Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗೂಳಿಮದ್ದು

  • ಸ್ವಾಮಿ ಪೊನ್ನಾಚಿ

ಪೊನ್ನಾಚಿಗೆ ಹೋದಾಗ ನಾನು ಸೋಮಣ್ಣ, ಲಾಳಕ್ಕಿ, ಶಾಂತ, ಸಣ್ಣಕ್ಕಿ ಮುಂತಾದ ಸ್ನೇಹಿತರು ಸೇರಿಕೊಂಡು; ಜೇನುಹಳ್ಳದ ಹತ್ತಿರ ಗೂಳಿಮದ್ದು ತಯಾರಿಸಿ ಕುಡಿದು, ಅಲ್ಲೇ ಸಂಜೆವರೆಗೂ ಮಲಗಿದ್ದು ಈಜಾಡಿ ಬರುತ್ತಿದ್ದೆವು. ಸೋಮಣ್ಣ ಕಾಡುಮೇಡು ಅಲೆದು, ಸರಿಸುವಾರು ತೊಂಬತ್ತೆರಡು ತರಹದ ಬೇರುಗಳನ್ನು ತಂದು, ಒಣಗಿಸಿ ಕುಟ್ಟಿ, ಪುಡಿ ಮಾಡಿಟ್ಟುಕೊಂಡಿರುತ್ತಿದ್ದ. ಐದಾರು ಲೀಟರ್ ಹಸೀ ಹಾಲಿಗೆ ಕಲ್ಲುಸಕ್ಕರೆ, ಕಾಯಿತುರಿ, ಎಳ್ಳು, ಕಾಂಪುವ್ವ ಎಲ್ಲವನ್ನೂ ನುಣ್ಣಗೆ ಅರೆದು ಮಿಕ್ಸ್ ಮಾಡಿ ಈ ತೊಂಬತ್ತೆರಡು ಬೇರಿನ ಪುಡಿಯನ್ನು ಚೆನ್ನಾಗಿ ಕಲಸಿ, ಮೂರು ನಾಲ್ಕು ಲೋಟ ಕುಡಿದು ಬಿಟ್ಟರೆ; ಸಂಜೆ ತನಕ ಹಸಿವೆಯೇ ಆಗುತ್ತಿರಲಿಲ್ಲ. ಢರ್ರೆಂದು ತೇಗು ಮಾತ್ರ ಐದೈದು ನಿಮಿಷಕ್ಕೂ ಬರುತಿತ್ತು… ಹಸಿಹಾಲು, ಎಳ್ಳು, ಈ ಪೌಡರ್ ಎಲ್ಲಾ ಸೇರಿಕೊಂಡು ಹೊಟ್ಟೆಯೊಳಗೆ ಪಲ್ಟೀ ಹೊಡೆಯುವಾಗ ಉಂಟಾಗುವ ತೇಗಿನಿಂದ ವಿಚಿತ್ರವಾದ ವಾಸನೆ ಬಂದು, ವಾಕರಿಕೆ ಬರಿಸುತಿತ್ತು. ಇಡೀ ದಿನ ಮೈ ಹೆಬ್ಬಾವಿನಂತೆ ಜಡವಾಗಿ ಬಿಡುವುದು. ಏನು ಕೆಲಸವಿಲ್ಲದೆ ಸುಮ್ಮನೆ ಇಡೀ ದಿನ ಬಿದ್ದುಕೊಂಡಿರಬೇಕು ಎನ್ನಿಸುತಿತ್ತು. ನಾವು ಕುಡಿದ ಮದ್ದು ಸಂಪೂರ್ಣ ಜೀರ್ಣವಾಗುವವರೆಗೂ ನಡುವೆ ಏನೂ ತಿನ್ನುವಂತಿರಲಿಲ್ಲ. ವಿಶೇಷವಾಗಿ ಹುಳಿ ಪದಾರ್ಥವನ್ನು ಮುಟ್ಟುವ ಹಾಗೇ ಇಲ್ಲ. ಒಂದು ದಿನ ಹೇಗೋ ಕಷ್ಟದಿಂದ ಕಳೆದುಬಿಟ್ಟರೆ; ಮಾರನೇ ದಿನ ಇಡೀ ದೇಹ ಚಿಗುರೆಮರಿಯಂತೆ ಪುಟಿಯುತಿತ್ತು. ಇನ್ನಿಲ್ಲದ ಉತ್ಸಾಹ, ಶಕ್ತಿ, ಹುರುಪು. ಬಲಹೀನರಿಗೆ, ನರದೌರ್ಬಲ್ಯ, ದಮ್ಮು, ಉಬ್ಬಸ ಇರುವವರಿಗೆ ತಲೆ ತಲಾಂತರದಿಂದ ಬಂದ ಸಿದ್ದ ಔಷಧಿ ಇದು. ಸೋಮಣ್ಣನ ತಾತ ಪಟಗಾರ ಮುನಿಯಪ್ಪನವರಿಂದ ಈ ವಿದ್ಯೆ ಮೊಮ್ಮಗನಿಗೆ ಧಾರೆ ಎರೆಯಲ್ಪಟ್ಟಿತ್ತು.

ಮೊದಮೊದಲು ಉಬ್ಬಸ, ಸುಸ್ತು ಸಂಕಟ ಅಂದವರಿಗೆಲ್ಲಾ ಸೋಮಣ್ಣ ಕಾಡಿಗೆ ಹೋಗಿ ಬೇರುಗಳನ್ನು ತಂದು ಗೂಳಿಮದ್ದು ಸಿದ್ದಮಾಡಿ ಕೊಡುತ್ತಿದ್ದ. ಯಾವಾಗೆಂದರೆ ಅವಾಗ ಕಾಡಿಗೆ ಹೋಗುವುದನ್ನು ಫಾರೆಸ್ಟರು ನಿರ್ಬಂಧಿಸಿದ ಮೇಲೆ ತುಂಬಾ ಅಗತ್ಯವಿದ್ದರೆ ವಾತ್ರ ಔಷಧಿ ಮಾಡುತಿದ್ದ. ನಾವು ಮಾತ್ರ ಸಮಯ ಸಿಕ್ಕಾಗಲೆಲ್ಲಾ ಹೀಗೇ ಗುಟ್ಟಾಗಿ, ಒಟ್ಟಾಗಿ ಗೂಳಿಮದ್ದು ಸೇವಿಸಿಕೊಂಡು ಉತ್ಸಾಹದಿಂದ ಓಡಾಡುತಿದ್ದೆವು. ನಮ್ಮನ್ನು ನೋಡಿ ಹಲವರಿಗೆ ಕುತೂಹಲ ಮತ್ತು ಹೊಟ್ಟೆಕಿಚ್ಚು. ಸೋಮಣ್ಣನ ಮೇಲೆ ಕಾಡಿನಲ್ಲಿ ಜನ ಸೇರಿಸಿಕೊಂಡು ಕಳ್ಳಭಟ್ಟಿ ಕಾಯಿಸುತ್ತಾನೆ ಎಂದು ಯಾರೋ ಫಾರೆಸ್ಟರ್‌ಗೆ ದೂರುಕೊಟ್ಟಿದ್ದರು. ಆ ಫಾರೆಸ್ಟರೋ ಕೇಸು ಹಾಕಿಸುವ ಲೆವೆಲ್‌ಗೆ ವಾರ್ನು ವಾಡಿ ಹೋಗಿದ್ದ. ಈ ಸುದ್ದಿ ರೂಪಾಂತರಗೊಂಡು ಏನೇನೋ ಪ್ರಚಾರ ಪಡೆಯಿತು. ಯಾರೋ ಪುಣ್ಯಾತ್ಮನೊಬ್ಬ ಗೂಳಿಮದ್ದು ಸೇವಿಸಿದ ಗಂಡಸು ಗೂಳಿಯಂತಾಗುತ್ತಾನೆಂದೂ ಸುದ್ದಿ ಹಬ್ಬಿಸಿದ ಮೇಲಂತೂ ಈ ಗೂಳಿಮದ್ದಿನ ಸೇವನೆಗೆ ಹಲವು ಮಂದಿ ಹಾತೊರೆಯುತಿದ್ದರು.

ಊರಿನಲ್ಲಿ ಸದಾ ತರ್ಲೆ ಮಾಡುತ್ತಾ ಪೋಕರಿಯಾಗಿ ತಿರುಗಾಡುತಿದ್ದ ಸಿದ್ದರಾಜು ಹೇಗಾದರೂ ಮಾಡಿ ಗೂಳಿಮದ್ದು ಸೇವಿಸಲೇಬೇಕೆಂದು ಹಠ ಹಿಡಿದಿದ್ದ. ʼನೋಡೋಕೆ ಗೂಳಿ ತರ ಇದ್ದಿ. ಕಿಸಿಯೋಕೆ ಮಾತ್ರ ಆಗೋದಿಲ್ಲ ಎದ್ದೋಗು ಮೂದೇವಿʼ ಎಂದು ಅವನ ಗೆಳತಿ ಮೂದಲಿಸಿದ ಮೇಲೆ, ಗೂಳಿಮದ್ದು ತೆಗೆದುಕೊಂಡು ತನ್ನ ಪರಾಕ್ರಮವನ್ನು ತೋರಿಯೇ ಬಿಡಬೇಕೆಂದು ಅವನು ಬಂದಿದ್ದ. ಇವನನ್ನು ಮತ್ತೆ ಪೇಚಿಗೆ ಸಿಕ್ಕಿಸಿ ಮಜಾ ತೆಗೆದುಕೊಳ್ಳಬೇಕೆಂದು ಲಾಳಕ್ಕಿಯು, ಮುದ್ದು ಕುಡಿದ ಮೇಲೆ ಒಂದು ಉಂಡೆ ಹುಣಸೆಹಣ್ಣು ತಿಂದುಬಿಡು ಹೆಚ್ಚಾಗಿ ಶಕ್ತಿ ಬರುತ್ತದೆ. ಈ ವಿಷಯ ಎಲ್ಲೂ ಬಾಯಿ ಬಿಡಬೇಡ ಎಂದು ನಾಲ್ಕು ಲೋಟ ಹಸಿಹಾಲು ಕುಡಿಸಿ ಹುಣಸೆಹಣ್ಣನ್ನು ತಿನ್ನಿಸಿದ್ದ. ಈವತ್ತು ತನ್ನ ಪರಾಕ್ರಮ ನೋಡಿ ಅವಳು ಆಶ್ಚರ್ಯಪಡಬೇಕು ಎಂದು ಎತ್ತಲೂ ತಿರುಗಾಡಲು ಹೋಗದೆ ಗಡದ್ದಾಗಿ ತೋಟದಲ್ಲಿ ನಿದ್ದೆ ಮಾಡಿ ಸಂಜೆಗೆ ಸಿದ್ದವಾಗಿ ಹೋಗಿದ್ದನು. ಕಾಂಪೂವ, ಕಾಯಿತುರಿ, ಜೊತೆ ಹುಳಿ ಸೇರಿಕೊಂಡು ಸಂಜೆ ಹೊತ್ತಿಗೆ ಬಿರುಡೆ ಕಿತ್ತು ಹೋಗುವಂತೆ ಭೇದಿ ಶುರುವಾಗಿತ್ತು. ಇಡೀ ರಾತ್ರಿ ಅವಳಿಗೂ ನೀರು ಕೊಟ್ಟು ಕೊಟ್ಟು ಸಾಕಾಗಿ ʼನಿನ್ನ ಸಹವಾಸವೇ ಸಾಕು ಹೋಗೋ ಮಾರಾಯʼ ಎಂದು ಉಗಿದು ಕಳಿಸಿದ್ದಳು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ