ಬೇಸಿಗೆಯಲ್ಲಿ ಬೇಡಬೇಡವೆಂದರೂ ಸಿಗುವ ಕುದಿಯುವ ನೀರು, ಚಳಿ ಮಳೆಗಾಲದಲ್ಲಿ ಬೇಕೆಂದರೂ ಸಿಗದು ಬೊಗಸೆ ಬಿಸಿನೀರು
ಶುಭಮಂಗಳ ರಾಮಾಪುರ
ಇತ್ತೀಚೆಗಂತೂ ಅಪ್ಪ ಅಮ್ಮನ ಕೋಳಿಜಗಳಗಳು ಒಂಥರಾ ತಮಾಷೆಯಾಗಿರುತ್ತವೆ. ನಮ್ಮ ಮನೆಯಲ್ಲಿ ಮೊದಲಿಂದಲೂ ಅಪ್ಪ ಊಟಕ್ಕೆ ಕುಳಿತರೆ ಅಮ್ಮ ನೀರು ಕೊಟ್ಟು ಕೈತೊಳೆಸಿಕೊಳ್ಳುತ್ತಾರೆ.
‘ಅಯ್ಯೋ ಇಷ್ಟೊಂದು ಚಳಿ ಕೈತೊಳೆಯಲು ಸ್ವಲ್ಪ ಬಿಸಿನೀರು ಕೊಡಬಾರದೇ!’ ಎಂದು ಅಪ್ಪ ಕೇಳಿದರೆ ‘ಸಿಲಿಂಡರ್ ಬೆಲೆ ಸಾವಿರ ರೂ. ದಾಟಿದೆ. ಈಗ ಒಂದು ಸಿಲಿಂಡರ್ ಇಪ್ಪತ್ತು ದಿನ ಬರ್ತಿದೆ. ಕೈಗೂ ಬಿಸಿನೀರಾದ್ರೆ ಹದಿನೈದು ದಿನಾನೂ ಬರಲ್ಲ’ ಅನ್ನೋದು ಅಮ್ಮನ ವಾದ. ‘ಸಿಲಿಂಡರ್‌ಗೆ ಹಣ ನಾನೇ ತಾನೆ ಕೊಡೋದು ನಿಮ್ಮಪ್ಪನ ಮನೆಯಿಂದಲ್ವಲ್ಲ?’ ಅಂದ್ರೆ ಮಾತಿಗೆ ಮಾತು ಬೆಳೆದು ಜಗಳ ಇನ್ನೆಲ್ಲಿಗೋ ಹೋಗಿರುತ್ತೆ.
ಹಳ್ಳಿಜೀವನದ ಸೊಗಸನ್ನು ಬರಿಮಾತಲ್ಲಿ ಹೇಳೋಕಾಗಲ್ಲ. ಒಂದೊಂದು ಕಾಲಕ್ಕೂ ಜೀವನಶೈಲಿ ಬದಲಾದರೂ ಸರಳತೆ ಎದ್ದು ಕಾಣುತ್ತದೆ. ಎಷ್ಟೇ ಚಳಿಯಾದರೂ ಬೆಳ್ಳಂಬೆಳಿಗ್ಗೆ ಎದ್ದು ಸೌದೆ ಒಲೆಯಲ್ಲಿ ಕಾಯಿಸಿದ ಹದವಾದ ನೀರಿಂದ ಮಿಂದು, ಸೂರ್ಯೋದಯಕ್ಕೂ ಮುನ್ನ ನೊಸಲಿಗೆ ವಿಭೂತಿ ಧರಿಸಿ ದೇವರಪೂಜೆ ಮುಗಿಸಿ, ಅಜ್ಜಿ ಕೊಟ್ಟ ಬೆಲ್ಲದ ಕರಿಕಾಫಿ ಕುಡಿದು ಎಳೆಬಿಸಿಲಲ್ಲಿ ಹೆಗಲ ಮೇಲೊಂದು ತುಂಡು(ಟವೆಲ್) ಹಾಕೊಂಡು ಹೊಲಕ್ಕೆ ಹೋಗುತ್ತಿದ್ದರು.
ಚಳಿ ಹೆಚ್ಚಿದ್ದರೆ ಅದೇ ತುಂಡಿನಿಂದ ಕಿವಿ ಮುಚ್ಚುವಂತೆ ರುಮಾಲು ಮಾಡಿಕೊಳ್ಳುತ್ತಿದ್ದರು.ಚಳಿಗೂ ಬಿಸಿಲಿಗೂ ಲೆಕ್ಕಿಸದೆ ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲಿಯೇ ಕೆಲಸ. ಸೂರ್ಯ ನೆತ್ತಿಗೆ ಬರುವ ಹೊತ್ತಿಗೆ ಅಜ್ಜಿ ಪುಟ್ಟೆಯಲ್ಲಿ ಬುತ್ತಿಯೊಂದನ್ನುಹೊತ್ತೊಯ್ದು ಕೊಡುತ್ತಿದ್ದರು.
ಬೆಳಿಗ್ಗೆಯ ತಿಂಡಿಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ರಾತ್ರಿಯಾಗುತ್ತಿದ್ದಂತೆ ಬಿಸಿಬಿಸಿ ರಾಗಿಮುದ್ದೆ ಉಪ್ಸಾರು ತಿಂದು ಇಡೀ ಬೀದಿಯವರು ಮಾತಿಗೆ ಕೂರುತ್ತಿದ್ದರು. ಹೊಲದಿಂದ ಬರುವಾಗ ಹೊತ್ತು ತಂದ ಪುಳ್ಳೆಗೆ (ಒಣಗಿದ ಗಿಡದ ಚಿಕ್ಕಚಿಕ್ಕ ರೆಂಬೆಗಳು) ಬೆಂಕಿಹಚ್ಚಿ ಅದರಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದರು.
ಮಧ್ಯರಾತ್ರಿವರೆಗೂ ಹರಟೆ ಹೊಡೆದು ಮಲಗಲು ಮುಂದಾದರೆ ಮತ್ತೆ ಚಳಿಯ ನಡುಕಕ್ಕೆಬೆಚ್ಚನೆಯ ಹೊದಿಕೆಯಾದದ್ದು ಗೋಣಿತಾಟು( ಗೋಣಿಚೀಲದಿಂದ ಸಿದ್ಧಪಡಿಸಿದ ಹೊದಿಕೆ). ಅಜ್ಜಿ ಮನೆಯಲ್ಲಿ ಇದ್ದದ್ದು ಒಂದೇ ಕಂಬಳಿ, ಜೊತೆಗೆರಡು ಬೆಡ್-ಶೀಟು. ಚಿಕ್ಕಚಿಕ್ಕ ಬೆಡ್-ಶೀಟುಗಳು ಅಪ್ಪ-ಅಮ್ಮನ ಪಾಲಾದರೆ ಕರಿಕಂಬಳಿಗೆ ಅಜ್ಜಿಯೊಡನೆ ನಾನೂ ಅಕ್ಕನೂ ಪಾಲುದಾರರು. ಇನ್ನು ಅಣ್ಣನಿಗಂತೂ ತಾತನ ಗೋಣಿತಾಟೇ ಮಹಾ ಹೊದಿಕೆ.
ಮನೆಯ ಜಗುಲಿಯಲ್ಲಿ ಚಾಪೆ ಹಾಸಿ ಕರಿಕಂಬಳಿ ಹೊದ್ದು ಮಲಗಿದರೆ ಆ ಹಿತವಾದ ಬೆಚ್ಚನೆಯ ಅನುಭವಕ್ಕೆ ಬೆಳಿಗ್ಗೆ ಎಂಟಾದರೂಎಚ್ಚರವಾಗುತ್ತಿರಲಿಲ್ಲ. ಅಜ್ಜಿ-ತಾತ ಮಾತ್ರ ಹೊತ್ತುಟ್ಟುವ ಮೊದಲೇ ದಿನವನ್ನು ಆರಂಭಿಸುತ್ತಿದ್ದರು.
ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ಕರೆಮಾಡಿ ‘ನಿಮ್ಮ ಭಾಗದಲ್ಲಿ ತೆಂಗಿನ ತೋಟಗಳು ಹೆಚ್ಚಾಗಿವೆಯಂತೆ ನಿಜವೇ? ಒಂದಷ್ಟು ತೆಂಗಿನಕಾಯಿ ಮತ್ತು ತೆಂಗಿನಮಟ್ಟೆ ಸಿಗಬಹುದೆ?’ ಎಂದು ವಿಚಾರಿಸಿದರು. ನಮ್ಮ ಭಾಗದ ತೆಂಗಿನಬೆಳೆ ಕತೆ ಯಾಕೆ ಕೇಳ್ತೀರ, ಒಂದೆಡೆ ಎಳನೀರಿಗೆ ಬೇಡಿಕೆ ಹೆಚ್ಚೆಂಬ ಕಾರಣಕ್ಕೆ ಬಲಿಯುವ ಮೊದಲೆ ಎಳನೀರನ್ನುಇಳಿಸಿಬಿಡುತ್ತಾರೆ. ಅಲ್ಲೊಂದು ಇಲ್ಲೊಂದು ಕಣ್ತಪ್ಪಿಸಿಕೊಂಡವು ಮಾತ್ರ ತೆಂಗಿನಕಾಯಿಗಳಾಗಿ ಕೈ ಸೇರುತ್ತವೆ. ಹಾಗಾಗಿಯೇ ತೆಂಗಿನ ಕಾಯಿಯ ಬೆಲೆ ಗಗನಕ್ಕೇರಿದೆ. ತಾಂಬೂಲಕ್ಕೆ ತೆಂಗಿನಕಾಯಿ ಬದಲು ಮೂಸಂಬಿ ಬಂದಿದೆ. ಮೊದಲೆಲ್ಲ ಸ್ನಾನದ ಮನೆಗಳಲ್ಲಿ ಸ್ನಾನಕ್ಕೆ ನೀರು ಕಾಯಿಸಲು ದೊಡ್ಡದೊಡ್ಡ ಹಂಡೆಗಳನ್ನು ಹಾಕಿಸುತ್ತಿದ್ದರು, ಒಲೆಗೆ ನಾಲ್ಕೈದು ಕರಟ ಅಥವಾ ಮಟ್ಟೆ ಹಾಕಿ ಉರಿಸಿದರೆ ಹಂಡೆನೀರು ಕುದಿಯುವಂತೆ ಕಾಯುತ್ತಿತ್ತು. ಒಂದೆರಡು ಸೌದೆ ಹಾಕಿಬಿಟ್ಟರಂತೂ ದಿನವಿಡೀ ಬಿಸಿನೀರು ಸಿಗುತ್ತಿತ್ತು. ಇತ್ತೀಚೆಗೆ ಮನೆಯೆಲ್ಲ ಹೊಗೆಯಿಂದ ಕಪ್ಪಾಗುತ್ತದೆಂದು ಹಂಡೆ ಹೂಳಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ, ಓನ್ಲಿ ಸೋಲಾರ್ !
ಬೇಸಿಗೆಯಲ್ಲಿ ಬೇಡಬೇಡವೆಂದರೂ ಸಿಗುವ ಕುದಿಯುವ ನೀರು, ಚಳಿ ಮಳೆಗಾಲದಲ್ಲಿ ಬೇಕೆಂದರೂ ಸಿಗದು ಬೊಗಸೆ ಬಿಸಿನೀರು. ಆದರೆ ಹಳ್ಳಿಗಳಲ್ಲಿ ಈಗಲೂ ಹಂಡೆನೀರು ಬಳಸುವ ವಾಡಿಕೆಯಿದೆ. ಹಸುಗೂಸು ಬಾಣಂತಿಯರಿಗೆ ಹಂಡೆನೀರು ಶ್ರೇಷ್ಠ ಅಂಥ ನನ್ನಜ್ಜಿ ನನ್ನ ಬಾಣಂತನದಲ್ಲಿ ಹೇಳಿತ್ತು. ಚೆನ್ನಾಗಿ ಕಾದ ಬಿಸಿನೀರಲ್ಲಿ ಮಗುವಿಗೆ ಸ್ನಾನ ಮಾಡಿಸಿದರೆ ನಿದ್ದೆ ಚೆನ್ನಾಗಿ ಹತ್ತುತ್ತದೆಂದು ಅಮ್ಮ ನನ್ನ ಮಗನಿಗೆ ಹಂಡೆನೀರನ್ನು ಬಳಸುತ್ತಿದ್ದರು. ಆದರೆ ಮನೆ ರಿಪೇರಿ ಮಾಡಿಸುವಾಗ ಹಂಡೆ ಕೀಳಿಸಿ ಹೀಟರ್ ಹಾಕಿಸಿಬಿಟ್ಟರು. ಹಂಡೆಯಲ್ಲಿ ನೀರು ಕಾಯಿಸುತ್ತಿದ್ದಾಗ ಬಿಸಿನೀರಿಗೆ ಬರವೇ ಇರುತ್ತಿರಲಿಲ್ಲ. ಚಳಿಗಾಲ ಶುರುವಾಗಿದ್ದೇ ತೆಂಗಿನ ಕರಟಕ್ಕೆ ಬೇಡಿಕೆ ಹೆಚ್ಚಾಗಿದೆ. ಕಾಯಿ ಬಳಸಿ ಕರಟ ಮಾರಿ ಹೆಂಗಸರು ಪಾಕೆಟ್-ಮನಿ ಗಳಿಸುತ್ತಿದ್ದಾರೆಂಬ ಸುದ್ದಿ ಕೇಳಿ ಬಹುಶಃ ಸ್ನೇಹಿತನ ಹೆಂಡತಿಗೂ ಪಾಕೆಟ್-ಮನಿ ಸಿಕ್ಕಿದೆಯೆಂದು ನಗುಬಂತು




