Mysore
25
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ದೇವರಾಜಣ್ಣನ ಶಿವಶಕ್ತಿ ಸೌಂಡು

ಮಧುಕರ ಎಂ.ಎಲ್.

ನಮ್ಮ ಬಾಲ್ಯದಲ್ಲಿ ಊರಿನಲ್ಲಿ ಮದುವೆ ಹಬ್ಬಹರಿದಿನಗಳಲ್ಲಿ ಮೈಕ್ ಸೌಂಡ್ಸ್ ಬರುತ್ತದೆಯೆಂಬ ಸುದ್ದಿ ಕಿವಿಗೆ ಬಿದ್ದರೆ ಯಾವ ಮೈಕ್ ಸೆಟ್ ಬರುತ್ತಿದೆಯೆಂಬ ಕುತೂಹಲ ನಮಗೆ. ಆ ದಿನ ಬಸ್‌ನ ಹಾದಿ ಕಾಯುವುದೇ ಒಂದು ಚೆಂದ. ಯಾವುದೇ ವಾಹನ ದೂರದಲ್ಲಿ ಬಂದರೂ ಅದು ಬಸ್ ಎಂಬ ಆಸೆಯಿಂದ ಕೂಗುವುದು, ಬಸ್ ಬಂದಾಗ ಅಂಪ್ಲಿಫೈಯರ್ ಹಾಗೂ ಸೌಂಡ್ ಬಾಕ್ಸ್ ಹೊತ್ತು ತರಲು ನಮ್ಮ ಗೆಳೆಯರ ಗುಂಪಿಗೆ ಪೈಪೋಟಿ. ಅವುಗಳನ್ನು ಮದುವೆ ಮನೆಗೆ ತಂದಿಟ್ಟು, ಮೈಕ್‌ನವರಿಗೆ ಬೇಕಾದ ಸಹಾಯವನ್ನು ಮಾಡುವುದೇ ಒಂದು ಹಬ್ಬ. ಇನ್ನು ಎರಡು ದಿನಗಳ ಕಾಲ ನಮ್ಮ ಮೆಚ್ಚಿನ ನಟನ ಹಾಡುಗಳು, ಭಕ್ತಿಗೀತೆಗಳನ್ನು ಕೇಳಬಹುದೆಂಬ ಖುಷಿ. ಹೊಸ ಹಾಡು ಯಾವುದು ಇದೆಯೆಂದು ಆ ಕ್ಯಾಸೆಟ್ಗಳ ಮೇಲೆ ನಮ್ಮ ಕಣ್ಣು ನೆಟ್ಟಿರುತ್ತಿತ್ತು.

ಮನೆಗೆ ಹೋಗಿ ಅಪ್ಪ-ಅಮ್ಮನ ಪರ್ಮಿಷನ್ ಪಡೆದುಕೊಂಡು ಎರಡು ದಿನಗಳೂ ಅಲ್ಲೇ ಮಲಗುವುದಕ್ಕಾಗಿ ಗೋಣಿಚೀಲ, ಕಂಬಳಿಯನ್ನು ಸಿದ್ಧಪಡಿಸುತ್ತಿದ್ದೆವು. ಮೈಕ್ ಸೆಟ್ ಅಣ್ಣ ಊಟಕ್ಕೆ ಹೋಗುವಾಗ ‘ನಾ ನೋಡ್ಕತೀನಿ ಹೋಗಣ್ಣ’ ಎಂದು ಉಸ್ತುವಾರಿ ಮಾಡುತ್ತಿದ್ದೆವು. ಮಜಾ ಎಂದರೆ ನಮಗಿಂತ ಹರೆಯದ ಹುಡುಗ-ಹುಡುಗಿಯರು, ತಮ್ಮ ಮೆಚ್ಚಿನ ಹಾಡು ಕೇಳಲು ‘ಆ ಕ್ಯಾಸೆಟ್ ಹಾಕ್ಸು’ ಎಂದು ಲಂಚವಾಗಿ ಮಿಠಾಯಿ ಕೊಡಿಸಿದ್ದೂ ಇದೆ. ಎಲ್ಲಾ ಮುಗಿದ ಮೇಲೆ ಮತ್ತೆ ಲಗೇಜ್ ಹೊತ್ತು ಬಸ್‌ಗೆ ಹಾಕುತ್ತಿದ್ದೆವು. ಕ್ಯಾಸೆಟ್‌ನ ಮೇಲಿದ್ದ ನಮ್ಮ ಮೆಚ್ಚಿನ ನಟನ ಚಿತ್ರವೊಂದನ್ನು ಲಪಟಾಯಿಸುತ್ತಿದ್ದೆವು. ಆ ಚಿತ್ರ ಹರಿದು ಚಿಂದಿಯಾಗುವ ತನಕ ನಮ್ಮ ಚೆಡ್ಡಿ ಜೇಬಿನಲ್ಲಿ ಇರುತ್ತಿತ್ತು. ಆ ಪಿಕ್ಚರ್ ಚಿತ್ರಮಂದಿರಕ್ಕೆ ಯಾವಾಗ ಬರುವುದೋ? ನಾವು ಯಾವಾಗ ಹಾಡನ್ನು ನೋಡುತ್ತೇವೆಯೋ ಎಂಬ ಆಸೆ ಹೆಚ್ಚುತ್ತಿತ್ತು.

ಹಳೆಯ ದಿನಗಳು ಮತ್ತೆ ನೆನಪಾಗಲು ಕಾರಣವಿದೆ. ಯಳಂದೂರಿನ ಬಸ್ ನಿಲ್ದಾಣದಲ್ಲಿ ‘ಶಿವಶಕ್ತಿ’ ಎಂಬ ಸೌಂಡ್ಸ್ ಇದೆ. ಹಳೆಯ ಕಾಲದ ಎಲ್ಲಾ ರೀತಿಯ ಸಿಸ್ಟಂಗಳು ತುಂಬಿರುವ ರಿಪೇರಿ ಅಂಗಡಿ ಅದು. ೪೦ ವರ್ಷಗಳ ಹಿಂದಿನ ಹಾಡುಗಳನ್ನು ಅಲ್ಲಿ ಕೇಳಬಹುದು. ಅಂಗಡಿಯ ಮಾಲೀಕರ ಹೆಸರು ದೇವರಾಜಣ್ಣ. ಹತ್ತನೇ ತರಗತಿ ತನಕ ವಿದ್ಯಾಭ್ಯಾಸ. ಮನೆಯ ಬಡತನಕ್ಕೆ ಮೈಕ್ ಅಂಗಡಿಗೆ ಕೆಲಸಕ್ಕೆ ಸೇರಿಕೊಂಡು ಆಗಿನ ಕಾಲಕ್ಕೆ ಸುತ್ತ ಮುತ್ತಲಿನ ಹಳ್ಳಿಗಳಿಗೆ ಫೇಮಸ್ ಸೌಂಡ್ಸ್ ಅಂಗಡಿಯಾಗಿತ್ತು. ಎಲ್ಲಾ ಕೌಶಲಗಳನ್ನೂ ಕಲಿತು ತನ್ನದೇ ಸ್ವಂತ ಅಂಗಡಿಯನ್ನ ತೆರೆದು, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ಕೆಲಸ ಕಲಿತು ಹಲವರಿಗೆ ಕಲಿಸಿದ್ದಾರೆ. ಅವರ ಸಂಗ್ರಹದಲ್ಲಿ ೩,೫೦೦ ಹಾಡುಗಳಿವೆ. ಪ್ಲೇಟ್, ಕ್ಯಾಸೆಟ್, ಡಿಸ್ಕ್, ಮೆಮೊರಿm ಚಿಪ್ಪುಗಳು… ಹೀಗೆ ತರಹೇವಾರಿ ಸಾಧನಗಳಿವೆ. ‘ರಿಪೇರಿ ಕೆಲಸ ಹೇಗಿದೆ?’ ಕೇಳಿದೆ. “ಒಂದು ಕಾಲದಲ್ಲಿ ಬಾಂಬೆ, ದೆಹಲಿಗೆ ಹೋಗಿ ಬಂದಿದ್ದೇನೆ. ರಿಪೇರಿಗೆ ಬೇಕಾದ ಕಚ್ಚಾ ಸಾಮಾನುಗಳನ್ನು ತಂದು ನಾನೇ ತಯಾರಿಸುತ್ತಿದ್ದೆ.

ರಿಪೇರಿಗೆಂದು ತಮಿಳುನಾಡು, ಕೇರಳದ ಗಡಿಯಿಂದ ಗ್ರಾಹಕರು ಬರುತ್ತಾರೆ. ಈಗ ಶಕ್ತಿ ಕಡಿಮೆಯಾಗಿದೆ, ಸಣ್ಣಪುಟ್ಟ ರಿಪೇರಿ ಮಾಡಿ ಕಾಲ ಕಳೆಯುತ್ತೇನೆ. ಸಾ ನಂಗೆ ಹಣಕಾಸು ಇದ್ದರೆ ಶಿವಶಕ್ತಿ ಅನ್ನುವ ಒಂದು ದೊಡ್ಡ ಕಂಪೆನಿಯನ್ನೇ ಮಾಡ್ತಾಯಿದ್ದೆ. ಡಿಜೆ ಎಫೆಕ್ಟನ್ನು ನಾನು ಆಗಲೇ ಕೊಡ್ತಿದ್ದೆ. ಈಗ ಈ ಸಣ್ಣ ಅಂಗಡಿಯಲ್ಲೇ ಬದುಕು ಸಾಗ್ತಾಯಿದೆ. ಜೊತೆಗೆ ಸಣ್ಣಪುಟ್ಟ ರೋಗಕ್ಕೆ ನಾಟಿ ಔಷಧಿ ನೀಡುತ್ತೇನೆ. ನನ್ನ ಮಕ್ಕಳು ಕೂಡ ಚೆನ್ನಾಗಿ ಓದಿ, ಅವರವರ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಷ್ಟೇ ನನ್ನ ಪ್ರಪಂಚ” ಎಂದು ಸಾರ್ಥಕದ ನಗು ಬೀರಿದರು.

” ಯಳಂದೂರಿನ ಬಸ್ ನಿಲ್ದಾಣದಲ್ಲಿರುವ ಹಳೆಯ ಕಾಲದ ಎಲ್ಲಾ ರೀತಿಯ ಸಿಸ್ಟಂಗಳು ತುಂಬಿರುವ ರಿಪೇರಿ ಅಂಗಡಿ ಇದು. ಹಲವು ದಶಕಗಳ ಹಿಂದಿನ ಹಾಡುಗಳನ್ನೂ ನೀವು ಇಲ್ಲಿ ಕೇಳಬಹುದು.”

Tags:
error: Content is protected !!