ಅಜಯ್ ಕುಮಾರ್ ಎಂ ಗುಂಬಳ್ಳಿ
ಸಣ್ಣತನದಲ್ಲಿ ನಮಗೆ ಎಲ್ಲವೂ ಹುಡುಗಾಟ. ಉದ್ದಿ ಬಯಲು, ಮಾರಿಗುಡಿ ಮೈದಾನ, ಸಮಾಧಿ ಮಾಳ, ಬೇಸಿಗೆಗೆ ನೀರು ಹರಿಯುತ್ತಿದ್ದ ಚಾನಲ್(ಕಾಲುವೆ) ಇತ್ಯಾದಿ. ಅಲ್ಲೆಲ್ಲ ನಾವು ಆಟ ಆಡುತ್ತ ತುಂಟಾಟ ಮಾಡಿ ಬೆಳೆದವರು. ಹಿರಿದಾದ ಬುಡದ ಮಾವಿನ ಮರಕ್ಕೆ ಕಲ್ಲೆಸೆಯುತ್ತ ಮಾವಿನಕಾಯಿಗೆ ಎದುರು ನೋಡುತ್ತ ಅದು ಸಿಕ್ಕಮೇಲೆ ಗದ್ದೆಯ ಎರೆಮಣ್ಣು ಮೀಟಿ ಅದರಿಂದ ಮಾರಿಗುಡಿ ಬಯಲಲ್ಲಿ ಅಲ್ಲೊಂದು ಇಲ್ಲೊಂದು ಇದ್ದ ನಯಸಾದ ಸಿಮೆಂಟ್ ಕಲ್ಲುಬೆಂಚಿನ ಮೇಲೆ ಕೂತು ಆಕೃತಿಗಳನ್ನು ಮಾಡುತ್ತಿದ್ದೆವು. ಹೀಗೆ ಒಂದು ದಿನ ಇದ್ದಕ್ಕಿದ್ದಂತೆ ಗುಡಿ ಬಳಿ ಸುತ್ತುತ್ತಿದ್ದಾಗ ಒಳಗೆ ಚಿಲ್ಲರೆ ಕಾಸು ಬಿದ್ದಿರುವುದು ಕಾಣಿಸಿತು. ಕಾಸನ್ನೇ ಕಾಣದ ಹೈಕಳಾದ ನಮಗೆ ಅಲ್ಲಿ ಚಿಲ್ಲರೆ ಇರುವುದು ಕಂಡು ಆಶ್ಚರ್ಯ ಆಯಿತು.
ಸುಮ್ಮನೆ ಏಕೆ ಕಾಸನ್ನು ಇಲ್ಲೆಸಿದಿದ್ದಾರೆ ಎಂದು ಅನಿಸಿತು. ಆಗ ನಮಗೆ ದೇವರು, ದೆವ್ವ ಎಂಬುದರ ಬಗ್ಗೆ ಅಷ್ಟೇನು ತಿಳಿದಿರಲಿಲ್ಲ. ಆದರೆ ನಮ್ಮೂರಿನ ಹೆಚ್ಚು ಮಂದಿ ಹೆಂಗಸರು, ಕೆಲವರು ಗಂಡಸರು ದೇವರು ಮೈಮೇಲೆ ಬಂದಿದೆ ಎಂದು ಕಿರುಚುತ್ತಾ ಏರುಧ್ವನಿಯಲ್ಲಿ ತನ್ನ ಮುಂದಿದ್ದವರನ್ನೆಲ್ಲ ‘ಮಗು ಮಗು’ ಎಂದು ಮಾತು ಮಾತಿಗೂ ಸಂಬೋಧಿಸುತ್ತ ‘ನಿಮ್ಮ ಕಷ್ಟ ಪರಿಹಾರ ಆಗುತ್ತೆ, ಆದರೆ ನೀವು ನನಗೆ ಪೂಜೆನೇ ಮಾಡ್ತಾ ಇಲ್ವಲ್ಲಾ, ಇನ್ಮುಂದೆ ತಪ್ಪದೇ ಮಾಡಿ’ ಎಂದು ಕೆಲವು ಸಲ ಕೇಡಿನ ಸುದ್ದಿಯನ್ನು, ಒಳ್ಳೆಯದನ್ನು ನುಡಿಯುವುದನ್ನು ನೋಡಿದ್ದೆವು. ಕೆಲವರಿಗೆ ದೆವ್ವ ಬಂದಿದೆಯೆಂದು ತಾನು ಆಗ ಸತ್ತೆನೆಂದು, ಈಗ ನಿಮ್ಮನ್ನು ಸಾಯಿಸಲು ಬಂದಿದ್ದೇನೆಂದು ಹೇಳುತ್ತ ತನಗೆ ಬೇಕಾದ ಊಟ ಉಪಚಾರ ಮಾಡಿದರೆ ಹೊರಟು ಹೋಗುತ್ತೇನೆಂದು ಹೇಳಿ ಉಂಡು ತಿಂದಿದ್ದನ್ನು ಸಹ ನೋಡಿದ್ದೇವೆ. ಅವು ನಿಜವೆಂದೇ ತಿಳಿದಿದ್ದೆವು. ಆದರೀಗ ಗುಡಿಯಲ್ಲಿ ಬಿದ್ದಿರುವ ಕಾಸು ಎತ್ತಿಕೊಳ್ಳಲು ನಮಗೆ ಯಾವುದೇ ಭಯ ಬರಲಿಲ್ಲ. ಅದಕ್ಕಾಗಿ ಎರಡು ಉದ್ದದ ಬಿದಿರು ಕಡ್ಡಿಯನ್ನು ಎತ್ತಿಕೊಂಡು ಅದಕ್ಕೆ ಸಗಣಿಯಿಂದ ಉಂಡೆ ಮಾಡಿ ಅದನ್ನು ಕಾಸಿನ ಮೇಲೆ ಒತ್ತಿ ನಿಧಾನಕ್ಕೆ ಎತ್ತಿಕೊಳ್ಳಲು ಪ್ರಯತ್ನಿಸಿದೆವು. ಅದು ಬಹಳ ಸಮಯ ಹಿಡಿಯುತ್ತಿತ್ತು. ಅರ್ಧಗಂಟೆಯಾದರೂ ಎರಡು ಕಾಸು ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ಗೆಳೆಯನೊಬ್ಬ ಯಾರಿಗೂ ಹೇಳದೇ ಓಡಿಹೋಗಿದ್ದವನು, ಗಾಢ ಕಪ್ಪಾದ ತುಂಡರಿಸಿದ ವಸ್ತುವಿನೊಟ್ಟಿಗೆ ಬಂದ. ಅದನ್ನು ಕಡ್ಡಿಗೆ ಕಟ್ಟಿ ಒಂದೇ ಸಲಕ್ಕೆ ಅಲ್ಲಿ ಬಿದ್ದಿದ್ದ ಚಿಲ್ಲರೆಗಳನ್ನು ಎತ್ತಿಕೊಂಡ. ನಮಗೆ ಆಶ್ಚರ್ಯದ ಜೊತೆಗೆ ಖುಷಿಯೂ ಆಯಿತು. ಎಲ್ಲರಿಗೂ ಒಂದೊಂದು ಚಿಲ್ಲರೆ ಕೊಟ್ಟ. ನಮಗೆ ಅದೇನೆಂದು ತಿಳಿದುಕೊಳ್ಳುವ ಹಂಬಲ. ಎಲ್ಲರೂ ಅದೇನೆಂದು ಕೇಳಿದೆವು. ಅವನು ‘ಇದು ಮ್ಯಾಗ್ನೆಟ್’ ಎಂದ. ನಾವು ಆ ಹೆಸರು ಕೇಳಿದ್ದೆವು. ಆದರೆ ನೋಡಿರಲಿಲ್ಲ. ‘ಇದು ರೇಡಿಯೋದಲ್ಲಿರುತ್ತೆ ಗೊತ್ತಾ’ ಎಂದು ಗೆಳೆಯ ಉಪನ್ಯಾಸ ಕೊಟ್ಟ. ದೇವರು ನಮಗೆ ತೊಂದರೆ ಮಾಡುತ್ತಾನೆಂದು ಹೆದರಿಕೊಂಡಿದ್ದ ನಮಗೆ ನಿಜವಾಗಿ ಯಾವುದೇ ಸಣ್ಣ ಕೇಡನ್ನೂ ದೇವರು ಮಾಡಲಿಲ್ಲ. ನಾವು ಕಾಸನ್ನು ಎತ್ತಿಕೊಳ್ಳುವುದಕ್ಕೆ ಮುಂಚೆ ಯಾರೂ ಇತ್ತಕಡೆ ಬರಬಾರದೆಂದು ಅದೇ ದೇವರನ್ನು ಪ್ರಾರ್ಥಿಸಿದ್ದೆವು. ಹಾಗೇ ಹಾಗಿತ್ತು. ಮಾರಿಗುಡಿಯಿಂದ ನಾವೆಲ್ಲ ಆಚೆಗೆ ಹೋಗುವಾಗ ಸಮಾಧಿ ಮಾಳದ ಕಡೆಯಿಂದ ದೊಡ್ಡಯ್ಯ ಬಂದವನೇ ‘ನೀವು ಕಾಸು ಕಳ್ಳತನ ಮಾಡ್ತೀರಾ, ದೇವಿ ಶಿಕ್ಷೆ ಕೊಡ್ತಾಳೆ’ ಅಂದ. ಗೆಳೆಯ ಇದ್ದಕ್ಕಿದ್ದಂತೆ ಕಿರುಚುತ್ತಾ ಕಣ್ಣನ್ನು ಮೆಡರಿಸಿ ‘ಲೇ ದೊಡ್ಡಯ್ಯ ನನ್ನ ಕಂದಮ್ಮಗಳಿಗೆ ನೀನೇನೋ ಹೇಳೋದು. ನನ್ನ ದುಡ್ಡು ತಾನೇ ಎತ್ತಿಕೊಳ್ಳಲಿ ಬಿಡು.
ನಿನ್ನದಲ್ವಲ್ಲಾ’ ಎಂದಾಗ ನಾವೆಲ್ಲ ದೇವರು ಬಂತೆಂದು ಕೈಮುಗಿದೆವು. ದೊಡ್ಡಯ್ಯ ‘ನನ್ ಮುಂದೇನೆ ನಾಟಕ ಮಾಡ್ತೀರಾ’ ಎಂದು ಅವನ ಎದೆಪಟ್ಟಿ ಹಿಡಿದಾಗ ಗೆಳೆಯ ಭದ್ರವಾಗಿ ಜಿಗಿದು ತಪ್ಪಿಸಿಕೊಂಡ. ‘ದೇವರಿಗೆ ಹೊಡೆದುಬಿಟ್ಟ’ ಎಂದು ನಾವೆಲ್ಲ ಕೂಗಿಕೊಂಡು ಓಡಿಬಿಟ್ಟೆವು.
” ಕಾಸನ್ನೆ ಕಾಣದ ಹೈಕಳಾದ ನಮಗೆ ಅಲ್ಲಿ ಚಿಲ್ಲರೆ ಇರುವುದು ಕಂಡು ಆಶ್ಚರ್ಯ ಆಯಿತು. ಸುಮ್ಮನೆ ಏಕೆ ಕಾಸನ್ನು ಇಲ್ಲೆಸೆದ್ದಾರೆ ಎಂದು ಅನಿಸಿತು”



