Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

“ಫೋಟೋದಲ್ಲಿ ಬಾಪೂಜಿಯ ಮುಂದೆ ನಿಂತಿದ್ದ ಆ ಪುಟ್ಟ ಬಾಲಕ ನೀವೇನಾ?”

ರಶ್ಮಿ ಕೋಟಿ

ಅದು ಕೇವಲ ಒಂದು ಫೋಟೋ ಅಲ್ಲ, ದೇಶವು ಹತ್ಯಾಕಾಂಡಗಳ ಸುಳಿಯಲ್ಲಿ ಸಿಲುಕಿದ್ದಾಗ, ಆ ಕ್ಷಣ ಮಾತ್ರ ಒಂದು ಅಪರೂಪದ ಜೀವಸೆಲೆಯಂತಿತ್ತು. ‘ಹಿಂದೂಸ್ತಾನ್ ಟೈಮ್ಸ್’ ಛಾಯಾಗ್ರಾಹಕ ಬಾಬುರಾಮ್ ಗುಪ್ತ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆ ಕ್ಷಣ ಇತಿಹಾಸದಲ್ಲಿ ದಾಖಲಾದ ಎಲ್ಲಾ ವಿಷಯಗಳಿಗಿಂತ ಭಿನ್ನವಾಗಿತ್ತು. ಆ ಅಪರೂಪದ ಚಿತ್ರದಲ್ಲಿ ದೇಶದ ಭವಿಷ್ಯಕ್ಕಾಗಿ ಹೋರಾಡು ತ್ತಿದ್ದ ೭೮ ವರ್ಷದ ಮಹಾತ್ಮನು, ಆ ದಿನ ಮೊಮ್ಮಕ್ಕಳ ಜೊತೆ ನಗುತ್ತಾ, ಅವರ ಅಸಂಬದ್ಧ ಮಾತುಗಳನ್ನು ಆಲಿಸುತ್ತಿರುವ ಪ್ರೀತಿಯ “ಅಜ್ಜ”ನಾಗಿ ಕಂಡುಬಂದಿದ್ದರು. ಆ ಚಿತ್ರದಲ್ಲಿ ನೇರವಾಗಿ ಕ್ಯಾಮೆರಾಗೆ ತಿರುಗಿ ನೋಡದ, ಗಾಂಧಿಜಿಯ ಮುಂದೆ ನಿಂತಿದ್ದ ಒಬ್ಬ ಪುಟ್ಟ ಹುಡುಗನು ಬಾಪೂಜಿಗೆ ಏನೋ ಅಸ್ಪಷ್ಟ ಮಾತುಗಳನ್ನು ಹೇಳುತ್ತಿದ್ದ. ಅವನ ಮಾತುಗಳನ್ನು ಕೇಳಿ ಬಾಪೂಜಿಯ ಮುಖದಲ್ಲಿ ನಗುವಿನ ಕಿರಣ, ಸುತ್ತಮುತ್ತ ನಿಂತಿದ್ದ ಮಕ್ಕಳು ಹಾಗೂ ಕುಟುಂಬಸ್ಥರೂ ನಗುತ್ತಿದ್ದ ಕ್ಷಣ ಅದಾಗಿತ್ತು.

ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಸಾಹಿತ್ಯೋತ್ಸವಕ್ಕೆ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ (ದೇವದಾಸ್ ಗಾಂಧಿಯವರ ಮಗ) ಗೋಪಾಲಕೃಷ್ಣ ಗಾಂಧಿ ಆಗಮಿಸಿದ್ದರು. ಅವರು ಗಾಂಧಿ ಮೊಮ್ಮಗನಾಗಿಯಷ್ಟೇ ಅಲ್ಲ, ದಕ್ಷ-ಪ್ರಾಮಾಣಿಕ ಅಧಿಕಾರಿಯಾಗಿಯೂ ಹೆಸರುವಾಸಿ. ಐಎಎಸ್ ಅಧಿಕಾರವಿರಲಿ, ರಾಜತಾಂತ್ರಿಕ ಹುದ್ದೆಯಿರಲಿ, ರಾಜ್ಯಪಾಲ ಪದವಿಯಿರಲಿ ಗೋಪಾಲಕೃಷ್ಣ ಗಾಂಧಿಯವರು ಎಂದೂ ಬಿಳಿಕಾಲರಿನ ಅಧಿಕಾರಿಯಾಗಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುರ್ಚಿಗೆ ಅಂಟಿ ಕೊಂಡು ಕುಳಿತವರಲ್ಲ. ಅವರನ್ನು ನಾನು ಭೇಟಿ ಯಾದಾಗ ಸುದೀರ್ಘ ಸಂದರ್ಶನಕ್ಕಾಗಿ ವಿನಂತಿಸಿಕೊಂಡಿದ್ದೆ. ಆದರೆ, ದೀರ್ಘವಾದ ಸಂದರ್ಶನಕ್ಕೆ ಅವರಿಗೆ ಸಮಯವಿಲ್ಲದಿದ್ದರೂ, ಕಾಫಿಯನ್ನು ಹೀರುತ್ತಾ ಅವರ ಜೊತೆ ನಡೆದ ಆ ಚಿಕ್ಕ ಸಂವಾದ ನನಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಂತೆ ಭಾಸವಾಯಿತು… ನಾನು ಕುತೂಹಲದಿಂದ ಕೇಳಿದೆ;

“ಆ ಫೋಟೋದಲ್ಲಿ ಬಾಪೂಜಿಯ ಮುಂದೆ ನಿಂತಿದ್ದ ಆ ಪುಟ್ಟ ಬಾಲಕ ನೀವೇನಾ?” ಕಾಫಿ ಹೀರುತ್ತಾ ಅವರು ಮಂದಹಾಸ ಬೀರಿ, ಹೌದು ಎನ್ನುವಂತೆ ತಲೆಯಾಡಿಸಿದರು. ನಂತರ ನಿಧಾನವಾಗಿ ಆ ಚಿತ್ರದ ಹಿಂದಿನ ಕಥೆಯನ್ನು ಬಿಚ್ಚಿಟ್ಟರು. ಬಾಪೂಜಿಯ ಮೌನವ್ರತವನ್ನು ತಮ್ಮ ಮುದ್ದಾದ ತುಂಟ ಮಾತುಗಳಿಂದ ಮುರಿದು, ಅಲ್ಲಿ ನೆರೆದಿದ್ದ ಎಲ್ಲರೂ ನಗುವಂತೆ ಮಾಡಿದ್ದ ಆ ಪುಟ್ಟ ‘ಗೋಪು’ ತಾವೇ ಎಂದು.

ಗೋಪಾಲಕೃಷ್ಣ ಗಾಂಧಿ ಹೇಳಿದರು… “ಆ ಫೋಟೋದ ಕ್ಷಣ ನನಗೆ ನೆನಪಿಲ್ಲ. ಆಗ ನಾನಿನ್ನೂ ೨ ವರ್ಷದ ಬಾಲಕ. ಆ ಚಿತ್ರದಲ್ಲಿ ನನ್ನ ಬೆನ್ನು ಮಾತ್ರ ಕಾಣುತ್ತದೆ. ನಾನು ಹೇಳಿದ ಮಾತುಗಳನ್ನು ಆನಂದದಿಂದ ಕೇಳುತ್ತಾ ಬಾಪೂಜಿಯೂ ಸೇರಿದಂತೆ ನನ್ನ ಸಹೋದರ-ಸಹೋದರಿಯರೆಲ್ಲರೂ ಆ ಚಿತ್ರದಲ್ಲಿ ನಗುವಿನಲ್ಲಿ ಮಿಂದೆದ್ದಂತೆ ಕಾಣುತ್ತಿದ್ದಾರೆ. ಆದರೆ ಅದು ನನ್ನ ಮೇಲೆಯೋ, ನನ್ನೊಂದಿಗೋ ಅಥವಾ ನನ್ನಿಂ ದಲೋ ಎಂಬುದು ನನಗೆ ನೆನಪಿಲ್ಲ. ಆದರೆ ಪ್ಯಾರೆಲಾಲ್ ತಮ್ಮ ‘ದಿ ಲಾಸ್ಟ್ ಫೇಸ್’ ಪುಸ್ತಕದಲ್ಲಿ ಬರೆದಿರುವ ಪ್ರಕಾರ ಆ ಸಮಯದಲ್ಲಿ ‘ಗೋಪು’ (ನಾನೇ) ಬಂದು, ಅವರ ಪ್ರಾರ್ಥನಾ ಸಭೆಯ ಆರಂಭದ ಸಾಲುಗಳನ್ನು ಅನುಕರಿಸಿ ಹೇಳಿದ- “ಭಾಯಿಯೋ ಔರ್ ಬೆಹೆನೋ, ಆಪ್ ಶಾಂತ್ ಹೋ ಜಾಯಿಯೇ” (ಅಣ್ಣಂದಿರಾ ಹಾಗೂ ಅಕ್ಕಂದಿರಾ, ಎಲ್ಲರೂ ಶಾಂತವಾಗಿರಿ) ಅದನ್ನು ಕೇಳಿ ಬಾಪೂಜಿ ಸೇರಿದಂತೆ ಎಲ್ಲರೂ ನಕ್ಕರು.”

ಆ ೭೮ ವರ್ಷದ ರಾಷ್ಟ್ರಪಿತನು, ಒಬ್ಬ ಸಾಮಾನ್ಯ ಅಜ್ಜನಂತೆ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದ ಕ್ಷಣಗಳನ್ನು ಅಂದಿನ ಅನೇಕ ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಅಂತಹ ಛಾಯಾಚಿತ್ರಗಳಲ್ಲಿ ಒಂದನ್ನು ಹಿಂದೂಸ್ತಾನ್ ಟೈಮ್ಸ್ ಛಾಯಾಗ್ರಾಹಕ ಬಾಬುರಾಮ್ ಗುಪ್ತ ತೆಗೆದಿದ್ದರು. ಗೋಪಾಲ ಕೃಷ್ಣ ಗಾಂಧಿಯವರು ತಮ್ಮ “ದಿ ಅನ್ ಡೈಯಿಂಗ್ ಲೈಟ್” ಪುಸ್ತಕದಲ್ಲಿಯೂ ಆ ಕ್ಷಣವನ್ನು ಕುರಿತು ಬರೆದಿದ್ದಾರೆ. ಅದನ್ನು ಓದಿದಾಗ ಆ ಚಿತ್ರದ ಹಿಂದಿನ ಮತ್ತಷ್ಟು ರೋಚಕ ಸಂಗತಿಗಳು ತಿಳಿದವು. ದೆಹಲಿಯ ಭಂಗಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾಗ ಬಾಪೂಜಿ ಅವರು ಪ್ರತಿದಿನ ಅನೇಕ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದರು, ಪ್ರಾರ್ಥನಾ ಸಭೆ ನಡೆಸುತ್ತಿದ್ದರು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು, ದಿನನಿತ್ಯದ ವಾಯು ವಿಹಾರವನ್ನು ಮುಂದುವರಿಸಿದ್ದರು. ಅಂತಹ ಸಮಯದಲ್ಲಿ ಮಕ್ಕಳು, ಮೊಮ್ಮಕ್ಕಳೂ ಅವರೊಂದಿಗೆ ಭಾಗಿಯಾಗುತ್ತಿದ್ದರು.

ಅಂದು ಕೂಡ ಆ ನಡಿಗೆಯಲ್ಲಿ, ತಮ್ಮ ಸಹೋದರ-ಸಹೋದರಿಯರೊಂದಿಗೆ “ಗೋಪು” ಎಂದು ಎಲ್ಲರಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಗೋಪಾಲಕೃಷ್ಣ ಕೂಡ ಪಾಲ್ಗೊಂಡಿದ್ದರು. ಆ ದಿನ, ಸೋಮವಾರವಾಗಿದ್ದುದರಿಂದ ಬಾಪೂಜಿ ಮೌನ ವ್ರತದಲ್ಲಿದ್ದರು. ಅಜ್ಜನ ಆ ಮೌನವನ್ನು, ಆ ಪುಟ್ಟ ಗೋಪು ತನ್ನ ಹಾಸ್ಯಮಯ ಮಾತುಗಳಿಂದ ಮುರಿದಿದ್ದ. “ಭಾಯಿಯೋ ಔರ್ ಬೆಹೆನೋ, ಆಪ್ ಶಾಂತ್ ಹೋ ಜಾಯಿಯೇ?” ಎಂದು ಪ್ರಾರ್ಥನಾ ಸಭೆಗಳ ಪ್ರಾರಂಭಕ್ಕೆ ಮೊದಲು ಗಾಂಧೀಜಿ ಹೇಳುತ್ತಿದ್ದ ಮಾತುಗಳನ್ನು ‘ಗೋಪು’ ಅನುಕರಣೆ ಮಾಡಿ ತೋರಿಸಿದಾಗ ಅಲ್ಲಿ ಇದ್ದವರೆಲ್ಲ ಪುಟ್ಟ ಬಾಲಕನ ಅನುಕರಣೆಗೆ ನಕ್ಕುಬಿಟ್ಟರು. ಬಾಪೂಜಿಯೂ ನಕ್ಕರು.

ರಾಷ್ಟ್ರವನ್ನು ಹಿಂಸಾತ್ಮಕ ವಿಭಜನೆಯೆಡೆಗೆ ತಳ್ಳುತ್ತಿದ್ದ ಕಾಲಘಟ್ಟದಲ್ಲಿ, ಆ ಚಿತ್ರದಲ್ಲಿ ಮಾತ್ರ ಎಲ್ಲರೂ ಸಂತೋಷದಿಂದಿರುವ ಗಳಿಗೆ ಇತಿಹಾಸದಲ್ಲಿ ಮರೆಯಲಾಗದ ಕ್ಷಣವಾಗಿ ಉಳಿಯಿತು. ಇದಕ್ಕೆ ೧೯೪೭ರ ಜೂನ್ ೨೩ರ ಸಂಜೆಯ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ವ್ಯಕ್ತಪಡಿಸಿದ್ದ ವಿಷಾದದ ಮಾತುಗಳೇ ಸಾಕ್ಷಿ. ಅಂದಿನ ‘ರಾಯಿಟರ್ಸ್ ಪತ್ರಿಕೆ’ಯು ಲಂಡನ್‌ನಲ್ಲಿ ನಡೆದ ಬ್ರಿಟಿಷ್ ಪಾರ್ಲಿಮೆಂಟ್‌ನ ಪ್ರಕ್ರಿಯೆಯನ್ನು ವರದಿ ಮಾಡಿತ್ತು. ಅದು ಭಾರತವನ್ನು ಎರಡು ರಾಷ್ಟ್ರಗಳಾಗಿ ವಿಭಜಿಸುವ ಅಧಿನಿಯಮದ ಆಚರಣೆ ಬಗೆಗಿನ ವರದಿಯಾಗಿತ್ತು.

ಎರಡು ರಾಷ್ಟ್ರಗಳನ್ನು ಸೃಷ್ಟಿಸುವ ಆ ಮಸೂದೆಯು ಚಿನ್ನದ ನೂಲಿನಿಂದ ಅಲಂಕರಿಸಲ್ಪಟ್ಟ ರಾಜಮುದ್ರೆಯ ವೈಭವದಿಂದ ಕೂಡಿರುತ್ತದೆ” ಎಂದು ವರದಿ ಮಾಡಿತ್ತು. ಗಾಂಧೀಜಿ ಅದನ್ನು ಉಲ್ಲೇಖಿಸಿ, “ಇಂದಿನ ಪತ್ರಿಕೆಗಳು ಇದುವರೆಗೂ ಒಂದೇ ದೇಶವಾಗಿದ್ದ ಭಾರತವನ್ನು ಎರಡು ರಾಷ್ಟ್ರಗಳಾಗಿ ವಿಭಜಿಸುವ ಸಮಾರಂಭದ ಬಗ್ಗೆ ಬರೆಯುತ್ತಿವೆ. ಈ ದುಃಖದ ಸಂದರ್ಭದಲ್ಲಿ ಸಂಭ್ರಮಿಸುವ ವಿಷಯವೇನಿದೆ ? ನಾವು ಬೇರ್ಪಟ್ಟರೂ ಸಹೋದರರಂತೆ ಉಳಿಯುವ ಭಾವನೆ ಹೊಂದೋಣ. ಆದರೆ ಬ್ರಿಟಿಷರು ನಮ್ಮನ್ನು ಈಗ ಎರಡು ರಾಷ್ಟ್ರಗಳನ್ನಾಗಿ ಮಾಡುತ್ತಿದ್ದಾರೆ, ಅದು ಕೂಡ ಬಾಜಾ-ಭಜಂತ್ರಿಗಳ ಸಡಗರದಲ್ಲಿ” ಎಂದು ವಿಷಾದ ವ್ಯಕ್ತಪಡಿಸಿದ್ದರು.

ಹೀಗೆ ರಾಷ್ಟ್ರವನ್ನು ಹಿಂಸಾತ್ಮಕ ವಿಭಜನೆಯೆಡೆಗೆ ತಳ್ಳುತ್ತಿದ್ದ ಕಾಲಘಟ್ಟದಲ್ಲಿ ಸೆರೆ ಹಿಡಿದಿರುವ ನೈಜ ಕ್ಷಣದ ಆ ಚಿತ್ರವು ಹಲವು ನೆನಪುಗಳನ್ನು ಮತ್ತು ರಾಷ್ಟ್ರಪಿತ ಕೇವಲ ‘ಅಜ್ಜ’ನಾಗಿದ್ದ ಸುಂದರ ಕ್ಷಣವೊಂದನ್ನು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ

” ಆ ಚಿತ್ರದಲ್ಲಿ ಬಾಪೂಜಿ ರಾಷ್ಟ್ರಪಿತನಾಗಿರಲಿಲ್ಲ… ಅವರ ಕಣ್ಣುಗಳಲ್ಲಿ ಎಂದೂ ಇರುತ್ತಿದ್ದ ದೇಶದ ಭವಿಷ್ಯದ ಚಿಂತೆ ಮೊಮ್ಮಗನ ತುಂಟಾಟವನ್ನು ಕಂಡು ಮೂಡಿದ ನಗುವಾಗಿ ಬದಲಾಗಿತ್ತು. ಪ್ರಾರ್ಥನಾ ಸಭೆಗಳಲ್ಲಿ, ರಾಜಕೀಯ ಚರ್ಚೆಗಳಲ್ಲಿ, ಸ್ವಾತಂತ್ರ್ಯದ ತೀವ್ರ ಹೋರಾಟದಲ್ಲಿ ಮುಳುಗಿದ್ದ ಆ ವ್ಯಕ್ತಿ, ಆ ಕ್ಷಣದಲ್ಲಿ ಅವೆಲ್ಲವನ್ನೂ ಮರೆತು, ಮೊಮ್ಮಗನ ಮಾತುಗಳನ್ನು ಆನಂದದಿಂದ ಆಲಿಸುತ್ತಿದ್ದ ಅಜ್ಜನಾಗಿದ್ದರು”

Tags:
error: Content is protected !!