ಚಾಂದಿನಿ ಗಗನ
ನಾನು ಪ್ರತಿ ಸಾರಿ ಊರಿಗೆ ಬರುವಾಗ ನನ್ನ ಚೆಂದದ ಮೈಸೂರನ್ನು ದಾಟಿಯೇ ಹೋಗುತ್ತೇನೆ. ಆ ಅರಮನೆ, ದಸರಾ, ಬೆಟ್ಟ, ವುಡ್‌ಲ್ಯಾಂಡ್ ಸಿನಿಮಾ ಥಿಯೇಟರ್ ಮುಂದಿನ ಪಾರ್ಕ್ ನನಗೂ ಈ ಜಾಗಕ್ಕೂ ಸಂಬಂಧ ಬೆಸೆದುಕೊಂಡಿದೆ.
ನಾನು ಒಮ್ಮೆ ಮಾತ್ರ ಮೈಸೂರು ದಸರಾವನ್ನು ನೇರವಾಗಿ ನೋಡಿ ಕಣ್ಣು ತುಂಬಿಕೊಂಡಿದ್ದೇನೆ. ಆ ಸಮಯದಲ್ಲಿ ನಾನು ಕಣ್ಣು ಹಾಯಿಸಿದ್ದು ಬಣ್ಣ ಬಣ್ಣದ ಸೀರೆ ತೊಟ್ಟಿದ್ದ ಹೆಂಗಸರನ್ನು. ಲಂಗ- ದಾವಣಿಯ ಹೆಣ್ಣುಮಕ್ಕಳನ್ನು ಹಾಗೂ ಮುಖ್ಯವಾಗಿ ನನಗೆ ಆಕರ್ಷಿತರಾಗುತ್ತಿದ್ದ ಯುವಕರನ್ನು. ಒಂದು ಕಡೆ ಹೆಂಗಸರನ್ನು ನೋಡುವಾಗ ಅವರಂತೆ ನಾ ಯಾವಾಗ ಆಗುವುದು ಎಂದು ಭಾವನೆಯ ಲೋಕದಲ್ಲಿಯೇ ಮುಳುಗಿಹೋಗುತ್ತಿದ್ದೆ. ಮತ್ತೆ ಮತ್ತೆ ಭ್ರಮೆಯಲ್ಲಿ ಆ ಬಣ್ಣದ ಸೀರೆಯಲ್ಲಿ ನಾನೇ ನಾನಾಗುತ್ತಿದ್ದೆ. ಹುಡುಗರನ್ನು ಕಂಡಾಗ ನನ್ನನ್ಯಾಕೆ ಯಾರೂ ಗಮನಿಸುತ್ತಿಲ್ಲ ಎಂದು ಕೋಪಿಷ್ಟಳಾಗಿದ್ದೆ. ಅವರನ್ನು ನನ್ನೆಡೆಗೆ ಹೇಗೆ ಸೆಳೆಯುವುದು ಎಂದು ಐದು ರೂಪಾಯಿಗೆ ಸಿಕ್ಕ ಮಿಂಚಿನ ಮಣಿಸರವನ್ನು ಹಾಕಿಕೊಂಡು ಅತ್ತಿತ್ತ ಓಡಾಡುತ್ತಿದ್ದೆ.
ನನ್ನ ಮೊದಲ ದಿನದ ಸೀರೆ ಅನುಭವವಂತೂ ಅಬ್ಬಾ ಅನ್ನುವಂಥದ್ದು. ಅಶೋಕಪುರಂನಲ್ಲಿ ನಮ್ಮ ಸಂಬಂಧಿಕರ ಮನೆ ಇದೆ. ಅಂದೇ ನಾನು ಮೊದಲ ದಸರಾ ಹಬ್ಬಕ್ಕೆ ಅಲ್ಲಿಗೆ ಹೋಗಿದ್ದು. ನನ್ನೂರು ತಿ. ನರಸೀಪುರದ ಹತ್ತಿರದಲ್ಲಿಯೇ ಇರುವ ಹಳೇ ಸೋಸಲೆ ಗ್ರಾಮ. ಓದುವಾಗ ಸಿನಿಮಾ ನೋಡಲು ಅನೇಕ ಬಾರಿ ಮೈಸೂರಿಗೆ ಹೋಗಿದ್ದೆ. ಆದರೆ ನನ್ನ ಭಾವನೆಯವರನ್ನು ನಾನು ಎಂದೂ ಕಂಡಿರಲಿಲ್ಲ. ರಣಜಿತ್, ಲಿಡೋ, ಚಾಮುಂಡೇಶ್ವರಿ, ಸಂಗಮ್ ನನ್ನ ಅಚ್ಚುಮೆಚ್ಚಿನ ಥಿಯೇಟರ್‌ಗಳು. ಬೆಟ್ಟಯ್ಯ ಎಂಬ ನನ್ನ ಸಮುದಾಯದವರನ್ನು ಅಲ್ಲಿ ಭೇಟಿಯಾಗಿ, ಮೊದಲು ನಾನು ಬಿಳಿಬಣ್ಣದ ಕೆಂಪು ಅಂಚಿನ ಚಿಮುಕಿ ಸೀರೆಯನ್ನುಟ್ಟು ವಸ್ತು ಪ್ರದರ್ಶನ ನೋಡಲು ಹೋಗಿದ್ದೆ. ಅಂದು ಕೆನ್ನೆಗೆ ಕೆಂಪಿನ ಬಣ್ಣ ಹಚ್ಚಿ. ತುಟಿಗೆ ಬಣ್ಣ ಹಾಗೂ ಕಣ್ಣಿಗೆ ಕಾಡಿಗೆ ಮತ್ತು ಕೈಗೆ ಕೆಂಪು ಧರಿಸಿಕೊಂಡು ಸೇರವನ್ನು ತಲೆಯ ಮೇಲೆ ಹಾಕಿಕೊಂಡು ತಲೆ ಬಗ್ಗಿಸಿ ವಯ್ಯಾರದಲ್ಲಿ ನಡೆದುಕೊಂಡು ಸುತ್ತಿದ್ದೆ. ಆಗ ತಲೆಯಲ್ಲಿ ಕೂದಲು ಚಿಕ್ಕದಾಗಿತ್ತು. ಇರುವುದನ್ನೇ ಹೆಣ್ಣೆಂದು ಭ್ರಮಿಸಿ ಸಂಭ್ರಮಿಸಿದ್ದೆ. ತಡರಾತ್ರಿ ಮನೆಗೆ ಬಂದಾಗ ಸೀರೆ ಬಿಚ್ಚಲು ಮನಸ್ಸಾಗಲಿಲ್ಲ. ನನಗೆ ಆಮೇಲೆ ಬೇರೆ ದಾರಿಯೇ ಇರಲಿಲ್ಲ. ಅವಳಿಂದ ಅವನಾಗಿ ರೂಪಾಂತರವಾಗಲೇಬೇಕಿತ್ತು.