ಇವರು ಮೈಸೂರು ಅರಮನೆಯ ಪ್ಯಾಲೇಸ್ ಇಂಗ್ಲಿಷ್ ಬ್ಯಾಂಡಿನ ನಿವೃತ್ತ ಕ್ಲಾರಿಯೋನೆಟ್ ವಾದಕರಾದ ಡಿ.ರಾಮು. ವಯಸ್ಸು ಈಗ ಸುಮಾರು ಎಂಬತ್ತೈದರ ಆಸುಪಾಸು. ತಮ್ಮ ಹತ್ತನೇ ವರ್ಷದಲ್ಲೇ ಅರಮನೆಯಲ್ಲಿ ತಿಂಗಳಿಗೆ ಹದಿನೆಂಟು ವರ್ಷದ ಪಗಾರಕ್ಕೆ ನುಡಿಸಲು ತೊಡಗಿದವರು. ಆನಂತರ ಮೈಸೂರು ಪೊಲೀಸ್ ಬ್ಯಾಂಡಾಗಿ ರೂಪಾಂತರಗೊಂಡ ಇಂಗ್ಲಿಷ್ ಬ್ಯಾಂಡಿನಲ್ಲಿ ದುಡಿದು ಮೂವತ್ತು ವರ್ಷಗಳ ಹಿಂದೆ ನಿವೃತ್ತಿಗೊಂಡವರು. ಇವರ ವಿಶೇಷವೇನೆಂದರೆ ಅದೇ ಸರಳ ಸಜ್ಜನಿಕೆ ಮತ್ತು ಈಗಲೂ ಅದೇ ಪರಿಶ್ರಮ. ತನ್ನದೇನಿಲ್ಲ ಈ ಸಾಧನೆಯಲ್ಲಿ. ಎಲ್ಲವೂ ಈ ವಿದ್ಯೆಯನ್ನು ಕಲಿಸಿದ ಗುರುಗಳ ಕೃಪೆ ಎನ್ನುವ ವಿನೀತ ಭಾವ. ಮೈಸೂರು ಮಹಾನಗರಿಯ ದಸರಾ ನವರಾತ್ರಿ ಸಡಗರ ತನ್ನ ಉತ್ತುಂಗದತ್ತ ಏರುತ್ತಿರುವ ಈ ಹೊತ್ತಲ್ಲಿ ಈ ಅರಮನೆಯ ಊರಿನ ಸಂದುಗೊಂದುಗಳಲ್ಲಿ ಅಜ್ಞಾತರಾಗಿ ಬದುಕುತ್ತಿರುವ ಡಿ.ರಾಮು ಅವರಂತಹ ಎಲ್ಲ ಅನುಪಮ ಕಲಾವಿದರಿಗೂ ನಮ್ಮೆಲ್ಲರ ನಮಸ್ಕಾರ.