ವಿನುತ ಕೋರಮಂಗಲ
ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು ಹೆಸರಿಟ್ಟಿದ್ದ ಎಮ್ಮೆಯ ಮೇಲೆ ಕುಳಿತುಕೊಂಡು ಹಿಂದೆ ಎರಡು ಎಮ್ಮೆಗಳು ಬರುವಂತೆ ಹಗ್ಗವನ್ನ ಹಿಡಿದುಕೊಂಡು ರಾಜವೈಭೋಗದಲ್ಲಿ ಹೋಗುತ್ತಿದ್ದೆನು. ಒಂದೊಂದು ಎಮ್ಮೆಯ ಕತ್ತಿಗೂ ಒಂದೊಂದು ಬ್ಯಾಗುಗಳ ಹೂಹಾರ. ಒಂದರಲ್ಲಿ ಅಜ್ಜಿ ಕೊಟ್ಟ ತಿಂಡಿಯಿದ್ದರೆ, ಮತ್ತೊಂದರಲ್ಲಿ ಶಾಲೆಯಲ್ಲಿ ನೀಡುತ್ತಿದ್ದ ಹೋಂವರ್ಕ್ ಪುಸ್ತಕಗಳಿರುತ್ತಿದ್ದವು. ಹಾಗೆ ಹೋಗುವ ಮಜವೇ ಬೇರೆ… ಎಮ್ಮೆಯ ಮುಂದಲಿನ ಭುಜ ಅಲುಗಾಡುತ್ತಿದ್ದರೆ, ತೊಟ್ಟಿಲಲ್ಲಿಟ್ಟು ಮಗುವನ್ನು ತೂಗಿದ ಹಾಗೆ ಅನಿಸುತ್ತಿತ್ತು.
ನಮ್ಮನ್ನು ಹೊತ್ತುಕೊಂಡು ಹೋಗುವ ಹಾಗೆ ಎಮ್ಮೆಗಳನ್ನು ಪಳಗಿಸುವುದೇ ದೊಡ್ಡ ಕೆಲಸವಾಗಿತ್ತು. ಹೊಸದಾಗಿ ಮೂಗುದಾರ ಹಾಕಿಸಿಕೊಂಡ ಪಡ್ಡೆಕರುಗಳ ಸಹವಾಸಕ್ಕಂತು ಹೋಗುತ್ತಿರಲಿಲ್ಲ. ನಿಧಾನವಾಗಿ ಅವುಗಳಿಗೆ ರೊಟ್ಟಿ ಸೀಕನ್ನ ಕೊಟ್ಟು ಪಳಗಿಸಿಕೊಳ್ಳುತ್ತಿದ್ದವು. ಎಮ್ಮೆಯ ಮೇಲೆ ಕುಳಿತು ಪುಸ್ತಕ ಹಿಡಿದು ಓದುವಾಗಲೆಲ್ಲಾ ‘ಲೇ ಮಗಾ… ಎಮ್ಮೆ ಮೇಯ್ಲಿ ಕೆಳ್ಗೆ ಇಳ್ಯೇ…‘ಎಂದು ದಾರಿಯಲ್ಲಿ ಓಡಾಡುತ್ತಿದ್ದ ಪರಿಚಿತರು ಕೂಗಿ ಹೇಳುತ್ತಿದ್ದರು. ನಾನ್ ಎಮ್ಮೆ ಮೇಲ್ ಕೂತ್ಕೊಂಡ್ರೆ ಏನಾಗುತ್ತೋ ಇವ್ರಿಗೆ… ಎಮ್ಮೆನೆ ಸುಮ್ಮನಿಲ್ವಾ… ಎಂದು ನಾನಂತು ಅವರ ಮಾತನ್ನು ಸುತರಾಂ ಕೇಳುತ್ತಿರಲಿಲ್ಲ. ಮಳೆಯಿಂದ ನೆಲ ತೇವಗೊಂಡಾಗ, ಅಣ್ಣ ಜೊತೆಯಿಲ್ಲದಿದ್ದಾಗ ನನ್ನ ಪಯಣವೆಲ್ಲಾ ಎಮ್ಮೆಯ ಮೇಲೆಯೇ.. ಎಷ್ಟೋ ಬಾರಿ ಅವುಗಳ ಮೇಲೆ ಕೂತು, ಓದುತ್ತಾ… ಓದುತ್ತಾ… ಒಮ್ಮೊಮ್ಮೆ ಆಯ ತಪ್ಪಿ ಬಿದ್ದು ಪೆಟ್ಟುಮಾಡಿಕೊಂಡದ್ದೂ ಉಂಟು. ಫಲವಾಗಿರುವ ಎಮ್ಮೆಗಳ ಮೈಮೇಲೆ ಕೂರಬಾರದೆಂದು ಅಜ್ಜಿ ತಾಕೀತು ಮಾಡಿದ್ದಳು. ಹಾಗಾಗಿ ಅವುಗಳಿಗೆ ಪುಸ್ತಕದ ಬ್ಯಾಗ್ ಹೊತ್ತುತರುವ ಕೆಲಸ ಮಾತ್ರ ಕೊಡುತ್ತಿದ್ದೆ.
ಎಮ್ಮೆಗಳು ಕರುವನ್ನು ಹಾಕುವಾಗಲಂತು ಅಜ್ಜಿ ನಮ್ಮನ್ನು ಎದುರು ಕಾವಲಿಗೆ ಕೂರಿಸಿ ಅವಳು ತನ್ನ ಪಾಡಿಗೆ ಮನೆಕೆಲಸ ಮಾಡಿಕೊಳ್ಳುತ್ತಿದ್ದಳು. ರಾತ್ರಿಯ ವೇಳೆ ಕರು ಹಾಕುವಾಗಲಂತು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾಯುತ್ತಿದ್ದೆವು. ಕರುಬಂದ ನಂತರವೂ ಸತ್ತೆ ಬೀಳುವವರೆಗೂ ಕಾಯುವ ಕೆಲಸ ನಮ್ಮದು. ಕೋಣ ಹಾಕಿದರಂತು ಅದನ್ನು ಮಾರಮ್ಮನಿಗಂತಾ ತೀರ್ಥ ಹಾಕಿಬಿಡುತ್ತಿದ್ದರು. ಹೆಣ್ಗರು ಹಾಕಿದರೆ ಮಾತ್ರ ಮನೆಯಲ್ಲಿರುತ್ತಿತ್ತು. ಊರ ಮಾರಿ ಹಬ್ಬದಲ್ಲಿ ಕೋಣವನ್ನು ಬಲಿಕೊಟ್ಟಿದ್ದನ್ನು ನೋಡಿದ ಮೇಲಂತು; ಎಮ್ಮೆ ಕರು ಹಾಕುವಾಗಲೆಲ್ಲಾ ‘ದೇವ್ರೆ ಹೊಟ್ಟೆಲಿ ಹೆಣ್ಣು ಕರುನೇ ಇರೋತರ ಮಾಡಪ್ಪ’ ಅಂತಾ ಬೇಡಿಕೊಳ್ಳುತ್ತಿದ್ದೆವು. ಅದು ನೋವಿನಿಂದ ಹೊರಳಾಡುವಾಗ ಮಾತ್ರ ನಮ್ಮ ಕಣ್ಣಲ್ಲೂ ನೀರು ಬರುತ್ತಿತ್ತು. ಏನೇ ಆಗಲೀ ಇತರ ಸಾಕು ಪ್ರಾಣಿಗಳಿಗೆ ಹೋಲಿಸಿದರೆ ಎಮ್ಮೆಗಳು ಕಷ್ಟ ಸಹಿಷ್ಣುಗಳು. ಆದರೆ ಇವುಗಳಿಗೆ ಸಂವೇದನಾಶೀಲತೆ ಕಡಿಮೆ ಎಂಬ ದೃಷ್ಟಿಯಲ್ಲಿ ‘ಎಮ್ಮೆ ಚರ್ಮ ನಿಂದು’, ‘ಎಮ್ಮೆ ಮೇಲೆ ಮಳೆ ಉಯ್ದಂಗೆ’, ‘ಎಮ್ಮೆ ತಿಮ್ಮಿ ನೀನು’ ಎಂಬೆಲ್ಲಾ ನುಡಿಗಳು ಭಾಷೆಯೊಳಗೆ ಸೇರಿಹೋಗಿವೆ. ಆದರೆ ನಮ್ಮನ್ನು ಮೈಮೇಲೆ ಕೂರಿಸಿಕೊಂಡು ಎಲ್ಲೂ ಗಾಬರಿಪಡಿಸದೆ, ಬೀಳಿಸದೆ ಸಾಗಿದ ಎಮ್ಮೆಗಳನ್ನು ನಾನು ಮಾತ್ರ ಹಾಗೆ ಕರೆಯಲಾರೆ. ಅತೀ ಹೆಚ್ಚು ಕೊಬ್ಬು ಮತ್ತು ಪ್ರೋಟೀನ್ ಎಮ್ಮೆ ಹಾಲಿನಲ್ಲಿ ಸಿಗುತ್ತೆ. ಅದೇ ಎಮ್ಮೆ ಹಾಲನ್ನು ಕುಡ್ದಿರೋ ಮಕ್ಕಳ ಬುದ್ಧಿ ಮಂದವಾಗದೇ ಚುರುಕಾಗಿರೋದನ್ನ ನಾನು ನೋಡಿದ್ದೇನೆ.
ಈ ಎಮ್ಮೆಗಳ ಪ್ರಪಂಚವೇ ಭಿನ್ನದ್ದು. ಎರಮೈ ಊರೇ ಕಾಲಕ್ರಮೇಣ ಸಾಂಸ್ಕ ತಿಕ ರಾಜಧಾನಿಯಾದ ಮೈಸೂರಾದದ್ದು ಎಂಬ ಅಭಿಪ್ರಾಯವಿದೆ. ಮಹಿಷಮಂಡಲ ಎಂಬುದು ಇನ್ನೊಂದು ಸ್ಥಳನಾಮ ರೂಪ. ತನ್ನ ಬಣ್ಣದಿಂದಾಗಿ ಒಂದು ಬಗೆಯಲ್ಲಿ ತಿರಸ್ಕಾರಕ್ಕೆ ಒಳಗಾದರೂ ಸದಾ ಧ್ಯಾನಸ್ಥ ಸ್ಥಿತಿಯಲ್ಲಿ, ಮಳೆ, ಚಳಿ, ಬಿಸಿಲಿಗೆ ಪ್ರತಿಕ್ರಿಯೆ ನೀಡದೆ, ಏಕ ವರ್ಣ ರೂಪಿ ಎಮ್ಮೆಗಳೂ… ಬರೀ ಎಮ್ಮೆಯಾಗದೇ ಪಶುಪಾಲಕರ ಹೆಮ್ಮೆ ಎನಿಸಿದೆ. ಹಸು, ಎಮ್ಮೆ ಭೇದವಿಲ್ಲದೆ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಒಂದಾಗಿ ಮನೆ, ಮೈಗಳನ್ನು ತಲುಪುವಾಗ ಏನೋ ಒಂಥರ ಸಾರ್ಥಕ ಭಾವ. ಪ್ರಾಣಿಗಳೊಂದಿಗೆ ಬಾಲ್ಯವನ್ನು ಕಳೆಯೋ ಬದುಕು ಇದೆಯಲ್ಲ ಅದು ಎಂದೆಂದಿಗೂ ಮನದಾಳದಲ್ಲಿ ಉಳಿದುಬಿಡುವ ಮಧುರ ಸಂಗತಿ. ನಮಗೆ ಗೊತ್ತಿಲ್ಲದ ಹಾಗೆ ನಮ್ಮೊಳಗೆ ಸಂವೇದನಾಶೀಲತೆಯನ್ನ ಸೃಷ್ಟಿಸಿಬಿಟ್ಟಿರುತ್ತವೆ.
” ತನ್ನ ಬಣ್ಣದಿಂದಾಗಿ ಒಂದು ಬಗೆಯಲ್ಲಿ ತಿರಸ್ಕಾರಕ್ಕೆ ಒಳಗಾದರೂ ಸದಾ ಧ್ಯಾನಸ್ಥ ಸ್ಥಿತಿಯಲ್ಲಿ, ಮಳೆ, ಚಳಿ, ಬಿಸಿಲಿಗೆ ಪ್ರತಿಕ್ರಿಯೆ ನೀಡದೆ, ಏಕವರ್ಣ ರೂಪಿ ಎಮ್ಮೆಗಳೂ ಬರೀ ಎಮ್ಮೆಯಾಗದೇ ಪಶುಪಾಲಕರ ಹೆಮ್ಮೆ ಎನಿಸಿದೆ.”





