Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಾಮರಾಜನಗರದ ಕಿಂದರಿಜೋಗಿ

ಶ್ರೀಧರ್ ಕೆ.ಸಿರಿ

ನಮ್ಮ ಚಾಮರಾಜನಗರ ಜಿಲ್ಲೆಯ ಯಾವುದೇ ಊರಿನಲ್ಲಿ ಜಾತ್ರೆ, ಹಬ್ಬಗಳಲ್ಲಿ, ಯಾವುದೇ ದೇವರ ಗೀತೆಯ ಕ್ಯಾಸೆಟ್ ಹಾಕಲಿ, ಅದರಲ್ಲಿ ನಾಲ್ಕು ಹಾಡುಗಳನ್ನು ರವಿಕುಮಾರ್‌ರವರು ಬರೆದು, ರಾಗ ಸಂಯೋಜನೆ ಮಾಡಿರುತ್ತಾರೆ. ಅವರಿಂದ ಹಾಡು ಬರೆಸಿಕೊಳ್ಳದ ಯಾವ ದೇವರೂ ನಮ್ಮ ನಗರದಲ್ಲಿ ಇಲ್ಲ. ಉರಿಕಾತಿ ಮಾರಮ್ಮನಿಂದ ಹಿಡಿದು ಮಂಟೇಸ್ವಾಮಿಯ ತನಕ ಬಹುತೇಕ ಎಲ್ಲರಿಗೂ ಹಾಡು ಬರೆದಿದ್ದಾರೆ. ಜನಪದ ಶೈಲಿಯಿಂದ ಹೊರಬಂದು ಭಕ್ತಿಗೀತೆಗಳಿಗೆ ಜನಪ್ರಿಯ ಕಮರ್ಷಿಯಲ್ ಟಚ್ ಕೊಟ್ಟವರು ರವಿಕುಮಾರ್. ಇವರು ರಚಿಸಿ ರಾಗ ಸಂಯೋಜನೆ ಮಾಡಿ ಮಳವಳ್ಳಿ ಮಹಾದೇವಸ್ವಾಮಿಯವರಿಂದ ಹಾಡಿಸಿದ “ಮಹಾದೇಶ್ವರ ದುಂಬಾರದೇ” ಹಾಡನ್ನು ಚಾಮರಾಜನಗರ ಅಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಎಲ್ಲರೂ ಕೇಳಿರುವವರೇ. ಅಷ್ಟರಮಟ್ಟಿಗೆ ಅವರ ಹಾಡುಗಳು ಜನಪ್ರಿಯ ಕೆ.ಯುವರಾಜ್, ಜಯಶ್ರೀ, ಡಾ.ರಾಜಕುವಾರ್, ಎಸ್.ಮಹೇಂದರ್ ನಂತರದ ಪೀಳಿಗೆಯಲ್ಲಿ ಮಹದೇಶ್ವರ ಹಾಡುಗಳನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿದವರು ಗಾಯಕ ರವಿಕುಮಾರ್‌ರವರು. ಭಕ್ತಿಗೀತೆ ಪರಂಪರೆಯ ಒಂದು ಹೊಸ ಟ್ರೆಂಡ್ ಹುಟ್ಟು ಹಾಕಿದವರು. ಹೋಗಲಾರೆ ಹಲಗೂರಿಗೆ ನಾನು ಎಂಬ ಸಿದ್ದಪ್ಪಾಜಿಯ ಹಾಡು, ಕಣ್ಣೆತ್ತಿ ನೋಡ್ರವ್ವ ಕಲ್ಯಾಣ ಮೂರ್ತಿಯ, ಅನುಗಾಲ ಬೇಡುವೆನಯ್ಯ, ನಿನ್ನ ಪಾದದ ನಂಬಿ ಬಂದೆ, ಮಾದಯ್ ಬರ್ತಾರೆ ಗಿರಿಗೆ. ನಿನ್ನ ನೆನೆದ ಜೀವನ, ಮರೆಯಾದೆಯಾ ಗುರುವೇ, ಬಳೆ ಬಳೆ ಮುಂತಾದ ಸೂಪರ್ ಹಿಟ್ ಭಕ್ತಿ ಗೀತೆಗಳನ್ನು ಕೊಟ್ಟವರು ರವಿಕುಮಾರ್.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕುಮಾರನಪುರದಲ್ಲಿ ಜನಿಸಿದ ರವಿಕುಮಾರ್ ಸದ್ಯ ಅದೇ ತಾಲ್ಲೂಕಿನ ಮುಪ್ಪಿನ ಷಡಕ್ಷರಿಯ ಯರಗಂಬಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. 2015ರಲ್ಲಿ ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನ, ಹಂಪಿ ಉತ್ಸವ, ಮೈಸೂರು ಅರಮನೆ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಪದ ಗಾಯನ ಮತ್ತು ಸುಗಮ ಸಂಗೀತದ ಕಾಂರ್ಯಕ್ರಮಗಳನ್ನು ನೀಡಿರುವ ಇವರು ಇದುವರೆಗೂ ಎಂಟು ನೂರಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿ ಆರುನೂರ ಐವತ್ತಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ, ರಾಜೇಶ್ ಕೃಷ್ಣನ್, ಎಲ್.ಎನ್.ಶಾಸ್ತ್ರಿ, ಮಂಜುಳಾ ಗುರುರಾಜ್, ವಿನೋದ್ ರಾಜ್, ನಂದಿತಾ, ಬಿ.ಆರ್.ಛಾಯ ಮುಂತಾದ ಪ್ರಸಿದ್ಧ ಗಾುಂಕರು ಇವರು ಬರೆದ ಸಾಹಿತ್ಯಕ್ಕೆ ತಮ್ಮ ಧ್ವನಿ ನೀಡಿದ್ದಾರೆ. ಸುತ್ತೂರು ರಾಜೇಂದ್ರ ಶ್ರೀಗಳ ಕುರಿತು ಹಾಗೂ ಶ್ರೀ ಕೃಷ್ಣದೇವರಾಯನನ್ನು ಕುರಿತು ನೃತ್ಯ ನಾಟಕಗಳನ್ನು ರಚಿಸಿರುವುದಲ್ಲದೆ ಪ್ರೀತಿಯಿಂದ, ಧರೆಗಿಳಿದ ಮಾದಪ್ಪ, ಏಳುಮಲೆ, ಶಿವಕಾಶಿ, ಆಭಾರಿ ಮುಂತಾದ ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದಾರೆ.

2018 ರಲ್ಲಿ ಡಿ.ದೇವರಾಜು ಅರಸುರವರ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಹನ್ನೆರಡು ನಿಮಿಷದ ಒಂದು ಹಾಡು ಕಟ್ಟಿ ಅರಸುರವರ ಜೀವನ ಗಾಥೆಯನ್ನು ಹಿಡಿದಿಟ್ಟಿದ್ದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಶಂಸೆಗೆ ಎಡೆಮಾಡಿತು. ಮೃದುಮಾತಿನ, ನಗುಮುಖದ ಗಾಯಕ ರವಿಕುವಾರ್ ಯಾವತ್ತೂ ತನ್ನ ಬಗ್ಗೆ ಹೇಳಿಕೊಳ್ಳುವುದಿಲ್ಲ. ನಿಮ್ಮ ಕೆಲಸದ ಕುರಿತು ಮಾತನಾಡಿ ಎಂದರೆ “ನಾವೇನು ಮಾಡಿದ್ದೇವೆ ಬನ್ನಿ ಸಾರ್ ಎಂದು ನಗುನಗುತ್ತಲೇ ಹೆಗಲ ಮೇಲೆ ಕೈ ಇಟ್ಟು ಆತ್ಮೀಯತೆಯಿಂದ ಮಾತನಾಡುವ ಇವರು, ತನ್ನ ಸಹೋದರ ಮತ್ತೊಬ್ಬ ಪ್ರಸಿದ್ಧ ಗಾಯಕ ಮಹೇಂದ್ರ ಅವರ ಜೊತೆಗೂಡಿ ಮತ್ತಷ್ಟು ಜನಪದ ಗಾಯಕರನ್ನು ಹುಟ್ಟು ಹಾಕುವ ಸದುದ್ದೇಶದಿಂದ ಸುಮಧುರ ಮ್ಯೂಸಿಕಲ್ ಟ್ರಸ್ಟ್ ಸಂಗೀತ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಅಶ್ಲೀಲತೆ ದ್ವಂದ್ವಾರ್ಥ ಬರುವ ಕ್ಯಾಬರೆ ಹಾಡುಗಳನ್ನು ಬರೆದುಕೊಡುವಂತೆ ಸಿನಿಮಾ ನಿರ್ವಾಪಕರು ದುಂಬಾಲು ಬಿದ್ದರೂ ಕೂಡ ತಮ್ಮ ಶಿಷ್ಟಾಚಾರವನ್ನು ದಾಟದ ಮತ್ತು ಜನಪದ ಸೊಗಡನ್ನು ಉಳಿಸಿಕೊಳ್ಳುವ ಉದ್ದೇಶದಿಂದ ನಯವಾಗಿಯೇ ಸಿನಿಮಾ ಅವಕಾಶಗಳನ್ನು ತಿರಸ್ಕರಿಸಿದರು.

ಬಹುಶಃ ಭಕ್ತಿಗೀತೆಗಳ ಲೋಕದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಜನಮಾನಸದಲ್ಲಿ ಇವರು ಬರೆದು ಸಂಯೋಜಿಸಿದ ಹಾಡುಗಳು ಯಾವ ಚಲನಚಿತ್ರ ಗೀತೆಗಳು ಕಡಿಮೆ ಇಲ್ಲದಂತೆ ಮುದ್ರೆಯೊತ್ತಿವೆ. ಇವತ್ತಿಗೂ ಮಹಾದೇಶ್ವರ ಮಂಟೇಸ್ವಾಮಿಯ ಹಾಡುಗಳನ್ನು ಕಾರ್ಯಕ್ರಮದಲ್ಲಿ ಗಾಯಕರು ಹಾಡಿ ತಾವು ಜನಪ್ರಿುಂತೆ ಪಡೆದುಕೊಳ್ಳುತ್ತಿದ್ದಾರೆಂದರೆ ಅದಕ್ಕೆ ರವಿಕುಮಾರ್ ಅವರು ಬರೆದು ರಾಗ ಸಂಯೋಜಿಸಿದ ಹಾಡುಗಳು ಕಾರಣವೆಂದು ಮುಲಾಜಿಲ್ಲದೆ ಹೇಳಬಹುದು. ಇವರಿಂದ ಪ್ರಸಿದ್ಧಿ ಪಡೆದ ಎಷ್ಟೋ ಹಾಡುಗಳನ್ನು ಕೆಲ ಗಾಯಕರು ತಾವೇ ರಚಿಸಿದ್ದೆಂದು ವೇದಿಕೆಗಳಲ್ಲಿ ಹೇಳಿಕೊಂಡು ಶಹಬ್ಬಾಷ್ ಗಿರಿ ಗಿಟ್ಟಿಸಿಕೊಂಡಿರುವುದೂ ಉಂಟು.

ಇತ್ತೀಚೆಗೆ ಗದ್ಯ ಸಾಹಿತ್ಯದಲ್ಲಿ ಒಲವು ತೋರುತ್ತಿರುವ ರವಿಕುಮಾರ್ ಅವರು ನಾಲ್ಕು ಚೆಂದದ ಕಥೆಗಳನ್ನು ಬರೆದಿದ್ದಾರೆ. ತಾವು ಇದುವರೆಗೂ ಬರೆದ ಭಕ್ತಿ ಗೀತೆಗಳು ಸಂಕಲನ “ನಿನ್ನ ನೆನೆದ ಜೀವನ” ಪುಸ್ತಕವನ್ನು ಹೊರತಂದಿದ್ದಾರೆ. ಹಂಸಲೇಖ ಅವರಿಗೆ ರವಿಕುಮಾರ್ ಕಂಡರೆ ವಿಶೇಷ ಪ್ರೀತಿ.ಚಾಮರಾಜನಗರದ ಕಡೆ ಬಂದರೆ ಇವರನ್ನು ನೆನೆಸಿಕೊಳ್ಳುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ