೆ ಪೊನ್ನಣ್ಣ ಜೀವ ಕಳೆದುಕೊಂಡಿದ್ದ. ತಾಯಿ ಸುಮಿ ಮತ್ತು ತಂದೆ ತಮ್ಮು ನೆಂಟರ ಮನೆಯ ಮದುವೆಗೆ ಹೋಗಿದ್ದವರು ಆಸ್ಪತ್ರೆಗೆ ಬರುವಷ್ಟರಲ್ಲಿ ಮಗ ಪೊನ್ನಣ್ಣನ ಶವಪರೀಕ್ಷೆ, ಪೊಲೀಸ್ ತನಿಖೆ ಇತ್ಯಾದಿ ನಡೆಯುತ್ತಿತ್ತು.

ನಿಮಗೆ ಆಶ್ಚರ್ಯವಾಗಬಹುದು. ಒಂದು ಪುಟ್ಟ ಹಲಸಿನ ಕಾಯಿಗಾಗಿ ಒಂದು ಜೀವವನ್ನು ಗುಂಡು ಹಾರಿಸಿ ಕೊಂದ ಆರೋಪಿ ಮಾನಸಿಕ ಅಸ್ವಸ್ಥನಲ್ಲ. ಆತನೊಬ್ಬ ನಿವೃತ್ತ ಯೋಧ. ಆತ ಪೊನ್ನಣ್ಣ ಕೆಲಸ ಮಾಡುತ್ತಿದ್ದ ತೋಟದ ಮಾಲೀಕರ ಸಹೋದರ. ಕೋಟ್ಯಂತರ ಜೀವಗಳನ್ನು ಕಾಯುವ ಹೊಣೆ ಹೊತ್ತಿದ್ದ ಸೈನಿಕನೊಬ್ಬ ಹತ್ತೊಂಬತ್ತರ ಹರಯದ ಯುವಕನಿಗೆ ಒಂದು ಯಕಶ್ಚಿತ್ ಹಲಸಿನ ಕಾಯಿಗಾಗಿ ಗುಂಡು ಹಾರಿಸಿ ಕೊಂದನೆಂದರೆ ಆತನ ಮಿದುಳಿನೊಳಗಿದ್ದ ಕ್ರೌರ್ಯ ಹೇಗಿದ್ದಿರಬಹುದು? ತನ್ನನ್ನು ಬಂದಿಸಲು ಪೊಲೀಸರು ಬರುತ್ತಾರೆ ಎಂಬುದನ್ನು ತಿಳಿದ ಆರೋಪಿ, ಪೊಲೀಸರು ಬರುವಷ್ಟರಲ್ಲಿ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಅಲಂಕಾರಗೊಂಡು ತಾನೇನೋ ಪವಿತ್ರ ಕಾರ್ಯ ನಿರ್ವಹಿಸಿ ಬಂದಿರುವ ಎಂಬಂತೆ ಅಲಂಕೃತನಾಗಿ ಕೂತಿದ್ದನಂತೆ. ಆತನ ಮುಖದಲ್ಲಿ ಪಶ್ಚಾತ್ತಾಪದ ಸಣ್ಣ ಸುಳಿವೂ ಇರಲಿಲ್ಲ.

ಸದ್ಯ ಆರೋಪಿ ಬಂಧಿತನಾಗಿ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿದ್ದಾನೆ. ಕೇಸು ನಡೆಯುತ್ತಲಿದೆ. ಆತನಿಗೆ ಜೀವಾವಧಿ ಶಿಕ್ಷೆಯೂ ಆಗಬಹುದು. ಆಗದೆಯೂ ಇರಬಹುದು ಆದರೆ ಪೊನ್ನಣ್ಣ ಎಂಬ ತೀರಿಹೋದ ಆ ಜೀವಕ್ಕಾಗಿ ಪರಿತಪಿಸುತ್ತಿರುವ ಪಣಿ ಎರವರ ಈ ಕುಟುಂಬಕ್ಕೆ ಪ್ರತಿ ದಿನವೂ ಒಂದು ನರಕ. ಒಂದು ಪುಟ್ಟ ಎಳೆಯ ಹಲಸಿನ ಕಾಯಿಗೆ ಇರುವಷ್ಟು ಬೆಲೆ ಮನುಷ್ಯನ ಜೀವಕ್ಕಿಲ್ಲ ಎಂದರೆ ಏನು ಹೇಳಲು ಸಾಧ್ಯ? ‘ಮಗ ಹಲಸಿನ ಗುಜ್ಜೆ ಕಿತ್ತಿದ್ದಕ್ಕೆ ಇಪ್ಪತ್ತಡಿ ದೂರದಲ್ಲಿ ನಿಂತು ಗುಂಡು ಹೊಡಿಯೋ ಬದ್ಲು, ಬೈದು ಕೆಳಗಿಳಿಸಿ ಎರಡೇಟು ಹೊಡಿಬಹುದಿತ್ತು. ದೊಡ್ ಮಗ ಅಂದ್ರೆ ಪ್ರೀತಿ ಜಾಸ್ತಿ. ಅವೇ ಈಗಿಲ್ಲ. ನೋಡಿ’ ಎನ್ನುವುದು ತಾಯಿ ಸುಮಿ ಅವರ ಮಾತು. ‘ಹತ್ತಿರ ಇದ್ದಿದ್ರೆ ಆಸೆ ಬಿಡು ಅಂತಿದ್ದೆ. ದೂರದಲ್ಲಿದ್ದ ಅವು. ಹಲಸಿನ ಕಾಯಿ ತಿನ್ನದಿದ್ರೆ ಜೀವ ಹೋಗ್ತದಾ ಅಂತ ಕೇಳಿಯಾದ್ರೂ ಸುಮ್ಮನಾಗಿಸ್ತಿದ್ದೆ. ನಾ ಹೇಳಿದೆ ಪೊನ್ನಣ್ಣ ಕೇಳಿದ್ದ. ಒಂದು ಲೆಕ್ಕದಲ್ಲಿ ನಮಗಿಂತ ಸಾಹುಕಾರರ ಮನೆಯ ನಾಯಿಗಳೇ ಸುರಕ್ಷಿತ’ ಎನ್ನುವ ತಂದೆ ತಮ್ಮು ಅವರ ಮಾತುಗಳು ಕೇಳುವವರ ಕರುಳನ್ನು ಇರಿಯುತ್ತದೆ.

ತಮ್ಮ ಪೂವಣ್ಣ ಇವತ್ತಿಗೂ ಏನಾದರೂ ತಿಂಡಿ ತಂದುಕೊಟ್ಟರೆ, ‘ಅಣ್ಣ ಇದ್ದಿದ್ರೆ?’ ಎಂದು ಕೇಳುತ್ತಾನೆ. ಹೆತ್ತವರ ಒಡಲ ಸಂಕಟ ತಣಿವುದೆಂತು! ಪೊನ್ನಣ್ಣ ಹೆಂಡತಿ ತನ್ನ ತಾಯಿಯೊಂದಿಗೆ ಚೆಂಬೆಬೆಳ್ಳೂರಿನಲ್ಲಿ ಇದ್ದಾಳೆ. ಈ ಘಟನೆಯಾಗಿ ಇಂದಿಗೆ ಆರು ತಿಂಗಳಾಗಿವೆ. ಮನೆಯಲ್ಲಿ ಸೂತಕದ ಛಾಯೆ ಮಾತ್ರ ಮಾಸಿಲ್ಲ.

ಮೂರ್ನಾಡುವಿನ ಮನೆಯ ತುಂಬ ಪೊನ್ನಣ್ಣನದೇ ನೆನಪು. ಎಲ್ಲವೂ ಕರಾಳಸ್ವಪ್ನದಂತೆ ನಡೆದು, ಮಗ ಇನ್ನಿಲ್ಲವಾದ ದುಖದಿಂದ ಮಾನಸಿಕವಾಗಿ ಕುಗ್ಗಿದ್ದ ಸುಮಿ ಮತ್ತು ತಮ್ಮುವಿಗೆ ಸಮುದಾಯದ ಒಡನಾಡಿಗಳು ಧೈರ್ಯ ತುಂಬಿ, ಕೆಲಸಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಎರಡು ವಾರಗಳ ಹಿಂದೆ ಮನೆ ಬಿಟ್ಟು, ಹೊಸ ಗುಡಿಸಲು ಕಟ್ಟುವ ಕಾಯಕಕ್ಕೆ ಜೊತೆಯಾಗಿದ್ದಾರೆ.

ಇಡೀ ಪಣಿ ಎರವ ಸಮುದಾಯ ಸಂಘಟನೆಯ ಮೂಲಕ ಒಟ್ಟುಗೂಡಿದ್ದು, ಇಪ್ಪತ್ತು ವರ್ಷಗಳ ಹಿಂದಷ್ಟೇ. ಅಲ್ಲಿಯವರೆಗೂ ಜೀತದ ಬದುಕು. ಕೊಡಗಿನ ತೋಟದ ಮಾಲೀಕರು ಕೆಲಸಕ್ಕೆಂದು ಮೈ ಬಗ್ಗಿಸಿ ದುಡಿವ, ಮಾತೇ ಆಡದ ಜನರನ್ನು ನೇಮಿಸಿಕೊಳ್ಳುತ್ತಿದ್ದರು. ಹಸಿವಿನ ಅನಿವಾರ್ಯತೆಗಾಗಿ ಮೌನಕ್ಕೆ ಶರಣಾದ ಈ ಆದಿವಾಸಿ ಜನ ತಮ್ಮ ಹಕ್ಕಿಗಾಗಿ ಮಾತಾಡುವುದಕ್ಕೆ ಕಲಿತು ಅಬ್ಬಬ್ಬಾ ಎಂದರೆ ಎರಡು ದಶಕಗಳಾಗಿರಬಹುದಷ್ಟೇ.

ಆಗೆಲ್ಲ ತೋಟದ ಮಾಲೀಕರು ಕೆಲಸಕ್ಕೆ ಬರುವವರ ಪೂರ್ಣ ವಿವರಗಳನ್ನು ತೆಗೆದುಕೊಳ್ಳುತ್ತಿದ್ದರು. ಸರ್ಕಾರ ಸಮುದಾಯದ ಅಭಿವೃದ್ಧಿಗೆ ನೀಡುವ ಎಲ್ಲ ಯೋಜನೆಯ ಫಲಾನುಭವಿಗಳು ತೋಟದ ಮಾಲೀಕರೇ ಆಗಿರುತ್ತಿದ್ದರು. ದಿನಕ್ಕೆ ಹದಿನೆಂಟರಿಂದ ಇಪ್ಪತ್ತು ರೂಪಾಯಿಯಷ್ಟು ಕೂಲಿ ಸಂಬಳ ನಿಗದಿಯಾಗಿತ್ತು. ಈಗ ಕೂಲಿ ಸಂಬಳ ಕೇಳಿದರೆ ನೂರೈವತ್ತರಿಂದ ಇನ್ನೂರು ರೂಪಾಯಿ, ಅಂತಿರಲಿ, ಕೂಲಿಯಾಳುಗಳ ರೇಷನ್ ಕಾರ್ಡ್‌ಗೆ ಸಿಗುವ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಿಂದ ತೋಟದ ವರೆಗೆ ಅವರ ಕೈಯಿಂದಲೇ ಹೊರಿಸಿ, ಕಳುಹಿಸುತ್ತಿದ್ದರು. ಅಕ್ಕಿ, ಬೇಳೆ ಉಚಿತವಿದ್ದರೂ ತಿಂಗಳ ಕೊನೆಯಲ್ಲಿ ನೂರು ರೂಪಾಯಿಗಳನ್ನು ಸಂಬಳದಿಂದ ಕಡಿತಗೊಳಿಸಲಾಗುತ್ತಿತ್ತು.

ತೋಟದ ಕೆಲಸಕ್ಕೆ ಬಂದ ಮೇಲೆ, ಅಲ್ಲೇ ಉಳಿಯಬೇಕು. ರಾತ್ರಿಯ ವೇಳೆ ಮದ್ಯದ ಪೂರೈಕೆಯನ್ನು ಮಾಲೀಕರೇ ವಹಿಸಿ ಕೊಳ್ಳುತ್ತಿದ್ದರು. ಇದೂ ಉಚಿತವಾಗಿಯಲ್ಲ; ಎರಡು ಪಟ್ಟು ದುಡ್ಡಿನ ಲೆಕ್ಕಾಚಾರವಿಟ್ಟೇ ಮದ್ಯದ ಸರಬರಾಜು ನಡೆಯುತ್ತಿತ್ತು. ಪ್ರಶ್ನಿಸಲು ಹೋದವರ ಬಾಯಿ ಮುಚ್ಚಿಸುವುದು ಕಷ್ಟದ ಸಂಗತಿಯೇನೂ ಆಗಿರಲಿಲ್ಲ. ತಮ್ಮು ಅವರು ಕಂಡಂತೆ ಇಡೀ ವ್ಯವಸ್ಥೆಯಲ್ಲಿ ಅವರಿಗಿದ್ದದ್ದು ಎರಡೇ ಆಯ್ಕೆ. ಒಂದೇ ಬಾಯಿ ಮುಚ್ಚಿಕೊಂಡು, ಏನೂ ಕಾಣದಂತೆ ಬದುಕಬೇಕು. ಇನ್ನೊಂದು, ಕಂಡದ್ದನ್ನು ಕಂಡಂತೆ ಹೇಳಿ ಸಾಯಬೇಕು. ಅಂತಹ ಭಯದ ವಾತಾವರಣ!

ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಂತೆ ತಮಗಾಗುತ್ತಿರುವ ಅನ್ಯಾಯಕ್ಕೆ ದನಿ ಹೊರಡಿಸಬೇಕೆಂಬ ಅರಿವು ಮೂಡಿದೆ. ಶೇಕಡಾ 70ರಷ್ಟು ಜನರು ತೋಟದ ಲೈನು ಮನೆಯಿಂದ ಆಚೆ ಬಂದು, ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಪೊನ್ನಣ್ಣನ ಸಾವಿನ ದುರಂತ ಸಂಭವಿಸಿರುವುದು, ಆತಂಕವನ್ನು ಸೃಷ್ಟಿಸಿದೆ. ಮೂರು ತಿಂಗಳು ಕಳೆದರೆ ಇಡೀ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಆದರೆ ಈ ಕಾಡಿನ ಮಕ್ಕಳಿಗೆ?

keerthisba2018@gmail.com

Tags:
error: Content is protected !!