Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದೂರದಿಂದ ತೇಲಿ ಬರುತ್ತಿರುವ ನವರಾತ್ರಿ ಪರಿಮಳ

ಅನುರಾಧಾ ಪಿ. ಸಾಮಗ

ಭಾದ್ರಪದದ ಪೂರ್ಣಚಂದ್ರ ವರ್ಷ ಕಾಲವಲ್ಲವೆಂಬಂತಿದ್ದ ಸ್ವಚ್ಛ ರಾತ್ರಿಯಾಗಸದಲ್ಲಿ ನಗುತ್ತಿದ್ದ. ಏನೇ ಹೇಳು ಶರತ್ಚಂದ್ರನಷ್ಟು ಹೊಳಪು ಇವನಿಗಿಲ್ಲ ಅನಿಸಿತು. ಶರತ್ಚಂದ್ರನಿಗೆ ಇವನಂತೆ ಮೋಡ ಮುಸುಕುವ, ಮಳೆಯ ಗದ್ದಲದಲ್ಲಿ ಅಡಗಬೇಕಾಗುವ ಆತಂಕವಿಲ್ಲ ಮತ್ತು ನಿರಾಳತೆಯಂಥ ಚೆಲುವು ಇನ್ನೊಂದಿಲ್ಲ.

ಶರದೃತು ಅಂದಕೂಡಲೇ ಮೈಯ್ಯಲ್ಲಿ ಒಂದು ಉತ್ಸಾಹದ ಸಂಚಾರ? ದಶಕಗಳಾಚೆಯ ಮಾತು. ದುರ್ಗೆಯ ಹೆಸರಿನಲ್ಲಿ ಬೆಳಗು-ರಾತ್ರಿಗಳಾಗುತ್ತಿದ್ದ ಆ ಊರಿನವರು ಬಿತ್ತಿದ ಬೆಳೆ ತೆನೆತುಂಬುವ ಹೊತ್ತಿಗೆ ನವರಾತ್ರಿಯ ಪೂಜೆಯ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ನಾವು ಮಕ್ಕಳಿಗೂ ಆಗ ಒಂದು ರೀತಿಯ ಭಾವೋದ್ವೇಗದ ಚಡಪಡಿಕೆ ಶುರುವಾಗುತ್ತಿತ್ತು. ನವರಾತ್ರಿಯ ಮೊದಲ ಹಗಲು ಮನೆಗಳಲ್ಲಿ ಕೊರಳು ಕಟ್ಟಿ, ಹೊಸತುಂಡು ದೇವಸ್ಥಾನಕ್ಕೆ ತೆರಳುವ ದೊಡ್ಡವರು ದೇವರ ಪಾತ್ರೆ ತೊಳೆಯುವಲ್ಲಿ, ಪ್ರಾಂಗಣದ ಚಪ್ಪರದ ತಯಾರಿಯಲ್ಲಿ, ಪುಷ್ಪಮಂಟಪದ ಅಲಂಕಾರದಲ್ಲಿ, ಲಲಿತಾ ಸಹಸ್ರನಾಮ-ಸಪ್ತಶತಿ ಓದುವಲ್ಲಿ, ದುರ್ಗೆಯ ವಾಹನ -ಒಡವೆಗಳನ್ನು ತೊಳೆಯುವ ಕೆಲಸದಲ್ಲಿ, ಅನ್ನಪಾಯಸ, ಚಟ್ಟೆವಡೆ ತಯಾರಿಯಲ್ಲಿ ಹೀಗೆ ವ್ಯಸ್ತರಿದ್ದರೆ ನಾವೂ ನಮ್ಮ ಮಕ್ಕಳಾಟವನ್ನೆಲ್ಲ ಮರೆತು ಯಾವುದೋ ಗಹನವಾದ ತಯಾರಿಯೊಂದರ ಭಾಗವಾಗಿರುವ ಹಾಗೆ ಭಾಸವಾಗಿಸಿಕೊಂಡು ಒಳಹೊರಗೆ ಓಡಾಡುತ್ತಾ ಇರುತ್ತಿದ್ದೆವು.

ಮುಸ್ಸಂಜೆ ಮತ್ತು ರಾತ್ರಿಯ ನಡುವಿನ ಹೊತ್ತು ತಯಾರಿ ಮುಗಿದು ಪೂಜೆ ಶುರುವಾಗುವಷ್ಟರಲ್ಲಿ ಮನೆಗೆ ಹೋಗಿ ಅಲಂಕರಿಸಿಕೊಂಡು ಬಂದು ನಿಂತೆವೆಂದರೆ ಮೈಯ್ಯಗಲ ಒಂದು ಉಲ್ಲಾಸ, ಉತ್ಸಾಹ? ಹಲವಾರು ಆರತಿಗಳ ಕೊನೆಗೆ ಮಂಗಳಾರತಿಯ ಹೊತ್ತು ಪುಷ್ಪಮಂಟಪದ ಉದ್ದಕ್ಕೂ ಹಚ್ಚಿಡುತ್ತಿದ್ದ ಕರ್ಪೂರದ ಧೂಮದೊಳಗೆ ಗಂಟೆ, ನಗಾರಿ, ಕೊಂಬು, ಜಾಗಟೆ, ತಾಳಗಳೆಲ್ಲದರ ಶಬ್ದದೊಳಗಿಂದಲೇ ಮೌನವೊಂದು ಬಂದು ಆಳತೊಡಗುತ್ತಿತ್ತು. ನಮ್ಮನ್ನು ಅವಳಿಗೆ ಅವಳನ್ನು ನಮಗೆ ತಲುಪಿಸುವ ವಾಹಕವಾಗುತ್ತಿತ್ತು. ಅಲ್ಲಿ ಇನ್ನೊಬ್ಬಳಿದ್ದಾಳೆ, ಸಾವಿರ ಸೀಮೆಗಳ ಒಡತಿ, ಊರಿನ ಹತ್ತು-ಸಮಸ್ತರ ನೋವು-ನಲಿವುಗಳಿಗೆ ಬಾಧ್ಯಳೆನಿಸಿಕೊಳ್ಳುವ ತುಳುನಾಡಿನ ತಾಯಿ. ಒಮ್ಮೆ ಸವಾರಿ ಹೋಗುತ್ತಿದ್ದಾಗ ಒಂದು ಮದುವೆಯ ದಿಬ್ಬಣ ನೋಡುತ್ತಾಳೆ. ಬಯಕೆಯಾಗಿ ನಿಮ್ಮೊಂದಿಗೆ ನಾನೂ ಸಂಭ್ರಮದಲ್ಲಿ ಸೇರಿಕೊಳ್ಳಲಾ ಅಂತ ಕೇಳುತ್ತಾಳೆ. ಆ ಗುಂಪು ಕಾರಣಾಂತರದಿಂದ ನಿರಾಕರಿಸುತ್ತದೆ. ಹಿಂತಿರುಗಿ ಬಂದವಳು ತನ್ನ ಜನರಲ್ಲಿ ಹೇಳಿಕೊಂಡಾಗ ಜನರೆಲ್ಲ ಆ ಪಂಗಡದೊಂದಿಗೆ ಸೇರಿಕೊಳ್ಳುವ ಮನಸ್ಸು ಮಾಡಿದ್ದಕ್ಕಾಗಿ ಅವಳ ಕೈಯ್ಯಲ್ಲಿ ತಪ್ಪು ಕಾಣಿಕೆ ಇಡಿಸುವ ನಿರ್ಧಾರ ಕೈಗೊಳ್ಳುತ್ತಾರೆ.

ಅಂದು ಆ ನಿರ್ಧಾರಕ್ಕೆ ಒಪ್ಪಿದವಳು ಇವತ್ತಿಗೂ ಪ್ರತಿ ನವರಾತ್ರಿಯಲ್ಲಿ ತಪ್ಪು ಕಾಣಿಕೆಯನ್ನು ಲೋಕದ ಮುಂದೆ ಇಡುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಳ್ಳುವ ವಾಡಿಕೆಯಿದೆಯಂತೆ. ಪುಟಾಣಿಯೊಬ್ಬಳಿಗೆ ಅಂದು ಅಮ್ಮನವರ ದೇವಸ್ಥಾನದಲ್ಲಿ ಕನ್ನಿಕೆ ಪೂಜೆಗೆ ಹೋಗುವುದಿದೆ. ಲಂಗವುಡಿಸಿ ಜುಟ್ಟು -ಜುಮಕಿ, ಸರ-ಬಳೆ ತೊಡಿಸಿ ಕರೆದೊಯ್ದಿದ್ದಾರೆ. ಕರಿಕಲ್ಲ ಗರ್ಭಗುಡಿಯೊಳಗೆ ಪುಟ್ಟಕನ್ನಿಕೆಯ ಮೂರ್ತಿ ಮತ್ತು ಗರ್ಭಗುಡಿಗೆ ಮುಖ ಮಾಡಿ ಸಾಲುಬೆಂಚುಗಳಲ್ಲಿ ಕೂತ ಹತ್ತಾರು ಸಾಲಂಕೃತ ಕನ್ನಿಕೆಗಳು. ಗೆಜ್ಜೆ-ಬಳೆಗಳ ಸದ್ದು, ಮಾತು ನಗುವಿನ ಗಲಾಟೆ ಗೌಜಿಗಳೊಳಗೆ ಕಿಲಕಿಲವೆನ್ನುತ್ತಿದ್ದವರು ಪೂಜೆಯವರು ಕರೆದು ಆ ಬೆಂಚಿನಲ್ಲಿ ಕೂರಿಸಿದ ಕೂಡಲೇ ಘನಗಂಭೀರರಾಗುತ್ತಾರೆ.

ಕೈ ತೊಳೆದುಕೊಳ್ಳಲು ಜಲವಿತ್ತು ಕುಂಕುಮ-ಹೂವು, ಹಣ್ಣು-ಕಣ ಕೊಟ್ಟು ಒಳಗೆ ಕೂತವಳಿಗೆ ಆರತಿ ಎತ್ತಿ ಮತ್ತೆ ಇವರಿಗೂ ಆರತಿ ಎತ್ತುತ್ತಿದ್ದರೆ ಕಣ್ಣು ಮಿಟುಕಿಸದೆ ಆರತಿಯನ್ನೊಮ್ಮೆ, ತಮ್ಮ ಅಮ್ಮಂದಿರನ್ನೊಮ್ಮೆ ನೋಡುವ ಆ ಪುಟ್ಟಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ಗರ್ಭಗುಡಿಯೊಳಗಿನವಳ ಕಾಂತಿ ತುಂಬಿಕೊಂಡಂತೆ? ಗರ್ಭಗುಡಿಯೊಳಗಿನ ಕನ್ನಿಕೆ ತಮ್ಮ ಕಂದಮ್ಮಗಳೊಳಗೆ ಕಂಡಂತೆನಿಸಿದಾಗ ಮೈಮರೆತು ಅಮ್ಮಂದಿರೂ ಕೈಮುಗಿಯುತ್ತಾರೆ. ಹೆಣ್ಣು ದೇವತೆಯೆನಿಸಿಕೊಂಡಾಗಲೂ ಲೋಕರೂಢಿ ಯಿಂದಾಚೆ ಕಾಲಿಕ್ಕುವ ತಪ್ಪು ಮಾಡಿಯಾಳು ಮತ್ತಾಗ ಅವಳೊಳಗಿನ ಮನುಷ್ಯತ್ವಕ್ಕೆ ಪ್ರಾಯಶ್ಚಿತ್ತದ ಅವಕಾಶವಿದೆ ಯೆನ್ನುವ, ಸಣ್ಣದೊಂದು ಗುರುತಿಸುವಿಕೆಯೂ ಸಾಮಾನ್ಯ ಹೆಣ್ಣಿನೊಳಗಿನ ದೈವಿಕ ಶಕ್ತಿ ಸಂಚಯವನ್ನು ಜಾಗೃತಗೊಳಿಸಬಲ್ಲುದೆನ್ನುವ, ಈ ನೆನಕೆಗಳಿಗೆ ಬೆಲ್ಲದನ್ನದ ಪರಿಮಳ, ತೆಂಗಿನೆಣ್ಣೆಯಲ್ಲಿ ಮಿಂದೇಳುತ್ತಿರುವ ಚಟ್ಟೆವಡೆಯ ಪರಿಮಳ, ಮಂಗಳೂರು ಮಲ್ಲಿಗೆ ಮತ್ತು ಕುಂಕುಮದ ಮಿಶ್ರ ಪರಿಮಳ. ಹೌದು, ಇದು ನವರಾತ್ರಿಯ ಪರಿಮಳ

 

Tags: