Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಆಟೋ ಮಂಜುನಾಥ್ ಮತ್ತು ಕಬ್ಬಿನ ಜ್ಯೂಸ್ ಸುಬ್ಬಮ್ಮ

• ಕೀರ್ತಿ ಬೈಂದೂರು

ಮಂಜುನಾಥ್ ಅವರೀಗ ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಏಕಲವ್ಯನಗರದ ಆಟೋ ಚಾಲಕ, ಕಲಾ ಕುಟುಂಬದಿಂದ ಬಂದ ಇವರು ಬೆಳೆದಿದ್ದೇ ರಂಗಭೂಮಿಯಲ್ಲಿ. ನಾಟಕ ಆಡುವುದು ಇವರ ಪಾಲಿಗೆ ಸಂಭ್ರಮದ ಸಂಗತಿ ತಾವಾಡಿದ ನಾಟಕಗಳ ಸಂಭಾಷಣೆ, ಹಾಡುಗಳನ್ನು ಮಾತಿನ ಮಧ್ಯೆ ನೆನಪಿಸಿಕೊಳ್ಳುವಾಗ ಅಭಿನಯಿಸಿದ ಪಾತ್ರಗಳೆಲ್ಲ ಪರದೆ ಸರಿಸಿ ಮತ್ತೆ ಜೀವತುಂಬಿ ನಲಿಯುತ್ತವೆ.

ಶಾಲೆಗೆ ಹೋಗಿ, ಅಕ್ಷರ ಕಲಿತಿದ್ದೇ ಇಲ್ಲ. ಅದಕ್ಕಾಗಿ ತಮ್ಮ ಮೊಮ್ಮಕ್ಕಳನ್ನೆಲ್ಲ ತಮ್ಮ ಪುಟ್ಟ ಅರಮನೆಯಲ್ಲಿರಿಸಿಕೊಂಡು ಓದಿಸುತ್ತಿದ್ದಾರೆ. ಮಂಜುನಾಥ್ ಅವರ ಕುಟುಂಬಕ್ಕೆ ವೃತ್ತಿ ಮತ್ತು ಬದುಕಾಗಿದ್ದು ನಾಟಕಗಳೇ. ಊರೂರುಗಳಿಗೆ ಹೋಗಿ, ಟೆಂಟ್ ಹಾಕಿ, ಲಾಡಿ ಕಟ್ಟಿ, ಬಣ್ಣ ಹಚ್ಚಿ ವೇದಿಕೆ ಏರುತ್ತಿದ್ದವರಿಗೆ, ಆಗುತ್ತಿದ್ದದ್ದು ಅಬ್ಬಬ್ಬಾ ಎಂದರೆ ನೂರೈವತ್ತು ರೂಪಾಯಿಗಳು! ಅಪರೂಪಕ್ಕೆ ನಾಟಕ ಕಂಡು ಖುಷಿ ಪಟ್ಟವರಲ್ಲಿ ಒಂದಿಷ್ಟು ಜನ ಎರಡು – ಮೂರು ಕೆಜಿ ರಾಗಿ ಕೊಡುತ್ತಿದ್ದರು. ಅದನ್ನು ಸಮವಾಗಿ ಹಂಚಿಕೊಂಡು ತೃಪ್ತರಾಗುತ್ತಿದ್ದರು.

ಇದರೊಂದಿಗೆ ಮಂಜುನಾಥ್ ಅವರು ಹಂಚಿಕೊಂಡ ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ಇವರು ಪಕ್ಕದೂರಿಗೆ ಹೋಗಿ ನಾಟಕವಾಡಿದರೆ, ಆ ಊರಿನವರು ನೋಡುವುದಕ್ಕೆಂದು ಬರುತ್ತಿದ್ದರು. ಹಾಗೇ ಆ ಊರಿನವರು ಇವರ ಊರಿಗೆ ಬಂದು ಟೆಂಟ್ ಕಟ್ಟಿದರೆ ಕಾಣುವುದಕ್ಕಿವರು ಹೋಗುತ್ತಿದ್ದರು. ನಾಟಕ ಮುಗಿದ ಮೇಲೆ ಹಾಜರಾತಿ ಇದೆ ಎಂಬಂತೆ ಮುಖ ತೋರಿಸಿ, ಒಂದಷ್ಟು ಆತ್ಮೀಯ ಮಾತುಕತೆಗಳೂ ನಡೆಯುತ್ತಿದ್ದವು. ಆಗಿನ ದಿನಗಳನ್ನು ನೆನೆಯುತ್ತಾ, ಇಂದು ಹೆಚ್ಚಾಗಿರುವ ಮನುಷ್ಯನ ಮತ್ಸರಗಳನ್ನು ಕಂಡು ಮಂಜುನಾಥ್ ಅವರು ಸಿಟ್ಟುಗೊಳ್ಳುತ್ತಾರೆ.

ಆಗ ಮಂಜುನಾಥ್ ಅವರಿಗೆ ಹದಿನೆಂಟರ ಹರೆಯ, ಮನೆಯಲ್ಲಿ ಮದುವೆ ಮಾತುಕತೆ ಆರಂಭವಾಯಿತು. ಸೋದರ ಮಾವನ ಮಗಳಾಗಿದ್ದ ಸುಬ್ಬಮ್ಮ ಅವರನ್ನು ಮದುವೆಯಾದರು. ಸುಬ್ಬಮ್ಮ ಅವರಿಗಾಗ ಹತ್ತಿರ ಪ್ರಾಯ. ಮೈನೆರೆಯದ ಹೊತ್ತಿನಲ್ಲಿ ಮದುವೆಯಾಗಿದ್ದಕ್ಕಾಗಿ ತಾಯಿ ಮನೆಯಲ್ಲೇ ಉಳಿದುಕೊಂಡರು. ಮಂಜುನಾಥ್ ಅವರಿಗೆ ಸಂಸಾರದ ಜವಾಬ್ದಾರಿ ಇದ್ದದ್ದರಿಂದ ನಾಟಕಕ್ಕಾಗಿ ತಿರುಗಾಟ ಮಾಡಲೇ ಬೇಕಿತ್ತು. ಸುಬ್ಬಮ್ಮ ಅವರು ಜೊತೆಗೂಡಿದ ನಂತರ ಇವರಿಗೆ ಆನೆಬಲ ಬಂದಿದ್ದೇನೊ ನಿಜ. ಕಂಪೆನಿ ನಾಟಕಗಳಲ್ಲಿ ಇಬ್ಬರೂ ಬಣ್ಣ ಹಚ್ಚಿ ತಿರುಗಾಟ ಆರಂಭಿಸಿದರು. ಮಂಜುನಾಥ್ ಅವರು ರಾಜನ ಪಾತ್ರದಲ್ಲಿದ್ದರೆ, ಸುಬ್ಬಮ್ಮ ಅವರದು ಸಖಿಯ ಪಾತ್ರ. ಕಣ್ಣಂಚಿನ ಪ್ರೇಮಕ್ಕೆ ಆಗ ಆಸ್ಪದವೇ ಇರಲಿಲ್ಲ. ಮನೆ ಮಂದಿಯ ಹೊಟ್ಟೆಗೆ ಹಿಟ್ಟಿಗಾಗುವಷ್ಟು ಸಂಪಾದನೆ ಮಾಡಿಕೊಳ್ಳಬೇಕೆಂಬ ಹಠವಿತ್ತು ಎನ್ನುತ್ತಾರೆ.

ಹೀಗೆ ದಿನದೂಡುತ್ತಿರುವಾಗ ಚಾಮರಾಜನಗರದಲ್ಲಿ ಆರ್ಕೆಸ್ಟ್ರಾ ಕಂಡ ನಂತರ ನಾವ್ಯಾಕೆ ಮಾಡಬಾರದು ಎನಿಸಿ, ತಮ್ಮಲ್ಲೇ ಇರುವ ಮೈಕ್‌ಸೆಟ್‌ಗಳನ್ನು ಜೋಡಿಸಿ, ಪ್ರದರ್ಶನ ಮಾಡುವುದೆಂದು ತಯಾರಾದರು. ಮೊದಲೇ ಭಯಸ್ಥರಾಗಿದ್ದ ಮಂಜುನಾಥ್‌ ಅವರಿಗೆ ಹಿಂದೆ ಎಂದೂ ಕುಣಿಯದ ಹಾಡುಗಳಿಗೆ ಹೆಜ್ಜೆ ಹಾಕಿದಾಗ ಜನ ಸಹಿಸದೆ, ಕಲ್ಲುಗಳನ್ನೇನಾದರೂ ಎಸೆದರೆ ಎಂಬ ಹೆದರಿಕೆಯಂತೂ ಬಿಡದೆ ಕಾಡುತ್ತಿತ್ತು. ಬಾವನೂ ಜೊತೆಗಿದ್ದ ಕಾರಣಕ್ಕೆ ಧೈರ್ಯ ತುಂಬಿ ಇನ್ನೇನು ವೇದಿಕೆ ಏರಬೇಕು ಎನ್ನುವಾಗ ಕರೆಂಟ್ ಹೋಗಿ, ಎಲ್ಲವೂ ತಲೆಗೆಳಗಾಯಿತು.

ಮುಂದೇನು ಮಾಡಬಹುದು ಎನ್ನುವಾಗ ಹೇಗಾದರೂ ಸರಿ ಕುಣಿಯಬೇಕೆನಿಸಿತು. ಅದೃಷ್ಟ ಪರೀಕ್ಷೆಗೆ ತಯಾರಾದ ಮಂಜುನಾಥ್ ಅವರು ಈ ಬಾರಿ ಮನಸ್ಸು ತುಂಬಿ ಕುಣಿದಿದ್ದರು. ಜನರೂ ಸಂತಸಪಟ್ಟು ಮೂವರ ಕುಣಿತಕ್ಕೆ ಭೇಷ್ ಎಂದಿದ್ದರು. ಮರುದಿನ ಬಂದ ಹಣವನ್ನು ಎಣಿಸಿದರೆ ಅಚ್ಚರಿ ಕಾದಿತ್ತು! ಒಂದು ಸಾವಿರದ ಎಂಟುನೂರು ರೂಪಾಯಿಗಳನ್ನು ಎರಡೆರಡು ಸಲ ಎಣಿಸಿ, ಸಂಭ್ರಮಿಸಿದರು. ತಮ್ಮ ಜೀವಮಾನದಲ್ಲಿ ಅಷ್ಟು ಹಣವನ್ನು ನೋಡಿದ್ದಿಲ್ಲ ಎನ್ನುವಾಗ ಅದ್ಭುತ ರಸ ಮೈದಾಳಿದವರಂತೆ ಆ ಕ್ಷಣವನ್ನು ವರ್ಣಿಸುತ್ತಾರೆ.

ನಾಟಿ ಕೋಳಿ ತಂದು, ತಮಗಿಷ್ಟದ ಅಡುಗೆಗಳನ್ನು ತಿಂದು ಭರ್ಜರಿಯಾಗಿ ಹಣವನ್ನು ಖರ್ಚು ಮಾಡಿದರು. ‘ದುಡ್ಡು ಉಳಿಸ್ಟೇಕಿತ್ತು ಅಂತ ಆಗ ಅನಿಸ್ತೇ ಇಲ್ಲ. ಅನ್ನ ಅನ್ನೋದಿದೆ ಅಂತ ಗೊತ್ತಿತ್ತೇ ಹೊರತು, ತಿಂದು ಗೊತ್ತಿರ್ಲಿಲ್ಲ. ಚಿಕ್ಕಂದಿನಿಂದ ಹಿಟ್ಟೆ ರೂಢಿಯಾಗಿತ್ತು. ಪಾಲಿಗೆ ಬಂದ ಒಂಬೈನೂರು ರೂಪಾಯಲ್ಲಿ ಒಂದು ಪೈಸೆನೂ ಇಸ್ಕೊಲ್ಲ. ನಾವು, ಮಕ್ಕಳು ಎಲ್ಲ ತಿಂದು ಖುಷಿಪಟ್ಟಿ ಎನ್ನುತ್ತಾ ಸಂಭ್ರಮಿಸುತ್ತಾರೆ. ಯಾರಾದರೂ ನಾಟಕ ಮಾಡುತ್ತಿದ್ದರೆ ಇವರು, ‘ಡಾನ್ಸ್ ಆಡೋ, ನಾಟ್ಯದಿಂದ ಏನೂ ದುಡಿಯಕ್ಕಾಗಲ್ಲ ಎಂದು ವಾಸ್ತವ ತೆರೆದಿಡುತ್ತಿದ್ದರು. ಹೀಗೆ ಅಭಿನಯದಿಂದ ಕುಣಿತಕ್ಕೆ ಬದುಕು ಹೊಂದಿಕೊಳ್ಳುತ್ತಿತ್ತು.

ಕಾಲಚಕ್ರದ ಬಗ್ಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಟಿವಿ ಬರುತ್ತಿದ್ದಂತೆ ಡಾನ್ಸ್ ನೋಡುವುದಕ್ಕೆಂದು ಬರುವ ಜನರ ಸಂಖ್ಯೆಯೂ ಕಡಿಮೆಯಾಯಿತು. ಮತ್ತೆ ಒಂದಷ್ಟು ವರ್ಷ ನಾಟಕ ಮಾಡಿದರು. ಅದೇ ಹೊತ್ತಿಗೆ ಉಚಿತ ಮನೆ ಕೊಡುತ್ತಾರೆಂದು ಸುದ್ದಿಯಾಯಿತು. ಅಧಿಕಾರಿಗಳ ಕಚೇರಿಗಾಗಿ ಕಿಲೋಮೀಟರ್ ಗಳಷ್ಟು ನಡೆದುಕೊಂಡೇ ಹೋದರು. ಕೊಳಚೆ ಪ್ರದೇಶದಲ್ಲಿ ಮನೆಯೊಂದನ್ನು ನೀಡಿದರೂ ಪ್ರಯೋಜನವೇ ಆಗಲಿಲ್ಲ. ಮಳೆಗಾಲದ ದಿನಗಳಲ್ಲಿ ಮನೆ ತುಂಬ ನೀರು ನುಗ್ಗಿ, ದಶಕಗಳವರೆಗೆ ಕಾಪಿಟ್ಟ ನಾಟಕದ ವೇಷಭೂಷಣಗಳೆಲ್ಲ ಹಾಳಾಗಿತ್ತು.

ಇದಕ್ಕಾಗಿ ಪಡಬಾರದ ಪಾಟಲು ಪಟ್ಟು, ಗ್ಯಾಸ್‌ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡರು. ಗಂಡ ದುಡಿಯುತ್ತಿದ್ದ ಅರವತ್ತು ರೂಪಾಯಿ, ತನ್ನ ದುಡಿಮೆಯ ನಲವತ್ತು ರೂಪಾಯಿಗಳಲ್ಲಿ ಸಂಸಾರ ನಿಭಾಯಿಸಿ, ಹಣ ಕೂಡಿಡುವುದಕ್ಕೆ ಸುಬ್ಬಮ್ಮ ಶುರುವಿಟ್ಟರು. ಹಾಗೇ ಉಳಿಸಿದ ದುಡ್ಡಿನಿಂದ ಆರು ಕುರಿಮರಿ ತೆಗೆದುಕೊಂಡರು. ಕುರಿ ಮಾರಿ ಬಂದ ದುಡ್ಡನ್ನು ಮತ್ತೆ ಕೂಡಿಟ್ಟು, ಒಂದು ಸಣ್ಣ ಸೈಟ್ ಖರೀದಿಸಿದರು.

ಆರೋಗ್ಯ ಸಮಸ್ಯೆಯಿಂದ ಕೂಲಿ ಕೆಲಸ ಕೈಬಿಟ್ಟು, ಕಬ್ಬಿನ ಜ್ಯೂಸ್ ಅಂಗಡಿ ತೆರೆದರು. ಮಿಷನ್‌ ಅಳವಡಿಸಲು ಹಣವಿರದ ಕಾರಣ ಕೈಯಲ್ಲಿ ದೂಡುತ್ತಾ ಬಂದ ಗ್ರಾಹಕರಿಗೆ ಸಿಹಿ ಕಬ್ಬಿನ ಹಾಲನ್ನು ನೀಡುತ್ತಾ, ಸುಬ್ಬಮ್ಮ ದಿನದೂಡುತ್ತಿದ್ದಾರೆ. ಇನ್ನು ಮಂಜುನಾಥ್ ಅವರು ಬೆಳಗಿನಿಂದ ಸಂಜೆಯವರೆಗೆ ಆಟೋ ಓಡಿಸಿದ ದುಡ್ಡಿನಲ್ಲಿ ಮೊಮ್ಮಕ್ಕಳಿಗೆ ಒಂದು ಹೊಲಿಗೆ ಯಂತ್ರವನ್ನು ನೀಡಬೇಕೆಂದು ಕನಸು ಕಟ್ಟಿದ್ದಾರೆ.

 

 

Tags: