ಹನಿ ಉತ್ತಪ್ಪ
ಮೈಸೂರೇ ಹಾಗೆ, ಇಲ್ಲಿ ಕಾಣುವ ಸಾಂಸ್ಕೃತಿಕ ವೈವಿಧ್ಯ ಇಡೀ ನಾಡನ್ನು ಪ್ರತಿನಿಧಿಸಬಲ್ಲಷ್ಟು ಶ್ರೀಮಂತ. ನಮಗಿಲ್ಲಿ ಹಾದಿ ಬೀದಿಯ ಮೇಲೆ ನೃತ್ಯ ಕಲಾವಿದರು ಹಾಡುಗಾರರು ಶರಣರು ತತ್ವಪದಕಾರರು ದೈವಭಕ್ತರು ನಾಸ್ತಿಕರು ಮಂಟೇಸ್ವಾಮಿಗಳು ಎಲ್ಲರೂ ಅಡ್ಡಾಡುತ್ತಾ ನೋಡಲು ಸಿಗುತ್ತಾರೆ. ಇಲ್ಲಿ ಗಾಳಿಯಲ್ಲೂ ಸಹ ಗುನುಗುವ ತಾರಕದ ರಾಗ ಒಂದು ಕೇಳುತ್ತಲೇ ಇರುತ್ತದೆ. ದಸರಾದ ಹಿಂದುಮುಂದಂತೂ ಹಾದಿಯ ಮೇಲಿನ ಹೆಜ್ಜೆಗಳೂ ನೃತ್ಯ ಮಾಡುತ್ತವೆ. ಮುದುಕರಂತೆ ಹಲಬುವ ಯುವಕರು, ನವ ಯುವಕ ಯುವತಿಯರಂತಹ ಹಿರಿಯ ಪ್ರಜೆಗಳು ಸಿಗುವುದು ಸರ್ವೇಸಾವಾನ್ಯ.
ಮೂರ್ನಾಲ್ಕು ವರ್ಷಗಳ ಕೆಳಗೆ ಈಗ ಉಪ ಮುಖ್ಯಮಂತಿಗಳಾಗಿರುವ ಡಿ ಕೆ ಶಿವಕುವಾರ್ ಅವರ ಬಂಧನ ಬಿಡುಗಡೆ ರಾಜಕೀಯ ಹೈಡ್ರಾಮಾದ ಸಂದರ್ಭದಲ್ಲಿ ಅವರ ಬಿಡುಗಡೆಯಾದ ವೇಳೆ ಹಿರಿಯ ಕಾಂಗ್ರೆಸ್ ಕಾರ್ಯಕರ್ತೆಯಾದ ತಾಯಿಯೊಬ್ಬರು ಸಿಕ್ಕಾಪಟ್ಟೆ ನೃತ್ಯ ಮಾಡಿ ತಮ್ಮ ಸಂತಸ ಹಂಚಿಕೊಂಡದ್ದು ನಿಮಗೆ ನೆನಪಿರಬಹುದು. ಬಿಳಿ ಸೀರೆ ಉಟ್ಟು ಉದ್ದನೆ ಜಡೆಗೆ ಹೂ ಮುಡಿದು ಅವರು ಒಂದೇ ಸಮನೆ ನರ್ತಿಸಿ, ಮನೆ ಮಾತಾಗಿದ್ದರು. ಈಗ ೭೦ರ ಆಸುಪಾಸಿನ ಈ ಮಹಾತಾಯಿ ಮೊನ್ನೆ ದಸರಾದಲ್ಲಿ ಅಚಾನಕ್ಕಾಗಿ ಮಾತಿಗೆ ಸಿಕ್ಕರು. ತಮ್ಮ ಮೇಲೆ ಚಾಮುಂಡಿ ತಾಯಿುುಂ ನೆಲೆಯಾಗಿರುವಳೆಂದು ತಾವೇ ನಂಬಿಕೊಂಡಿರುವ ಈ ಮಹಾಲಕ್ಷ್ಮಿ ಉರುಫ್ ಮಾಲಾಶ್ರೀ ಉರುಫ್ ಚಾಮುಂಡೇಶ್ವರಿ ಅಮ್ಮನವರು ಅಂಬಾರಿಯ ಮುಂದೆ ಸಡಗರದಿಂದ ಓಡಾಡುತ್ತಾ ಕಣ್ಣಿಗೆ ಬಿದ್ದಿದ್ದರು.
ಅರಮನೆಗೂ ತಮಗೂ ಆ ಜನ್ಮದ ನಂಟು ಉಂಟೆಂದು ಬಲವಾಗಿ ನಂಬಿರುವ ಇವರು ಸುವಾರು ೪೦ ವರ್ಷಗಳಿಂದ ತಮ್ಮ ಮೈ ಮೇಲೆ ಚಾಮುಂಡಿ ಹಾಗೂ ಶನೇಶ್ವರ ಸ್ವಾಮಿಯು ನೆಲೆಸಿರುವರೆಂದು ನಂಬಿರುವರು. ಇವರು ಬಾಯಿ ಬಿಟ್ಟರೆ ಮೈಸೂರಿನ ಹತ್ತಾರು ವರ್ಷಗಳ ಗತವೈಭವ ಬೀದಿಗೆ ಬರುತ್ತದೆ. ಹಾಗೆಂದು ಅದು ತಮ್ಮ ವೈಯಕ್ತಿಕವಲ್ಲ ಇಡೀ ಮೈಸೂರು ಸಂಸ್ಥಾನದ ವೈಭವ ವಿಷಯ ಹಾಗೆ ಜಾರುತ್ತ ಜಾರುತ್ತ ತಾವು ಕಾಂಗ್ರೆಸ್ ಸೇರಿ ಪಕ್ಷಕ್ಕಾಗಿ ದುಡಿದ ವಿಚಾರಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಇವರು ಕೊಂಚ ಗಾಯಕಿಯೂ ಆಗಿರುವುದರಿಂದ ನಡುನಡುವೆ ಹಾಡುಗಳು ಸೇರಿ ಮಾತು ಇನ್ನೂ ರಸವತ್ತಾಗುತ್ತದೆ. ತಮ್ಮ ಹಾಡಿಗೆ ತಾವೇ ನಲಿದು ಎರಡು ಹನಿ ಕಣ್ಣೀರು ಕೂಡ ಸುರಿಸುತ್ತಾರೆ. ಇಷ್ಟೇ ಆದರೆ ಸರಿ, ಆದರೆ ಮಾಲಾಶ್ರೀ ಈಗೀಗ ಕಂಡಕೂಡಲೇ ಎದುರಿನವರ ಭವಿಷ್ಯವನ್ನು ಹೇಳಿಬಿಡುತ್ತಾರೆ. ಇವರ ವಾಸಸ್ಥಾನವಾಗಿರುವ ಸುಣ್ಣದ ಕೇರಿಯಲ್ಲಿ ಹಾಗೂ ನಜರ್ಬಾದಿನ ಸುತ್ತಮುತ್ತ ಇದನ್ನು ನಂಬುವ ಬಹಳ ಜನರಿದ್ದಾರೆಂದು ಅವರೇ ಹೇಳುತ್ತಾರೆ.
ಅಷ್ಟೇ ಅಲ್ಲದೆ ತಾನು ಚಿಕ್ಕವಳಾದಾಗ ಕನ್ನಡದ ಸಮಸ್ತ ಗಾಯಕಿಯರೂ ಹಾಡಿರುವ ಹಾಡುಗಳನ್ನೆಲ್ಲ ಆರ್ಕೆಸ್ಟ್ರಾದಲ್ಲಿ ಹಾಡಿ ಜನಮನ್ನಣೆ ಗಳಿಸಿರುವುದನ್ನ ನನಗೆ ಲೈವಲ್ಲಿ ತೋರಿಸಲು ಮೈಸೂರಿನ ಹೆದ್ದಾರಿಯ ಮೇಲೆ ನಡೆವ ಜನರೆಲ್ಲ ನಿಂತು ನೋಡುವಂತೆ ಹಾಡಿ ತೋರಿಸಿ ಅನುಗ್ರಹಿಸಿದರು. ’ಇದೆಲ್ಲಾ ಆದಮೇಲೆ ತಾನೆ ಚಾಮುಂಡಿಯು ನನ್ನೊಳಗೆ ಬಂದು ನೆಲೆಯಾಗಿದ್ದು.!’ ಅಂದವರೇ ’ನಾನು ಕಳ್ಳರನ್ನು ಹಿಡಿಯುವಲ್ಲಿಯೂ ಪೊಲೀಸಿನವರಿಗೆ ಒಮ್ಮೊಮ್ಮೆ ಸಹಾಯ ಮಾಡುವುದಿದೆ’ ಎಂದರು.
ನಾನಂತೂ ಆಶ್ಚರ್ಯ ಚಕಿತಳಾಗಿ ಈ ಬೆಳಗಿನ ಸುದ್ದಿಗಳನ್ನು ಕೇಳುತ್ತಾ, ಇಷ್ಟೊಂದು ಕಥೆಗಳನ್ನು ಹೇಗಪ್ಪಾ ಅರಗಿಸಿಕೊಳ್ಳುವುದು ಅನ್ನುವ ಯೋಚನೆಯಲ್ಲಿದ್ದರೆ ಚಾಮುಂಡಿ ತಾಯಿ ಉರುಫ್ವ ಮಾಲಾಶ್ರೀಯವರು ಇರು, ನಿನಗೆ ನನ್ನ ಮಗುವಿನಂತಹ ಗಂಡನನ್ನು ತೋರಿಸುತ್ತೇನೆ ಎನ್ನುತ್ತಾ ತಮ್ಮ ವ್ಯಾನಿಟಿ ಬ್ಯಾಗ್ಗೆ ಕೈ ಹಾಕಿ ಸಂದುಗೊಂದುಗಳನ್ನೆಲ್ಲ ಹುಡುಕಿ ಒಂದು ಪಾಸ್ಪೋರ್ಟ್ ಅಳತೆಯ ಫೋಟೋ ನನ್ನ ಕೈಗಿತ್ತು ’ಬೇಕಾದರೆ ನೀನೆ ಇಟ್ಟುಕೊ, ಇದು ನನ್ನ ಮಗುವಿನಂತಹ ಗಂಡ ’ ಎಂದರು. ಅರ್ಥವಾಗದೆ ಅವರನ್ನೇ ನೋಡಿದ ನನಗೆ ‘ಅಯ್ಯೋ ಅರ್ಥವಾಗಲಿಲ್ಲವಾ, ನಾನು ಅವರನ್ನು ಕಡೆಯವರೆಗೂ ಮಗುವಿನ ಹಾಗೆ ನೋಡಿಕೊಂಡಿದ್ದು. ಮೈಮೇಲೆ ಅಮ್ಮನವರು ಬರಲು ಶುರುವಾದಾಗ ಹೆದರಿ ನಮ್ಮ ಮನೆಯವರೆಲ್ಲ ಸೇರಿ ನನ್ನನ್ನು ಹಿಡಿದು ಇನ್ನೇನು ಮದುವೆ ವಾಡಿಯೇ ಬಿಡುವರು ಎಂದಾಗ, ನಾನು ಒಂದು ಕಾರ್ಯ ಕ್ರಮದಲ್ಲಿ ಕೂತು ಹೇಳಿದೆ, ’ಈಗ ನನ್ನ ಪಕ್ಕದ ಕುರ್ಚಿಯಲ್ಲಿ ಯಾರು ಬಂದು ಕೂರುವರೋ, ಅವರೇ ನನ್ನ ಗಂಡ. ಅದು ಕೋಟ್ಯಾಧಿಪತಿಯೂ ಆಗಿರಬಹುದು ಭಿಕ್ಷುಕನು ಆಗಿರಬಹುದು’ ನನ್ನ ಮಾತಿಗೆ ಹೆದರಿ ಎಲ್ಲರೂ ಒಪ್ಪಿಕೊಳ್ಳುತ್ತಿರುವಾಗಲೇ ಬೋಟಿ ಬಜಾರಿನಲ್ಲಿ ಕೆಲಸ ವಾಡುತ್ತಾ, ಡೇರ್ ಡೆವಿಲ್ನಂತೆ ಬದುಕಿದ್ದ ಇವರು ಬಂದು ನನ್ನ ಬಳಿ ಕುಳಿತರು. ನಾನು ಅವರನ್ನೇ ನನ್ನ ಗಂಡನೆಂದು ಒಪ್ಪಿಕೊಂಡೆ. ಆದರೆ ಅದಾಗಲೇ ದೇವರೊಟ್ಟಿಗೆ ಮಾಲೆ ಬದಲಿಸಿಕೊಂಡಿದ್ದ ನಾನು ನನ್ನೊಳಗೆ ಅದೇ ಭಗವಂತ ನೆಲೆಸಿದ್ದಾನೆಂದೂ ನಿಮ್ಮನ್ನು ನಾನು ಮಗುವಿನಂತೆ ಮಮತೆ ಅಕ್ಕರೆಗಳಿಂದ ಸಾಕಿಕೊಳ್ಳುವೆನೆಂದೂ ಹೇಳಿದ್ದಕ್ಕೆ ಅವರು ಒಪ್ಪಿಕೊಂಡರು. ಹಾಗೆ ಲೋಕಕ್ಕೆ ಗಂಡ ಹೆಂಡತಿಯರಾದ ನಾವು ತಾಯಿ ಮಗುವಿನಂತೆ ಬದುಕಿದೆವು.‘ ಎಂದು ಮತ್ತೊಂದು ಕಥೆ ಹೇಳಿದರು. ಇವರ ಕಥೆಗಳ ಸಂತೆಯಲ್ಲಿ ನಾನು ಕಳೆದು ಹೋದೆ. ಸತ್ಯಾಸತ್ಯದ ಯೋಚನೆಗಳು ಸುಳಿಯುವ ಮೊದಲೇ ಈ ಚಿತ್ರವನ್ನು ಬರೆದುಬಿಟ್ಟರೆ ಒಳ್ಳೆಯದೆಂದು ಕುಳಿತೆ.
ಆಮೇಲೆ ಅವರು ಮಂಡ್ಯ ಹಾಗೂ ಬಳ್ಳಾರಿ ಜಿಲ್ಲೆಗಳ ಪೊಲೀಸ್ ರಿಮ್ಯಾಂಡ್ ಹೋಂ ಗಳಲ್ಲಿ ಕೆಲಸ ಮಾಡಿ ಹೆಸರುಗಳಿಸಿದ್ದು ಬಳ್ಳಾರಿ ಯಾಕೋ ಇಷ್ಟವಾಗದೆ ಅಲ್ಲಿಂದ ಮೈಸೂರಿಗೆ ಪಾದ ಬೆಳೆಸಿದ್ದು ಎಲ್ಲವನ್ನು ಸವಿವರವಾಗಿ ಹೇಳಿ ಮಧ್ಯದಲ್ಲಿ ’ಬಳ್ಳಾರಿಯಲ್ಲಿ ಗಂಡಸರು ಸರಿಯಿಲ್ಲ. ಮಂಡ್ಯ ಪರವಾಗಿಲ್ಲ’ ಎಂದು ಮುಗಿಸುವಾಗ ನಾನು ಜಿಲ್ಲಾವಾರು ಗಂಡಸರ ಸ್ವಭಾವ ವಿಮರ್ಶೆಯ ಬಗ್ಗೆ ಚಕಿತಳಾಗಿ ಅತಾರ್ಕಿಕವಾಗಿ ಯೋಚಿಸಲು ಶುರುವಾಡಿದೆ. ಯಾಕೋ ಈ ಆಗದ ಹೋಗದ ಕಥಾಲೋಕದಲ್ಲಿ ಮುಳುಗಿ ತಲೆ ಬಿಸಿಯಾಗಿದ್ದರಿಂದ ’ಬನ್ನಿ ಕಾಫಿ ಕುಡಿಯೋಣ’ ಎಂದು ಹತ್ತಿರದ ಹೋಟೆಲಿಗೆ ಕರೆದೊಯ್ದು. ನಾನು ಸಕ್ಕರೆ ರಹಿತ ಕಾಫಿ ಹೇಳಿದರೆ ಚಾಮುಂಡಿ ಉರುಫ್ ಮಾಲಾಶ್ರೀ ಅವರು ಮೂರು ಚಮಚ ಸಕ್ಕರೆಯ ಒಂದು ಕಾಫಿ ಕುಡಿದರು. ಅಲ್ಲದೆ ಸಕ್ಕರೆ ಇಲ್ಲದ ಕಾಫಿ ಕುಡಿದ ನನ್ನೆಡೆಗೆ ಒಂದು ಮೂದಲಿಕೆಯ ನೋಟ ಬಿಸಾಕಿದರು. ಓಹೋ ಇವರ ಕಾಲು ಮಾತ್ರವಲ್ಲ, ಕಣ್ಣುಗಳು ಕುಣಿಯುತ್ತವೆ ಎನಿಸಿತು.
ಸರಸರೆನೆ ಕಾಫಿ ಮುಗಿಸಿ ತಮಗೆ ಬೆಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮ ಇರುವುದರಿಂದ ಬೇಗ ಹೊರಡಬೇಕು, ಬಸ್ಸು ತೋರಿಸು ಎಂದು ತರಾತುರಿಯಿಂದ ಮೇಲೆದ್ದರು. ತಲೆಕೊಡವಿಕೊಂಡು ಗತದಿಂದ ವರ್ತವಾನಕ್ಕೆ ಬಂದು ಬಸ್ ನಿಲ್ದಾಣದ ಬಳಿ ಅವರನ್ನು ಬಿಟ್ಟು ಹೊರಡುವ ಮೊದಲು ‘ನೀನೂ ನನ್ನಂತೆ ಕೋಟಿ ಫೇಮಸ್ ಆಗಬೇಕೆಂದು ತಾನೇ ನನ್ನ ಕಥೆ ಕೇಳಿದೆ? ಇಲ್ಲದಿದ್ದರೆ ನನ್ನ ಕಥೆಯನ್ನು ಹೀಗೆ ಗಂಟೆಗಟ್ಟಲೆ ಕೂತು ಯಾರು ಕೇಳುವರು ಈಗ ನಿನ್ನ ಬಗ್ಗೆ ನಾನು ಹೇಳಲೇ? ಮೂರು ಮಕ್ಕಳ ತಾಯಿಯಾಗಿರುವ ನೀನು ಬಹಳ ಕಷ್ಟಪಟ್ಟು ಮೇಲೆ ಬಂದಿರುವೆ. ಇನ್ನೊಂದು ಕಷ್ಟ ದಾಟಿದರೆ ಎಲ್ಲಾ ಚೆನ್ನಾಗಿ ಫೇಮಸ್ಸಾಗುವೆ. ನಾನು ನೋಡು ಇಡೀ ಮೈಸೂರಿನಲ್ಲೇ ಕೋಟಿ ಫೇಮಸ್ಸು. ಮಹಾರಾಜರೇ ನನ್ನನ್ನು ಎಷ್ಟೋ ಪ್ರೀತಿಯಿಂದ ಮಾತನಾಡಿಸಿದ್ದಾರೆ. ನೀನು ಫೇಮಸ್ಸಾಗು, ಅಮ್ಮ ಒಳ್ಳೇದು ವಾಡ್ತಾಳೆ.‘ ಎಂದು ಹೇಳುತ್ತಾ ಟಾಟಾ ವಾಡುತ್ತಾ ಮಂತ್ರ ಮುಗ್ಧ ನಗುವನ್ನು ಚೆಲ್ಲುತ್ತಾ ಬಸ್ಸಿಗೆ ಹೊರಟು ಹೋದರು.