ಕೀರ್ತಿ ಬೈಂದೂರು
ಅತ್ತ ಇನ್ಛೋಸಿಸ್ ಕಂಪೆನಿಯ ಬೃಹತ್ ಕಟ್ಟಡ, ಇತ್ತ ನೋಡಿದರೆ ಚಳಿ ಗಾಳಿಗೆ ತತ್ತರಿಸುವ ಟಾರ್ಪಾಲಿನ ಸೂರು. ಮರದ ಟೊಂಗೆಯ ಜೋಲಿಯಲ್ಲಿ ಮಲಗಿಸಿದ್ದ ಮಗು, ಹುಲ್ಲು ಮೇಯುತ್ತಿರುವ ಕತ್ತೆಗಳು, ಕತ್ತೆ ಹಾಲನ್ನು ಕೇಳಿಕೊಂಡು ಯಾರಾದರೂ ಬರುತ್ತಾರೆಯೇ ಎಂದು ದಾರಿ ಕಡೆಗೆ ಕಣ್ಣಾಯಿಸುತ್ತಾ ಒಡ್ಡ ಸಮುದಾಯದವರೆಲ್ಲ ತಮ್ಮಷ್ಟಕ್ಕೆ ಕೆಲಸ ಮಾಡಿಕೊಳ್ಳುತ್ತಿದ್ದರು. ಬಂಡೆ ಒಡೆಯುವುದು ಕುಲ ಕಸುಬಾದರೂ ಬೇಸಿಗೆಯಲ್ಲಿ ಊರಿಗೆ ಹೋದಾಗ ಹೊಟ್ಟೆ ಖರ್ಚಿಗೆಂದು ಮಾಡುವುದು ತಾತ್ಕಾಲಿಕ ಉದ್ಯೋಗ ಮಾತ್ರ. ಬದುಕಿರುವಷ್ಟೂ ದಿನ ಕತ್ತೆ ಹಾಲನ್ನು ಮಾರುವುದೇ ಖಾಯಂ ಕಾಯಕ ಎಂದು ನಂಬಿದವರಿವರು. ಈಗ ಹೇಳಹೊರಟಿರುವುದು, ಅಜ್ಜ ಮುತ್ತಜ್ಜಂದಿರ ಕಾಲದಿಂದಲೂ ಕತ್ತೆ ಹಾಲು ಮಾರುತ್ತಾ ಬಂದ ಒಡ್ಡ ಸಮುದಾಯ ಮತ್ತು ಸಮಾಜದ ವೈರುಧ್ಯದ ಕತೆ!
ಮೂಲತಃ ಮಹಾರಾಷ್ಟ್ರ ಗಡಿಯ ನಾಂದೇಡಿನವರಾದ ಕಲ್ಲು ಒಡೆಯುವ ಜನಾಂಗಕ್ಕೆ ಸೇರಿದ ಇವರೆಲ್ಲ ವರ್ಷಕ್ಕೆ ಎರಡು ಬಾರಿಯಾದರೂ ಮೈಸೂರಿಗೆ ಬರುತ್ತಾರೆ. ಈ ಮೊದಲು ನಾರಾಯಣ ಆಸ್ಪತ್ರೆಯ ಪಕ್ಕದಲ್ಲಿ ಬಿಡಾರ ಹೂಡಿದ್ದರು. ಎರಡು ವಾರ ಕಳೆಯುತ್ತಿದ್ದಂತೆ ಬಂದಿದ್ದೇ ಹೆಬ್ಬಾಳದೆಡೆಗೆ. ಈ ಜಾಗ, ವಾಸವೆಲ್ಲ ಇವರಿಗೆ ಹೊಸತೇನೂ ಅಲ್ಲ. ದಶಕಗಳಿಂದಲೂ ಟಾರ್ಪಾಲ್‌ನಲ್ಲಿ ಟೆಂಟ್ ಕಟ್ಟಿಕೊಳ್ಳುವ ಅನುಭವಿಗಳು. ಬರೀ ಮೈಸೂರು ಮಾತ್ರವಲ್ಲ ಬೆಂಗಳೂರು, ಹಾಸನ, ಮಂಡ್ಯ, ಚಿತ್ರದುರ್ಗದ ಊರುಗಳಲ್ಲೂ ಕತ್ತೆ ಹಾಲು ಮಾರುತ್ತಾ ಓಡಾಡಿದ್ದಾರೆ.ಬೇಸಿಗೆ ಕಾಲ ಬಂದಾಗ ಮಾತ್ರ ಸವಾರಿ ಊರೆಡೆಗೆ. ಮನೆ – ಮಕ್ಕಳೊಂದಿಗೆ ಸಂಭ್ರಮಿಸುವ ಭಾಗ್ಯ ಉಂಟೇ! ‘ನಮಗಿಲ್ಲಿ ಬರೆದಿಲ್ಲ’ ಎಂದು ಲೀಲಮ್ಮ ಹಣೆ ತೋರಿಸುತ್ತಾರೆ. ಸಮುದಾಯದ ಗಂಡಸರು ಬಂಡೆ ಒಡೆಯುತ್ತಾ, ಹೆಂಗಸರು ಹೊಲದ ಕೆಲಸಕ್ಕೆಂದು ಹೊರಡುವುದು, ಈ ಕುಟುಂಬ ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದ ರೂಢಿ. ಗಂಡಸರಿಗೆ ಇನ್ನೂರೈವತ್ತು ರೂಪಾಯಿ ಕೂಲಿ ನೀಡಿದರೆ, ಹೆಂಗಸರಿಗೆ ನೂರೈವತ್ತು ರೂಪಾಯಿ. ಓದಿ ಉದ್ಯೋಗದಲ್ಲಿದ್ದವರು ಯಾರಾದರೂ ಇದ್ದಾರಾ ಕೇಳಿದರೆ, ‘ಒಬ್ಬರೂ ಇಲ್ಲ’!
ಕತ್ತೆ ಹಾಲಿನ ಉಪಯೋಗದ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಹೆಸರು ಕೇಳಿದ ತಕ್ಷಣ ಮೂಗು ಮುರಿಯುವವರೇ ಹೆಚ್ಚು. ಎಳೆಯ ಮಕ್ಕಳಿಂದ ಹಿರಿಯರವರೆಗೆ ಸೇವಿಸಬಹುದಾದ ಈ ಹಾಲಿನಲ್ಲಿರುವ ಔಷಧಿಯ ಗುಣದ ಬಗ್ಗೆ ಅರಿತವರು ಕಡಿಮೆ. ತೀರಾ ಅಪರೂಪವಾಗಿ ಸಿಗುವ ಈ ಹಾಲಿನಲ್ಲಿ ಹಲವು ಬಗೆಯ ಪೋಷಕಾಂಶಗಳು ಸೇರಿವೆ. ಅದಕ್ಕೆಂದೆ ಸೌಂಡ್ ಬಾಕ್ಸ್ ಎದುರಿಗಿಟ್ಟುಕೊಂಡು, ‘ಹಾಲು ಮಾರಾಕ್ ಬಂದವ್ರೆ ಕತ್ತೆ ಹಾಲ್. ಸಣ್ಣೋರ್ಕಿ ಒಳ್ಳೇದ್ರಿ ಅಕ್ಕ, ಕತ್ತೆ ಹಾಲ್ ಕುಡಿಸ್ರಿ. ಕೆಮ್ಮು ಬರಲ್ಲ ದಮ್ಮು ಬರಲ್ಲ. ಕತ್ತೆ ಹಾಲು… ವಾಯು ಬರಲ್ಲ ವಾತ ಬರಲ್ಲ, ಮಂಡಿ ನೋವ್ ಇರಲ್ಲ, ನಡ ನೋವ್ ಇರಲ್ಲ ಕತ್ತೆ ಹಾಲು ಕುಡಿಸಲಕ್ಕ, ಕತ್ತೆ ಹಾಲು’ ಎಂದು ಮೈಕ್‌ನಲ್ಲಿ ಸಾರುತ್ತಾ ಮನೆಮನೆಗೆ ಹೋಗುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ಕತ್ತೆ ಹಾಲನ್ನು ಕುಡಿಸಿದರೆ ಒಳ್ಳೆಯದೆಂದು ಹೇಳುತ್ತಾರೆ. ಹಸಿವನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಶಕ್ತಿ ಈ ಹಾಲಿಗಿದೆ.
ದುಡ್ಡಿನ ಅಗತ್ಯವಿದ್ದಾಗ ಸಾಲ ತೆಗೆದುಕೊಳ್ಳುವುದು ಸುಲಭವಾಗಿಲ್ಲ.ಶ್ಯೂರಿಟಿ ಇಡುವುದಕ್ಕೆ ಯಾವ ಪತ್ರವಾಗಲೀ ಒಡವೆಯಾಗಲೀ ಇಲ್ಲದ ಕಾರಣ ಬ್ಯಾಂಕಿನಿಂದ ಸಾಲ ಪಡೆಯುವುದು ಇವರ ಪಾಲಿಗೆ ಗಗನ ಕುಸುಮವೇ ಸರಿ. ಅದಕ್ಕಾಗಿ ದಲ್ಲಾಳಿಗಳ ಬಳಿ ತಿಂಗಳಿಗೆ ನಾಲ್ಕು ಶೇಕಡಾ ಬಡ್ಡಿ ಪಾವತಿಸುವುದಾದರೂ ಪರವಾಗಿಲ್ಲ ಎಂದು ಹಣ ಪಡೆಯುತ್ತಾರೆ. ದಿನದ ದುಡಿಮೆ ಹೆಚ್ಚೆಂದರೆ ಮುನ್ನೂರು ರೂಪಾಯಿ. ಊಟದ ಸಲುವಾಗಿ ಇನ್ನೂರು ರೂಪಾಯಿ ಖರ್ಚಾಗುತ್ತದೆ. ಇನ್ನು ಉಳಿತಾಯದ ಮಾತೆಲ್ಲಿ! ಅಲ್ಪ ಸ್ವಲ್ಪ ದುಡ್ಡು ಉಳಿಸುತ್ತಿದ್ದರೆ ಇದಕ್ಕೇ ಸಲ್ಲುತ್ತದೆ. ದುಡಿಮೆ ಕೈಗೆಟುಕಿದರೆ ಸಾಲ ತೀರುತ್ತದಷ್ಟೇ. ಇಲ್ಲದಿದ್ದರೆ ಕಂತಿಗೆ ಅನುಗುಣವಾಗಿ ಬಡ್ಡಿ ಕಟ್ಟಲಾಗುವುದಿಲ್ಲ; ಅಸಲೂ ತೀರುವುದಿಲ್ಲ.
ಅಂದಹಾಗೆ, ಕತ್ತೆಯನ್ನು ಸೋಲಾಪುರದಿಂದಲೇ ತರುತ್ತಾರೆ. ಎಪ್ಪತ್ತು ಎಂಬತ್ತು ಸಾವಿರದಷ್ಟು ದುಡ್ಡಿನಲ್ಲಿ ಕತ್ತೆಗಳನ್ನು ತರುವುದು ಒಂದು ಹಂತ. ಅದಾದ ಮೇಲೆ ಟೆಂಪೊ ಬಾಡಿಗೆಯೆಂದು ಇಪ್ಪತ್ತು ಸಾವಿರ ಕೊಡಬೇಕು. ಈವರೆಗೂ ಒಟ್ಟು ಆರು ಕತ್ತೆ ಹಾಗೂ ಆರು ಮರಿ ಕತ್ತೆಗಳಿವೆ. ಸಾಮಾನ್ಯವಾಗಿ ಸಾಕಿದ ಪ್ರಾಣಿಗಳಿಗೆಲ್ಲ ಭಿನ್ನ ಹೆಸರಿಡುತ್ತೇವೆ. ವೈವಿಧ್ಯಮಯ ಹೆಸರಿರುವ ಕತ್ತೆಗಳಿರಬಹುದೆಂದು ಕುತೂಹಲದಲ್ಲೇ ‘ಕತ್ತೆಗೇನು ಹೆಸರಿಟ್ಟಿದ್ದೀರಿ?’ ಎಂದರೆ ‘ಲಕ್ಷ್ಮಿ’. ಮತ್ತೆ ಆ ಕತ್ತೆಗೆ? ಅದೂ ಲಕ್ಷ್ಮಿ. ಅದರಾಚೆ ಸುಸ್ತಾಗಿ ಕೂತಿದ್ದ ಕತ್ತೆಗೂ ಲಕ್ಷ್ಮಿ ಎಂದೇ ಹೆಸರು! ಎಲ್ಲದಕ್ಕೂ ಒಂದೇ ಹೆಸರಾ? ಅಚ್ಚರಿಯೆನಿಸಿ ಕೇಳಿದರೆ, ‘ನಮಕ್ಕೆ ಲಕ್ಷ್ಮಿತಂದುಕೊಡೋದು ಇದೇ. ಒಂದೇ ಹೆಸರು ಅದಕ್ಕೆ’.
ಇನ್ನೇನು ಸಂಜೆ ಸರಿದು ಕತ್ತಲಾಗುತ್ತಿತ್ತು. ಪ್ರತೀ ರಾತ್ರಿಯ ಊಟಕ್ಕೆ ಜೋಳದ ರೊಟ್ಟಿ, ಭಾನುವಾರದಂದು ಕೋಳಿ ಪದಾರ್ಥ ಮಾಡುವುದು ವಿಶೇಷ. ಪಕ್ಕದ ಬಿಡಾರದಲ್ಲಿದ್ದ ಪೂಜಾಮ್ಮ ಆಗಲೇ ಬೆಂಕಿ ಹೊತ್ತಿಸಿ, ಚಪಾತಿ ಮಾಡುತ್ತಿದ್ದರು. ಅಚ್ಚರಿಯಿಂದ ಕಣ್ಣಾಯಿಸಿದರೆ, ‘ಇದು ನನಗೆ’ ಎಂದರು. ಗಂಡನಿಗೆಂದು ಜೋಳದ ರೊಟ್ಟಿಯ ಹಿಟ್ಟನ್ನು ನಾದುತ್ತಿದ್ದರು. ಈ ಚಪಾತಿಯ ಹಿಂದೆ ಉಳಿತಾಯದ ಕತೆಯಿದೆ. ಅರ್ಧ ಕೆಜಿ ಜೋಳದ ಹಿಟ್ಟಿಗೆ ೬೭ ರೂಪಾಯಿ. ಮೂರೇ ದಿನಕ್ಕೆ ಹಿಟ್ಟು ಖಾಲಿ. ಹೊಟ್ಟೆಯ ಹಸಿವಿಗೆ ರೊಟ್ಟಿಯೊ, ಚಪಾತಿಯೊ ಸಿಕ್ಕರೆ ಸಾಕು ಎಂಬುದರಲ್ಲೇ ತೃಪ್ತಿಪಟ್ಟಿದ್ದರು. ಹೀಗಿರುವಾಗ ೬೦ ರೂಪಾಯಿ ಅಂತಿದ್ದ ಜೋಳದ ಹಿಟ್ಟಿನ ಪ್ಯಾಕೆಟಿಗೆ ಏಳು ರೂಪಾಯಿ ಹೆಚ್ಚಿಗೆ ಕೇಳಿದ್ದ ಅಂಗಡಿಯವರ ಮೋಸದ ಪರಮಾವಽಗೆ ಏನೆನ್ನಬೇಕು! ಅವರನ್ನು ಎಚ್ಚರಿಸುವ ಭರದಲ್ಲಿ, ‘ಇನ್ಮೇಲಾದ್ರೂ ನೀವು ನೋಡ್ಕೊಂಡು ತರ್ಬೇಕು’ ಎಂದೆ. ‘ಇಸ್ಕೂಲಿಗೆ ಹೋಗಿಲ್ಲಲಾ, ಅದ್ಕೆ ಓದಕೇನೂ ಬರಲ್ಲ’ ಎಂದು ಶಾಂತವಾಗಿ ನುಡಿದರು!
ಎರಡು ಗಂಟೆಗೆ ಎದ್ದು, ಕತ್ತೆ ಹಾಲನ್ನು ಕರೆಯಲು ಕೂರುತ್ತಾರೆ. ಅಬ್ಬಬ್ಬಾ ಎಂದರೆ ಮುಕ್ಕಾಲು ಲೀಟರ್ ಹಾಲು ಮಾತ್ರ ಸಿಗಬಹುದಷ್ಟೆ. ಐದೂವರೆಗೆ ಮಾರಾಟಕ್ಕೆಂದು ಹೊರಟವರ ಕಾಲಿಗೆ ಕಟ್ಟಿದ ಚಕ್ರ ಊರಿಡೀ ಸುತ್ತಿ, ಬಿಡಾರಕ್ಕೆ ಬರುವಾಗ ಎರಡು ಗಂಟೆ. ತಲೆಸುಡುವ ಮಧ್ಯಾಹ್ನದ ಬಿಸಿಲು ಸುಸ್ತು ಬಡಿಸಿರುತ್ತದೆ! ಇಪ್ಪತ್ತೈದರಿಂದ ಮೂವತ್ತು ಕಿಲೋಮೀಟರ್ ನಡೆಯುವುದೆಂದರೇನು ಸಾಮಾನ್ಯವೇ? ಬದುಕನ್ನು ಸಂಭಾಳಿಸಬೇಕಾದ ಅನಿವಾರ್ಯತೆಯದು. ಹಾಗಾಗಿ ಬೆಳಗಿನ ಹೊತ್ತಿನಲ್ಲಿ ಯಾರೊಂದಿಗೆ ಮಾತಿಗೂ ನಿಲ್ಲುವುದಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು. ಐದೈದು ನಿಮಿಷಕ್ಕೂ ಒಂದೆಡೆಯಿಂದ ಇನ್ನೊಂದೆಡೆ. ಹಿಂಬಾಲಿಸಿ ಹೊರಟವರ ಕಾಲು ಗಟ್ಟಿಯಿದ್ದರೆ ಪುಣ್ಯ ನೋಡಿ. ಇಷ್ಟು ಗಟ್ಟಿಮುಟ್ಟಾಗಿರುವ ಇವರ ಆರೋಗ್ಯದ ಗುಟ್ಟೇ ಕತ್ತೆ ಹಾಲು.
ರುಕ್ಮಾಬಾಯಿ, ಸಾಂಬಾ, ಗಿರಿದಾಸ್, ಲಕ್ಷ್ಮಣ್, ಪೂಜಾ, ಭಾಗ್ಯ ಮುಂತಾದವರಿದ್ದ ಗುಂಪಿನಲ್ಲಿ ಗಂಗಾರಾಮ್ ಇದ್ದರು. ನೋಡುತ್ತಿದ್ದಂತೆ ಗ್ರಾಮೀಣ ಊರಿನ ಕಲ್ಪನೆ ಮೂಡಿತು. ಊರ ಹಿರಿಯನಾದವನ ವೇಷಭೂಷಣಗಳು ಹೀಗೆ ಇರಬೇಕು ಎಂದು ನಿರ್ದಿಷ್ಟವಾಗಿದ್ದ ಹಾಗೆ, ಗಂಗಾರಾಮ್ ಪಂಚೆಯನ್ನು ತೊಟ್ಟ ರೀತಿಯಲ್ಲೇ ಅವರು ವಿಶೇಷವೆನಿಸುತ್ತಿದ್ದರು. ಅಬ್ದುಲ್ ಖಾದಿರ್ ಜಿಲಾನಿ ಎಂಬ ಸೂಫಿ ಸಂತರಿಗೆ ಶರಣಾದ್ದರಿಂದ ಇದುವರೆಗೂ ಮದುವೆಯಾಗದೇ ಹಾಗೆ ಉಳಿದಿದ್ದಾರೆ. ಇದರಿಂದಾಗಿ ಬಿಜಾಪುರದ ದರ್ಗಾಕ್ಕೆ ಹೋಗಿ ನಮನ ಸಲ್ಲಿಸುತ್ತಾರೆ.
ಹಾಗೆಯೇ ವಧು ವರಾನ್ವೇಷಣೆಯೂ ಕೌಟುಂಬಿಕ ವ್ಯಾಪ್ತಿಯಲ್ಲಿ ನಡೆಯುತ್ತದೆ. ಹಾಗಾಗಿ ಅನ್ಯ ಸಮುದಾಯದವರೊಂದಿಗೆ ಯಾರೂ ಮದುವೆಯಾಗಿಲ್ಲ. ಕೆಲಸದ ನಡುವಿನ ಏಕತಾನತೆ ಸರಿಸಿಡಲು ಮನರಂಜನೆಯನ್ನೂ ಅವಲಂಬಿಸಿಲ್ಲ. ಲಂಬಾಣಿ ಭಾಷೆಯ ಕೆಲ ಪದಗಳನ್ನು ಹೆಂಗಸರು ಆಗಾಗ ಗುನುಗಿಕೊಳ್ಳುತ್ತಾರಷ್ಟೆ.
ಮೂರು ಕುಟುಂಬಗಳ ಸದಸ್ಯರಲ್ಲಿ ಲೀಲಮ್ಮ ಅವರದು ಚುರುಕಿನ ವ್ಯಕ್ತಿತ್ವ. ಹದಿನೈದು ವರ್ಷಗಳಿಂದ ಕರ್ನಾಟಕದ ತುಂಬ ಕತ್ತೆ ಹಾಲನ್ನು ಮಾರುತ್ತಾ ಬಂದ ಲೀಲಮ್ಮ ಕನ್ನಡ ಭಾಷೆಯನ್ನು ತಕ್ಕ ಮಟ್ಟಿಗೆ ಕಲಿತಿದ್ದಾರೆ. ಮರಾಠಿ, ಲಂಬಾಣಿ, ತೆಲುಗು ಭಾಷೆಗಳ ಜೊತೆಗೆ ಕನ್ನಡವನ್ನು ಮಾತನಾಡುವ ಸೊಗಸೇ ಬೇರೆ. ಭಾಷೆ ಕಲಿತರೆ ವ್ಯಾಪಾರಕ್ಕೆ ಉಪಯೋಗವಾಗುತ್ತದೆ ಎಂಬುದು ಇವರ ನಂಬಿಕೆ.
ಲೀಲಮ್ಮ ಆಧಾರ್ ಕಾರ್ಡ್ ತೋರಿಸುತ್ತಾ, ನಮಗೆ ಫ್ರೀ ಬಸ್ ಇಲ್ಲ. ಉಳಿದವರಿಗೆ ಸಿಗುವ ಹಾಗೆ ತಿಂಗಳಿಗೆ ಎರಡು ಸಾವಿರವೂ ಇಲ್ಲ ಎಂದಷ್ಟೇ ಹೇಳುತ್ತಿದ್ದರು. ಸಿಗಬೇಕಾದ ಮೂಲಭೂತ ಸೌಲಭ್ಯಕ್ಕಾಗಿ ಅಲೆಮಾರಿಗಳು ಪರದಾಡುತ್ತಿರುವುದು ಅರಣ್ಯ ರೋದನೆಯಂತಾಗಿದೆ. ಹೊರತಾಗಿ ಶಿಕ್ಷಣ, ಓದಿನ ಬಗ್ಗೆ ಅಷ್ಟಾಗಿ ಅರಿವಿಲ್ಲದ ಸಮುದಾಯವಿದು. ಸರ್ಕಾರ ನೀಡುವ ಯೋಜನೆಗಳ ಬಗ್ಗೆ, ಮೀಸಲಾತಿಗಳ ಕುರಿತೂ ತಿಳಿದುಕೊಂಡಿಲ್ಲ. ಕೆಲ ಮಕ್ಕಳು ಶಾಲೆಯ ಮೆಟ್ಟಿಲೇರುತ್ತಿದ್ದಾರೆ ಎನ್ನುವುದು ಸಮಾಧಾನದ ವಿಷಯವೇ. ಆದರೆ ಒಂದಿಷ್ಟು ಕೂಡಿ ಕಳೆವಷ್ಟು ಲೆಕ್ಕ ಕಲಿತ ಮೇಲೆ, ಮತ್ತೆ ಇದೇ ವೃತ್ತಿ. ಉದ್ಯೋಗ ಪಡೆದ ಮೊದಲ ತಲೆಮಾರು ಕಾಣಲು ಇನ್ನೆಷ್ಟು ಸಮಯ ಬೇಕೊ!
ಕೆಲವೊಂದು ಕಡೆಗಳಲ್ಲಿ ಬಿಡಾರ ಹೂಡಿದಾಗ ಜನರು ತಮಗಾದಷ್ಟು ದಿನಸಿ ವಸ್ತುಗಳನ್ನು ತಂದುಕೊಟ್ಟದನ್ನು, ಇತ್ತೀಚೆಗಷ್ಟೆ ಸೋಲಾರ್ ಲೈಟ್ ಬಳಸಿ ಎಂದು ಕೊಟ್ಟ ಕತೆಯನ್ನು ನೆನಪೆನ್ನುತ್ತಾರೆ. ಇನ್ನು ಹಲವರಂತೂ ರೆಕಾರ್ಡಿಂಗ್ ಮಾಡಿಕೊಂಡು, ಸುದ್ದಿಗೆ ಬೇಕಾದಷ್ಟು ವಿಷಯವನ್ನು ಸಂಗ್ರಹಿಸಿ ಕಾಲುಕೀಳುತ್ತಾರೆ. ‘ಅವರಿಂದ ನಮಗೇನೂ ಉಪಯೋಗವಾಗಿಲ್ಲ’ ಎಂದ ನುಡಿ ಬೇಸತ್ತಿದ್ದರೆಂದು ಸಂಕೇತಿಸುತ್ತಿತ್ತು.
ಸದ್ಯ ಮೈಸೂರಿನ ಕೆಲ ಕಡೆಗಳಲ್ಲಿ ಕತ್ತೆ ಹಾಲು ಮಾರುತ್ತಾ, ಬದುಕು ಸಾಗಿಸುತ್ತಿರುವ ಅನೇಕ ಜನಾಂಗಗಳಿವೆ. ಒಡ್ಡ ಜನಾಂಗ ಮಾತ್ರವಲ್ಲ, ಬುಟ್ಟಿ ಹೆಣೆವ ಕೊರಚ ಸಮುದಾಯಕ್ಕೆ ಸೇರಿದವರಿದ್ದಾರೆ. ತಮಿಳುನಾಡಿನವರಾದ ಅವರು ತಮಗೆ ಬರುವ ಅಲ್ಪ ಸ್ವಲ್ಪ ತೆಲುಗು ಭಾಷೆಯನ್ನೇ ಮಾತನಾಡುತ್ತಾ, ಒಡ್ಡ ಸಮುದಾಯದವರೊಂದಿಗೆ ಬೆಸೆದುಕೊಂಡ ಬಾಂಧವ್ಯ ಮಾತ್ರ ವ್ಯವಹಾರ ಪರಿಽಯನ್ನೂ ಮೀರಿದ್ದು.
” ಶಿಕ್ಷಣದ ಕುರಿತು ಅಷ್ಟಾಗಿ ಅರಿವಿಲ್ಲದ ಸಮುದಾಯವಿದು. ಸರ್ಕಾರ ನೀಡುವ ಯೋಜನೆಗಳ ಬಗ್ಗೆ, ಮೀಸಲಾತಿಯ ಕುರಿತೂ ತಿಳಿದು ಕೊಂಡಿಲ್ಲ. ಕೆಲ ಮಕ್ಕಳು ಶಾಲೆಯ ಮೆಟ್ಟಿಲೇರುತ್ತಿದ್ದಾರೆ. ಆದರೆ ಒಂದಿಷ್ಟು ಕೂಡಿ ಕಳೆವಷ್ಟು ಲೆಕ್ಕ ಕಲಿತ ಮೇಲೆ, ಮತ್ತೆ ಇದೇ ವೃತ್ತಿ ಇವರದು.”