Mysore
27
clear sky

Social Media

ಬುಧವಾರ, 21 ಜನವರಿ 2026
Light
Dark

ಇಷ್ಟಾದರೂ ಇನ್ನೂ ಇವರಿಗೆಲ್ಲಾ ಗಂಡು ಮಗುವೇ ಬೇಕು!

ಮಂಗಳ

ಪಾಲನೆ ಪೋಷಣೆಗೆ ಹೆಣ್ಣು ಬೇಕು, ಮನೆಯ ಕೆಲಸಕ್ಕೆ ಹೆಣ್ಣು ಬೇಕು, ವಯಸ್ಸಾದಾಗ ಸಂಸಾರ ನಡೆಸುವ ಹೆಣ್ಣು ಆಸರೆಯಾಗಿರಬೇಕು. ಆದರೆ ಸಮಾಜಕ್ಕೆ ಮಾತ್ರ ಹುಟ್ಟುವ ಮಗು ಈಗಲೂ ಗಂಡೇ ಆಗಿರಬೇಕು. ಇದೆಂತಹ ವಿಪರ್ಯಾಸ!

ಕೆ.ಆರ್.ಆಸ್ಪತ್ರೆಗೆ ಸಂಬಂಧಿಕರೊಬ್ಬರನ್ನು ಕಣ್ಣಿನ ಸರ್ಜರಿಗಾಗಿ ಕರೆದುಕೊಂಡು ಹೋಗಿದ್ದೆ. ಆಸ್ಪತ್ರೆಯ ಬಾಗಿಲಿಂದ ಹಿಡಿದು ವಾರ್ಡ್ ತನಕ ಬರಿ ಹೆಣ್ಣು ಮಕ್ಕಳೇ. ಕಣ್ಣಿನ ಆಪರೇಷನ್ ಬ್ಯಾಂಡೇಜ್ ಬಿಚ್ಚಲು ಒಳಗೆ ಪೇಷಂಟ್‌ಗಳು ಹೋದಾಗ ಹೊರಗೆ ನಿಂತು ಅಲ್ಲಿ ಇದ್ದವರನ್ನು ಮಾತಾನಾಡಿಸಲು ಆರಂಭಿಸಿದೆ. ಒಬ್ಬೊಬ್ಬರದ್ದೂ ಒಂದೊಂದು ಕಥೆ.

ಕೆಲವರು ಅಪ್ಪಂದಿರನ್ನು, ಇನ್ನೂ ಕೆಲವರು ಅವ್ವ, ಅಜ್ಜಿ, ತಾತ, ಮಾವ, ಅತ್ತೆ, ಅಣ್ಣ ಹೀಗೆ ತಮ್ಮವರ ಕಣ್ಣಿನ ತಪಾಸಣೆಗಾಗಿ, ಆಪರೇಷನ್ ಮಾಡಿಸುವ ಸಲುವಾಗಿ ಕರೆದುಕೊಂಡು ಬಂದಿದ್ದರು. ಹೀಗೆ ಬಂದವರಲ್ಲಿ ಹಳ್ಳಿಯಿಂದ ಬಂದವರು ಶೇ.೯೫ರಷ್ಟು ಹೆಂಗಸರೇ ಆಗಿದ್ದರು.

ಆಸ್ಪತ್ರೆಯಲ್ಲಿ ಬರೆದುಕೊಡುವ ನೂರಾರು ಚೆಕಪ್‌ಗಳು, ಅವುಗಳಿಗಾಗಿ ಅಲೆದಾಟ,ಒಂದೊಂದು ಕೋಣೆಯಲ್ಲಿ ಒಂದೊಂದು ರೀತಿಯ ಚೆಕಪ್‌ಗಳು, ಉಚಿತಕ್ಕಾಗಿ ಸೀಲ್ ಹಾಕಿಸಲು ಪರದಾಟ, ನೂರಾರು ದಾಖಲೆಗಳ ಜೆರಾಕ್ಸ್, ರಾತ್ರಿಯ ಪಾಳಿಯಾಗಿ ಅವರನ್ನ ಕಾಯುವುದು. ಇದರ ನಡುವೆ ಗೊತ್ತಿಲ್ಲದೇ ತಪ್ಪು ಮಾಡಿದಾಗ ಆಸ್ಪತ್ರೆಯವರು ಬೈಯುವುದು, ಮತ್ತೆ ಆಪರೇಷನ್ ಆದ ಮೇಲೆ ಚೆಕಪ್‌ಗೆಂದು ಕರೆದುಕೊಂಡು ಬರುವುದು.

ಇದೆಲ್ಲವನ್ನೂ ಯಾವುದೇ ಅಪೇಕ್ಷೆ ಇಲ್ಲದೆ ನನ್ನವ್ವ, ನನ್ನಪ್ಪ, ನನ್ನ ಅಣ್ಣ, ಈಗ ನನ್ನದು ಎಂದುಕೊಳ್ಳುವ ಈ ಹೆಣ್ಣು ಮಕ್ಕಳ ಕಥೆ ನಿತ್ಯವೂ ಆಸ್ಪತ್ರೆಯ ಈ ಸಾಲಿನಲ್ಲಿ ಇದ್ದೇ ಇರುತ್ತದೆಯೆಂದು ಆಸ್ಪತ್ರೆಯ ನರ್ಸ್ ಒಬ್ಬರು ಹೇಳುತ್ತಿದ್ದರು. ಒಬ್ಬರು ವಿಕಲಚೇತನ ಮಹಿಳೆ, ನಡೆಯಲು ಕಷ್ಟವಾದರೂ ತನ್ನ ತಂದೆಯನ್ನು ಕರೆದುಕೊಂಡು ಬಂದಿದ್ದರು. ‘ನಾನು ವಿಕಲ ಚೇತನ ಹೆಣ್ಣು ಮಗು ಅಂಥ ಅಪ್ಪ ಬೇಡವೆಂದರೂ ಅವ್ವ ಸಾಕಿದ್ಳು. ಈಗ ನನಗೆ ಎರಡು ಮಕ್ಕಳು, ಗೌರ್ಮೆಂಟ್ ಇಸ್ಕೂಲ್‌ನಲ್ಲಿ ಅಡುಗೆ ಕೆಲಸ ಮಾಡ್ತೀನಿ’ ಎಂದು ಹೇಳುತ್ತಾ ಅವರ ಅಪ್ಪ ಬರುವುದನ್ನು ನೋಡಿ, ‘ಅಪ್ಪ ಬಾ, ಬಾತ್ರೂಂಗೆ ಹೋಗೋದಕ್ಕೆ ನಿಂಗೆ ಗೊತ್ತಾಗಲ್ಲ, ನಾನು ಬರ್ತೀನಿ ಇರು’ ಎಂದು ಓಡಿ ಹೋಗಿ ಅಪ್ಪನ ಕೈ ಹಿಡಿದು ಕರೆದುಕೊಂಡು ಹೋದರು.

ಇನ್ನೊಬ್ಬ ಹೆಣ್ಣುಮಗಳು ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಾರಂತೆ, ತಂದೆ ಪರಿಸ್ಥಿತಿ ಕಂಡು ರಜೆ ಹಾಕಿ ಮೂರು ದಿನಗಳಿಂದ ಇಲ್ಲೇ ಇದ್ದಾರಂತೆ. ‘ಮೇಡಂ ಇವತ್ತು ನನ್ನ ಅಪ್ಪನ ಅಪರೇಷನ್ ಆಗ್ಲಿ ಆಮೇಲೆ ನಮ್ಮ ಅವ್ವನ್ನೂ ಕರ್ಕೊಂಡ್ ಬರ್ತೀನಿ’ ಎಂದು ಹೇಳಿ, ‘ನಾವು ಇಬ್ಬರು ಹೆಣ್ಣು ಮಕ್ಕಳು ಮೇಡಂ, ನನಗೊಬ್ಬ ತಮ್ಮ ಇದ್ದಾನೆ. ೧೫ ವರ್ಷಕ್ಕೆ ನನ್ನ ಮದುವೆ ಮಾಡಿಬಿಟ್ಟರು. ಓದುವ ಆಸೆ ಇತ್ತು, ಆದ್ರೆ ಏನ್ ಮಾಡ್ಲಿ ಮನೆ ಕಷ್ಟ, ಮದುವೆ ಆಗಿ ನನ್ನ ಕಷ್ಟ ಹೇಳ್ಕೊಂಡ್ರೆ, ಮನೆ ಆಸ್ತಿ ಕೇಳ್ ಬೇಡ ಕನವ್ವ, ನಿಂಗೆ ಇರೋದ್ ಒಬ್ನೆ ತಮ್ಮ, ಕಷ್ಟನೋ ಸುಖನೋ ಗಂಡನ ಮನೆ ಬಿಟ್ಟ ಬರ್ ಬೇಡ ಕಣವ್ವ’ ಅಂತಿದ್ರು, ಈಗ ಅವರೇ ಕಷ್ಟಾ ಅಂತ ಬಂದಿದ್ದಾರೆ. ಅವರು ನನ್ನ ಹೆತ್ತವ್ರು, ಅವರೇ ನನ್ನ ಆಸ್ತಿ ಅಲ್ವಾ ಅಂತ ಕರ್ಕೊಂಡು ಬಂದೆ’ ಅಂಥ ಹೇಳಿದರು.

ಮತ್ತೊಬ್ಬಾಕೆ ಮುಸ್ಲಿಂ ಹೆಣ್ಣು ಮಗಳು, ‘ನಾವು ಮೂರು ಜನ ಹೆಣ್ಣು ಮಕ್ಕಳು. ಒಬ್ಬೊಬ್ಬರೂ ಒಂದೊಂದು ದಿನ ಆಸ್ಪತ್ರೆಗೆ ಬಂದು ನೋಡ್ಕೋತೀವಿ. ನನ್ನ ಅಪ್ಪಂಗೆ ನಾನು ಕೊನೇ ಮಗಳು, ಗಂಡು ಮಗು ಆಗಿಲ್ಲ ಅಂತ ನನ್ನನ್ನು ಇದೇ ಆಸ್ಪತ್ರೆನಲ್ಲಿ ಸಾಯಿಸೋದಕ್ಕೆ ಹೋಗಿದ್ದರಂತೆ. ಈಗ ನೋಡಿ ನಾವು ಚೆನ್ನಾಗಿ ನೋಡ್ಕೋತಾ ಇಲ್ವ. ನಮ್ಮ ಅಪ್ಪ ಈಗೆಲ್ಲ ಮಾಡ್ದ ಅಂತ ತಳ್ಳಕ್ ಆಗತ್ತಾ ಹೇಳಿ’ ಎಂದು ಕಣ್ಣೀರು ಹಾಕುತ್ತಾ ಪ್ರಶ್ನಿಸಿ ‘ಕೂಗಿದ್ರು, ಬರ್ತಿನಿ ಇರಿ’ ಎಂದು ಹೇಳಿ ವಾರ್ಡ್ ಕಡೆ ಹೋದರು.ಇದೇಗುಂಪಿನಲ್ಲಿ ಒಬ್ಬ ಹೆಂಗಸು ಬಂದು ‘ನಿಂಗೆ ಎಷ್ಟ್ ಜನ ಮಕ್ಕಳವ್ವ?’ ಎಂದು ಕೇಳಿದರು. ‘ಒಬ್ಬಳೇ ಮಗಳು ಆಂಟಿ’ ಎಂದೆ. ‘ಅಯ್ಯೋ ಒಂದು ಗಂಡಾಗಿದ್ರೆ ಚನ್ನಾಗಿರೋದು. ಪಾಪ ಏನು ಮಾಡಕಾಗತ್ತೆ’ ಎಂದು ಹೇಳಿ ಹೊರಟೆ ಹೋದರು.

ಪಾಲನೆ ಪೋಷಣೆಗೆ ಹೆಣ್ಣು ಬೇಕು, ಮನೆಯ ಕೆಲಸಕ್ಕೆ ಹೆಣ್ಣು ಬೇಕು, ವಯಸ್ಸಾದಾಗ ಸಂಸಾರ ನಡೆಸುವ ಹೆಣ್ಣು ಆಸರೆಯಾಗಿರಬೇಕು. ಆದರೆ ಸಮಾಜಕ್ಕೆ ಮಾತ್ರ ಈಗಲೂ ಹುಟ್ಟುವ ಮಗು ಗಂಡೇ ಆಗಿರಬೇಕು. ವಾರಸುದಾರ, ಅವನೇ ವಂಶೋದ್ಧಾರಕ, ಅವರ ಆಸ್ತಿಗೂ ಅವನೇ ಹಕ್ಕುದಾರ, ಸತ್ತಾಗ ಅವನೇ ಕೊಳ್ಳಿ ಇಟ್ಟರೆ ಸ್ವರ್ಗಪ್ರಾಪ್ತಿ!

ನಾವು ಮಕ್ಕಳನ್ನು ಸಮಾನವಾಗಿ ನೋಡದಿದ್ದರೆ, ಗಂಡು-ಹೆಣ್ಣು ಇಬ್ಬರು ಸಮಾನರು ಎಂಬ ಪಾಠವನ್ನು ಮಕ್ಕಳಿಗೆ ಹೇಳಿಕೊಡದಿದ್ದರೆ, ಇಂತಹ ನೂರಾರು ಸತ್ಯದರ್ಶನ ನಮ್ಮ ಕಣ್ಮುಂದೆ ಇದ್ದಾಗಲೂ, ವರುಷಗಳು ಕಳೆದು ಹೋದರೂ ಲಿಂಗ ಅಸಮಾನತೆ, ತಾರತಮ್ಯ, ಭೇದ -ಭಾವ ನಡೆಯುತ್ತಲೇ ಇರುತ್ತದೆ

Tags:
error: Content is protected !!