Mysore
21
clear sky

Social Media

ಭಾನುವಾರ, 18 ಜನವರಿ 2026
Light
Dark

ಡಿಜಿಟಲ್ ಯುಗದಲ್ಲಿ ಹಲವು ರಾಮಾಯಣಗಳ ಕುರಿತು  

ಸುಕನ್ಯಾ ಕನಾರಳ್ಳಿ

ದೆಹಲಿ ವಿಶ್ವವಿದ್ಯಾಲಯದಲ್ಲಿ ಎ.ಕೆ. ರಾಮಾನುಜನ್ನರ”Three Hundred Ramayanas: Five Examples and Three Thoughts on Translation’ ಎಂಬ ಲೇಖನ ೨೦೦೬ನೇ ಇಸವಿಯಿಂದ ಒಂದು ಪಠ್ಯವಾಗಿತ್ತು. ಸಂಘ ಪರಿವಾರದ ವಿದ್ಯಾರ್ಥಿ ಅಂಗವಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮುಂದಾಳತ್ವದಲ್ಲಿ ೨೦೦೮ರಿಂದಲೂ ಪ್ರತಿಭಟನೆಗಳು ನಡೆದಿದ್ದವು. ಪಾಠ ನಡೆಯುತ್ತಿದ್ದ ಕೊಠಡಿಗೆ ನುಗ್ಗಿ ದಾಂದಲೆ ನಡೆಸಿ ನಂತರ ವಿಭಾಗದ ಮುಖ್ಯಸ್ಥರ ಕೊಠಡಿಗೂ ನುಗ್ಗಿ ಪಠ್ಯವನ್ನು ಕೈ ಬಿಡದಿದ್ದರೆ ಪರಿಣಾಮಗಳನ್ನು ಎದುರಿಸಬೇಕೆಂದು ಬೆದರಿಸಿತ್ತು. ಪ್ರತಿಭಟನೆ ಹಿಂಸೆಗೂ ತಿರುಗಿತ್ತು. ೨೦೧೧ರಲ್ಲಿ ಅದನ್ನು ಪಠ್ಯಕ್ರಮದಿಂದ ಕೈ ಬಿಡಲಾಯಿತು.

ರಾಮಾಯಣ ಭಾರತದಲ್ಲಷ್ಟೇ ಅಲ್ಲ, ಏಷ್ಯಾದ ಹಲವಾರು ದೇಶಗಳಲ್ಲಿ ಅದರ ಕಥೆಗಳು, ಬಿಡಿಬಿಡಿಯಾಗಿ ಇಲ್ಲವೇ ಇಡಿಯಾಗಿ, ಹಲವಾರು ರೂಪಗಳನ್ನು ಹೊತ್ತು ಹರಡಿವೆ. ಅವುಗಳನ್ನು ಪಟ್ಟಿಮಾಡುವ, ಚಾರಿತ್ರಿಕ ಚೌಕಟ್ಟಿನಲ್ಲಿಟ್ಟು ನೋಡುವ, ಮತ್ತು ಸಮಾಜಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನಿಸುವ ಉದ್ದೇಶ ಅಪಾರ ಬೌದ್ಧಿಕ ಶ್ರಮವನ್ನು ಬೇಡುತ್ತದೆ.

ಮೈಸೂರಿನ ಎ.ಕೆ.ರಾಮಾನುಜನ್ ಒಬ್ಬ ಪ್ರತಿಭಾವಂತ ಕವಿ, ಸಂಶೋಧನಕಾರ, ಲೇಖಕ ಮತ್ತು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷೆಗಳ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕರಾಗಿದ್ದ ಒಂದು ಅದ್ಭುತ ಪ್ರತಿಭೆ. ದಕ್ಷಿಣ ಏಷ್ಯಾದ ಅಧ್ಯಯನಕ್ಕೆ  ಸಂಬಂಧಿಸಿದಂತೆ ಹಲವಾರು ಅಪರೂಪದ ಆಕರಗಳನ್ನು ಕಲೆ ಹಾಕಿರುವ ರಾಮಾನುಜನ್ನರ ಶ್ರೀಮಂತ ಸಂಗ್ರಹಕ್ಕೆ ಸಾಟಿಯಾಗುವ  ಇನ್ನೊಂದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂಬ ಅಭಿಪ್ರಾಯವಿದೆ. Three Hundred Ramayanas: Five Examples and Three Thoughts on Translation ಒಂದು ವಿದ್ವತ್ಪೂರ್ಣ ಸಂಶೋಧನಾ ಲೇಖನ. ಮೌಖಿಕ, ಲಿಖಿತ ಮತ್ತು ಪ್ರದರ್ಶನೀಯ ಸಂಪ್ರದಾಯಗಳಲ್ಲಿ ರಾಮಕಥೆಯ ಪುನರುಕ್ತಿಗಳು ಹೇಗೆ ಬಗೆಬಗೆಯ ರೂಪಗಳನ್ನು ಪಡೆಯುತ್ತಾ ಹೋಗುತ್ತವೆ ಎನ್ನುವ ಈ ಪ್ರಯತ್ನಕ್ಕೆ ಕೇವಲ ಭಾರತವೊಂದೇ ನೆಲೆಯಲ್ಲ. ದಕ್ಷಿಣ ಏಷಿಯಾದಂತಹ ಹರವಾದ ನೆಲೆಯನ್ನು ಹೊಂದಿರುವುದು ಅದರ ಬೌದ್ಧಿಕ ಶ್ರಮಕ್ಕೆ ಮತ್ತು ವಿದ್ವತ್ತಿಗೆ ಸಾಕ್ಷಿ.

ಅದರ ಹಿಂದಿರುವ ಬೌದ್ಧಿಕ ಶ್ರಮ ಪ್ರಜ್ಞಾವಂತ ಓದುಗರ ಕಣ್ಣನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಲವು ರೀತಿಯ ರಾಮಾಯಣಗಳು ಹಲವು ಬಗೆಯಲ್ಲಿ ಹರಡುತ್ತಾ ಹೋಗಿರುವ ಪ್ರಕ್ರಿಯೆಯೇ ಭಾರತದ ಸಾಂಸ್ಕ ತಿಕ ವೈವಿಧ್ಯತೆಗೆ ಒಂದು ಶ್ರೀಮಂತ ರೂಪಕವಾಗ ಬಲ್ಲದು. ಜನ ಸಮುದಾಯಗಳನ್ನು ಅರ್ಥ ಮಾಡಿ ಕೊಳ್ಳುವ ಈ ಪ್ರಯತ್ನದ ವಿರುದ್ಧ ಚಿಂತನಶೀಲತೆಯನ್ನು ಬೆಳೆಸಬೇಕಾದ ವಿಶ್ವವಿದ್ಯಾಲಯಗಳಲ್ಲೇ ಅದನ್ನು ದಮನಿಸುವ ಪ್ರಯತ್ನಗಳು ಕಾಣಿಸಿಕೊಳ್ಳುವುದು ಈ ಕಾಲದ ವೈರುಧ್ಯಗಳಲ್ಲಿ ಒಂದು.

ಸಂಸ್ಕ ತಿಗೆ ಅಪಚಾರವಾಗುತ್ತಿದೆ ಎಂದು ಬೊಬ್ಬೆ ಹೊಡೆಯುವ ಮನಸ್ಸುಗಳಿಗೆ ಅಂತಹ ಶ್ರಮದ ಅಗತ್ಯವಿಲ್ಲ. ಅದೂ ಯೋಚಿಸದೆ ಕೀ ಬೋರ್ಡ್ ಮೇಲೆ ಪಂಚಿಸಬಹುದಾದ ಈ ಡಿಜಿಟಲ್ ಯುಗ ದಲ್ಲಿ! ಬೊಬ್ಬೆ ಹೊಡೆದ ಮಂದಿಯಲ್ಲಿ ಹೆಚ್ಚಿನಂಶ ಅದನ್ನು ಓದುವ ಗೋಜಿಗೂ ಹೋಗಿರುವುದಿಲ್ಲ! ಧಾರ್ಮಿಕದ ಹೆಸರಿನಲ್ಲಿ ದಾಂದಲೆ ನಡೆಸುವ ಹುಂಬತನಕ್ಕೆ ಇದೇ ‘ನಾನು’ (ಸ್ವ), ಇದಮಿತ್ಥಂ ಎನ್ನುವ, ಅಥವಾ ಇದೇ ‘ಪಠ್ಯ’ ಎಂದು ಷರಾ ಬರೆಯುವುದು ಧರ್ಮಕ್ಕೆ ಮಾಡುವ ಅಪಚಾರ ಎಂದು ಹೊಳೆಯಲಾರದು. ತಾನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ಭಾರತದಲ್ಲಿ, ಅಂತಹ ದೊಡ್ಡ ದೇಶದಲ್ಲಿ ಇರುವ ಅದ್ಭುತ ವೈವಿಧ್ಯದ ನಡುವೆಯೂ ‘ಬಾಹುಳ್ಯ’ದ ಕತ್ತನ್ನೇ ಹಿಸುಕಲು ಪ್ರಯತ್ನಿಸಲು ನಡೆದ ವಿದ್ಯಮಾನಗಳಲ್ಲಿ ಇದೂ ಒಂದು. Monomania  (ಏಕದ ಗೀಳು) ಇಂದಿನ ಸಾಮಾಜಿಕ ಹವಾಮಾನದ ಏಕಮಾತ್ರ ವರದಿ. ಆದರೂ, ಯಾರೆಷ್ಟೇ ತಿಪ್ಪರಲಾಗ ಹಾಕಿದರೂ ವೈವಿಧ್ಯತೆಯನ್ನು ದಮನಿಸುವುದು ಸುಲಭವೇನಲ್ಲ ಎಂಬ ಸತ್ಯದ ನೆಲೆಯಲ್ಲಿ ಸಮಾಧಾನಪಟ್ಟುಕೊಳ್ಳಬೇಕು. ಯಾಕೆಂದರೆ ವೈವಿಧ್ಯ ಅಥವಾ ಬಾಹುಳ್ಯ ಪ್ರಕೃತಿಯ ಒಂದು ಮೂಲತತ್ವ. ಜಗತ್ತಿನ ಅಗಾಧ ಜೀವಜಾಲ ಬದುಕಿರುವುದೇ ಬಹುಳತೆಯ ಬಲದ ಮೇಲೆ, ಮತ್ತು ಪರ ಸ್ಪರತೆಯ ಜೀವಜಲದ ಒಳಗೆ.

” ಹಲವು ರೀತಿಯ ರಾಮಾಯಣಗಳು ಹಲವು ಬಗೆಯಲ್ಲಿ ಹರಡುತ್ತಾ ಹೋಗಿರುವ ಪ್ರಕ್ರಿಯೆಯೇ ಭಾರತದ ಸಾಂಸ್ಕೃತಿಕ  ವೈವಿಧ್ಯತೆಗೆ ಒಂದು ಶ್ರೀಮಂತ ರೂಪಕವಾಗಬಲ್ಲದು.”

Tags:
error: Content is protected !!