ಅಕ್ಷತಾ
ಏಕಲವ್ಯ ದ್ರೋಣರನ್ನು ಗುರುಗಳೆಂದು ಒಪ್ಪಿ, ಮರೆಯಲ್ಲೇ ನಿಂತು ಬಿಲ್ವಿದ್ಯೆ ಪ್ರವೀಣನಾದರೂ ದ್ರೋಣರು ಒಪ್ಪಿಕೊಂಡದ್ದು ಅರ್ಜುನನ ಮೇಲಿನ ಶಿಷ್ಯ ಪ್ರೀತಿಯನ್ನು!
ಯಾವುದೇ ಕ್ಷೇತ್ರವನ್ನು ನೋಡಿದರೆ ಇತ್ತೀಚೆಗೆ ಸಾಮಾನ್ಯವಾಗಿ ಕೇಳುವ ಪದ ‘ಗಾಡ್ ಫಾದರ್’. ಯಾರೇ ಸಾಧಕರ ಸಂದರ್ಶನವನ್ನು ಒಮ್ಮೆ ಆಲಿಸಿದರೆ ಬಹುತೇಕರ ಪ್ರಶ್ನೆ ಸಾಮಾನ್ಯವಾಗಿ ಒಂದೇ ಆಗಿರುತ್ತದೆ, ‘ನಿಮ್ಮ ಗಾಡ್ ಫಾದರ್?’ ಈ ಪ್ರಶ್ನೆ ಬರೆಹಲೋಕವನ್ನೂ ಬಿಟ್ಟಿಲ್ಲ. ಕೆಲವರು ತಾವು ಇಂತಹವರ ಶಿಷ್ಯನೆಂದೋ ಅಥವಾ ಪರಿಚಯದವರೆಂದೋ ಹೇಳಿಕೊಳ್ಳುವ ಮೂಲಕ ತನಗೂ ಒಬ್ಬ ಗಾಡ್ ಫಾದರ್ ಇದ್ದಾರೆಂದು ಸೂಚ್ಯವಾಗಿ ಹೇಳುವುದನ್ನು ಗಮನಿಸಬಹುದು.
ಹಾಗಿದ್ದರೆ ಸಾಹಿತ್ಯಕ್ಕೂ ಗಾಡ್ ಫಾದರ್ ಅವಶ್ಯಕತೆ ಇದೆಯೇ? ಇದಕ್ಕೆ ಸಿಗುವ ಉತ್ತರಗಳು ಅನೇಕ… ಬರಹ ಎನ್ನುವುದು ಭಾವನೆಗೆ ಸಂಬಂಧಪಟ್ಟಂತಹದ್ದು. ಭಾವನೆಗಳಿಗೆ ಯಾರ ಹಂಗೂ ಇಲ್ಲ. ತನಗೆ ತೋಚಿದ್ದನ್ನು ಗೀಚುವುದಕ್ಕೂ ಗಾಡ್ ಫಾದರ್ ಬೇಕೇ ಎಂದು ಹುಬ್ಬೇರಿಸಬಹುದು. ಮನಸ್ಸಿನಲ್ಲಿರುವುದನ್ನು ಪುಟಗಳಿಗೆ ಇಳಿಸುವುದಕ್ಕೆ ಯಾವ ದೊಣೆನಾಯಕನ ಒಪ್ಪಿಗೆ, ಮೆಚ್ಚುಗೆ ಬೇಡವಾದರೂ ಸರಿ, ತಪ್ಪುಗಳನ್ನು ತಿದ್ದಲು ಪಕ್ವ ಬರೆಹದ ಬೆರಳಿನ ಮಾರ್ಗದರ್ಶನ ಅತೀ ಅಗತ್ಯ. ಇಂತಹ ಮಾರ್ಗದರ್ಶಕರು ಸಿಕ್ಕರೆ ಗಾಡ್ ಫಾದರ್ ಎಂದು ಒಪ್ಪಿಕೊಳ್ಳಲು ಕಷ್ಟವೇನಿದೆ ಎನ್ನುವುದು ಕೆಲವರ ಅಂಬೋಣ. ಹಾಗಿದ್ದರೆ ಗಾಡ್ ಫಾದರ್ ಎಂದು ಒಪ್ಪಿಕೊಳ್ಳಬೇಕಾದರೆ ಹೇಗಿರಬೇಕು?
‘ಗಾಡ್ ಫಾದರ್’ ಎಂಬ ಮಾರ್ಗದರ್ಶಕರು?:
ಹೌದೆನ್ನುತ್ತಾರೆ ಬಹಳ ಲೇಖಕರು. ತಮ್ಮ ಅಕ್ಷರಗಳನ್ನು ತಿದ್ದಿ, ಅದಕ್ಕೊಂದು ಸ್ಪಷ್ಟ ರೂಪವನ್ನು ಕೊಟ್ಟು ಹುರಿದುಂಬಿಸುವ ಅನುಭವಿ ಹಿರಿಯ ಲೇಖಕರನ್ನು ಗಾಡ್ ಫಾದರ್ ಎಂದು ಒಪ್ಪಿಕೊಳ್ಳಬಹುದು. ಬರೆಯುವುದಕ್ಕೆ ಗಾಡ್ ಫಾದರ್ ಬೇಡವಾದರೂ ಬರೆದ ನಂತರ ಹೊರ ಜಗತ್ತಿಗೆ ತೆರೆದುಕೊಳ್ಳಲು, ಅವಕಾಶ ಅರಸಿಕೊಳ್ಳಲು ಒಬ್ಬರ ಅಗತ್ಯವಿದೆ. ಅವರನ್ನು ಗಾಡ್ ಫಾದರ್ ಎಂದೂ ಮಾರ್ಗದರ್ಶಕರು ಎಂದೂ ಕರೆಯಬಹುದು. ಆದರೆ ಇಂತಹ ಗಾಡ್ ಫಾದರ್ ತಾನು ‘ಪರಿಚಯಿಸುತ್ತಿರುವ ಕಿರಿಯ ಲೇಖಕ ಬರೆದಿದ್ದೆಲ್ಲವೂ ಶ್ರೇಷ್ಠ’ ಅಥವಾ ‘ಆತ/ ಆಕೆಯ ಸಾಹಿತ್ಯ ಅತ್ಯುನ್ನತ’ ಎಂಬ ಭ್ರಮೆ ಹೊಂದಿರಬಾರದು. ತಪ್ಪುಗಳನ್ನು ತಿದ್ದಿ, ಅರ್ಹವೆನಿಸಿದರೆ ಮಾತ್ರ ಆಯ್ಕೆ ಮಾಡುವ ಮನಸ್ಥಿತಿ ಇದ್ದವರು’ ‘ಗಾಡ್ ಫಾದರ್’ ಆದರೆ ತಪ್ಪೇನಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಗಾಡ್ ಫಾದರ್ ಪ್ರೀತಿಗೆ ಇರಲಿ ಮಿತಿ!: ಬರೆಯಲು ಬೇಕಾಗಿರುವುದು ಕ್ರಿಯೇಟಿವಿಟಿ ಎಂದು ಕರೆಯಲ್ಪಡುವ ಸೃಜನಶೀಲತೆ. ಆದರೆ ಆ ನಂತರ ಸಿಗುವ ಅವಕಾಶ ತನ್ನಷ್ಟಕ್ಕೇ ತಾನು ಬರದು. ಅವಕಾಶ ಅರಸುವ ದಾರಿಯಲ್ಲಿ ಸಿಗುವ ಆಧಾರವನ್ನು ಅಥವಾ ಸಂವಾಹಕವಾಗಿ ಗಾಡ್ ಫಾದರ್ ಇದ್ದರೆ ಬರೆಹ ಮತ್ತು ಓದುಗನ ನಡುವೆ ಸೇತುವೆಯಾಗಬಹುದು. ಅಷ್ಟೇ ಅಲ್ಲ, ಒಂದೊಳ್ಳೆ ವಿಚಾರವನ್ನು ಓದುಗನಿಗೆ ತಲುಪಿಸುವ ಮಾಧ್ಯಮವೂ ಆಗಬಹುದು. ತುಸು ಎಚ್ಚರವಿರಬೇಕಾಗಿರುವುದು ಮಾತ್ರ ದ್ರೋಣಾಚಾರ್ಯರಂತಹ ಗಾಡ್ ಫಾದರ್ ಬಗ್ಗೆ! ಏಕಲವ್ಯ ದ್ರೋಣರನ್ನು ಗುರುಗಳೆಂದು ಒಪ್ಪಿ, ಮರೆಯಲ್ಲೇ ನಿಂತು ಬಿಲ್ವಿದ್ಯೆ ಪ್ರವೀಣನಾದರೂ, ದ್ರೋಣರು ಒಪ್ಪಿಕೊಂಡದ್ದು ಅರ್ಜುನನ ಮೇಲಿನ ಶಿಷ್ಯಪ್ರೀತಿಯನ್ನು. ದ್ರೋಣರ ಕುರುಡು ಮೋಹ ಪ್ರತಿಭಾನ್ವಿತ ಏಕಲವ್ಯನ ಶಸ್ತ್ರ ವಿದ್ಯೆಗೆ ಮಾರಕವಾದಂತೆ ‘ಗಾಡ್ ಫಾದರ್’ ಎನ್ನಿಸಿಕೊಂಡವರು ಶಿಷ್ಯರ ಸಾಹಿತ್ಯ ಹೇಗೇ ಇದ್ದರೂ ಹೊಗಳಿಕೆಯ ಮೊಳೆ ಹೊಡೆದು ಶಿಫಾರಸ್ಸಿನ ಫ್ರೇಮ್ ಹಾಕಿ ತೂಗಿ ಬಿಟ್ಟರೆ ಹೊಸ ಬರೆಹಗಾರರ ಭವಿಷ್ಯಕ್ಕೆ ಮಾರಕವಾಗುವುದರ ಜೊತೆಗೆ ಪ್ರತಿಭಾನ್ವಿತ ಲೇಖಕರು ಅವಕಾಶ ವಂಚಿತರಾಗುವ ಅಪಾಯಗಳೇ ಹೆಚ್ಚು.
‘ಗಾಡ್ ಫಾದರ್’ ಪರಿಕಲ್ಪನೆ ಹೀಗಿದ್ದರೆ ಚೆನ್ನ:
ಲೇಖಕನ ಮುಖ್ಯ ಆಶಯವೇ ತನ್ನ ಸುತ್ತಲೂ ನಡೆಯುವ ಘಟನೆಗಳನ್ನು, ಬದುಕಿನ ಚಿತ್ರಣವನ್ನು ತನ್ನದೇ ಶೈಲಿಯಲ್ಲಿ ತೆರೆದಿಡುವುದು. ಗಾಡ್ ಫಾದರ್ ಪರಿಕಲ್ಪನೆ ಇಲ್ಲದ ಕಾಲದಲ್ಲಿಯೂ ತೇಜಸ್ವಿ, ಚಿತ್ತಾಲರಂತಹ ಹಲವಾರು ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ದುಡಿದವರು. ಇವತ್ತಿಗೂ ಅವರ ಬರೆಹಗಳು ಓದುಗರ ಮನಮುಟ್ಟುತ್ತದೆಯೆಂದರೆ ಅಲ್ಲಿ ಗಾಡ್ ಫಾದರ್ ಯಾರು ಎಂಬ ಪ್ರಶ್ನೆ ಕಾಡುತ್ತದೆ? ಅವರೆಲ್ಲರ ಬರೆಹದ ಶೈಲಿಯೇ ಗಾಡ್ ಫಾದರ್ ಆಗಿರುವುದಕ್ಕೆ ಬಹುಶಃ ಎಲ್ಲ ಕಾಲಕ್ಕೂ ಕೃತಿಗಳನ್ನು ಮೆಚ್ಚಿಕೊಳ್ಳುತ್ತೇವೆ. ಹಾಗಿದ್ದರೆ ವ್ಯಕ್ತಿಯಾಗಿಯಷ್ಟೇ ಗಾಡ್ ಫಾದರ್ ಯಾಕಿರಬೇಕು? ಲೇಖಕನ ಓದು, ದಿಟ್ಟ ಬರೆಹ, ಅನುಭವ ಇವು ಗಾಡ್ ಫಾದರ್ ಯಾಕಾಗಬಾರದು? ವ್ಯಕ್ತಿಯನ್ನಷ್ಟೇ ಲೇಖಕ ಗಾಡ್ ಫಾದರ್ ಆಗಿ ನೋಡಲಾರಂಭಿಸಿದರೆ ಅಲ್ಲಿ ‘ವ್ಯಕ್ತಿ ಭಕ್ತಿ’ ಹುಟ್ಟಿಕೊಳ್ಳುವ ಭೀತಿಯಿದೆ. ಲೇಖಕ ತನಗಿಷ್ಟ ಇಲ್ಲದಿದ್ದರೂ ಗಾಡ್ ಫಾದರ್ ಎಂಬಾತನ ಸಿದ್ಧಾಂತಗಳನ್ನು ತತ್ವಗಳನ್ನು ಒಪ್ಪಿಕೊಳ್ಳಲಾರಂಭಿಸಿದರೆ ‘ತನ್ನತನ’ ಎಂಬುದನ್ನು ಲೇಖಕ ಕಳೆದುಕೊಳ್ಳುವ ಅಪಾಯವೂ ಇದೆ.
ಸೋಶಿಯಲ್ ಮೀಡಿಯಾ ಗಾಡ್ ಫಾದರ್!: ಇತ್ತೀಚಿನ ದಿನಗಳಲ್ಲಿ ಓದುವವರಿಗಿಂತ ಬರೆಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂಬುದು ಜನಸಾಮಾನ್ಯರ ಮಾತು. ಸೋಶಿಯಲ್ ಮೀಡಿಯಾಗಳಲ್ಲಿ ನಾಲ್ಕು ಸಾಲು ಬರೆದು ‘ತಾನೂ ಸಾಹಿತಿ’ ಎಂಬ ಭ್ರಮೆಯಲ್ಲಿ ಬದುಕುತ್ತಿರುವವರೂ ಇದ್ದಾರೆ. ಆದರೆ ಎಲ್ಲ ಕಾಲಕ್ಕೂ ಲೇಖಕನಿಗೆ ಬಹುಮುಖ್ಯವಾಗುವುದು ಓದು. ತಾನು ಬರೆದುದರ ಮರುಓದಿನ ಜೊತೆಗೆ ಎಲ್ಲಾ ಪ್ರಕಾರದ ಸಾಹಿತ್ಯ ಅಧ್ಯಯನದಲ್ಲಿ ತೊಡಗಿದರೆ ಮಾತ್ರ ಒಂದು ಸೃಜನಶೀಲ ಜಗತ್ತನ್ನು ಕಟ್ಟಿಕೊಳ್ಳಬಹುದು. ಆ ಪ್ರಪಂಚದಲ್ಲಿ ಲೇಖಕನಿಗೆ ಪೂರ್ತಿ ಸ್ವಾತಂತ್ರ್ಯವಿದೆ. ಗಾಡ್ ಫಾದರ್ ಹಂಗಿಲ್ಲದೆ ಮುಕ್ತವಾಗಿ ತನಗೆ ತೋಚಿರುವುದನ್ನು ಬರೆಯುವ ಅವಕಾಶ ಇದೆ. ಸಾಹಿತ್ಯದ ಸ್ವಾತಂತ್ರ್ಯ ಗಾಡ್ ಫಾದರ್ ಮುಷ್ಟಿಯೊಳಗೆ ಸಿಲುಕಿದರೆ ಬರೆಹಗಳು ಪ್ರಶಸ್ತಿ, ಪ್ರಮಾಣಪತ್ರಕ್ಕೆ ಸೀಮಿತವಾಗುತ್ತದೆ. ಬರೆಯುವು ದಕ್ಕೆ ಅಧ್ಯಯನ, ಅಧ್ಯಯನಕ್ಕೆ ಓದು, ಓದಿಗೆ ಅನುಭವ ಗಾಡ್ ಫಾದರ್ ಆದರೆ ಸಾಹಿತ್ಯ ಲೋಕ ಎಲ್ಲಾ ಕಾಲಕ್ಕೂ ಓದುಗನಿಗೆ ಹತ್ತಿರವಾಗಬಲ್ಲದು
” ಸಾಹಿತ್ಯವೆನ್ನುವುದು ಕ್ರಿಯಾತ್ಮಕ ಜಗತ್ತು. ಇಲ್ಲಿ ಎಲ್ಲರೂ ಏಕಲವ್ಯ, ಬಬ್ರು ವಾಹನರಂತಿರಬೇಕು. ‘ನಾನು ಮತ್ತು ನನ್ನ ಕ್ರಿಯಾತ್ಮಕ ಜಗತ್ತು’ ಇದನ್ನು ಓದುಗನಿಗೆ ದಾಟಿಸುವ ಕೆಲಸ ಸಾಹಿತಿಗಳದ್ದು. ಕೈ ಕಾಲು ಗಟ್ಟಿಯಿದ್ದಾತ ಲಿಫ್ಟ್ ಬಳಸುವ ಅವಶ್ಯಕತೆ ಇಲ್ಲ. ಹಾಗೆಯೇ ಲೇಖಕನಿಗೆ ತನ್ನ ಕೃತಿಯ ಮೇಲೆ ನಂಬಿಕೆಯಿದ್ದರೆ ಆತ ಬರೆದು ಪಕ್ವಗೊಳ್ಳಬೇಕು. ಅದು ಬಿಟ್ಟು ಯಾರೋ ಒಬ್ಬರು ತನಗೆ ಅವಕಾಶ ಕೊಡುತ್ತಾರೆ ಎಂದು ಕಾಯುವುದು ಹಾಸ್ಯಾಸ್ಪದ. ಕವಿ ಅಥವಾ ಕತೆಗಾರ ಕೇವಲ ಪಾತ್ರವಾಗಿರಬೇಕು. ಆತ ಮನ್ನಣೆ ಅಥವಾ ಪ್ರಚಾರದ ಗೀಳಿಗೆ ಬಿದ್ದರೆ ಉತ್ಸವ ಮೂರ್ತಿ ಎನ್ನಿಸಿಕೊಳ್ಳುತ್ತಾನೆ. ಬರೆಹಕ್ಕೆ ಮಾನ್ಯತೆ ಸಿಗಬೇಕೇ ಹೊರತು ವ್ಯಕ್ತಿಗಲ್ಲ. ಗಾಡ್ ಫಾದರ್ ಇದ್ದರೆ ಅದೊಂದು ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಂತೆ. ಲೇಖಕನ ಸ್ಥಿತಿ ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತಾಗಬಹುದು. ಗಾಡ್ ಫಾದರ್ ಇದ್ದಷ್ಟೂ ದಾಸ್ಯ, ಗುಲಾಮ ಗಿರಿ ಹೆಚ್ಚುತ್ತದೆ. ಗಾಡ್ ಫಾದರ್‌ಗಳಿಂದ ಸಿಗುವ ಪ್ರಶಸ್ತಿ ಪತ್ರ, ಪ್ರಮಾಣ ಪತ್ರ ವನ್ನು ‘ಶಿಫಾರಸ್ಸಿನಿಂದ ಸಿಗುವ ಉದ್ಯೋಗ’ದ ಹಾಗೆ ಸಾಮಾನ್ಯ ಓದುಗ ನೋಡುತ್ತಾನೆ. ಆದ್ದರಿಂದ ಸಾಹಿತ್ಯ ವೆಂಬ ಕ್ರಿಯಾತ್ಮಕ ಲೋಕಕ್ಕೆ ಬೇಕಾಗಿರುವುದು ಗಾಡ್ ಫಾದರ್‌ಗಳಲ್ಲ, ಓದುಗರು ಮಾತ್ರ.”
-ಶಶಿ ತರೀಕೆರೆ, ಕತೆಗಾರ
” ನಮ್ಮ ಕುಟುಂಬದಲ್ಲಿ ಮೊದಲು ಕಾಲೇಜು ಮೆಟ್ಟಿಲು ಹತ್ತಿದವನು ನಾನೇ. ಪುಸ್ತಕಗಳ ಓದು ನನ್ನನ್ನು ಸಾಹಿತ್ಯದ ಕಡೆಗೆ ತಿರುಗಿಸಿತು. ಕತೆಗಳನ್ನು ಓದುತ್ತಾ ‘ನನ್ನೊಳಗೂ ಇಂತಹ ಹತ್ತಾರು ಕತೆಗಳು ಇವೆಯಲ್ಲ’ ಎಂದುಕೊಂಡು ಬರೆದು ಸಾಹಿತ್ಯ ಪಯಣ ಆರಂಭಿಸಿದೆ. ಹಿರಿಯ ಲೇಖಕರು ಸಲಹೆ, ಸೂಚನೆ ನೀಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಹೊಸ ಜನರನ್ನು ಭೇಟಿಯಾಗದಿದ್ದರೆ ಅನುಭವವನ್ನು ದಕ್ಕಿಸಿಕೊಳ್ಳುವುದಾದರೂ ಹೇಗೆ? ಒಬ್ಬ ಲೇಖಕನಿಗೆ ಪುಸ್ತಕ, ಓದು ಮತ್ತು ಅನುಭವ ನಿಜವಾದ ಗಾಡ್ ಫಾದರ್. ಪುಸ್ತಕ ಓದಿದ ನಂತರ ‘ನಾನೂ ಹೀಗಿರುವುದನ್ನು ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸ ಮೂಡಿಸಿದರೆ ಲೇಖಕ ಮುಂದೆ ಬರುತ್ತಾನೆ. ಯುವ ಬರಹಗಾರರು ಸಿಗದ ಅವಕಾಶಗಳನ್ನು ಸವಾಲಾಗಿ ನೋಡಬೇಕೇ ಹೊರತು ಅದರಿಂದ ಕುಗ್ಗಬಾರದು. ಬರಹಕ್ಕೆ ವ್ಯಕ್ತಿಯಾಗಿ ಒಬ್ಬ ಗಾಡ್ ಫಾದರ್ ಬೇಡ. ಓದು, ದಕ್ಕಿಸಿಕೊಂಡ ಅನುಭವ ಗಾಡ್ ಫಾದರ್ ಆಗಬೇಕು.”
-ದಾದಾಪೀರ್ ಜೈಮನ್, ಕವಿ ಮತ್ತು ಕತೆಗಾರ
” ಸೃಜನಶೀಲತೆ ಇರುವುದು ತಲುಪುವುದಕ್ಕೆ. ಇತರೆ ಕಲಾಪ್ರಕಾರಗಳಂತೆ ಸಾಹಿತ್ಯವೂ ಜನರು ಓದಬೇಕು ಎನ್ನುವ ಕಾರಣಕ್ಕಾಗಿ ಹುಟ್ಟಿಕೊಳ್ಳುತ್ತದೆ. ಸಾಹಿತಿ ಎಷ್ಟು ಬೇಕಾದರೂ ಬರೆಯಬಹುದು, ಅದು ಅವನ ಸೃಜನಶೀಲತ್ವದ ಮೇಲೆ ಅವಲಂಬಿತ. ಆದರೆ, ಬರೆದ ಸಾಹಿತ್ಯ ಓದುಗರನ್ನು ತಲುಪಬೇಕಾದರೆ ಒಂದು ಪ್ರಬಲ ಮಾಧ್ಯಮ ಬೇಕೇ ಬೇಕು. ಅದು ವ್ಯಕ್ತಿಯಾಗಿದ್ದರೆ, ಗಾಡ್ ಫಾದರ್ ಆದರೆ ತಪ್ಪೇನಿಲ್ಲ. ಹಿಂದೆ ಆಸ್ಥಾನ ಕವಿಗಳಿಗೆ ಅರಸರೇ ಗಾಡ್ ಫಾದರ್ ಆಗಿರುತ್ತಿದ್ದರು. ಪ್ರಕಾರ ಪಂಡಿತರೆಂದು ಶಿಫಾರಸ್ಸು ನೀಡುತ್ತಿದ್ದರು. ಗಾಡ್ ಫಾದರ್ ಎನ್ನಿಸಿಕೊಂಡವರು ಅರ್ಹರನ್ನು ಶಿಫಾರಸ್ಸು ಮಾಡಿದರೆ ಅಪಾಯವಿಲ್ಲ. ಆದರೆ ಅನರ್ಹರಿಗೆ ಮಣೆ ಹಾಕದಂತೆ ಎಚ್ಚರವಿರಬೇಕು. ಬರೆಯುವುದಕ್ಕೆ ಗಾಡ್ ಫಾದರ್ ಅಗತ್ಯವಿಲ್ಲ. ಭಾವನೆಗಳು ನಮ್ಮೊಳಗೆ ಹುಟ್ಟುವಂತಹದ್ದು. ಆದರೆ ಬರೆದದ್ದು ಜನರನ್ನು ತಲುಪಲು ಮಾಧ್ಯಮವಾಗಿ ‘ಗಾಡ್ ಫಾದರ್’ ಬೇಕೇ ಬೇಕು. ‘ಗಾಡ್ ಫಾದರ್’ ಎಂದ ಕೂಡಲೇ ಸಂಶಯದಿಂದ ನೋಡುವುದು ಸರಿಯಲ್ಲ.”
-ಚೇತನಾ ತೀರ್ಥಹಳ್ಳಿ, ಲೇಖಕಿ




