ಪೂರ್ಣಿಮಾ ಭಟ್ಟ ಸಣ್ಣಕೇರಿ
ಕಾಗದವನ್ನು ನನ್ನ ಕೈಯೊಳಗೆ ತುರುಕಿದ ಸಿರಿ ‘ಓದು’ ಎಂದು ಕಣ್ಸನ್ನೆ ಮಾಡಿ ಬಚ್ಚಲೊಳಗೆ ನುಗ್ಗಿದಾಗ ಇನ್ನೂ ಆರೂವರೆ. ಪತ್ರ, ಸಿರಿಯ ಮದರಂಗಿಯ ಘಮದಲ್ಲಿ ಮುಳುಗೆದ್ದು ಬಂದಹಾಗಿತ್ತು. ಸಿರಿ ನನ್ನ ಸೋದರಮಾವ ಗೋಪಾಲಕೃಷ್ಣನ ಒಬ್ಬಳೇ ಮಗಳು. ಮೊಮ್ಮಕ್ಕಳ ಸಾಲಿನಲ್ಲೇ ಹಿರಿಯಳಾದ ನಾನು ಎಂದರೆ ಇವಳಿಗೆ ಮೊದಲಿಂದಲೂ ಸಲಿಗೆ, ಪಾಶ. ಅವಳದ್ದೇ ಮದುವೆಯ ಸಂಭ್ರಮಕ್ಕೆ ನಾವೆಲ್ಲ ಸೇರಿದ್ದೇವೆ. ಈಗ ನನ್ನ ಕೈಲಿರುವುದು ಗೋಪೂ ಮಾವ ತನ್ನ ಮಗಳಿಗೆ ಬರೆದ ಪತ್ರ.
‘ನನ್ನ ಮುದ್ದಿನರಗಿಣಿ ಮಗಳೇ,
ನಿನ್ನ ಮದುವೆಯ ದಿನ ಬೆಳಿಗ್ಗೆ ಇಂಥದೊಂದು ಅಟ್ರಾಕಾಣಿ ಪತ್ರವನ್ನು ನೀನು ಓದಬೇಕಾಗಿ ಬಂದುದಕ್ಕೆ ನನಗೆ ನಿಜಕ್ಕೂ ಸಂಕಟ. ಆದರೆ ಇವತ್ತು ಬಿಟ್ಟರೆ ನನ್ನ ಸಂಕಟ ತೀರುವ ದಿನವೇ ಬಾರದು, ನಾನು ಹೋಗುವಾಗಲೂ ಈ ಸಂಕಟವನ್ನು ಹೊಟ್ಟೆಯಲ್ಲಿಟ್ಟೇ ಹೊರಡಬೇಕಾಗಬಹುದು ಎಂದೆನಿ ಸುತ್ತಿದೆ. ಛೇ, ಶುಭದ ದಿನ ಅಶುಭವನ್ನು ಆಡಿಬಿಟ್ಟೆ. . . ಕ್ಷಮಿಸು ಕೂಸೇ! ಇರಲಿ, ಮುಂದೆ ಓದು.
ಇನ್ನೆರಡು ತಾಸಿನಲ್ಲಿ ಹಸೆಮಣೆಯ ಮೇಲೆ ನಿನ್ನ ಗಂಡನ ಪಕ್ಕ ಪಟ್ಟಾಗಿ ಕೂಡ್ರುವವಳು ನೀನು. ಮುಂದೆರಡು ತಿಂಗಳಿಗೋ, ಇನ್ನೊಂದು ವರ್ಷಕ್ಕೋ ಸಂಸಾರದ ಪಟ್ಟುಗಳನ್ನು ಕಲಿಯುವವಳು ನೀನು. ತುಸು ಹೊಂದಾಣಿಕೆ, ಒಂದಷ್ಟು ಜೀವನ್ಮುಖಿ ನಿರ್ಧಾರಗಳು, ಕಾಲೆಡವದಂತಹ ಗಟ್ಟಿ ನಡಿಗೆ ಇವುಗಳೊಂದಿಗೆ ಬದುಕು ಮುಂದುವರಿಸಬೇಕಾದವಳು ನೀನು. ಜತೆಗೆ ಇನ್ನೇನು ಗಂಡನೊಟ್ಟಿಗೆ ಹೊರಟು ನಿಂತಿರುವ ಈ ಹೊತ್ತಲ್ಲಿ, ಈ ಅಪ್ಪಯ್ಯನನ್ನು ಹಗುರ ಮಾಡಬೇಕಾದವಳೂ ನೀನು. ಹಾಗಾಗಿ ಇಷ್ಟೆಲ್ಲ ಪೀಠಿಕೆ ಮಗಾ. . .
ಕಳೆದ ಇಪ್ಪತ್ತೈದು ವರ್ಷವನ್ನು ನಿನ್ನಮ್ಮನ್ನೊಡನೆ ಆದಷ್ಟೂ ನಗುನಗುತ್ತಲೇ ಕಳೆದೆ, ಹಲವು ಅಳುವ ಸಂದರ್ಭಗಳಿದ್ದರೂ. ನಾನೇ ಹಠ ಹಿಡಿದು ಮಾಡಿ ಕೊಂಡ ಮದುವೆಯಾಗಿತ್ತಲ್ಲ, ನನಗೆ ನಗುವುದು ಅನಿವಾರ್ಯವಾಗಿತ್ತು. ಮೊದಲಿನಿಂದಲು ನಿನ್ನಮ್ಮ ಒಂಟಿ ಹಿಡಿತದವಳು. ಅದು ನಿನಗೆ ಗೊತ್ತಿಲ್ಲದ್ದಲ್ಲ. ಇಷ್ಟು ವರ್ಷಗಳಲ್ಲಿ ಕರು ತಿಂದು, ಮರಿ ತಿಂದು ಹೆಬ್ಬುಲಿಯಾದಂತೆ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದಾಳೆ. ನಾನು ಇನ್ನಷ್ಟು ಅವಳ ಅಂಕೆಯಲ್ಲಿ ಮುದುಡಿದ್ದೇನೆ. ನನ್ನ ಅನಾರೋಗ್ಯದಿಂದಾಗಿ, ಕೈಕಾಲಿನ ಶಕ್ತಿ ಕುಂದಿದ್ದರಿಂದಾಗಿ ನಾನೂ ನಿನ್ನಮ್ಮನಿಗೇ ಅಂಟಿದ್ದೇನೆ, ಅಡಕೆ ಮರವನ್ನು ಕಾಳುಮೆಣಸಿನ ಬಳ್ಳಿ ತಬ್ಬಿದಂತೆ.
ಹಾಗಂತ ಅವಳು ಕೆಟ್ಟವಳೇನಲ್ಲ. ತಿಳಿವಳಿಕೆ ಕಡಿಮೆ ಅಷ್ಟೇ. ತನ್ನ ಕೋಶದೊಳಗೆ ಇರಿಯುವಂತಹ ಚೂಪು ಬುದ್ಧಿಯನ್ನು ಬಿಟ್ಟರೆ ಇನ್ಯಾವುದಕ್ಕೂ ಅವಕಾಶವೇ ಕೊಟ್ಟಿಲ್ಲ ಅವಳು.
ನಮಗಿದ್ದ ತೋಟ, ಜಮೀನು, ಸಂಪತ್ತಿನಲ್ಲಿ ಎಷ್ಟು ಖುಷಿಯಾಗಿ ಇರ ಬಹುದಿತ್ತು ಮರೀ. . . ನೀನು ಚಿಕ್ಕವಳಿರುವಾಗಲೇ ತೀರಿಹೋದ ನಿನ್ನಜ್ಜ, ಈಗ ಮೂರು ವರ್ಷಗಳ ಕೆಳಗೆ ಮುಗಿದುಹೋದ ನಿನ್ನಜ್ಜಿ ಇವರಿಬ್ಬರೂ ತಮ್ಮ ಮಕ್ಕಳೆಂದರೆ ಜೀವ ಬಿಡಲೂ ಸಿದ್ಧ ಅಂಥವರು. ನಾನು ಹಾಗೂ ನಿನ್ನ ಮೂವರು ಸೋದರತ್ತೆಯರಲ್ಲೇ ಪ್ರಾಣ ಹಿಡಿದುಕೊಂಡವರು. ಕಾಲು ಶತಮಾನದ ಕೆಳಗೆ ಬದುಕು ಈಗಿನಂತಿರಲಿಲ್ಲ. ಹುಡುಗಿಯೊಬ್ಬಳನ್ನು ತೋರಿಸಿ ಇವಳನ್ನೇ ಆಗುವೆ ಎಂದರೆ ಯಾವ ತಂದೆ ತಾಯಿಯೂ ಹದ ಮಟ್ಟಿಗೆ ಒಪ್ಪುತ್ತಿರಲಿಲ್ಲ. ನಿನ್ನಜ್ಜನಿಗೆ ಅವನ ಮಗನ ಮೇಲಿನ ಅಂದರೆ ನನ್ನ ಮೇಲಿನ ವ್ಯಾಮೋಹ ನೋಡು! ಜಾಸ್ತಿ ಮಾತಾಡದೇ ನಮ್ಮ ಮದುವೆಗೆ ಒಪ್ಪಿದ. ನನ್ನ ಮೂರೂ ಅಕ್ಕಂದಿರನ್ನು ಮುಂದಿಟ್ಟುಕೊಂಡು ನಿನ್ನಮ್ಮನನ್ನು ಮನೆ ತುಂಬಿಸಿಕೊಂಡ. ಅಂಥ ನಿನ್ನಜ್ಜ, ತನ್ನ ಮಗಳ ಮನೆಯಲ್ಲಿ ಕಾಯಿಲೆ ಬಿದ್ದು ಮಲಗಿದಾಗ ಅವನ ಒಬ್ಬಳೇ ಒಬ್ಬ ಸೊಸೆಯಾದ ನಿನ್ನಮ್ಮ – ಒಂದು ಹೊತ್ತು ಮಾವನನ್ನು ನೋಡಲು ಹೋಗದೇ ಸಿಟ್ಟನ್ನು ಸಾಧಿಸಿದಳು. ಹಾಗಂತ ಮಾವ ಮಾಡಿಟ್ಟ ಚಿನ್ನ ಬೆಳ್ಳಿಯೆಲ್ಲವೂ ಅವಳದೇ ಸೊತ್ತು ಅನ್ನುತ್ತಾಳೀಗ. ನನ್ನ ಅಕ್ಕಂದಿರು ತವರಿನ ಚಿನ್ನ ಕದಿಯಲು ಬಂದವರೆಂಬ ಸೋಗಿನಲ್ಲಿ ನೋಡುತ್ತಾಳೆ ಬೇರೆ! ಹಿಂದೆ ಆಗಿ ಹೋದ ಸಂದರ್ಭಗಳಿಗೆ ಈಗ ಸಮಾಧಾನ ಹೇಳಿ ಪೂರೈಸುವುದುಂಟ?
ನಿನ್ನಮ್ಮನದು ಈ ಜನ್ಮಕ್ಕೆ ಮುಗಿಯದ ದೂರಗಳು. ತಾನು ಮದುವೆಯಾಗಿ ಈ ಮನೆಗೆ ಬಂದಾಗ ನನ್ನ ಅಕ್ಕಂದಿರು ಅವಳನ್ನು ಆದರಿಸಲಿಲ್ಲವಂತೆ. ತನ್ನ ಅತ್ತೆ ಮಾವ ಅಕ್ಕರಾಸ್ಥೆ ತೋರಿಸಲಿಲ್ಲವಂತೆ. ತಾನು ಮುಚ್ಚು ಹೊದ್ದು ಮಲಗಿದಾಗ ಕಷಾಯ ಮಾಡಿಕೊಟ್ಟದ್ದು ಸಿಹಿ ಇರಲಿಲ್ಲವಂತೆ. ಯಾವತ್ತೋ ಒಂದು ರಾತ್ರಿ ನನ್ನಕ್ಕನ ಮನೆಗೆ ಹೋದಾಗ ಕುಂಕುಮ ಕೊಡಲು ಮರೆತರಂತೆ. ನಿನ್ನಜ್ಜಿ ಕಾರಿನಲ್ಲಿ ಹೋಗುವಾಗಲೊಮ್ಮೆ ಮುಂದಿನ ಸೀಟಿನಲ್ಲಿ ಕೂತುಬಿಟ್ಟರಂತೆ. ದಿನಗಟ್ಟಲೆ ವಾರಗಟ್ಟಲೆ ಸಿಟ್ಟು ಸೆಡವು ಕಿರುಚಾಟ ಮಾಡಿ ನನ್ನದೂ ನೆಮ್ಮದಿ ಕೆಡಿಸಿ, ಊಟ ತಿಂಡಿ ಬಿಟ್ಟು ಗೋಳುಹೊಯ್ದುಕೊಳ್ಳಲು ಇವೂ ಕಾರಣಗಳಾದೀತ. . ? ನೀನೇ ಯೋಚನೆ ಮಾಡು ಶಣ್ಣಿ!
ಹಾಗೆ ನೋಡಿದರೆ ನನ್ನ ಅಕ್ಕಂದಿರದ್ದು ಒಬ್ಬೊಬ್ಬರದ್ದೂ ಒಂದೊಂದು ಗೋಳು. ಈಗ ಇದನ್ನೆಲ್ಲ ಮಾತಾಡದೇ ಮುಚ್ಚಿಡಬೇಕಾದಷ್ಟು ಪುಟ್ಟವಳಲ್ಲ ನೀನು. ಒಬ್ಬಳ ಗಂಡ ವಾರದ ಮೂರು ದಿನ ನಶೆಯಲ್ಲಿ. ಇನ್ನೊಬ್ಬಳ ಗಂಡ ಮಹಾನ್ ಲಾಟರಿಕೋರ, ಮನೆಯಲ್ಲಿಯೇ ಇರಲಾರ. ಕೊನೆಯ ಅಕ್ಕ ಹಾಗೂ ಭಾವ ತಮ್ಮ ಮನೆಯಲ್ಲೇ ಜೀತದಾಳುಗಳು. ಹೀಗೆಲ್ಲ ತೊಂದರೆಯಿರುವಾಗ, ನನ್ನಕ್ಕಂದಿರು ಹುಟ್ಟಿ ಇಪ್ಪತ್ತು ವರ್ಷಗಳು ಕಳೆದ ತಂದೆಯ ಮನೆಯನ್ನು ಆಧರಿಸುವುದು ತಪ್ಪಾ? ತನ್ನ ಹೆಮ್ಮಕ್ಕಳಿಗಾಗಿ ಜರಡಿ ಹಿಡಿದು ತಾನೇ ಹುಡುಕಿ ತಂದ ಸಂಬಂಧಗಳು ಹೀಗೆಲ್ಲ ಹಳ್ಳ ಹತ್ತಿ ಹೋದಾಗ ನಿನ್ನಜ್ಜ ಅವರಿಗಾಗಿ ಮರುಗಿದ್ದು ಹನಿಗಣ್ಣಾಗಿದ್ದು ತಪ್ಪಾ? ಅಕ್ಕಂದಿರು ಮನೆಗೆ ಬಂದಾಗ ನಿನ್ನಮ್ಮ ಕಟ್ಟಿದ ವೇಷಗಳ ಬಗ್ಗೆ ಬರೆಯುತ್ತ ಹೋದರೆ ನನ್ನ ಕಣ್ಣೀರು ಇನ್ನಷ್ಟು ಹರಿದೀತು, ನಿನ್ನ ಮನಸ್ಸನ್ನು ಇನ್ನಷ್ಟು ಮಗುಚೀತು. ಅದೆಲ್ಲ ಬೇಡ. ಮುಂದೆ ಮಾಡಬೇಕಾದ ಕೆಲಸದ ಬಗ್ಗೆ ನೋಡುವ.
ನೀನಾಗ ನಮ್ಮ ಮಡಿಲಲ್ಲಿ ಆಡುವ ಮಗು. ಪೇಟೆಯ ಸೊನಗಾರನ ಬಳಿ ಆರ್ಡರ್ ಕೊಟ್ಟು ಮಾಡಿಸಿದ್ದ ಲಕ್ಷ್ಮೀಕಾಸಿನ ಸರವನ್ನು ತಂದು ನಿನ್ನ ಕೊರಳಿಗೆ ತೊಡಿಸಿ ‘ಇದು ಎಲ್ಲರೂ ತೊಡುವಂತಹ ನೂರಾಎಂಟು ಕಾಸಿರುವ ಸರವಲ್ಲ, ಹ್ವಾಯ್! ನೂರೊಂಬತ್ತು ಲಕ್ಷ್ಮೀ ಕಾಸಿರುವಂಥದ್ದು. ಒಂದು ಕಾಸು ಜಾಸ್ತಿ. ನಮ್ಮನೆಯ ಹೆಣ್ಣುಮಕ್ಕಳು ಎಲ್ಲರಿಗಿಂತ ಮಿಗಿಲಾಗಿರಬೇಕು, ಎಲ್ಲದರಲ್ಲೂ ಒಂದು ಕೈ ಹೆಚ್ಚೇ ಇರಬೇಕು. ಬೆಳೆದು ಕಾಲೇಜಿನಲ್ಲಿ ಮಾಸ್ತರಿಕೆ ಮಾಡಬೇಕು. ಅಂಬಾಸಿಡರ್ ಕಾರು ಓಡಿಸಬೇಕು’ ಅಂತೆಲ್ಲ ಒಂದೇ ಸಮನೆ ಬಡಬಡಿಸಿದ್ದ ನಿನ್ನಜ್ಜ. ನೀನು ಹುಟ್ಟಿರುವ ವಿಷಯ ತಿಳಿದಾಗ ಒಮ್ಮೆ ಮುಖ ಚಿಕ್ಕದು ಮಾಡಿ ‘ಹೆಣ್ಣ. . ? ’ ಎಂದು ತಪ್ಪಾಡಿದ್ದನ್ನು ಬಡ್ಡಿಸಮೇತ ಸರಿಪಡಿಸಿಕೊಳ್ಳುತ್ತಿದ್ದಾನೇನೋ ಅನ್ನಿಸಿತ್ತು ನೋಡುತ್ತಿರುವ ನಮಗೆ. ತನ್ನ ಶ್ರೀಮತಿಯ ಹೆಸರನ್ನೇ ಹಸನು ಮಾಡಿ ನಿನಗೆ ‘ಸಿರಿ’ ಎಂದು ಹೆಸರಿಟ್ಟ. ಮುಂದೆ ಪ್ರತೀವರ್ಷ ಸರಗಳ ಮೇಲೆ ಸರಗಳನ್ನ, ಬಾಜೂಬಂದಿ, ಬಳೆಗಳನ್ನ ಮಾಡಿಸುತ್ತ ಬಂದ. ಕೆಲವೇ ವರ್ಷಗಳಲ್ಲಿ ಬಂದ ಕೆಲಸವನ್ನೆಲ್ಲ ಮುಗಿಸಿದಂತೆ ಎದ್ದು ನಡೆದ.
ಈಗ ತಂತಿ ಮೇಲಿನ ನಡಿಗೆ ಮುಂದುವರಿಸುವುದು ಮಾತ್ರ ನನ್ನ ಪಾಲು. ನಿನ್ನಜ್ಜ ತನ್ನ ಮಂಡೆಯನ್ನು ನೆಟ್ಟಗಿಟ್ಟು ದುಡಿದು, ಮಾಡಿಟ್ಟು ಹೋದ ಬಂಗಾರ ಬೆಳ್ಳಿ, ಅವು ಇರಬೇಕಾದ ಸ್ಥಾನ ತಲುಪಬೇಕು. ನಮ್ಮ ಆಸ್ತಿಪಾಸ್ತಿಯ ಮೇಲೆ ಯಾವತ್ತೂ ಹಕ್ಕು ಸಾಧಿಸದ ಅಕ್ಕಂದಿರಿಗೆ, ಈ ತಮ್ಮನಿಗೆ ಯಾವತ್ತೂ ಒಲವನ್ನೇ ಊಡಿದ ಆ ಮೂವರು ತಾಯಂದಿರಿಗೆ ಈ ಚಿನ್ನವನ್ನು ತಲುಪಿಸಿದರೆ ನನ್ನ ಹೆಗಲ ಭಾರ ಹಗುರಾದೀತು. ನಿನ್ನಜ್ಜ ಅಜ್ಜಿ ತೀರಿಕೊಂಡ ಮೇಲೆ, ಅಕ್ಕಂದಿರು ಅಪರೂಪಕ್ಕೆ ತವರಿಗೆ ಬಂದಾಗಲೊಮ್ಮೆ ಆಟದಲ್ಲಿ ಸೋತ ಮಗುವಿನಂತೆ ಮುಖ ಬಾಡಿಸಿಕೊಂಡು ಹೋದ ನೆನಪುಗಳಿಗೆ ಬಿಡುಗಡೆ ಸಿಕ್ಕೀತು. ಮಗಳು ಬೆಳೆದಳು ಎಂದು ಅಪ್ಪ ಕೊನೆಗೂ ಒಪ್ಪಿದ ಎಂದು ನಿನಗೆ ಸಮಾಧಾನವಾದೀತು. ಏನಾದರೂ ಮಾಡಿ ಅಪ್ಪಯ್ಯನ ಈ ಭಾರ ಇಳಿಸುವ ಕೆಲಸ ನಿನ್ನದೇ ಗುಬ್ಬೀ. . .
ನಿನ್ನನ್ನು ಚಿಪ್ಪಳದಲ್ಲಿ ಸಿಗಿಸಿದೆ ಎಂದುಕೊಳ್ಳಬೇಡ. ನನಗೆ ಬೇರೆ ದಾರಿ ಕಾಣುತ್ತಿಲ್ಲ. ಗಡಿಬಿಡಿಯಲ್ಲಿ ತೋಚಿದ್ದೆಲ್ಲವನ್ನೂ ಬರೆದಿದ್ದೇನೆ. ಅಕ್ಷರಗಳ ಮೇಲೆ ಚಿತ್‌ಕಾಟುಗಳ ಮೇಲೆ ಹಿಡಿತ ಸಿಗುತ್ತಿಲ್ಲ. ಅಂಪಾಯಿಸಿಕೊಂಡು ಓದು.
ಇಂತಿ ನಿನ್ನ ನಲ್ಮೆಯ ಅಪ್ಪಯ್ಯ………..
ಹಿತ್ತಲಿನ ದಾಸಾಳ ಪೊದೆಯ ಸಂದಿನಲ್ಲಿ ನಿಂತು ಪತ್ರವನ್ನು ಓದಿ ಮುಗಿಸಿದೆ. ಮದುವಣಿಗಿತ್ತಿಯಾಗಿ ಖುಷಿಖುಷಿಯಾಗಿ ಚಿಮ್ಮಿಕೊಂಡು ಓಡಾಡಬೇಕಾದ ಸಿರಿ ಈ ಪತ್ರ ಓದಿ ಕುಗ್ಗಿರಬಹುದು ಎನ್ನಿಸಿ ಬೇಸರವಾಯಿತು. ಗೋಪೂ ಮಾವನ ಮೇಲೆ ಸಿಟ್ಟೂ ಕರುಣೆಯೂ ಒಮ್ಮೆಲೇ ಉಕ್ಕಿದಂತಾಯ್ತು. ಬೆಳಗಿನ ತಿಂಡಿಗೆ ನನ್ನ ಎದುರೇ ಕೂತು ಬಾಳೆ ಎಲೆಯ ಮೇಲಿನ ಅವಲಕ್ಕಿಯನ್ನು ಹೆಕ್ಕಿದಂತೆ ತಿನ್ನುತ್ತಿದ್ದ ಸಿರಿಯೂ, ಆಗ ತಾನೇ ಸ್ನಾನ ಮುಗಿಸಿ ಬಂದು ಮಗಳ ಪಕ್ಕವೇ ಕೂತರೂ ಮಗಳ ಕಣ್ಣು ತಪ್ಪಿಸುತ್ತಿದ್ದ ಗೋಪೂ ಮಾವನೂ ನನಗೆ ಹೊಸದಾಗಿ ಕಾಣುತ್ತಿದ್ದರು. ನಾನು ಈ ಪ್ರಕರಣದಲ್ಲಿ ಜಾಸ್ತಿ ಏನೂ ಮಾತಾಡಬಾರದೆಂದು ನಿರ್ಧರಿಸಿದ್ದೆ. ನನ್ನಮ್ಮ, ದೊಡ್ಡಮ್ಮಂದಿರು, ಸೋದರಮಾವ ಈ ಪ್ರಕರಣದ ಬಾಧ್ಯಸ್ಥರು. ಅವರೇ ನಾಲ್ವರು ಬಗೆಹರಿಸಿಕೊಳ್ಳಲಿ ಎಂಬುದು ನನಗೆ ಸರಿಕಾಣುತ್ತಿತ್ತು ಮತ್ತು ಮೂವತ್ತೈದರ ಎಡಬಲದಲ್ಲಿರುವ ನಾನು, ಜ್ಞಾನವೈರಾಗ್ಯವನ್ನು ತುಸು ಬೇಗನೇ ತಳೆದಿದ್ದೇನೆಂದು ಉಳಿದ ಕಝಿನ್ನುಗಳು ಮಾಡುವ ಲೇವಡಿ ನನ್ನ ನೆತ್ತಿಗೇರಿತ್ತು. ಅಲ್ಲದೇ, ನನ್ನ ತವರಿನಲ್ಲಿ ಇದ್ಯಾವ ತಾಪತ್ರಯಗಳೂ ಇರದೆ ಅಣ್ಣಂದಿರ ಮಡದಿಯರು – ಅತ್ತಿಗ್ಯಮ್ಮಂದಿರು, ನನ್ನನ್ನು ಮುದ್ದುಗರೆದು ಹಾಳು ಮಾಡಿದ್ದಾರೆಂದು ನನ್ನ ಸ್ವಂತ ತಾಯಿಯೇ ಅಸೂಯೆಪಡುತ್ತಿದ್ದುದೂ ನಾನು ಈ ಪ್ರಕರಣದಲ್ಲಿ ತಟಸ್ಥಳಾಗಿರಲು ಇನ್ನೊಂದು ಕಾರಣವಾಗಿರಬಹುದು.
ಅಂತೂ ಮೂವತ್ತೈದು ತುಂಬುತ್ತ ಬಂದರೂ ಇನ್ನೂ ಮಕ್ಕಳಾಗದೆ ಅದರದೇ ಜಂಜಾಟದಲ್ಲಿ ಸಿಕ್ಕಿಬಿದ್ದಿರುವ ನನಗೆ, ಅಮ್ಮನ ತವರಿನ ಈ ಬಂಗಾರ ಚಿನ್ನಗಳ ಜಂಜಾಟ ಇನ್ನಷ್ಟು ತಲೆನೋವು ತರಿಸುತ್ತಿತ್ತು.
ಆದರೂ, ನನ್ನ ಮೇಲೆ ನಂಬುಗೆಯಿರಿಸಿ ಪತ್ರವನ್ನು ಓದಗೊಟ್ಟ ಸಿರಿಯ ಜತೆ ಒಂದೆರಡು ಸಮಾಧಾನದ ಮಾತಾಡುವ ಎಂದು ತಿಂಡಿ ತಿಂದಾದ ನಂತರ ಅವಳ ರೂಮಿಗೆ ಹೋದೆ. ಅಲ್ಲಿ ಆಗಲೇ ಅಮ್ಮ ದೊಡ್ಡಮ್ಮಂದಿರು ಗೋಪೂ ಮಾವನನ್ನು ಒಳಗೊಂಡು ಗೋಡೆಗೊರಗಿ ನಿಂತಿದ್ದರು. ಸಿರಿ ಮಂಚದ ಒಂದು ತುದಿಯಲ್ಲಿ ಮದುಮಗಳ ಅಲಂಕಾರದ ಸುದ್ದಿ ಸುಕಾರಿಲ್ಲದೇ ಕೂತಿದ್ದಳು. ಮಗಳ ಮದುವೆಗೆಂದು ಬೀಗಿತ್ತಿಯ ಅವತಾರದಲ್ಲಿದ್ದ ಗೋಪೂ ಮಾವನ ಹೆಂಡತಿ ಮಂಚದ ಈ ಕಡೆ ಅರ್ಧ ತೊಡೆಯೂರಿ ಬೆರಳುಗಳಿಂದ ಎರಡೂ ಕಣ್ಣನ್ನು ತೀಡುತ್ತ ಕೂತಿದ್ದರು. ಅವರ ಮುಖ ಬಿಳುಚಿಕೊಂಡಂತಿತ್ತು. ಈ ಮಾತುಕತೆಗೆ ತಾನು ರೆಡಿಯೇ ಇಲ್ಲ ಎಂಬಂತೆ, ಕಣ್ಣು ಮುಚ್ಚಿದರೆ ಕಿವಿಯೂ ಕೇಳಲಾರದು ಎಂಬಂತೆ ಇತ್ತು ಅವರ ಹಾವ ಭಾವ. ಮಂಚದ ಮೇಲೆ ಮರದ ಪೆಟ್ಟಿಗೆಯಿಂದ ಹೊರಗಷ್ಟು ಒಳಗಷ್ಟು ಇಣುಕಿ ಕಣ್ಣಾಮುಚ್ಚಾಲೆಯಾಡುತ್ತಿರುವ ಕಂಠೀಸರ, ಪವನ್ ಸರ, ಲಕ್ಷ್ಮೀ ಹಾರ, ಹವಳದ ಸರಗಳು. . . ಪಕ್ಕದಲ್ಲಿ ಗತ್ತಿನಲ್ಲಿ ಕೂತಿರುವ ಬಾಜೂಬಂದಿಗಳು.
ನಾನು ಬಾಗಿಲಲ್ಲೇ ನಿಂತೆ. ಸಿರಿ ಮಾತ್ರ ಮಾತನಾಡುತ್ತಿದ್ದಳು. ಮೊದಲಿನ ಐದ್ಹತ್ತು ನಿಮಿಷಗಳ ಮಾತುಕತೆ ನನಗೆ ಮಿಸ್ಸಾಗಿದ್ದವು. ಅಳು. ಸಿಟ್ಟು, ದುಃಖ ದುಮ್ಮಾನಗಳ ಸುನಾಮಿಯೆಲ್ಲ ಈಗ ತಾನೇ ಮುಗಿದ ಸರ್ವಲಕ್ಷಣವೂ ಅಲ್ಲಿತ್ತು. ಬಾಗಿಲಿನ ಪಟ್ಟಿಯಲ್ಲಿ ನಿಂತ ನಾನು ಅತ್ತ ಈ ನಾಟಕದ ಪಾತ್ರವೂ ಅಲ್ಲದೆ, ಹಾಗಂತ ಬರೀ ಪ್ರೇಕ್ಷಕಿ ಎಂದು ಕೊಡಹಿಬಿಡುವ ಧೈರ್ಯವೂ ಇಲ್ಲದೆ ಅಮಾಯಕ ಕಳೆಯನ್ನು ಮುಖದ ಮೇಲೆ ಧರಿಸುವ ಪ್ರಯತ್ನ ಮಾಡುತ್ತಿದ್ದೆ. ಇದನ್ನೆಲ್ಲ ನೋಡುತ್ತ ನೋಡುತ್ತ ‘ಅರವತ್ತು ತುಂಬಿದರೂ ಅಪ್ಪನ ಮನೆ ಮೋಹ ಬಿಡದಲ್ಲ ಈ ಹೆಂಗಸರಿಗೆ. . . ʻತವರೆಂಬುದು ಅದೆಂತಹ ಮಾಯಕದ ಜಾಗವಿರಬಹುದು’ ಎಂದೆನ್ನಿಸಿ ವಿಸ್ಮಯವೂ ಆಯಿತು ನಗುವೂ ಬಂತು.
“ಅಪ್ಪೀ, ಇದೆಂತ ಮಳ್ಳುವೇಷ? ಹಠ ಮಾಡಬೇಡ. ಬೇಗ ಬೇಗ ತಯಾರಾಗು. ಇನ್ನೇನು ದಿಬ್ಬಣ ಬರುವ ಹೊತ್ತು. ಈ ಪಂಚಾಯ್ತಿ ಆಮೇಲೆ” ಸೋದರಮಾವನ ಹೆಂಡತಿ ಮಾತಾಡಿದಳು. ತನ್ನ ಸಂಬಂಧಿ ಸರೀಕರೆದುರು ಅವಮಾನ ಎದುರಿಸಬೇಕಾಗಬಹುದು ಎಂಬ ಆತಂಕ ಮಾತ್ರ ಅವರ ಮಾತಲ್ಲಿ ಕಾಣುತ್ತಿತ್ತು. “ಅಮ್ಮ, ನನ್ನ ಸೋದರತ್ತೆಯಂದಿರು ಇಲ್ಲಿರುವ ಸರಗಳನ್ನು ಆರಿಸಿ ಬಿಟ್ಟಿರುವುದು ಮಾತ್ರ ನನ್ನವು. ಅವುಗಳ ಮೇಲೆ ಮೊದಲ ಅಧಿಕಾರ ಅವರದ್ದು. ಆಮೇಲೆ ನಾನು. ಈ ಬಂಗಾರವನ್ನು ಅವರು ಖುಷಿಯಿಂದ ಧರಿಸಿ, ಬೀಗರನ್ನು ದಿಬ್ಬಣವನ್ನು ಎದುರುಗೊಳ್ಳಲು ಹೋಗಲಿ. ಆಮೇಲೆ ನಾನು ಮದುಮಗಳಂತೆ ಅಲಂಕಾರ ಮಾಡಿಕೊಳ್ಳುವುದು. ಅವರು ಪೆಟ್ಟಿಗೆಗೆ ಕೈಹಚ್ಚಿ ಕಾಸಿನ ಸರ, ಪವನ್ ಸರಾನ ಎತ್ತಿಕೊಂಡರೆ ಮಾತ್ರ ನಾನು ಈ ಮಂಚ ಬಿಟ್ಟು ಏಳುವುದು. . . ” ಯಾವ ಬೀಸುಗಾಳಿ ಬಿರುಗಾಳಿಗೂ ಸಿರಿಯ ನಿರ್ಧಾರ ಬದಲಿಸುವ ತಾಕತ್ತಿರುವಂತೆ ಕಾಣಲಿಲ್ಲ. ಈ ಹುಡುಗಿಗೆ ನನ್ನ ಸಹಾಯ, ಸಮಾಧಾನ ಯಾವುದೂ ಬೇಕಾಗುವ ಲಕ್ಷಣ ತೋರಲಿಲ್ಲ. ಇದು ನನ್ನ ಪ್ರವೇಶ ಬಯಸುವ ಅಂಕವೇ ಅಲ್ಲ ಅನ್ನುವುದು ಖಾತ್ರಿಯಾದಂತೆ ನಾನು ಅಲ್ಲಿಂದ ಹೊರಟೆ.
******
ಸಭಿಕರ ನಡುವೆ ಆರಾಮವಾಗಿ ಲೋಕಾಭಿರಾಮ ಹರಟುತ್ತಿದ್ದ ನನಗೆ, ಹಸೆಮಣೆಯಲ್ಲಿ ನಿರಾಳವಾಗಿ ಕೂತ ಸಿರಿಯ ತುಟಿಯ ತಿರುವಿನಲ್ಲಿ ಒಂದು ವಿಲಕ್ಷಣ ನಗು ಕಾಣುತ್ತಿತ್ತು. ಒಮ್ಮೆ ಧಾರೆ ನೀರು ಬಿಡಲು, ತಾಳಿ ಕಟ್ಟಿದ ನಂತರದ ವಧೂವರರಿಗೆ ಆರತಿ ಬೆಳಗಲು ಲಕ್ಷಣವಂತೆಯರಾದ ಸೋದರತ್ತೆಯರು ಹಸೆಮಣೆಯ ಹತ್ತಿರ ಬಂದಾಗಲೆಲ್ಲ ಈ ನಗು ಇಡೀ ಮದುವೆ ಮಂಟಪವನ್ನೇ ಪಸರಿಸಿದಂತೆ ಭಾಸವಾಗುತ್ತಿತ್ತು. ಅಲ್ಲ? ಈ ಹುಡುಗಿಯ ನಗು ಪ್ರಸನ್ನತೆ ನನಗೆ ಮಾತ್ರ ಕಾಣುತ್ತಿತ್ತ? ಅದನ್ನ ಮತ್ತೆ ಪ್ರಶ್ನೆ ಮಾಡಿಕೊಳ್ಳಲು ಹೋಗಲಿಲ್ಲ. ಸ್ವಲ್ಪ ಸಮಯದಲ್ಲಿ ಸಿರಿ ನನ್ನ ಕಡೆ ದೃಷ್ಟಿ ಹರಿಸಿದಾಗ ಎರಡೂ ಕೈಗಳ ಹೆಬ್ಬೆರೆಳನ್ನೆತ್ತಿ ತಲೆ ಅಲ್ಲಾಡಿಸಿದೆ. ಅವಳು ಅಲ್ಲಿ, ದೂರದಲ್ಲಿ ನಕ್ಕ ನಗು ನಾ ಕೂತ ಜಾಗದವರೆಗೂ ಯಾರ ಹಂಗೂ ಇಲ್ಲದಂತೆ ಪ್ರವಹಿಸಿತು.
poornimaubhat@gmail.com





