Mysore
21
clear sky

Social Media

ಭಾನುವಾರ, 18 ಜನವರಿ 2026
Light
Dark

ಪ್ರೇಕ್ಷಕರನ್ನು ಒಡೆಯದಂತೆ ಹಿಡಿದಿಡುವುದೇ ಬಹುರೂಪಿಯ ಸವಾಲಾಗಬೇಕು

 ಹನಿ ಉತ್ತಪ್ಪ 

ಈ ಬಾರಿಯ ಮೈಸೂರು ರಂಗಾಯಣ ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವಕ್ಕೆ ಇಂದು ತೆರೆ ಬೀಳುತ್ತಿದೆ. ಈ ಹೊತ್ತಲ್ಲಿ ರಂಗಾಯಣದ ಯಶಸ್ವೀ ನಿರ್ದೇಶಕರಾಗಿದ್ದ ರಂಗಕರ್ಮಿ ಪ್ರಸನ್ನ ಅವರ ಜೊತೆ ‘ಆಂದೋಲನ ಹಾಡುಪಾಡು’ ನಡೆಸಿದ ಮಾತುಕತೆ ಇಲ್ಲಿದೆ

 ನಾಟಕೋತ್ಸವದ ಕುರಿತು ಹೇಳಿದಿರಿ.‘ಬಹುರೂಪಿ’ ಎಂಬ ಹೆಸರಿನ ಹುಟ್ಟಿಗೆ ಕಾರಣ?

ಅಕ್ಕ ನಾಟಕೋತ್ಸವ ನಂತರದ ಮುಂದಿನ ವರ್ಷವೂ ನಾನೇ ಇದ್ದೆ. ನಾಟಕೋತ್ಸವದವಿಷಯವನ್ನು ರಾಜಕೀಯ ಅಥವಾ ನಿರ್ದಿಷ್ಟಪಂಗಡದ ವಸ್ತುವನ್ನಾಗಿ ಮಾಡಿ ಸಮಸ್ಯೆಯ ಹುಟ್ಟಿಗೆ ಕಾರಣವಾಗಬಹುದು ಎಂಬು ದನ್ನು ಮನಗಂಡು ಹೆಸರನ್ನು ಬದಲಾಯಿಸಿ ಮುಂದಿನ ವರ್ಷದ ನಾಟಕೋತ್ಸವಕ್ಕೆ ‘ಬಹುರೂಪಿ’ ಎಂಬ ಹೆಸರಿಟ್ಟೆವು

ರಂಗಾಯಣದಲ್ಲಿ ನಿರ್ದೇಶಕರಾಗಿ ಹಲವಾರು ಕಾರ್ಯಕ್ರಮಗಳನ್ನು ನೀವು ಆಯೋಜಿಸಿದವರು. ಸರ್ಕಾರ ಪ್ರಾಯೋಜಿತ ರಂಗಾಯಣದಂತಹ ಸಂಸ್ಥೆಗಳ ಮೂಲ ಉದ್ದೇಶ ಏನು?

ರಂಗಾಯಣದ ಉದ್ದೇಶ ತುಂಬಾ ಸರಳವಾದದ್ದು. ಒಂದು, ಜನರಿಗೆ ಆರೋಗ್ಯಕರವಾದ ಮನರಂಜನೆ ಯನ್ನು ಒದಗಿಸುವ ವೃತ್ತಿಪರ ಸಂಸ್ಥೆ. ವೃತ್ತಿಪರತೆ ಮೊದಲ ಉದ್ದೇಶ. ಆರೋಗ್ಯಕರ ಮನರಂಜನೆಯನ್ನು ಒದಗಿಸುವುದು ಅದರ ಕೆಲಸ. ವೃತ್ತಿಪರ ತಂಡವಾಗಿಯೇ ಸರ್ಕಾರ ಮಾಡಿರುವುದರಿಂದ ‘ರೆಪರ್ಟರಿ’ ಎಂಬ ಇಂಗ್ಲಿಷ್ ಹೆಸರನ್ನು ಕನ್ನಡಕ್ಕೆ ಅಳವಡಿಸಿಕೊಂಡು ಕೊಟ್ಟಿದ್ದಾರೆ.

ಆರೋಗ್ಯಕರ ಮನರಂಜನೆಯ ಮಾನದಂಡಗಳ ಕುರಿತು ಹೇಳಿ.

ಎಲ್ಲಾ ರೀತಿಯ ಒಳಿತಿನ ಆಶಯಗಳನ್ನು ಒಳಗೊಂಡಿರಬೇಕು. ಪ್ರೇಕ್ಷಕರನ್ನು ಒಡೆಯದಂತೆ ಹಿಡಿದಿಡಬೇಕು. ಒಂದು ವೇಳೆ ಒಡಕುಗಳು ಕಂಡುಬಂದರೆ ಗಟ್ಟಿಯಾಗಿ ವಿಮರ್ಶಿಸುವ ಶಕ್ತಿ ಇರಬೇಕು ಎನ್ನುವುದೇ ಆರೋಗ್ಯಕರ ಮನರಂಜನೆಯ ಸೂಚನೆ.

ರಂಗಾಯಣದಲ್ಲಿ ನೀವು ಒಂದಷ್ಟು ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ರಂಗಾಯಣದ ಮೂಲ ಆಶಯ ಏನು ?

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ವೃತ್ತಿಪರ ತಂಡಗಳಿಗೆ ವೃತ್ತಿಪರತೆಯ ಸಮಸ್ಯೆಯಿದ್ದರೂ ಜಾಣತನದಿಂದ ವಸಾಹತುಶಾಹಿ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿಯೆತ್ತಿದ್ದರು. ನಾವು ಕೂಡ ಹಾಗೇ ಮಾಡಬೇಕೆನ್ನುವುದು ರಂಗಾಯಣದ ಆಶಯ.

ರಂಗಾಯಣದಲ್ಲಿ ಥೀಮ್ ಇಟ್ಟುಕೊಂಡು ಮಾಡುವ ನಾಟಕೋತ್ಸವದ ಪರಂಪರೆ ಹೇಗೆ ಮತ್ತು ಯಾಕೆ ಹುಟ್ಟಿಕೊಂಡಿತು?

ನಾನು ನಿರ್ದೇಶಕನಾಗಿದ್ದಾಗ ಆರಂಭವಾಯಿತು. ರಂಗಾಯಣ ಸಂಕಟದ ಸ್ಥಿತಿಯನ್ನು ಎದುರಿಸುತ್ತಿದ್ದ ಸಮಯ ಅದು. ಸರ್ಕಾರ ಧನಸಹಾಯ ಮಾಡುತ್ತಿರಲಿಲ್ಲ, ಬದಲಾಗಿ ನಮ್ಮ ಕಾರ್ಯಕ್ರಮಗಳಿಗೆ ಪ್ರೋತ್ಸಾಹದ ರೂಪದಲ್ಲಿ ಸಹಾಯ ಮಾಡುತ್ತಿತ್ತು. ಗಳಿಕೆಯಿಲ್ಲದಿದ್ದರೆ ಉದ್ದೇಶ ಹಾಳಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವರಮಾನದ ಅಗತ್ಯವಿತ್ತು. ಅದಕ್ಕಾಗಿ ಜನಪ್ರಿಯಗೊಳಿಸಬೇಕು. ಜನರು ಟಿಕೆಟ್ ತೆಗೆದುಕೊಂಡು ಬಂದು ನಾಟಕ ನೋಡುವುದರ ಶಕ್ತಿಯ ಮೇಲೆ ರಂಗಾಯಣ ನಿಲ್ಲಬೇಕಿತ್ತು. ರಂಗಾಯಣವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ನಾಟಕೋತ್ಸವ ಆರಂಭಿಸಿದೆವು.

ನಾಟಕೋತ್ಸವ ಪ್ರಾರಂಭಿಸುವಾಗಲೇ ಥೀಮ್ ಪರಿಕಲ್ಪನೆ ಹುಟ್ಟಿಕೊಂಡಿತೇ ಅಥವಾ ನಂತರದಲ್ಲಿ ಸೇರಿಕೊಂಡಿರುವುದೇ?

ನಾಟಕೋತ್ಸವ ಆರಂಭಿಸಿದ ವರ್ಷ ಕಾಕತಾಳೀಯವಾಗಿ ಮಹಿಳಾ ವರ್ಷವಾಗಿ ಘೋಷಿತವಾಗಿತ್ತು. ‘ಮಹಿಳೆ’ ಎನ್ನುವ ವಿಷಯ ಬಹಳ ಒಳ್ಳೆಯದು ಮತ್ತು ಆ ಕುರಿತು ಯಾರೂ ಮಾತನಾಡಿಲ್ಲವೆಂಬ ಕಾರಣಕ್ಕಾಗಿ ಆಯ್ಕೆ ಮಾಡಿಕೊಂಡೆವು. ಇತರೆ ಮೂಲಗಳಿಂದ ಹಣ ಹೊಂದಿಸುವ ಸಾಧ್ಯತೆಯೂ ಇದ್ದುದರಿಂದ ‘ಅಕ್ಕ’ ಎನ್ನುವ ಹೆಸರಿನಲ್ಲಿ ನಾಟಕೋತ್ಸವ ಇಟ್ಟುಕೊಂಡೆವು. ಅದು ಬಹಳ ಯಶಸ್ವಿಯಾಯಿತು. ಮತ್ತು ಬಹಳಷ್ಟು ಜನರು ರಂಗಾಯಣದ ಚಟುವಟಿಕೆಗಳಲ್ಲಿ ತೊಡ ಗಿಸಿಕೊಳ್ಳಲು ಕಾರಣವಾಯಿತು. ರಂಗಮಂದಿರ ನಿರ್ಮಾಣ ಹಾಗೂ ಇತರ ಕೆಲಸಗಳನ್ನು ಮಾಡಲು ನೆರವಾಯಿತು.

 ನಿಮ್ಮ ದೃಷ್ಟಿಯಲ್ಲಿ ಬಹುರೂಪಿ ಎಂದರೆ?

ಬಹುರೂಪಿ ಎಂದರೆ ಸುಂದರವಾದ ಒಳಗೊಳ್ಳುವಿಕೆ. ಸಂಸ್ಕ ತಿಗಿರುವುದು ಒಂದು ರೂಪವಲ್ಲ. ಸಂಸ್ಕ ತಿ ಯನ್ನು ಒಂದು ಧರ್ಮ, ಪಂಗಡ, ಜನಾಂಗ ಅಥವಾ ಸಮುದಾಯ ರೂಪಿಸುವುದಲ್ಲ, ಬಹುಪಂಗಡಗಳು, ಬಹು ಜಾತಿಗಳು, ಬಹು ಧರ್ಮಗಳು ಸೇರಿ ಸಂಸ್ಕ ತಿಯನ್ನು ರೂಪಿಸಬೇಕು ಎಂಬುದಕ್ಕಾಗಿ ಬಹುರೂಪಿ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ನಂತರದ ವರ್ಷಗಳಲ್ಲಿ ಬಹುರೂಪಿ ಯಶಸ್ವಿಯಾಗಿ ಜನಪ್ರಿಯತೆಯನ್ನು ದೊರಕಿಸಿಕೊಟ್ಟಿತು. ಕಲೆಯ ಜೊತೆ ಕುಶಲಕರ್ಮ, ಸಾಹಿತ್ಯ, ಚಿತ್ರಕಲೆ ಎಲ್ಲವೂ ಇರಬೇಕೆಂದು ರೂಪಿಸಿದ ಬಹುರೂಪಿಯ ಆಶಯವನ್ನು ನಂತರದ ನಿರ್ದೇಶಕರೂ ಮಾಡಿಕೊಂಡು ಬಂದಿದ್ದಾರೆಂದುಕೊಂಡಿದ್ದೇನೆ.

ಬಹುರೂಪಿಯಂತಹ ಪರಿಕಲ್ಪನೆಗಳೊಳಗೆ ಪಕ್ಷ ರಾಜಕೀಯ ಅಥವಾ ವೈಯಕ್ತಿಕ ಸಿದ್ಧಾಂತಗಳು ನುಸುಳಿದರೆ ಆಗಬಹುದಾದ ಅಪಾಯಗಳೇನು?

ಆಗಲೂ ಜನ ಬರುತ್ತಾರೆ. ಆ ತತ್ವ ಸಿದ್ಧಾಂತಗಳನ್ನು ಒಪ್ಪುವವರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಆಗ ಸಭಾಂಗಣ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರಾಗಿ ಒಡೆಯುತ್ತದೆ. ತತ್ವ ಸಿದ್ಧಾಂತ ಒಪ್ಪುವವರು ಬಹುಸಂಖ್ಯಾತರಾಗುತ್ತಾರೆ. ಯಾವ ತತ್ವವೂ ಬೇಡ, ಒಳ್ಳೆಯ ನಾಟಕವನ್ನಷ್ಟೇ ನೋಡಿ ಅನುಭವಿಸಲು ಬಂದಿದ್ದೇವೆ ಎನ್ನುವವರು ಅಲ್ಪಸಂಖ್ಯಾತರಾಗುತ್ತಾರೆ. ಹಾಗೆ ಆಗದೆಯೇ ಸಭಾಂಗಣದಲ್ಲಿ ಕುಳಿತ ಎಲ್ಲರೂ ಬಹುರೂಪಿಗಳಾಗಿ, ಬಹುರೂಪದ ಸಂಸ್ಕ ತಿಯನ್ನು ಸವಿಯಬೇಕೆನ್ನುವುದು ರಂಗಭೂಮಿಯ ಆಶಯ. ಥೀಮ್ ಬೇಸ್ಡ್ ನಾಟಕಗಳಿಂದ ಇಂತಹ ಆಶಯಕ್ಕೆ ಧಕ್ಕೆ ಬರುವುದೇ ಹೌದಾದರೆ ಮುಂದುವರಿಸುವ ಅಗತ್ಯವಿಲ್ಲ. ಬಹುರೂಪಿ ಎಂಬ ಹೆಸರಿನಲ್ಲೇ ಬಹುರೂಪ ಇರುವುದರಿಂದ ಅದಷ್ಟೇ ಸಾಕು.

‘ಬಹುರೂಪಿ ಬಾಬಾಸಾಹೇಬ್’ ಎಂಬುದು ಈ ಸಲದ ನಾಟಕೋತ್ಸವದ ಪರಿಕಲ್ಪನೆ.  ಈ ಪರಿಕಲ್ಪನೆ ಬಹುರೂಪಿಯ ಮೂಲ ಆಶಯಗಳಿಗೆ ಬದ್ಧವಾಗಿದೆ ಎಂದು ಹೇಳುತ್ತೀರ?

‘ಅಂಬೇಡ್ಕರ್’ ಒಂದು ಅಸಾಧಾರಣ ವ್ಯಕ್ತಿತ್ವ. ಈ ವ್ಯಕ್ತಿತ್ವದ ಕೇಂದ್ರ ‘ಜಾತಿ ವಿನಾಶ’ ಎನ್ನುವ ಬಹುರೂಪಿ ಆಶಯ. ಇದು ನಿರ್ದಿಷ್ಟ ಜಾತಿ, ಪಂಗಡ, ವ್ಯಕ್ತಿಯನ್ನು ಪ್ರತಿನಿಧಿಸುವಂತಹದ್ದಲ್ಲ. ಜಾತಿಗಳಿಂದ ಹೊರಬಂದು ಎಲ್ಲಾ ವೃತ್ತಿಪರರು ಒಟ್ಟಾಗಿರಬೇಕೆನ್ನುವುದನ್ನು ಜಾತಿ ವಿನಾಶ ಹೇಳುತ್ತದೆ. ಜಾತಿ ವಿನಾಶದ ಪ್ರಮುಖ ಆಶಯ ಇಟ್ಟುಕೊಂಡು ಅಂಬೇಡ್ಕರ್‌ರನ್ನು ಕಾಣುವ ಪ್ರಯತ್ನ ಈ ಬಾರಿಯ ನಾಟಕೋತ್ಸವ ಮಾಡಿದೆ ಎಂದುಕೊಂಡಿದ್ದೇನೆ.

ರಂಗಾಯಣದಂತಹ ಸಂಸ್ಥೆಗಳಲ್ಲಿ ನಿರ್ದೇಶಕನಿಗಿರುವ ಸವಾಲುಗಳೇನು?

ನಿರ್ದೇಶಕನನ್ನು ಯಾವುದೇ ಪಕ್ಷ ಅಥವಾ ಸಿದ್ಧಾಂತದ ದೃಷ್ಟಿಯನ್ನಿಟ್ಟುಕೊಂಡು ನೋಡುವುದೇ ಆತನ ಮುಂದಿರುವ ಮೊದಲ ಸವಾಲು. ಹೀಗೆ ಮಾಡುವುದರಿಂದ ಬಹುರೂಪಿ ಆಶಯಕ್ಕೆ ಧಕ್ಕೆ ಬರುತ್ತದೆ. ಅನೇಕ ರೂಪಗಳನ್ನು ಒಟ್ಟಿಗೆ ತರುವಂತಹ ಶಕ್ತಿಯಿರುವುದು ನಟನಿಗೆ ಮಾತ್ರ. ಅದಕ್ಕಾಗಿ ಅವನಿಗೆ ಬಹುರೂಪಿ ಎಂಬ ಅದ್ಭುತ ಹೆಸರು ಇರುವುದು. ಹಾಗಿದ್ದಾಗ ನಿರ್ದೇಶಕರನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಯಾರನ್ನೇ ಆದರೂ ಹಾಡಿ ಹೊಗಳುವ ಭರದಲ್ಲಿ ಅವರ ಅಸೀಮಿತ ಶಕ್ತಿಯನ್ನು ಸೀಮಿತಗೊಳಿಸುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿರಬೇಕು.

ಟೀಕೆಗಳ ಕುರಿತು ಅನಿಸಿಕೆ!

ಟೀಕೆಗಳನ್ನು ಆರೋಗ್ಯಕರವಾಗಿ ಸ್ವೀಕರಿಸುವ ಮನಸ್ಥಿತಿ ಇರಬೇಕು. ವಿಪರೀತ ಹೆದರಿ ರಾಷ್ಟ್ರೀಯ ಪರಿಕಲ್ಪನೆಯಿಂದ ಹಿಂದೆ ಸರಿಯಬಾರದು. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿನಾಟಕೋತ್ಸವ ನಡೆಯುತ್ತದೆ. ಎಲ್ಲಾ ಉತ್ಸವಗಳನ್ನು ರಂಗಕರ್ಮಿಗಳು ಯಾಕೆ ಎದುರು ನೋಡುತ್ತಾರೆಂದರೆ, ತಮ್ಮ ತಂಡಗಳಿಗೆ ಮಾನ್ಯತೆ ಸಿಗಬೇಕೆನ್ನುವ ಕಾರಣಕ್ಕಾಗಿ ಮತ್ತು ಪ್ರೇಕ್ಷಕರನ್ನು ತಲುಪುವುದಕ್ಕಾಗಿ. ಈ ಕೇಂದ್ರ ಆಶಯ ಪೂರೈಸುವ ಜವಾಬ್ದಾರಿ ನಿರ್ದೇಶಕನಿಗೆ ಇರುವುದರಿಂದ ನಾಟಕೋತ್ಸವದ ಆಶಯಕ್ಕೆ ಪೂರಕವಾಗಿರುವಂತಹ ನಾಟಕಗಳ ಆಯ್ಕೆಗಾಗಿ ‘ಕ್ಯುರೇಟರ್’ನ್ನು ನೇಮಿಸಿರುತ್ತಾರೆ. ದೇಶದ ಅತ್ಯಂತ ಒಳ್ಳೆಯ ನಾಟಕಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಕ್ಯುರೇಟರ್‌ಗೆ ಇದ್ದು ಅದಕ್ಕೆ ತಕ್ಕಂತೆ ಆಯ್ಕೆ ಮಾಡುತ್ತಾರೆ.

ನಿಮ್ಮ ಪ್ರಕಾರ ಒಳ್ಳೆಯ ನಾಟಕದ ಮಾನದಂಡ?

ಗುಣಮಟ್ಟ ಮತ್ತು ಆರೋಗ್ಯಕರ ಮನರಂಜನೆ. ಗುಣಮಟ್ಟ ಉತ್ತಮವಾಗಿದ್ದು ಕೆಟ್ಟ ಸಂದೇಶವನ್ನು ನಾಟಕಗಳು ಕೊಡಬಾರದು. ಒಳ್ಳೆಯ ಸಂದೇಶ ಇರುವ  ನಾಟಕ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಉತ್ತಮ ಗುಣಮಟ್ಟದೊಂದಿಗೆ ಆರೋಗ್ಯಕರ ಮನರಂಜನೆ ನೀಡುವ ನಾಟಕಗಳು ಯಶಸ್ಸಿನ ಪಟ್ಟಿಗೆ ಸೇರಿಕೊಳ್ಳುತ್ತದೆ. ನಾಟಕಾಸಕ್ತರನ್ನು ಗೆಲ್ಲುತ್ತದೆ.

Tags:
error: Content is protected !!