ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್
ನಾನು ಪೌಲಾ. ದಿನಕ್ಕೆ ಎರಡು ಮೂರು ತಾಸು ನನ್ನ ತುಟಿಯ ಮೇಲೆ ಸುಳಿದಾಡಿ ಸುಶ್ರಾವ್ಯ ಸಂಗೀತ ಹೊರಡಿಸುವ ಹಾರ್ಮೋನಿಕಾ ನನ್ನ ಸಂಗಾತಿ. ಮೂವತ್ತರ ಮೇಲೆ ಮೂರು ವರ್ಷ ಸಂದಿರಬಹುದು ನನಗೆ.ಲಂಡನ್ ಬ್ರಿಜ್ಜಿನ ಬಗಲಿನಲ್ಲಿರುವ ಟ್ರಿನಿಟಿ ರೋಡಿನ ಸಂದಿಯಲ್ಲಿ ವಾಸ ಮಾಡತೊಡಗಿ ನಾಲ್ಕು ವರ್ಷಗಳೇ ಕಳೆದವು. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ತಿಂಗಳುಗಟ್ಟಲೆ ಇಲ್ಲಿನ ರಸ್ತೆಗಳು ಅಲಂಕಾರ ಮಾಡಿಸಿಕೊಳ್ಳುತ್ತವಲ್ಲ, ಹಾಗೆ ಲೆಕ್ಕ ಇಟ್ಟಿದ್ದು ನಾನು ಈ ನಾಲ್ಕು ವರ್ಷಗಳನ್ನು. ಹಾಂ, ಇಲ್ಲಿನ ಡಿಸೆಂಬರ್, ಜನವರಿ ತಿಂಗಳ ಚಳಿಯನ್ನು ನೆನೆಸಿಕೊಂಡರೆ ಬಿರು ಬೇಸಿಗೆಯಲ್ಲೂ ಬೆನ್ನೆಲುಬುಗಳು ಒಂದಕ್ಕೊಂದು ತಿಕ್ಕಿದಂತಾಗಿ ಕಟಗುಡುತ್ತವೆ. ಈ ಚಳಿಗಾಲಕ್ಕಾಗಿ ಹಾತೊರೆದು ಕಾಯುವುದೂ ಉಂಟು ನಾನು.
ಯಾಕೆಂದರೆ ಹಬ್ಬಕ್ಕಿಂತ ಮುಂಚೆ ರಸ್ತೆಗಳು ಶಾಪಿಂಗ್ ಮಾಡುವವರನ್ನು ಬರಮಾಡಿಕೊಳ್ಳುವ ಉಮೇದಿನಲ್ಲಿರುತ್ತವೆ. ಸಂಭ್ರಮ ಹೊದ್ದು ಕೂತಿರುತ್ತವೆ. ಎಲ್ಲ ಪ್ರಾಯದವರೂ ಇಲ್ಲಿನ ಜಗಮಗಿಸುವ ಅಂಗಡಿಗಳಲ್ಲಿ ಖರೀದಿಗಾಗಿ ಬಂದು ಬಾಯಾರಿದಾಗ, ಹಸಿದಾಗ ಇಲ್ಲಿನ ರೆಸ್ತುರಾಗಳನ್ನು ಹೊಕ್ಕುತ್ತಾರೆ. ದೊಡ್ಡ ಮಗ್ಗುಗಳಲ್ಲಿ ಕಾಫಿ, ಚಹ, ಬಿಯರು, ಕೋಲಾ ಹೀರಿ… ಅದು ಖಾಲಿಯಾಗುವ ಮೊದಲೇ ಕಸದ ಡಬ್ಬಿಗೆ ಎಸೆಯುತ್ತಾರೆ. ಬರ್ಗರ್ ಕಿಂಗು ಮೆಕ್‌ಡೊನಲ್ಡ್‌ಗಳಲ್ಲಿ ಕೊಂಡ ತಿನಿಸನ್ನು ಪೂರ್ತಿ ಮುಗಿಸದೇ ಅದನ್ನೂ ಕಸದ ಬುಟ್ಟಿಗೆ ಸೇರಿಸುತ್ತಾರೆ. ಆ ಡಬ್ಬಿಗಳು ‘ಪೌಲಾ, ಪಕ್ಕದ ಬೀದಿಯ ಡೊಮಿನಿಕ್ ಬರುವ ಮೊದಲು ಈ ಪಾನೀಯಗಳನ್ನೂ ಉಳಿದ ತಿನಿಸುಗಳನ್ನೂ ಡಬ್ಬಿಯಿಂದ ಆಯ್ದುಕೋ’ ಎಂದು ಆಹ್ವಾನಿಸುತ್ತವೆ. ಜನರ ದೃಷ್ಟಿ ಆಚೀಚೆಯಾದಾಗ ನಾನು ಲಗುಬಗೆಯಲ್ಲಿ ಕಸದ ಡಬ್ಬಿಯತ್ತ ಸಾಗುತ್ತೇನೆ. ಆಹ್… ಇನ್ನು ನಾಳೆ ಬೆಳಗಿನವರೆಗೆ ಹೊಟ್ಟೆಯ ಕಡೆಯ ಚಿಂತೆಯಿಲ್ಲ ಎಂದು ಖುಷಿಯಾಗುತ್ತೇನೆ.
ಹೀಗೆ ರಸ್ತೆಗೆ ಬಿದ್ದು ಎಷ್ಟು ವರ್ಷವಾಯಿತೋ! ನನಗೆ ಹದಿನೈದಾಗುವವರೆಗೆ ಅಮ್ಮನೊಂದಿಗಿದ್ದೆ ನಿಜ. ಆದರೆ ನಾನಿದ್ದ ಜಾಗವನ್ನು ಮನೆಯೆಂದು ಕರೆಯಲಾಗದು. ಇದ್ದ ಕಿಟಕಿ ಬಾಗಿಲನ್ನೂ ಮುಚ್ಚಿಬಿಟ್ಟಿದ್ದಳು ಅಮ್ಮ. ಕುಂಡದಲ್ಲಿ ಬೆಳೆಯುತ್ತಿದ್ದ ಕ್ಯಾನಬಿಸ್ ಗಿಡಗಳು ಹೊರಗಡೆ ಕಾಣಬಾರದಂತೆ. ವಾರಕ್ಕೊಬ್ಬರಂತೆ ಬದಲಾಗಿ ಮನೆಗೆ ಬರುತ್ತಿದ್ದ ಗ್ಯಾಂಗ್‌ಸ್ಟರ್ ಗಂಡಸರು ಪೊಲೀಸರ ಕಣ್ಣಿಗೆ ಬೀಳಬಾರದಂತೆ. ಆ ಇಟ್ಟಿಗೆ ಗೂಡಿನಂತಿದ್ದ, ಕೌನ್ಸಿಲ್ ಕೊಡಮಾಡಿದ್ದ ಮನೆ ಸದಾ ಮಬ್ಬುಗತ್ತಲು. ಮುಗ್ಗು ವಾಸನೆ. ಒಂದು ಸಂಜೆ ಕುಡಿದ ಗಮ್ಮತ್ತಿನಲ್ಲಿ ಸಿಗರೇಟು ಉರುಬುತ್ತ ಕೂತ ಅಮ್ಮನನ್ನೂ ಮನೆಯನ್ನೂ ಬೆಂಕಿ ಆಹುತಿ ಪಡೆದಿತ್ತು. ಸುಟ್ಟು ಕರಕಲಾದ ಅಮ್ಮನನ್ನು ನಾನು ತಾಸುಗಳ ನಂತರ ನೋಡಿದ್ದೆ. ಸೋಷಿಯಲ್ ವರ್ಕರ್ಸ್ ಪದೇಪದೇ ಒಂದಷ್ಟು ಬೋಧನೆ ಮಾಡಿ ತಾತ್ಕಾಲಿಕ ಸೂರನ್ನು (Foster Home) ಹುಡುಕಿಕೊಟ್ಟರು.
ಅದು ಇನ್ನೊಂದು ನರಕ. ಆ ಬಗ್ಗೆ ಹೇಳದೆ ಸುಮ್ಮನಿರುವುದೇ ಒಳಿತು. ಫೊಸ್ಟರ್ ಹೋಮಿನ ನರಕವನ್ನು ಇನ್ನೇನು ತಡೆಯಲು ಸಾಧ್ಯವೇ ಇಲ್ಲ ಅನ್ನಿಸಿದಾಗಲೇ ನಾನು ರಸ್ತೆ ಪಾಲಾದದ್ದು. ಈ ದೇಶದ ಅನೇಕ ನಗರಗಳನ್ನು ಸುಮಾರು ವರ್ಷ ಎಡತಾಕಿದ ಮೇಲೆ ಲಂಡನ್ ಬ್ರಿಜ್ಜಿನಿಂದ ಕೆಲವೇ ಮಾರು ಅಂತರದಲ್ಲಿರುವ ಟ್ರಿನಿಟಿ ರೋಡು ನನ್ನ ತಾಣವಾಗಿದ್ದು. ಇಲ್ಲಿನ ಪ್ರಯಾಣಿಕರು ಧಾರಾಳಿಗಳು. ಯಾವುದೋ ಭ್ರಮೆಯಲ್ಲಿ ಕಳೆದು ಹೋದಂತೆ ತಲೆ ತಗ್ಗಿಸಿ ಕೂಡ್ರುವ ನನ್ನನ್ನು ನೋಡಿ ಎದುರಿನ ಕೌದಿಯ ಮೇಲೆ ನಾಣ್ಯಗಳನ್ನು ಚೆಲ್ಲಿ ಮುಂದುವರಿಯುತ್ತಾರೆ. ನನ್ನ ತುಟಿಯ ಮೇಲಾಡುವ ಹಾರ್ಮೋನಿಕಾದ ಸುಶ್ರಾವ್ಯತೆಯನ್ನು ಪ್ರಾಮಾಣಿಕವಾಗಿ ಮೆಚ್ಚುವಂತೆ ಐದು ಪೌಂಡುಗಳ ನೋಟುಗಳನ್ನು ಕೊಟ್ಟು ಹೋದ ದಿನಗಳೂ ಇವೆಯೆಂದರೆ ನಂಬುವಿರಲ್ಲವೇ?
ನನ್ನ ಮೈ ಬಣ್ಣ, ಭಾಷೆ, ಹಾವ-ಭಾವ, ಹೆಸರು, ಶೈಲಿ ಯಾವುದೂ ಇಲ್ಲಿ ವಿಭಿನ್ನವಿರಲಿಲ್ಲ. ಬದುಕು ಮಾತ್ರ ಕಾರಣವೇ ಇರದೆ, ನನ್ನದಲ್ಲದ ತಪ್ಪಿಗೆ ವಿಭಿನ್ನವಾಗಿ ಹೋಯಿತು. ಒಮ್ಮೊಮ್ಮೆ ಗಂಭೀರವಾಗಿ ಯೋಚಿಸುತ್ತೇನೆ. ಸರ್ಕಾರದ, ಸೋಷಿಯಲ್ ವರ್ಕರ್‌ಗಳ ಮೊರೆ ಹೋಗಿ ಅವರು ಕೊಡುವ ಆಯ್ಕೆಯನ್ನು ಒಪ್ಪಿಕೊಂಡುಬಿಡಲಾ ಎಂದು ಚಿಂತಿಸುತ್ತೇನೆ. ಆಗೆಲ್ಲ ಅಮ್ಮನೊಂದಿಗೆ ಇಟ್ಟಿಗೆ ಗೂಡಿನಂತಹ ಮನೆಯಲ್ಲಿ ಕಳೆದ ದಿನಗಳು, ಫೊಸ್ಟರ್ ಹೋಮಿನ ಘಳಿಗೆಗಳು ಕಣ್ಣೆದುರಿಗೆ ತೆರೆದುಕೊಳ್ಳುತ್ತವೆ. ಥಟ್ಟನೆ, ಲಂಡನ್ ಬ್ರಿಜ್ಜಿನ ಈ ತುದಿಯ ಬಿಡುಬೀಸಾದ ಆಕಾಶದಷ್ಟು ಹಿತ ಇನ್ಯಾವುದಿದ್ದೀತು ಎಂದುಕೊಳ್ಳುತ್ತ ಮತ್ತೆ ಹಾರ್ಮೋನಿಕಾದ ಮೇಲೆ ತುಟಿ ನೆಡುತ್ತೇನೆ
” ನನ್ನ ಮೈ ಬಣ್ಣ, ಭಾಷೆ, ಹಾವ-ಭಾವ, ಹೆಸರು,ಶೈಲಿ ಯಾವುದೂ ಇಲ್ಲಿ ವಿಭಿನ್ನವಿರಲಿಲ್ಲ. ಬದುಕು ಮಾತ್ರ ಕಾರಣವೇ ಇರದೆ, ನನ್ನದಲ್ಲದ ತಪ್ಪಿಗೆ ವಿಭಿನ್ನವಾಗಿ ಹೋಯಿತು.”





