ಕೀರ್ತಿ ಬೈಂದೂರು
ಹುಟ್ಟಿನಿಂದಲೇ ಅಂಧರಾದವರು ಬದುಕನ್ನು ರೂಪಿಸಿಕೊಳ್ಳುವ ಬಗೆಯೇ ಭಿನ್ನ. ಆದರೆ ಮೂವತ್ತೆಂಟನೆಯ ವಯಸಿನಲ್ಲಿ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಮಾರನೇ ದಿನದ ಹಗಲನ್ನು ಕಾಣುವುದಕ್ಕೆ ದೃಷ್ಟಿಯೇ ಇಲ್ಲವೆಂದರೆ! ಬಡತನ, ಹಸಿವು, ಅಸಹಾಯಕತೆ ಸಂಕಷ್ಟಗಳ ನಡುವೆ ಬದುಕನ್ನು ಜೀಕಿದ ಚಿಕ್ಕಮಂಟಯ್ಯ ಅವರ ಎದೆಗಾರಿಕೆ ಬಗ್ಗೆ ಅಚ್ಚರಿಯೆನಿಸುತ್ತದೆ.
ಮೆದುಳಿನ ರಕ್ತಸ್ರಾವದಿಂದಾಗಿ ಟೂರಿಸ್ಟ್ ಟ್ಯಾಕ್ಸಿ ಓಡಿಸುತ್ತಿದ್ದ ಇವರ ಕಣ್ಣುಗಳ ದೃಷ್ಟಿ ಹೊರಟುಹೋಯಿತು. ಕುಟುಂಬಕ್ಕೆ ಕವಿದ ಕತ್ತಲದು. ಆದರೆ ಜೀವನಾಧಾರಕ್ಕೆ ದುಡಿಮೆ ಮಾಡಲೇಬೇಕಾದ ಅನಿವಾರ್ಯತೆ. ಈಗಿವರು ಮೈಸೂರಿನ ಜೆ. ಪಿ. ನಗರದ ಪಕ್ಕದಲ್ಲಿರುವ ಗೊಬ್ಳಿ ಮರದ ಪಕ್ಕದಲ್ಲಿರುವ ಬ್ಯಾಂಕ್ ಎದುರು ಬಿದಿರಿನ ಬುಟ್ಟಿ ಮಾರುತ್ತಿದ್ದಾರೆ. ಚಿಕ್ಕಮಂಟಯ್ಯ ಅವರದು ತುಂಬು ಕುಟುಂಬ. ಎಂಟನೇ ತರಗತಿಯವರೆಗೆ ಓದಿದ ಮೇಲೆ ಮುಂದಕ್ಕೆ ಓದುವುದು ಸಾಧ್ಯವಾಗಲಿಲ್ಲ. ಹೊಟ್ಟೆಗೊಂದಿಷ್ಟು ಹಿಟ್ಟು ಕೊಡುವ ಕೆಲಸ ಸಿಕ್ಕರೆ ಸಾಕೆಂಬ ಮನೆಯ ಸ್ಥಿತಿ. ಸರಿ, ಫ್ಯಾಕ್ಟರಿ ಕೆಲಸಕ್ಕೆ ಹೋಗುವುದೆಂದು ತೀರ್ಮಾನಿಸಿದರು. ಪೆಟ್ರೋಲ್ ಬಂಕ್‌ಗಳಲ್ಲೂ ಕೆಲಸ ಮಾಡಿದರು. ಚಿಕ್ಕಂದಿನಿಂದಲೂ ಗಾಡಿ ಓಡಿಸುವುದು ಎಂದರೆ ಚಿಕ್ಕಮಂಟಯ್ಯ ಅವರಿಗೆ ತೀರದ ಸಂಭ್ರಮ.
ಪೆಟ್ರೋಲ್ ಹಾಕುತ್ತಿದ್ದಾಗ ಬಂದ ಗಾಡಿಗಳನ್ನು ನೋಡುತ್ತಿದ್ದರು. ಹಾಗೂ ಹೀಗೂ ಆಟೋ ಓಡಿಸುವುದನ್ನು ಕಲಿತೇಬಿಟ್ಟರು. ಕನಸಿನ ಪರಿಽ ವಿಸ್ತಾರವಾಗುತ್ತಾ, ನಂತರ ಟೆಂಪೋ ಓಡಿಸುವುದನ್ನು ಕಲಿತರು. ಹೀಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ಓಡಿಸುತ್ತಾ ಬದುಕಿನ ಪಯಣವನ್ನು ತಳ್ಳುತ್ತಿದ್ದರು. ಫ್ಯಾಕ್ಟರಿಗೆ ಹೋಗುವಾಗೆಲ್ಲ ಜೊತೆಗಾರ್ತಿ, ಅಕ್ಕನ ಮಗಳಾಗಿದ್ದ ಜಯಲಕ್ಷ್ಮೀ ಅವರೇ. ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ದಿಟ್ಟ ಹೆಣ್ಣು. ಮನೆ ಜನರೆಲ್ಲ ಒಟ್ಟಾಗಿ ಇವರಿಬ್ಬರಿಗೂ ಮದುವೆ ಮಾಡಿಸಿದರು. ಆಗ ಚಿಕ್ಕಮಂಟಯ್ಯ ಅವರಿಗೆ ೨೫ ವರ್ಷ. ಇವತ್ತಿಗೆ ಚಿಕ್ಕಮಂಟಯ್ಯ ಅವರ ಪಾಲಿಗೆ ಹೆಂಡತಿ ಎಂದರೆ ನೋವು ಬವಣೆಗಳನ್ನು ಮರೆಸಿದ ಜೀವ ಚೈತನ್ಯ. ನಿಮ್ಮ ಬದುಕಿನ ಪ್ರೇರಣೆ ಯಾರೆಂದು ಇವರಲ್ಲಿ ಕೇಳಿದರೆ ಜಯಲಕ್ಷ್ಮೀ ಎನ್ನುತ್ತಾರೆ.
ಬಿದಿರನ್ನು ಹೆಣೆಯುವ ಮೇದರ ಸಮುದಾಯಕ್ಕೆ ಸೇರಿದವರಾಗಿದ್ದರೂ ಚಿಕ್ಕಮಂಟಯ್ಯ ಅವರಿಗೆ ಕುಲಕಸುಬು ಕೈ-ಗಾರಿಕೆಯಾಗಲಿಲ್ಲ. ಈ ವಿಷಯದಲ್ಲಿ ಜಯಲಕ್ಷ್ಮೀ ಅವರನ್ನು ಮೆಚ್ಚಲೇಬೇಕು. ಬಿದಿರಿನ ಬುಟ್ಟಿ ಹೆಣೆಯುವುದನ್ನು ಚಿಕ್ಕಂದಿನಲ್ಲೇ ಕಲಿತಿದ್ದರು. ತಾಯಿ, ಅಜ್ಜಿ ಎಲ್ಲರೂ ದಿನಬೆಳಗಾದರೆ ಬಿದಿರನ್ನು ಹೆಣೆಯುತ್ತಿದ್ದರು. ಇವರಿಗೂ ಕಲೆ ಕರಗತವಾಯಿತು. ಫ್ಯಾಕ್ಟರಿ ಕೆಲಸ ಮುಗಿಸಿ, ಮನೆಗೆ ಬಂದ ಮೇಲೆ ಬಿದಿರಿನ ಬುಟ್ಟಿ ಹೆಣೆಯುತ್ತಲಿದ್ದರು. ಚಿಕ್ಕಮಂಟಯ್ಯ ಅವರು ಟ್ಯಾಕ್ಸಿ ಓಡಿಸುತ್ತಾ ದೂರದೂರಿಗೆ ತೆರಳುತ್ತಿದ್ದರು. ನಿದ್ರೆ, ದಣಿವು ಯಾವುದನ್ನೂ ಲೆಕ್ಕಿಸದೆ ಜೀವನ ಸಾಗಿಸುತ್ತಿದ್ದರು. ಸುಸ್ತಾರಿಸಿಕೊಳ್ಳುವಷ್ಟು ವಿಶ್ರಾಂತಿಯೇ ಇರಲಿಲ್ಲ. ಮಕ್ಕಳಿಬ್ಬರೂ ಸರ್ಕಾರಿ ಕೆಲಸವನ್ನು ಪಡೆಯಬೇಕೆಂಬ ಕನಸು ಕೂಡಿಡುತ್ತಿದ್ದ ಈ ತಂದೆ, ಹೊಸ ನಿರ್ಧಾರಕ್ಕೆ ಬದ್ಧರಾದರು. ನಂಜನಗೂಡಿಗಿಂತ ಮೈಸೂರಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತದೆಂಬ ಭಾವ. ಒಂದು ದಿನ ಧೈರ್ಯದಿಂದ ಮಕ್ಕಳು ಮತ್ತು ಹೆಂಡತಿಯನ್ನು ಕರೆದುಕೊಂಡು ಬಂದರು. ಮೈಸೂರಿಗೆ ಹೊರಟುನಿಂತವರಿಗೆ ನಾಲ್ಕು ಜನರ ಹೊಟ್ಟೆ ತುಂಬಿಸಿಕೊಳ್ಳುವುದಷ್ಟೇ ಯೋಚನೆಯಾಗಿರಲಿಲ್ಲ.
ಇಬ್ಬರು ಮಕ್ಕಳ ಓದಿನ ಹೊಣೆಗಾರಿಕೆ ಬಗಲಲ್ಲಿ ಕಟ್ಟಿಕೊಂಡೇ ಮೈಸೂರಿಗೆ ಕಾಲಿಟ್ಟರು. ಮೈಸೂರಿಗೆ ಬಂದ ಮೇಲೂ ನಾಲ್ವರ ಬದುಕು ಆಶ್ರಯಿಸಿದ್ದು, ಟ್ಯಾಕ್ಸಿಯನ್ನೇ. ತಮಿಳುನಾಡು, ಕೇರಳ ಸೇರಿದಂತೆ ಬಹುತೇಕ ಕಡೆಗಳಿಗೆ ರಾತ್ರಿಯ ಅವಽಯಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಹಾಗೆ ಹೋದವರು ಮನೆಗೆ ಬರುವಾಗ ಒಂದು ವಾರವೊ, ಹತ್ತು ದಿನಗಳೊ ಕಳೆದಿರುತ್ತಿತ್ತು. ಮಕ್ಕಳ ಜೊತೆಗಿನ ಮಾತಿರಲಿ, ದಣಿದ ಕಣ್ಣಿಗೆ ವಿಶ್ರಾಂತಿಯೂ ಸಿಗದಷ್ಟರ ಮಟ್ಟಿಗೆ ಕೆಲಸ ಬಿಗುವಾಗಿತ್ತು. ಇದೆಲ್ಲದರ ನಡುವೆ ಜಯಲಕ್ಷ್ಮೀ ಅವರು ತಾನೊಂದಿಷ್ಟು ದುಡ್ಡು ಸಂಪಾದಿಸಿದರೆ ಖರ್ಚಿಗೆ ಸರಿಹೊಂದುತ್ತದೆಂದು ಬಿದಿರಿನ ಕಾಯಕಕ್ಕೆ ಕೈಹಾಕಿದರು. ಇಂತಹ ಕೆಲಸದ ಒತ್ತಡದಲ್ಲಿ ಚಿಕ್ಕಮಂಟಯ್ಯ ಅವರಿಗೆ ತಲೆನೋವು ಕಾಣಿಸಿಕೊಂಡಿತು. ವೈದ್ಯರ ಬಳಿ ಹೋಗುವಷ್ಟು ಸಮಯವಿರಲಿಲ್ಲ.
ಒಮ್ಮೆ ಮಧ್ಯರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಮನೆಗೆ ಬಂದವರಿಗೆ ಇದ್ದಕ್ಕಿದ್ದಂತೆ ಲಕ್ವ ಹೊಡೆಯಿತು. ಕೈ ಕಾಲುಗಳ ಸ್ವಾಽನ ತಪ್ಪಿ ನೆಲದ ಮೇಲೆ ಬಿದ್ದಾಗ, ಜಯಲಕ್ಷ್ಮೀ ಅವರಿಗೆ ಏನು ಮಾಡುವುದೆಂದು ತೋಚದಾಯಿತು. ನಾಲಿಗೆಯನ್ನು ಹಲ್ಲಿನಿಂದ ಕಚ್ಚಿಹಿಡಿದ ಕಾರಣಕ್ಕಾಗಿ ರಕ್ತ ಒಸರುತ್ತಲಿತ್ತು. ನಾಲಿಗೆ ಬಿಡಿಸಬೇಕೆಂದು ಗಡಿಬಿಡಿಯಲ್ಲಿ ಕೈ ಬೆರಳುಗಳನ್ನು ಹಾಕಿದರು. ತಕ್ಷಣ ಬೆರಳುಗಳನ್ನೂ ಕಚ್ಚಿಹಿಡಿದರು. ಜೀವ ಹೋದಂತೆ ಹೆಂಡತಿ ಬೊಬ್ಬಿಡುತ್ತಿದ್ದರೆ, ಇತ್ತ ಚಿಕ್ಕಮಂಟಯ್ಯ ಅವರು ವಿಚಿತ್ರ ಯಾತನೆಯಿಂದ ಕುಸಿದುಬಿದ್ದಿದ್ದರು. ಎಷ್ಟು ಹೊತ್ತಾದರೂ ಪ್ರಜ್ಞೆ ಬರಲೇಇಲ್ಲ. ತಡಮಾಡದೆ ಆಸ್ಪತ್ರೆಗೆ ಸೇರಿಸಿದ್ದಾಯಿತು. ಅವರಿವರಲ್ಲಿ ಕೇಳಿ ಎಂಟು ಸಾವಿರ ಹೊಂದಿಸಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದರು. ‘ನಮ್ಮ ಕೈ ಮೀರಿ ಪ್ರಯತ್ನಿಸಿದ್ದೇವೆ. ನೀವು ಒಪ್ಪಿ, ಸಹಿ ಹಾಕಿದರೆ ಮುಂದುವರಿಯಬಹುದು. ಆದರೆ ಮೊದಲಿನಂತಾಗುತ್ತಾರೆಂದು ಗ್ಯಾರಂಟಿ ಇಲ್ಲ’ ಎಂದು ವೈದ್ಯರು ಹೇಳುವ ಹೊತ್ತಿಗೆ ತಿಂಗಳು ಕಳೆದಿತ್ತು. ಒಂದು ತಿಂಗಳಿಡೀ ಐ. ಸಿ. ಯು.
ನಲ್ಲಿದ್ದ ತನ್ನ ಗಂಡನನ್ನು ಜಯಲಕ್ಷ್ಮಿಮಗುವಿನಂತೆ ನೋಡಿಕೊಂಡಿದ್ದರು. ನಂತರ ಇವರನ್ನು ವಾರ್ಡಿಗೆ ಸೇರಿಸಲಾಯಿತು. ದುರಂತವೆಂದರೆ ಕಣ್ಣಿನ ದೃಷ್ಟಿ ಹೋಗಿರಬಹುದು ಎಂಬ ಸುಳಿವು ಸಿಕ್ಕಿರಲಿಲ್ಲ. ಮನೆಗೆ ಕರೆದುಕೊಂಡು ಬಂದ ಮೇಲಷ್ಟೇ ಸತ್ಯ ಅರಿವಾಗಿದ್ದು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಬೇಕೆಂದರು. ಅಲ್ಲಿಗೆ ಹೋದರೆ, ‘ಬೆನ್ನಿನ ನರದಲ್ಲಿ ನೀರು ತುಂಬಿದೆ. ಒಂದು ವಾರದ ಮಟ್ಟಿಗೆ ಇಲ್ಲೇ ಅಡ್ಮಿಟ್ ಆಗ್ಬೇಕು. ಸರಿ ಹೋಗ್ಬಹುದು’ ಎಂದರು. ವೈದ್ಯರ ಮಾತುಗಳಲ್ಲಿ ಭರವಸೆ ಕಂಡಿತು. ಗಂಡನ ಕಣ್ಣಿನ ದೃಷ್ಟಿ ಮರಳುತ್ತದೆಂಬ ನಿರಾಳತೆ ಮೂಡಿತ್ತು. ಮೂರು ದಿನಗಳಾಗಿದ್ದಷ್ಟೇ, ಚಿಕ್ಕಮಂಟಯ್ಯ ಅವರಿಗೆ ಮತ್ತೆ ಲಕ್ವ ಹೊಡೆಯಿತು. ಕೈ ಕಾಲುಗಳನ್ನು ಎಳೆದಾಡಲಾರಂಭಿಸಿದರು. ತಕ್ಷಣ ವೈದ್ಯರಿಗೆ ತಿಳಿಸಿದರೆ, ದಿನಾಲೂ ಇಂಥವರನ್ನು ಕಂಡು ತಾತ್ಸಾರ ಭಾವನೆ ಅವರಿಗೆ.
‘ಡಾಕ್ಟರ್ ಇಲ್ಲಮ್ಮಾ. ಬಂದು ನೋಡ್ತಾರೆ, ಸ್ವಲ್ಪ ಕಾಯ್ಬೇಕು’ ಎಂದರು. ಮಾತಿಗೆ ಪ್ರತಿಕ್ರಿಯಿಸಲೂ ಸಾಧ್ಯವಾಗದೆ, ಗಂಡನಲ್ಲಿ ಓಡಿಬಂದರು. ಒಂದೆಡೆ ಕೈಕಾಲುಗಳನ್ನು ಎಳೆದಾಡುತ್ತಾ ನರಳುತ್ತಿರುವ ದೇಹ, ಇನ್ನೊಂದೆಡೆ ಗಂಡನ ದೇಹಭಾರವನ್ನು ಎತ್ತಲಾರದ ಸಂಕಟ! ಚಿಕ್ಕ ಆಪರೇಷನ್ ಮಾಡಿಸಿಕೊಂಡು, ಮೈಸೂರಿಗೆ ವಾಪಸಾದ ನೆನಪುಗಳನ್ನು ಇವತ್ತಿಗೂ ನೆನೆವಾಗ ಜಯಲಕ್ಷ್ಮೀ ಅವರು ಆರ್ದ್ರರಾಗುತ್ತಾರೆ. ಮೂರು ಲಕ್ಷದಷ್ಟು ಆಗಿದ್ದ ಸಾಲದ ಹೊರೆಯನ್ನು ನಿಭಾಯಿಸುವುದಕ್ಕೆ ತಾಯಿಯೊಂದಿಗೆ ಮಕ್ಕಳೂ ಜೊತೆಯಾದರು. ಪೊಲೀಸ್ ಕೆಲಸಕ್ಕೆ ಸೇರಿಸಬೇಕೆಂದಿದ್ದ ಮಗಳು ತನ್ನ ಸಲುವಾಗಿ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದಾಳೆಂಬುದು ಚಿಕ್ಕಮಂಟಯ್ಯ ಅವರ ನಿತ್ಯ ಕೊರಗು. ಹತ್ತನೇ ತರಗತಿ ಓದುತ್ತಿದ್ದ ಮಗ ತಂದೆಯನ್ನು ನೋಡಿಕೊಳ್ಳುತ್ತೇನೆಂದು ಅರ್ಧಕ್ಕೆ ಓದು ನಿಲ್ಲಿಸಿದ. ಸುಧಾರಿಸಿಕೊಳ್ಳುವುದಕ್ಕೆ ವರ್ಷವೇ ಕಳೆಯಿತು. ಆದರೇನು ಬದುಕುವುದು ಅನಿವಾರ್ಯ.
ದೈಹಿಕ, ಮಾನಸಿಕ ನೋವನ್ನು ಮರೆತು ದುಡಿಯಲೇಬೇಕಿತ್ತು. ಹೆಂಡತಿಯೊಂದಿಗೆ ಬಿದಿರಿನಿಂದ ಹೆಣೆದ ವಸ್ತುಗಳನ್ನು ಮಾರುವುದಕ್ಕೆ ಹೊರಟರು. ಗೊಬ್ಳಿ ಮರದ ಬಳಿ ಬುಟ್ಟಿಗಳನ್ನು ರಾಶಿ ಹಾಕಿಕೊಂಡು ಮಾರಲು ತೊಡಗಿದಾಗ, ಮೊದಮೊದಲು ಬಗ್ಗಿಕೊಂಡೇ ದಿನವಿಡೀ ಕೂತಿರುತ್ತಿದ್ದರು. ಕೆಲ ದಿನಗಳು ಕಳೆದ ಮೇಲೆ ಒಂದಷ್ಟು ಜನರ ಪರಿಚಯವಾಯಿತು. ಹೀಗೆ ಪರಿಚಯವಾದ ಅಶ್ವತ್ಥ ನಾರಾಯಣ ಎಂಬುವರೊಬ್ಬರು, ಆದ ಘಟನೆಯನ್ನು ನೆನೆಯುತ್ತಾ ಕೂರುವ ಬದಲು, ಸುತ್ತಲ ಜಗತ್ತಿನ ಆಗುಹೋಗುಗಳನ್ನು ತಿಳಿಯಬಹುದಲ್ಲಾ ಎಂದು ಸಲಹೆ ಕೊಟ್ಟರು. ಅವರಿಂದಲೇ ಚಿಕ್ಕಮಂಟಯ್ಯ ಅವರು ಆಕಾಶವಾಣಿಯನ್ನು ಕೇಳುವುದಕ್ಕೆ ಶುರುವಿಟ್ಟರು. ಆಕಾಶವಾಣಿಯ ಆರಂಭಿಕ ಧ್ವನಿಯಿಂದ ಇವರ ದಿನಚರಿ ಆರಂಭವಾಗುತ್ತದೆ. ಸಂಸ್ಕ ತ ವಾರ್ತೆ ಬರುವ ಹೊತ್ತಿಗೆ ತಮ್ಮ ಕಾಯಕದ ಜಾಗವನ್ನು ತಲುಪಿರುತ್ತಾರೆ. ಸಂಜೆಯ ಕನ್ನಡ ವಾರ್ತೆಗೆ ಸರಿಯಾಗಿ ಕೆಲಸ ಮುಗಿಸಿ, ಮನೆಗೆ ಹೊರಡುತ್ತಾರೆ. ಆಕಾಶವಾಣಿಯ ಕಾರ್ಯಕ್ರಮಗಳಿಗೆ ಅನುಗುಣವಾಗಿ ಬದುಕನ್ನು ಹೊಂದಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಆರೋಗ್ಯ ಕಾರ್ಯಕ್ರಮದಲ್ಲಿ ಕೇಳಿದ್ದ ದೃಷ್ಟಿ ಕಳೆದುಕೊಂಡವರು ಧೃತಿಗೆಡಬಾರದೆಂಬ ಮಾತು ಇವರ ಜೀವನ ಸೂತ್ರವಾಗಿದೆ. ಆಕಾಶವಾಣಿಗೆ ಇವರು ತೋರುವ ಕೇಳುಪ್ರೀತಿಗೆ ಶರಣೆನ್ನಬೇಕು. ಎಷ್ಟು ತದೇಕಚಿತ್ತರಾಗಿ ಕೇಳುತ್ತಾರೆಂದರೆ, ಮಧ್ಯಾಹ್ನ ಪ್ರಸಾರವಾಗುವ ಸಂದೇಶಾಧಾರಿತ ಕಾರ್ಯಕ್ರಮದಲ್ಲಿ ಹಿಂದಿನ ದಿನದ ಹಾಡುಗಳನ್ನೇ ಅಕಸ್ಮಾತಾಗಿ ಪುನಃ ಪ್ರಸಾರ ಮಾಡಿದ ಕೂಡಲೇ ತಿಳಿಯುತ್ತದೆ. ಅದರಲ್ಲೂ ಸಂದೇಶ ಕಳುಹಿಸಿದವರ ಹೆಸರು, ಊರನ್ನೂ ಉಲ್ಲೇಖಿಸುವಷ್ಟರ ಮಟ್ಟಿಗೆ ಇವರ ನೆನಪು ಚುರುಕಾಗಿದೆ. ಆರಂಭದ ದಿನಗಳಲ್ಲಿ ಜಯಲಕ್ಷ್ಮೀ ಅವರು ಬೆಳಿಗ್ಗೆ ಒಂದಷ್ಟು ಹೊತ್ತು ಜೊತೆಗಿದ್ದು, ಬಿದಿರಿನ ಬುಟ್ಟಿ ಹೆಣೆದು ನಂತರ ಮನೆಗೆಲಸಕ್ಕೆ ಹೊರಡುತ್ತಿದ್ದರು. ಆಮೇಲಿನ ವ್ಯಾಪಾರದ ಜವಾಬ್ದಾರಿ ಇವರದ್ದೇ. ಬಿಸಿಲು, ಮಳೆಯ ನಡುವೆ ಹಾಗೇ ಕೂತಿರುತ್ತಿದ್ದುದ್ದನ್ನು ಕಂಡ ವಿದ್ಯಾರಣ್ಯಪುರಂನ ಚಿನ್ನಮ್ಮಣ್ಣಿ ಅವರು ಟಾರ್ಪಲ್ ವ್ಯವಸ್ಥೆ ಮಾಡಿಕೊಟ್ಟರು. ವೈದ್ಯರೊಬ್ಬರನ್ನು ಗುಡಿಸಲು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಿದ್ದೂ ಇದೆ. ಬದುಕಿಗೆ ಒದಗಿಬಂದ ಇವರೆಲ್ಲರನ್ನು ಚಿಕ್ಕಮಂಟಯ್ಯ ಅವರು ಕೃತಜ್ಞತೆಯಿಂದ ನೆನೆಯುತ್ತಾರೆ. ಸಾವಿನ ಕದ ತಟ್ಟಿದ ಇನ್ನೊಂದು ಘಟನೆಯಿದೆ.
ಯಾವ ಮರದ ಕೆಳಗೆ ಕೂತು ವ್ಯಾಪಾರ ಮಾಡುತ್ತಿದ್ದರೋ, ಆ ಮರ ಜೋರು ಗಾಳಿಮಳೆಗೆ ಮುರಿದುಬಿತ್ತು. ಕೂದಲೆಳೆಯ ಅಂತರದಿಂದ ಜೀವ ಉಳಿಯಿತು. ನಂತರ ಖಾಸಗಿ ಬ್ಯಾಂಕಿನ ಎದುರು ವ್ಯಾಪಾರವನ್ನು ಆರಂಭಿಸಿದರು. ಇಂದಿಗೂ ಬೆಳಿಗ್ಗೆ ಏಳರಿಂದ ಸಂಜೆ ಏಳರವರೆಗೆ ಅಲ್ಲೇ ಕೂತು, ಬಿದಿರಿನ ಬುಟ್ಟಿಗಳನ್ನು ಮಾರುತ್ತಾರೆ. ಚಿಕ್ಕಮಂಟಯ್ಯ ಅವರು ಆಸರೆಗೊಂದು ಕೋಲನ್ನು ಹಿಡಿದು ಯಾವ ಕಡೆಗಾದರೂ ಸೈ, ಒಬ್ಬರೇ ಹೋಗುತ್ತಾರೆ. ವ್ಯಾಪಾರದಲ್ಲೂ ಪಾದರಸದಷ್ಟೇ ಚುರುಕು. ಕೊಂಡ ಸಾಮಾನಿನ ಬೆಲೆ ಎಷ್ಟಾಯಿತೆಂದು ಗ್ರಾಹಕರು ಕ್ಯಾಲ್ಕುಲೆಟರ್‌ನಲ್ಲಿ ಎಣಿಸುತ್ತಿದ್ದರೆ, ಇವರು ಹೇಳಿ ನಿಮಿಷ ಕಳೆದಿರುತ್ತದೆ. ಈ ಲೆಕ್ಕಾಚಾರದ ವೇಗವನ್ನು ಕಂಡು ಆಶ್ಚರ್ಯದಿಂದ ಹುಬ್ಬೇರಿಸಿದವರು ಅನೇಕರಿದ್ದಾರೆ. ಬೆಳಿಗ್ಗೆ ಏಳರಿಂದ ಎಂಟೂವರೆಯವರೆಗೆ ಜಯಲಕ್ಷ್ಮೀ ಅವರು ಸಾಧ್ಯವಾದಷ್ಟು ಬಿದಿರಿನ ಬುಟ್ಟಿಗಳನ್ನು ಹೆಣೆದಿಟ್ಟು, ಗಾರ್ಮೆಂಟ್ಸ್ ಕೆಲಸಕ್ಕೆ ಹೊರಡುತ್ತಾರೆ. ಬಿಡುವಿನ ದಿನಗಳಲ್ಲಿ ಮಾತ್ರ ಗಂಡನೊಂದಿಗೆ ವ್ಯಾಪಾರಕ್ಕೆ ಕೂರುತ್ತಾರೆ. ಮೈಸೂರಿನ ಜನರು ಯಾವತ್ತೂ ಮೋಸ ಮಾಡಿದ್ದಿಲ್ಲವೆಂದು, ನಮ್ಮ ಕಾಯಕಕ್ಕೆ ಕೈಜೋಡಿಸಿದ್ದಾರೆಂದು ಚಿಕ್ಕಮಂಟಯ್ಯ ಖುಷಿಯಿಂದಲೇ ಹೇಳುತ್ತಾರೆ.