• ಶುಭಮಂಗಳಾ ರಾಮಾಪುರ
“ನಮಗೆ ಬೇಕಿರುವ ಸಂತಸವು ಸ್ವಚ್ಛಂದವಾದ ಹಳ್ಳಿಗಳಲ್ಲಿದೆ. ಅದನ್ನು ಬಿಟ್ಟು ಸಿಟಿಗಳಲ್ಲಿ ಹುಡುಕಿದರೆ ಸಿಕ್ಕೀತೇ?”
ಕೆಲವು ದಿನಗಳ ಹಿಂದೆ ಸಂಜೆ ಅವಳ ಅಮ್ಮನೊಡನೆ ಶಟಲ್-ಕಾಕ್ ಅಡ್ತಿದ್ಲು ಶಾನ್ವಿ.
ಮೊದಲೇ ಗೊತ್ತಲ್ಲ ಈ ಸಿಟಿಗಳಲ್ಲಿ ಆಟ ಊಟ ಪಾಠ ಯಾವುದಕ್ಕೂ ಒಬ್ಬರಿಗೊಬ್ಬರು ಬೇರೆಯೋದಿಲ್ಲ. ಪಕ್ಕದ ಮನೆಯಲ್ಲೇ ಹೆಣ ಬಿದ್ದಿದ್ರು ಹಬ್ಬ ಮಾಡೋದು ಈ ಸಿಟಿಯ ಜನರು, ಸಹಜವಾಗಿಯೇ ‘ನಾನು ಬರ್ತಿನಿ ಆಟಕ್ಕೆ ಸೇರಿಸಿಕೊಳಿ ಶಾನ್ವಿ ಅಕ್ಕ’ ಅಂತ ನನ್ನ ದೊಡ್ಡ ಮಗ ಚಿನ್ಮಯ್ ಕೇಳಿದ. ಆ ಹುಡುಗಿ ಏಕಾಏಕಿ ‘ಊಹೂರ’ ಎಂದುಬಿಟ್ಟಳು. ಹಾಗಾಗಿ ಮೈಸೂರು ಮಕ್ಕಳಿಗೆ ಚೆಂಡುಕೊಟ್ಟು ಆಟ ಆಡಿಸುತ್ತಾ ನಿಂತಿದ್ದೆ, ಆ ವೇಳೆಗೆ ಒಬ್ಬ ಡೆಲಿವರಿ ಬಾಯ್ ಬಂದವನೇ ಅವರು ಆರ್ಡರ್ ಮಾಡಿದ ಪಿಜ್ಜಾ ಬಾಕ್ಸನ್ನು ಶಾನ್ವಿ ಕೈಗೆ
ಕೊಟ್ಟು ಅವರಮ್ಮನಿಂದ ಹಣ ಪಡೆದು ಹೊರಟುಬಿಟ್ಟ.
ಸಹಜವಾಗಿಯೇ ನನ್ನ ಮಕ್ಕಳ ಕಣ್ಣು ಆ ಡಬ್ಬಿಯ ಮೇಲೆ ಬಿತ್ತು. ಇನ್ನೂ ಚಿಕ್ಕವರಾದದ್ದರಿಂದ ಪಟ್ಟಿಯಲ್ಲಿರುವುದೇನೆಂದು ತಿಳಿಯುವ ಕುತೂಹಲ ಅವರಿಗಿತ್ತು. ಇದನ್ನು ಗಮನಿಸಿದ ಶಾನ್ವಿ ಚಕ್ಕನೇ ‘ಏನಿಲ್ಲ ಚಿನ್ಮಯ್ ಪಾಜೆಕ್ಟ್ ಮಾಡೋಕೆ ಮೆಟೀರಿಯಲ್ಸ್ ಆರ್ಡರ್ ಮಾಡಿದ್ವಿ ಅಷ್ಟೇ ಅಂತ ಹೇಳಿ ಸರಸರನೇ ಮನೆಯೊಳಗೆ ನಡೆದುಬಿಟ್ಟಳು. ಇದರಿಂದಾಗಿ ನನಗೆ ಕೊಂಚ ಬೇಸರವಾಯಿತಾದರೂ ಸಿಟಿಗಳಲ್ಲಿ ಇದೆಲ್ಲ ಕಾಮನ್ ಎಂದು ಸುಮ್ಮನಾದೆ.
ಅದೊಂದು ಕಾಲವಿತ್ತು. ನಾನು ಹುಟ್ಟಿ ಬೆಳೆದದ್ದೆಲ್ಲಾ ಹಳ್ಳಿಯ ಸ್ವಚ್ಛಂಧ ಪರಿಸರದಲ್ಲಿ, ಹಳ್ಳಿಯ ಜನರ ನಡುವಿನ ಒಡನಾಟ ಬಾಂಧವ್ಯವೇ ಒಂದು ವಿಶೇಷವಾದದ್ದು, ರಕ್ತ ಸಂಬಂಧಿಗಳೇ ಆಗಿರಬೇಕೆಂಬುದಿಲ್ಲ. ಅಕ್ಕ ಪಕ್ಕದ ನಾಲ್ಕೈದು ಮನೆಯವರು ಒಬ್ಬರ ಮನೆಯ ಜಗಲಿ (ಪಡಸಾಲೆ) ಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು, ತಮ್ಮ ತಮ್ಮ ಕಷ್ಟ ನಷ್ಟಗಳು ಸುಖ ದುಃ ಖಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬರಿಗೆ ಮತ್ತೊಬ್ಬರು ನಾವಿದ್ದೇವೆ ನಿಮ್ಮೊಡನೆ ಎಂಬ ಸೆಕ್ಯೂರ್ ಮನೋಭಾವನೆ. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಹಳ್ಳಿಗಳಲ್ಲಿ ಒಬ್ಬರ ಮನೆಯಲ್ಲಿ ಪರಂಗಿಕಾಯಿಗೆ ಹುಳಿ ಹಾಕಿದರೆ ಇಡೀ ಕೇರಿಯೇ ಬಂದು ಸೇರಿ ಬಿಡುತ್ತಿತ್ತು. ದೋರುಗಾಯಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಅದಕ್ಕೆ ಉಪ್ಪು ಹುಳಿ ಕಾರದಪುಡಿ, ಬೆಳ್ಳುಳ್ಳಿ ಕೊತ್ತಂಬರಿ ಮತ್ತು ಕರಿಬೇವು ಚಿಟಿಕೆ ಮೆಣಸಿನಪುಡಿ ಹಾಗೂ ಒಂದೆರಡು ಹನಿ ನಿಂಬೆರಸ ಹಾಕಿ ಮಿಕ್ಸ್ ಮಾಡುತ್ತಿದ್ದರೆ ಸುತ್ತ ಕುಳಿತಿದ್ದವರ ಬಾಯಿಯಲ್ಲಿ ನೀರೂರುತ್ತಿತ್ತು. ಪರಂಗಿಕಾಯಿಗೆ ಹುಳಿ ಹಾಕ್ತಾರೆ ಅಂತ ಕಿವಿಗೆ ಬೀಳುತ್ತಿದ್ದಂತೆ ಒಬ್ಬರಲ್ಲ ಇಬ್ಬರಲ್ಲಿ ಬರೋಬ್ಬರಿ ಹದಿನೈದರಿಂದ ಇಪ್ಪತ್ತು ಜನ ಸೇರಿಬಿಡುತ್ತಿದ್ರು.. ಅಯ್ಯೋ ಜನ ಜಾಸ್ತಿ ಬಂದ್ರಲ್ಲ ನಮಗೆ ತಿನ್ನೋಕೆ ಸಾಕಾಗೋಲ್ಲ ಎಂಬ ಭಾವನೆ ಯಾರಿಗೂ ಬರ್ತಿರ್ಲಿಲ್ಲ. ಯಾರೇ ಬಂದರೂ ಇರೋದಲ್ಲಿ ಹಂಚಿಬಿಡುತ್ತಿದ್ದರು. ಎರಡು ಮೂರು ಚೂರು ಸಿಕ್ಕರೂ ಹಂಚಿ ತಿನ್ನೋದಲ್ರಿದ್ದ ರುಚಿ ಸಂತೋಷ ಅಬ್ಬಾ ಹೇಳೋಕೆ ಅಸಾಧ್ಯ. ಕೊನೆಯಲ್ಲಿ ಪಾತ್ರೆಗೆ ಮೆತ್ತಿರುತ್ತಿದ್ದ ಹುಳಿಯನ್ನೂ ಬಿಡದೆ ಬೆರಳಲ್ಲಿ ಅದ್ದಿಕೊಂಡು ನೆಕ್ಕುತ್ತಿದ್ದರೆ ಆಪಾರ ತೃಪ್ತಿ ಸಿಗುತ್ತಿತ್ತು.
ಊರಲ್ಲಿ ನಮ್ಮದೊಂದು ಗ್ಯಾಂಗ್ ಇತ್ತು. ವೀಕೆಂಡ್ ಬಂದ್ರೆ ಮಜಾ ಇಮ್ಮಡಿ ಆಗ್ತಿತ್ತು, ಒಬ್ಬರ ಮನೆಯಿಂದ ಈರುಳ್ಳಿ, ಒಬ್ಬರು ಕ್ಯಾರೆಟ್ ಮತ್ತೊಬ್ಬರು ಟೊಮ್ಯಾಟೊ ಕೊತ್ತಂಬರಿ ಸೊಪ್ಪು, ಇನ್ನೊಬ್ಬರು ಕಡ್ಲೆಬೀಜ ಉಪ್ಪು ಎಣ್ಣೆ … ಹೀಗೆ ತಮ್ಮ ಮನೆಯಲ್ಲಿ ಸಿಗುತ್ತಿದ್ದುದನ್ನು ತಂದರೆ ಒಬ್ಬನ ತಲೆಗೆ ಎರಡು ರೂಪಾಯಿಯಂತೆ ಹಾಕಿ ಕಡ್ಲೆಪುರಿ ಮತ್ತು ಬೂಂದಿಯನ್ನು ಅಂಗಡಿಯಿಂದ ತಂದು ಚುರುಮುರಿ ಸಿದ್ದಪಡಿಸುತ್ತಿದ್ದರು. ಇಲ್ಲಿ ನಾವು ತರುತ್ತಿದ್ದ ವಸ್ತುಗಳು ಭಿನ್ನವಾಗಿದ್ದವು. ಆದರೆ ಎಲ್ಲರೂ ಸಮಾನವಾಗಿ ಹಂಚಿ ತಿನ್ನುತ್ತಿದ್ದೇವು. ಆ ಹರಟೆ ಸಂತೋಷ ನಗು ಯಾವ ಫೈವ್ ಸ್ಟಾರ್ ಹೋಟೆಲಲ್ಲಿ ಸ್ಯಾಂಡ್ ವಿಚ್ ತಿಂದರೂ ಸಿಗದು ಎಂಬುದಂತೂ ಕಟು ಸತ್ಯ.
ಪಗಡೆ ಆಟಕ್ಕೆ ಕುಂತರೆ (ನಮ್ಮೂರಲ್ಲಿ ಇದಕ್ಕೆ ದಾಯದ ಆಟ ಅಂತಲೂ ಕರೆಯುತ್ತಾರೆ) ಆಟ ಆಡೋದು ವಾರ ಜನ ಆದ್ರೂ ನೋಡೋಕೆ ಸುತ್ತಾ ಕುಂತ್ಕೊಳ್ಳೋರು ಹತ್ತಕ್ಕೂ ಹೆಚ್ಚು. – ಹೆಚ್ಚು ಏಯ್ ಹನ್ನೆರಡು ಹಾಕು. ದಾಯ ಹಾಕು ಆ ಕಾಯಿ ಹೊಡಿ ಬಿಡಬೇಡ ಹೀಗೆ ತಾವೇ ಆಟ ಆಡ್ತಾ ಅನ್ನೋ ಥರದಲ್ಲಿ ಎಂಜಾಯ್ ಮಾಡ್ತಾ ಇದ್ರು. ಈಗಿನ ಆಟಗಳು ಹೇಗಿರುತ್ತೆ ಅನ್ನೋದು ನಿಮಗೆ ಗೊತ್ತಲ್ವಾ? ಒಂದು ಮನೆಯಲ್ಲಿ ಇರೋ ನಾಲ್ಕು ಜನರಲ್ಲಿ ನಾಲ್ವರೂ ತಮ್ಮ ತಮ್ಮ ಕೋಣೆಯಲ್ಲಿ ಕೈಲೊಂದು ಮೊಬೈಲ್ ಹಿಡಿದು ನೋಡಾ ಕುಂತಿರ್ತಾರೆ. ಒಬ್ರು ರೀಲ್ಸ್, ಒಬ್ಬರು ಯೂಟ್ಯೂಬ್, ಒಬ್ರು ಗೇಮ್ಸ್, ಮತ್ತೊಬ್ಬರು ಧಾರಾವಾಹಿ ಇರೋ ನಾಲ್ಕು ಜನರಿಗೆ ವಿಭಿನ್ನ ಅಭಿರುಚಿ. ಆದರೆ 40 ಜನರು ಒಂದು ದೊಡ್ಡ ಹಾಲಿನಲ್ಲಿ ಕುಳಿತು ಮಹಾಭಾರತ ನೋಡುತ್ತಿದ್ದ ಆ ಕಾಲ ಈಗ ಊಹೆಗೂ ಸಿಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಒಂದು ಮನೆಯಲ್ಲಿಯೇ 3-4 ಟಿವಿಗಳಿರುವುದು ಕಂಡುಬರುತ್ತದೆ. ಕೆಲವರಂತೂ ತಮ್ಮ ವೈಯಕ್ತಿಕ ಕೋಣೆಯಲ್ಲಿಯೂ ಟಿವಿಯನ್ನು ಫಿಕ್ಸ್ ಮಾಡಿಸಿಕೊಂಡಿರುತ್ತಾರೆ. ಆ ಕಾಲದಲ್ಲಿ ಟಿವಿ ಅನ್ನೋದು ಬಹು ಐಷಾರಾಮಿ ವಸ್ತುವಾಗಿತ್ತು. ಅದು ಕೆಲವರ ಮನೆಗಳಲ್ಲಿ ಮಾತ್ರ ಇರುತ್ತಿತ್ತು. ಅದು ಅಲ್ಲದೇ ಕೇಬಲ್‌ಗಳಾಗಲಿ ಡಿಷ್‌ಗಳಾಗಲೀ ಇರುತ್ತಿರಲಿಲ್ಲ. ಬರುತ್ತಿದ್ದುದೇ ಚಂದನ ದೂರದರ್ಶನ ನ್ಯಾಷನಲ್ ಚಾನೆಲ್ ಮಾತ್ರ. ವಾರಕ್ಕೊಮ್ಮೆ ಪ್ರತಿ ಭಾನುವಾರ ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿದ್ದ ಮಹಾಭಾರತವನ್ನು ನೋಡಲು ಕನಿಷ್ಟ ಅಂದರೂ 40 ರಿಂದ 50 ಜನ ಸೇರಿ ಬಿಡುತ್ತಿದ್ದರು.
ಮನೆಯಾಕೆ ಕೊಂಚವು ಬೇಸರ ಮಾಡಿಕೊಳ್ಳುತ್ತಿರಲಿಲ್ಲ, ಈಗಿನ ಕಾಲದ ಯಾರಾದರೂ ಇಬ್ಬರು ನೆಂಟರು ಮನೆಗೆ ಬಂದರೆ ಅರ್ಧ ಲೋಟ ಕಾಫಿ ಕೊಡೋಕೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಅವರ ನಡವಳಿಕೆ ಕಂಡು ಮತ್ತೆ ಆ ಮನೆಗೆ ಬರಲೇಬಾರದು ಎನ್ನಿಸಿ ಬಿಡುವಷ್ಟರ ಮಟ್ಟಿಗೆ ತಮ್ಮ ಅಸಮಾಧಾನವನ್ನು ಪ್ರದರ್ಶಿಸಿ ಬಿಡುತ್ತಾರೆ.
ಹಳ್ಳಿಗಳಲ್ಲಿ ಯಾರೇ ಆಗಲಿ ಎಷ್ಟೇ ವಯಸ್ಸಿನ ಅಂತರದಲ್ಲಿ ದೊಡ್ಡವರಾಗಿದ್ದರು ಬಾಯಿ ತುಂಬ ಅಲ್ಲ ಅಕ್ಕ ಅಜ್ಜಿ-ತಾತ ಅತ್ತೆ ಮಾವ ಚಿಕ್ಕಪ್ಪ-ಚಿಕ್ಕಮ್ಮ ದೊಡ್ಡಪ್ಪ-ದೊಡ್ಡಮ್ಮ, ಅತ್ತಿಗೆ ಭಾವ ಬಾಮೈದ… ಹೀಗೆ ಸಂಬಂಧಗಳಿಗೆ ಬೆಲೆ ಕೊಟ್ಟು ಕರೆಯುತ್ತಾರೆ. ಈಗಂತೂ ಅಂಕಲ್ ಆಂಟಿ ಅನ್ನೋ ಪದಗಳೇ ಎಲ್ಲಾ ಸಂಬಂಧಗಳನ್ನು ನುಂಗಿಬಿಟ್ಟಿವೆ.
ಒಡಹುಟ್ಟಿದವರನ್ನು ಅಣ್ಣ ಅಕ್ಕ ಅನ್ನೋ ಕಾಲ ಹೋಗಿ ಬ್ರೋ ಸಿಸ್ಸಿ ಬಂದಿವೆ. ಅಜ್ಜಿ ಹೇಳುತ್ತಿದ್ದ ರಾಜಕುಮಾರಿಯ ಕಥೆ, ಏಳುಸುತ್ತಿನಕೋಟೆಯ ಕಥೆ, ನಾಗಮಂಡಲದ ಕಥೆ, ಸ ರಾಜಕುಮಾರ ಹಾವಾದ ಕಥೆ, ಇವೆಲ್ಲವನ್ನೂ ತುಂಬಾನೆ ಮಿಸ್ ಮಾಡ್ಕೊಳ್ತಾ ಇದ್ದೀವಿ ಅಜ್ಜಿ ಕಥೆ ಹೇಳುವಾಗ ಅಲ್ಲಿನ ಪಾತ್ರಗಳು ನಾವೇ ಎಂಬಂತೆ ಕಥೆಯನ್ನು ಅನುಭವಿಸಿ ಕೇಳುತ್ತಿದ್ದವು. ಪಾತ್ರಗಳಲ್ಲಿ ಅದೆಷ್ಟು ಲೀನವಾಗಿ ಬಿಡುತ್ತಿದ್ದವೆಂದರೆ ನಮ್ಮ ಜೀವನದಲ್ಲಿ ಅದು ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಬೆರೆತು ಹೋಗುತ್ತಿದ್ದವು. ಇಂತಹ ಅನುಭವ ಮೊಬೈಲ್
ಗಳಲ್ಲಿ ಸಿಗಲು ಸಾಧ್ಯವೇ?
ಮರಗಳು ಚಿಗುರೊಡೆಯೋ ಕಾಲದಲ್ಲಿ ಗೆಳೆಯರೆಲ್ಲ ಸೇರಿ ಹುಣಿಸೇಚಿಗುರು ತಂದು ಉಪ್ಪು ಖಾರ ಬೆಳ್ಳುಳ್ಳಿ ಹಾಕಿ ಒರಳು ಕಲ್ಲಿನಲ್ಲಿ ಒನಕೆಯಿಂದ ಕುಟ್ಟಿ ಚಪ್ಪರಿಸಿ ಮೆಲ್ಲುತ್ತಿದ್ದವು. ಹುಣಿಸೆಹಣ್ಣನ್ನು ಉಪ್ಪುಖಾರ ದೊಡನೆ ಹದವಾಗಿ ಕುಟ್ಟಿ ಉಂಡೆಮಾಡಿ ಕಣ್ಣಿಗೆ ಸಿಕ್ಕಿಸಿಕೊಂಡು ಚೀಪುತ್ತಿದ್ದರೆ ಈಗಿನ ಲಾಲಿಪಾಡ್ ತಲೆದೂಗಬೇಕು. ಇದರ ಮುಂದೆ ಸೋತು ಶರಣಾಗಲೇಬೇಕು.