ಬಿ. ಆರ್. ಜೋಯಪ್ಪ
ಕೊಡಗಿನಲ್ಲಿ ಸ್ಥಳೀಯರು ‘ಕಾಡುಪಾಪ’ವನ್ನು ‘ಚೀಂಗೆ ಕೋಳಿ’ ಎಂದು ಕರೆಯುತ್ತಾರೆ. ಇದೊಂದು ನಿಶಾಚರಿ, ನಿರುಪದ್ರವಿ ಕಾಡಿನ ಜೀವಿ. ಭಯ ಹಾಗೂ ನಾಚಿಕೆ ಸ್ವಭಾವದ ಪ್ರಾಣಿ. ಮರಿಮಂಗದ ಗಾತ್ರದ್ದು. ಬಾಲವಿಲ್ಲ. ಕಿರಿದಾದ ಮುಖ. ಉದ್ದ ಮೂಗು. ಅದರ ಕಣ್ಣುಗಳು ಮಾತ್ರ ‘ಮುಖಕ್ಕೆ ಕಣ್ಣೇ ಭೂಷಣ’ ಅನ್ನುವಂತಿದೆ. ಕೆಲವರು ಅಗಲವಾಗಿರುವ ಕನ್ನಡಕ ಧರಿಸಿದರೆ ಕಾಣುತ್ತಲ್ಲ ಹಾಗೆ! ಅದೊಂದು ಸಸ್ತನಿ. ಮರದ ಜೀವಿ. ಅದು ಮಂಗದಂತೆ ಕೊಂಬೆಯಿಂದ ಕೊಂಬೆಗಾಗಲಿ, ಮರದಿಂದ ಮರಕ್ಕಾಗಲಿ ಜಿಗಿಯಲಾಗುವುದಿಲ್ಲ. ಹಾರುವ ಬೆಕ್ಕಿನಂತೆ (ಪಾಂಜದಂತೆ) ಗ್ಲೈಡಿಂಗ್ ಮಾಡಲಾಗುವುದಿಲ್ಲ. ರೆಂಬೆಯಿಂದ ರೆಂಬೆಗೆ ಹಿಡಿದುಕೊಂಡೇ ದಾಟಬೇಕು. ಪಾಪ! ಅದನ್ನು ‘ಕಾಡಿನ ಮಗು’ ಅನ್ನುವವರೂ ಇದ್ದಾರೆ.
ಸೀಗೆ ಬಲ್ಲೆ (ತಡೆ) ಬಿದಿರು ಮೆಳೆ, ಹುಣಿಸೆ ಮರ, ಆಲದ ಮರ ಮುಂತಾದ ಮರಗಳಲ್ಲಿ ವಾಸಿಸುತ್ತದೆ. ಜೀರುಂಡೆ, ಹಲ್ಲಿ, ಹಕ್ಕಿ ಮೊಟ್ಟೆ, ಮರಗಿಡಗಳ ಚಿಗುರು, ಕಾಯಿ, ಹಣ್ಣುಗಳನ್ನು ತಿನ್ನುತ್ತದೆ. ಬೆಳೆಗಳಿಗೆ ಬರುವ ಕೀಟಗಳನ್ನು, ಇಲಿಗಳನ್ನು ತಿನ್ನುತ್ತದೆ. ಒಂದರ್ಥದಲ್ಲಿ ಬೆಳೆಯ ರಕ್ಷಕ ರೈತಮಿತ್ರ ಎನ್ನಬಹುದು.
ಕಾಡುಪಾಪ ನಿತ್ಯ ನಿಶಾಚರಿಯಾದುದರಿಂದ ಜನರ ಕಣ್ಣಿಗೆ ಬೀಳುವುದಿಲ್ಲ. ಯಾರನ್ನಾದರೂ ಕಾಡುಪಾಪವನ್ನು ‘ನೀವು ನೋಡಿದ್ದೀರಾ’ ಅಂತ ಕೇಳಿದರೆ ‘ಇಲ್ಲ’ ಎಂದಾರಷ್ಟೇ! ರಾತ್ರಿ ಬೇಟೆಯ ಶೂರರು ನೋಡಿದ್ದಿರಬಹುದು. ಅದು ಎಲ್ಲ ಬೇಟೆಗಾರರಿಗೂ ಕಂಡಿರಲಾರದು. ಹೆಡ್‌ಲೈಟ್ ಬೇಟೆಗಾರರಿಗೆಲ್ಲಾದರೂ ಕಂಡಿರಬಹುದಷ್ಟೇ. ಮತ್ತೇನಿದ್ದರೂ ಸಂಶೋಧಕರು ಅಥವಾ ವನಪಾಲಕರು ರಾತ್ರಿ ಗಸ್ತು ತಿರುಗುವಾಗಷ್ಟೇ ನೋಡಿರಬಹುದು.
ನಾನು ೧೯೬೯-೭೦ರ ಅವಽಯಲ್ಲಿ ಶಾಲೆಯಿಂದ ಶೈಕ್ಷಣಿಕ ಪ್ರವಾಸ ಹೋಗಿದ್ದಾಗ ಮೈಸೂರಿನ ಮೃಗಾಲಯದಲ್ಲಿ ನೋಡಿದ್ದೇನೆ. ಅದರ ತೀರಾ ಸಮೀಪಕ್ಕೆ ಹೋದಾಗ ಅದು ಕೂಡಲೇ ಮುಖ ಮುಚ್ಚಿಕೊಂಡಿತು. ನಂತರ ಅದರ ಕೈ ಸಂದಿಯಿಂದ ಮೆಲ್ಲನೆ ಕಣ್ಣು ಬಿಟ್ಟಿತೇ ಹೊರತು ತಲೆ ಎತ್ತಲಿಲ್ಲ. ಮತ್ತೆ ಕಣ್ಣು ಮುಚ್ಚಿಕೊಂಡಿತು. ಮನೆಯಲ್ಲಿ ಅಮ್ಮನೊಡನೆ ಅದರ ಬಗ್ಗೆ ಹೀಗೆಂದು ಹೇಳಿದೆ. “ಅದು ಚೀಂಗೆ ಕೋಳಿಂತೇಳಿ. ಅದಕ್ಕೆ ತುಂಬಾ ನಾಚಿಕೆ. ಹಗಲಿಡೀ ನಿದ್ದೆ ಮಾಡುತ್ತದೆ. ಅಪ್ಪ ಹಾಗೆ ಹೇಳ್ತಿದ್ದರು” ಅಂತ ಅಮ್ಮ ನನ್ನೊಡನೆ ಹೇಳಿದರು. ನನ್ನ ಅಮ್ಮನ ತವರು ಮನೆ ಇದ್ದುದು ಭಾಗಮಂಡಲದ ತಾವೂರು ಗ್ರಾಮದಲ್ಲಿ. ಬಹುಶಃ ಆ ಸುತ್ತಲಿನ ಕಾಡಿನಲ್ಲಿ ಆ ಪ್ರಾಣಿ ಇದ್ದಿರಬಹುದು.
೧೯೮೨ರಲ್ಲಿ ನಾನು ಉದ್ಯೋಗದಲ್ಲಿದ್ದಾಗ ಮಡಿಕೇರಿ ಸಮೀಪದ ಕೆಳಗೆ ಚಿಳಕುಮಾನಿ ಎಂಬಲ್ಲಿ ನೆಂಟರ ಮನೆಯಲ್ಲಿ ವಾಸವಿದ್ದೆ. ಒಂದು ರಾತ್ರಿ ಅಲ್ಲಿಯ ಶ್ರೀ ಮಾದೂರಪ್ಪ ದೇವರ ಕಾಡಿನಡೆಯಿಂದ “ಝೀಂಯ್‌ಮ್‌ಮ್” ಎಂಬ ವಿಚಿತ್ರ ಕೂಗೊಂದು ಕೇಳಿ ಬಂತು. ದೆವ್ವವನ್ನು ಕಲ್ಪಿಸಿಕೊಂಡರೆ ಅದು ದೆವ್ವದ ಕೂಗೇ! ಅದು ಬೇರೆ ಒಂದೇ ಒಂದು ಕೂಗು. ದೆವ್ವ ಒಮ್ಮೆ ಮಾತ್ರ ಒಂದು ಬಾರಿಗೆ ಕೂಗುವುದಂತೆ! ಅದಕ್ಕಾಗಿ ಯಾರಾದರೂ ಒಮ್ಮೆ ಮಾತ್ರ ಕೂಗಿ ಸುಮ್ಮನಾದರೆ, ಉತ್ತರವಾಗಿ ನಾವು “ಓ” ಅನ್ನಲೇ ಕೂಡದಂತೆ. ಮೂರು ಬಾರಿ ಕೂಗಿದರೆ ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಕೂಗಿದರೆ ಆ ಧ್ವನಿಯ ಪರಿಚಯದಿಂದ “ಓ” ಎಂದರೆ ತೊಂದರೆ ಇಲ್ಲವಂತೆ. ದೆವ್ವದೊಡನೆ ಇದ್ದವರಂತೆ ವರದಿ ಕೊಡುತ್ತಾರೆ! “ಝೀಂಯ್‌ಮ್‌ಮ್” ಎಂಬ ಒಂಟಿ ಧ್ವನಿಯನ್ನು ಕೇಳಿದ ನಾನು ಪಕ್ಕದಲ್ಲಿದ್ದವರೊಡನೆ ‘ಅದೆಂತಾ? ’ ಅಂತ ಕೇಳಿದ್ದೆ. ಅದಕ್ಕವರು ‘ಅದ್ ಚೀಂಗೆ ಕೋಳಿ ಮರ್ಟದ್’ ಅಂತ ಹೇಳಿದರು. ಅಂದರೆ ಅದು ಚೀಂಗೆ ಕೋಳಿ ಕೂಗಿದ್ದು. ನಂತರ ಅವರ ಅನುಭವವನ್ನು ಹೇಳಿದರು.
ಅಲ್ಲಿಂದ ಮುಂದೆ ನಲವತ್ತೆರಡು ವರ್ಷಗಳು ಕಳೆದರೂ ನಾನಂತೂ ಕಾಡುಪಾಪದ ಧ್ವನಿಯನ್ನು ಕೇಳಲೇ ಇಲ್ಲ! ಕಂಡದ್ದಂತೂ ಇಲ್ಲವೇ ಇಲ್ಲ. ಈಗಲೂ ನಾವಿರುವುದು ಮದ್ದೂರಿನ ನೂರಾರು ಎಕರೆ ವಿಸ್ತಾರದ ಶ್ರೀ ಅಪೇಂದ್ರಪ್ಪ ದೇವರ ಕಾಡಿನ ಅಂಚಿನಲ್ಲಿ. ಆ ಕಾಡಿನಲ್ಲಿ ಅದು ಇಲ್ಲವೊ, ಇದ್ದರೂ ಕೂಗುವುದಿಲ್ಲವೋ ಗೊತ್ತಿಲ್ಲ. ೨೦೨೧ರಲ್ಲಿ ಮಡಿಕೇರಿ ಸಮೀಪದ ನಾಪೋಕ್ಲು ಎಂಬಲ್ಲಿ ಕಾಡು ಪಾಪ ಪ್ರಾಣಿಯನ್ನು ಕಂಡಿದ್ದಾರೆ. ಅದೇ ವರ್ಷ ಚಾರ್ಮಾಡಿ ಘಾಟ್‌ನಲ್ಲಿ, ಮತ್ತದೇ ವರ್ಷ ಚಿಕ್ಕಮ ಗಳೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ನಂತರ ೨೦೨೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ ಎಂಬ ದಾಖಲೆ ಇದೆ.