• ಶಭಾನ ಮೈಸೂರು
ಗುರುವಾರ ಮಧ್ಯಾಹ್ನ ಬಿದ್ದ ಮಳೆನೀರಿನ ತೇವ ರಂಗಾಯಣದ ಆವರಣದಲ್ಲಿ ಇನ್ನೂ ಆರಿರಲಿಲ್ಲ. ಸಂಜೆಗತ್ತಲ ನಡುವೆ ಬಿಳಿ ಸೀರೆಯನ್ನುಟ್ಟ ಮಹಿಳೆ ಇತ್ತ ಕಡೆಯೇ ಬರುತ್ತಿರುವಂತೆ ಅನಿಸಿತು. ನೋಡಿದ ತಕ್ಷಣವೇ ಜುಲೇಖಾ ಅವರೆಂದು ತಿಳಿದು, ಕುಶಲೋಪರಿ ಮಾತಿಗೆಂದು ತೆರಳಿದೆವು. ಬದುಕ ತುಂಬ ನೋವುಂಡ ಕಣ್ಣುಗಳು ಅಂದು ಸ್ವಲ್ಪಮಟ್ಟಿಗೆ ಕಳೆಗಟ್ಟಿತ್ತು. ದೇಹದ ಅಶಕ್ತತೆಯ ನಡುವೆ ದಿಟ್ಟ ಹೆಜ್ಜೆಗಳನಿಕ್ಕುತ್ತಾ, ರಂಗ ಪರಿಸರಕ್ಕೆ ಕಾಲಿಟ್ಟ ಜುಲೇಖಾ ಅವರೀಗ ಹಿಂದಿನ ಸರಸ್ವತಿಯಾಗಿದ್ದರು.
ಒಂದು ಕಾಲದ ಉತ್ತರ ಕರ್ನಾಟಕದ ಖ್ಯಾತ ನಟಿ ಜುಲೇಖಾ ಅವರು ಮೈಸೂರಿನಲ್ಲಿ ಮಗ ಕರೀಂ ಅವರೊಂದಿಗೆ ವಾಸವಾಗಿದ್ದಾರೆ. ಜುಲೇಖಾ ಬೇಗಂ ಉರುಫ್ ಸರಸ್ವತಿ ಉರುಫ್ ಮಲ್ಲಮ ಈ ಮೂರು ಹೆಸರುಗಳೂ ಇವರ ಮೂರು ಜೀವನ ಘಟ್ಟಗಳ ಸೂಚಕ. ಆಗಿನ ಮಲ್ಲಮ್ಮನಿಂದ ಈಗಿನ ಜುಲೇಖಾ ಬೇಗಂ ಆಗುವ ತನಕದ ಬದುಕು ಬಯಸಿದಂತೆ ಒದಗಿಬರಲಿಲ್ಲ. ನಿಜ ಬದುಕಿನಲ್ಲಿ ನಿರಂತರ ಸವಾಲುಗಳನ್ನು ಎದುರಿಸುತ್ತಿದ್ದರೂ ರಂಗದ ಮೇಲೆ ನಿಂತರೆ ಭೂತ – ವರ್ತಮಾನವನ್ನು ಮರೆತು, ಪಾತ್ರದೊಳಗೆ ತಲ್ಲೀನರಾಗುತ್ತಾರೆ. ಚಿಕ್ಕವಳಿದ್ದಾಗಿನಿಂದ ಮಲ್ಲಮ್ಮ ಎಂಬ ಈ ಬಾಲಕಿ ಕಲಾವಿದೆಯಾಗಬೇಕೆಂಬ ಕನಸು ಕಟ್ಟಿದ್ದಳು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕುಕನೂರಿನಲ್ಲಿ ಜನಿಸಿದ ಮಲ್ಲಮ್ಮ ವೀರಶೈವ ಸಮುದಾಯಕ್ಕೆ ಸೇರಿದವರು. ತಂದೆ ವೀರಪ್ಪ ಹೂಗಾರ್ ಮತ್ತು ತಾಯಿ ಬಸಮ್ಮ ಅವರ ಪ್ರೀತಿಯ ಮಗಳು. ತಂದೆ ತಲೆಗೆ ಸುತ್ತುವ ರುಮಾಲನ್ನು ಬಾಲದ ರೀತಿಯಲ್ಲಿ ಮಾಡಿಕೊಂಡು, ಮುಖಕ್ಕೆ ಮಸಿ ಬಳಿದುಕೊಂಡು, ಹನುಮಂತ ವೇಷವನ್ನು ಕಟ್ಟುತ್ತಿದ್ದಾಗ ಇವರಿಗೆ ಆರೇಳು ವರ್ಷ ಇರಬಹುದಷ್ಟೆ. ಹನುಮಂತನಂತೆ ಇವರು ಕುಣಿದು, ಜಿಗಿಯುತ್ತಿದ್ದರೆ ನೋಡುತ್ತಿದ್ದವರೆಲ್ಲ ಗೊಳ್ಳೆಂದು ನಗುತ್ತಿದ್ದರು! ಮನೆಯವರ ಜೊತೆಗೂಡಿ ಸಿನೆಮಾ ನೋಡಿಕೊಂಡು, ತೆರೆ ಮೇಲೆ ಕಂಡ ಪಾತ್ರಗಳನ್ನು ಮನೆಗೆ ಬಂದ ಮೇಲೆ ಅರಿವಿಲ್ಲದಂತೆ ಅಭಿನಯಿಸುತ್ತಿರುವಾಗ, ಕಲೆ ಇವರ ಬದುಕಿಗೆ ಪ್ರವೇಶ ಪಡೆದಿತ್ತು. ಮಲ್ಲಮ್ಮನೊಳಗೆ ಕಲಾವಿದೆ ಇದ್ದಾಳೆಂದು ಮೊದಲು ಗುರುತಿಸಿದ್ದು ಅಕ್ಕಿ ಭಾಗಮ್ಮ ಅವರ ಮಗಳು ಲಕ್ಷ್ಮಿ ಬಾಯಿ, ಭಾಗಮ್ಮ ಅವರ ಗಂಡು ಮಕ್ಕಳಿಬ್ಬರೂ ಕಲಾವಿದರಾಗಿದ್ದರು. ತಡಮಾಡದೆ, ಬಸಮ್ಮ ಅವರಲ್ಲಿ ಮಗಳನ್ನು ನಾಟಕಕ್ಕೆ ಸೇರಿಸುವಂತೆ ಒತ್ತಾಯಿಸಿದರು. ಅದೇ ಸಮಯಕ್ಕೆ ಮನೆಯ ಸಾಮಾನುಗಳೆಲ್ಲ ಕಳವಾದಾಗ ಅನ್ಯ ಮಾರ್ಗವಿಲ್ಲದೇ ತಾಯಿ ಬಸಮ್ಮ ಗಟ್ಟಿ ಧೈರ್ಯ ಮಾಡಿ ಪತಿಯನ್ನು ಒಪ್ಪಿಸಿ, ಭಾಗಮ್ಮ ಅವರ ಜೊತೆ ಕಳುಹಿಕೊಟ್ಟರು. ಮಲ್ಲಮ್ಮ ಸೇರಿದ್ದು ನ್ಯಾಮತಿ ಶಾಂತಣ್ಣನವರ್ ಮಾಲೀಕತ್ವದ ‘ಮಹೇಶ್ವರ ನಾಟ್ಯ ಸಂಘ’ವನ್ನು ಬದುಕು ನಿಧಾನವಾಗಿ ಕಲಾವಿದೆಯಾಗುವ ಹಾದಿ ಹಿಡಿದಿತ್ತು!
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಾಟಕದ ಕ್ಯಾಂಪ್ ನಡೆಯುತ್ತಿತ್ತು. ಸಹಜ ಮಾತಿನಲ್ಲೂ ತೊದಲು ನುಡಿಯುತ್ತಿದ್ದ ಇವರಿಗೆ ಲೋಹಿತಾಶ್ವನ ಪಾತ್ರ ಸಿಕ್ಕಿತು. ಮುರುಗೋಡು ರೇಣಮ್ಮ ಅವರು ಚಂದ್ರಮತಿ ಪಾತ್ರ
ನಿರ್ವಹಿಸುತ್ತಿದ್ದರೆ, ಲಾಡ್ ಸಾಹೇಬರು ವಿಶ್ವಾಮಿತ್ರನ ಪಾತ್ರ ಮಾಡುತ್ತಿದ್ದರು. ಲೋಹಿತಾಶ್ವ ಗರಿಕೆ ತರುವುದಕ್ಕೆಂದು ಹೋದಾಗ ಹಾವು ಕಚ್ಚಿ ಸಾಯುವ ಪ್ರಸಂಗ ಸತ್ತು ಬಿದ್ದ ಲೋಹಿತಾಶ್ವನಿಗೆ ಮತ್ತೆ ಜೀವ ಬರಲು ನಾಟಕದಲ್ಲಿ ಒಂದೂವರೆ ಗಂಟೆ ವಿರಾಮವಿತ್ತು. ದೀರ್ಘ ಬಿಡುವಿನ ವೇಳೆ ಕಳೆದು, ಇನ್ನೇನು ದೃಶ್ಯ ಸಮೀಪಿಸುತ್ತಿತ್ತು. ‘ಮಗೂ ಲೋಹಿತಾಶ್ವ ಎದ್ದೇಳು’ ಎನ್ನುತ್ತಾ ತೀರ್ಥ ಸಿಂಪಡಿಸಿದರೆ ಲೋಹಿತಾಶ್ವ ಸುಖ ನಿದ್ರೆಯಲ್ಲಿದ್ದಾನೆ! ಪ್ರೇಕ್ಷಕರಿಗೆ ಗೊತ್ತಾಗದಂತೆ ತಾಯಿ ಚಂದ್ರಮತಿ ಕಾಲಬೆರಳಿನಿಂದ ಮಗನನ್ನು ತಿವಿದು ಎಚ್ಚರಿಸಿದರು. ಇವರು ನಿದ್ರೆಯಿಂದ ತಕ್ಷಣವೇ ಎಚ್ಚೆತ್ತು, ‘ಅಮ್ಮಾ. ಅಪ್ಪಾ..’ ಎಂದು ಅಪ್ಪಿಕೊಂಡ ಸನ್ನಿವೇಶವನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ.
‘ಸತ್ಯ ಹರಿಶ್ಚಂದ್ರ’ದ ಲೋಹಿತಾಶ್ವ, ‘ಟಿಪ್ಪು ಸುಲ್ತಾನ’ ನಾಟಕದ ಮಗನ ಪಾತ್ರ ‘ತಾಯಿ ಕರುಳಿನ’ ದಾಕ್ಷಾಯಿಣಿ, ಮುದುಕನ ಮದುವೆ’ಯಲ್ಲಿ ಮಂದಾಕಿನಿ ಪಾತ್ರಗಳನ್ನು ನಿರ್ವಹಿಸಲು ಎಳೆ ವಯಸ್ಸಿನಲ್ಲಿ ಅವಕಾಶ ಸಿಕ್ಕಿದ್ದು ಇವರ ಪಾಲಿಗೆ ಬದುಕಿನ ಭಾಗ್ಯ, ಕಂಪೆನಿಯ ಮಾಲೀಕರು ಇವರ ಅಭಿನಯಕ್ಕೆ ಬೆರಗಾಗಿದ್ದರು.
ಒಂದನೇ ಕ್ಲಾಸು ಓದಿದ ಏಳು ವರ್ಷದ ಪುಟ್ಟ ಬಾಲೆಯ ಸ್ಪಷ್ಟ ಮಾತಿನ ಲಹರಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಷ್ಟೇ ಅಲ್ಲ, ಮಲ್ಲಮ್ಮ ಹೆಸರಿಗಿಂತ ಸರಸ್ವತಿ ಹೆಸರೇ ಹುಡುಗಿಗೆ ಒಪ್ಪುತ್ತದೆ ಎಂದು ಸರಸ್ವತಿ ಎಂದು ಹೆಸರಿಟ್ಟರು. ಹೀಗೆ ತಂದೆಯ ಮನೆದೇವರಾದ ಮೈಲಾರಲಿಂಗೇಶ್ವರ ಸ್ವಾಮಿಯ ದಯೆಯಿಂದ ಹುಟ್ಟಿದ ಮಲ್ಲಮ್ಮ ಅವರು ಜಗತ್ತಿಗೆ ರಂಗ ಸರಸ್ವತಿಯಾಗಿ ಪರಿಚಿತಳಾದಳು. ಜನಪ್ರೀತಿಯಲ್ಲಿ ಕರಗದಂತೆ ತಾಯಿ ವಾತ್ಸಲ್ಯ ಬಿಡಲಿಲ್ಲ. ಇತ್ತ ಬಸಮ್ಮ
ಅವರಿಗೆ ಮಗಳ ನೆನಪು ಅತಿಯಾಗಿ ಕಾಡತೊಡಗಿತು.
ಮಗಳನ್ನು ಭಾಗಮ್ಮನ ಜೊತೆ ಕಳಿಸಿದ್ದೇನೊ ಹೌದು, ಅವಳೆಲ್ಲಿದ್ದಾಳೆಂಬ ಬಗ್ಗೆ ಒಂದು ಪತ್ರವೂ ದೊರೆಯಲಿಲ್ಲ ಎಂದು ಕಂಗಾಲಾದ ತಂದೆ ತಾಯಿಯರಿಬ್ಬರೂ ಪೊಲೀಸ್ ಠಾಣೆಗೆ ದೂರನ್ನು ನೀಡಿ, ವಾಪಸು ಕರೆತಂದರು. ಸರಸ್ವತಿ ಅವರು ಮರಳಿ ಬಂದರೂ ನಟನೆಯ ಆಸಕ್ತಿ ಕಡಿಮೆಯಾಗಲಿಲ್ಲ. ಮತ್ತದೇ ಪಾತ್ರಗಳು ಶಾಲೆಯ ಆವರಣದಲ್ಲಿ ಪ್ರವೇಶ ಪಡೆದು, ತರಗತಿಯ ರಂಗವೇರುತ್ತಿತ್ತು. ನಾಟಕದ ಮೋಹ ಇಷ್ಟಕ್ಕೆ ತೀರದ ಭಾಗಮ್ಮ ಅವರಿಂದಾಗಿ ಸರಸ್ವತಿ ಅವರು ಮತ್ತೆ ಪಟ್ಟದಕಲ್ಲು ಬಸಯ್ಯನವರ ತಂಡ ಸೇರಿದರು.
ಅಷ್ಟು ಹೊತ್ತಿಗಾಗಲೇ ಬಾಲ ನಟಿಯಾಗಿ ಮನ್ನಣೆ ಗಳಿಸಿದ್ದ ಸರಸ್ವತಿ ಅವರಿಗೆ ಸಿಕ್ಕಿದ್ದು ಕಲಾವಿದರು ಮುಖಕ್ಕೆ ಹಚ್ಚುವ ಬಣ್ಣವನ್ನು ಎಣ್ಣೆಯೊಂದಿಗೆ ಬೆರೆಸುವ ಕೆಲಸ! ಈ ಗ್ರೀನ್ ರೂಂ ಕೆಲಸ ಮಾಡಿದ ಮೇಲಷ್ಟೇ ರಂಗವೇರು’ ಎಂದು ಕಂಪೆನಿಯವರು ತಾಕೀತು ಮಾಡಿದ್ದರು. ‘ಪಣಕಿಟ್ಟ ಪ್ರಮಾಣ’ ನಾಟಕದ ಸಂದರ್ಭವದು. ಅಲ್ಲಿ ಯಶವಂತ ಗೌಡ ಎಂಬವರಿಗೆ ಸನ್ಮಾನ ಕಾರ್ಯಕ್ರಮವಿತ್ತು. ಸುಮ್ಮನಿರಲಾರದೇ, ಹುಬ್ಬುಗಳನ್ನು ಬೋಳಿಸಿಕೊಂಡು, ಮಸಿ ಬಳಿದು, ಸಿಕ್ಕ ಸೀರೆಯನ್ನುಟ್ಟು ಈ ಎಳೆಯ ಹುಡುಗಿ ನೇರವಾಗಿ ರಂಗವೇರಿದ್ದಳು. ಈ ಅವತಾರ ನೋಡಿದವರಿಗೆಲ್ಲ ನಗುವೋ ನಗು. ಪಾತ್ರ ಮಾಡಬೇಕೆಂಬ ಉಮೇದಿನಿಂದ ಬಂದು ನಿಂತ ಇವರಿಗೆ ನಾಟಕ ಮುಗಿದ ಮೇಲೆ ಜ್ಞಾನೋದಯವಾಯಿತು. ಯಾರ ಕಣ್ಣಿಗೂ ಬೀಳದೆ, ಉಟ್ಟ ಬಟ್ಟೆಯಲ್ಲೇ ಮಲಗಿದರು! ವಿಚಿತ್ರವೆಂದರೆ, ಸರಸ್ವತಿ ಅವರೊಳಗಿನ ಕಲಾವಿದೆಯನ್ನು ಕಂಡು ಅಚ್ಚರಿಗೊಂಡ ಕಂಪೆನಿಯವರು ಹೇಮರೆಡ್ಡಿ ಮಲ್ಲಮ್ಮ’ ನಾಟಕದಲ್ಲಿನ ನಾಗಮ್ಮ ಪಾತ್ರ ಸೇರಿದಂತೆ ಅನೇಕ ಅವಕಾಶಗಳನ್ನು ನೀಡಿದರು.
ಹದಿಮೂರು ವರ್ಷದ ಹೊತ್ತಿಗೆ ಸರಸ್ವತಿ ಅವರು ಮೈನೆರೆದಾಗ ತಂದೆಯವರು ತಮ್ಮ ಜೊತೆ ಕರೆದುಕೊಂಡು ಬಂದರು. ಮಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ನಾಟಕದಲ್ಲಿ ಅಭಿನಯಿಸುತ್ತಿದ್ದಾಳೆಂಬ ಸುದ್ದಿಯನ್ನು ಯಾರಿಗೂ ತಿಳಿಸದೆ, ಪ್ರತ್ಯೇಕ ಬಾಡಿಗೆ ಮನೆ ಮಾಡಿ ಹೊಲಿಗೆ ಯಂತ್ರವನ್ನು ತಂದುಕೊಟ್ಟರು. ಕುಟುಂಬದವರು ಮಗಳೆಲ್ಲಿದ್ದಳು ಎಂದರೆ ಹೊಲಿಗೆ ಕಲಿಯಲು ಹೋಗಿದ್ದಾಳೆಂದು ಹೇಳುತ್ತಿದ್ದರು. ಆಗ ಶೇಖ್ ಚಾಂದ್ ಎಂಬವರು ತಮ್ಮ ನಾಟಕ ತಂಡಕ್ಕೆ ನಾಯಕ ನಟಿಯ ಹುಡುಕಾಟದಲ್ಲಿದ್ದರು. ಗುಲ್ಬರ್ಗಾದಲ್ಲಿರುವ ತಮ್ಮ ನಾಟಕ ತಂಡದಲ್ಲಿ ಅಭಿನಯಿಸುವಂತೆ ಸರಸ್ವತಿ ಅವರಲ್ಲಿ ದುಂಬಾಲುಬಿದ್ದರು. ಸರಸ್ವತಿ ಶರಣ ಬಸವೇಶ್ವರನನ್ನು ನೋಡಿದಂತಾಗುತ್ತದೆ ಎಂದು ತಂದೆಯವರಲ್ಲಿ ಕಡೆಯ ಅವಕಾಶ ನೀಡಿರೆಂದು ಕೇಳಿದರು. ತಂದೆಯ ಸಮ್ಮತಿಯೂ ದೊರೆಯಿತು.
ಒಂದು ಸನ್ನಿವೇಶದಲ್ಲಿ ಅಭಿನಯಿಸುತ್ತಾ, ಶೇಖ್ ಅವರಿಗೆ ಇವರ ಮೇಲೆ ಪ್ರೇಮಾಂಕುರವಾಯಿತು. ಜುಲೇಖಾ ಅವರು ಆ ದಿನಗಳನ್ನು ನೆನೆದು, ಒಂದು ಸಿನೆಮಾ ಮಾಡಬಹುದಾದಷ್ಟು ರೋಚಕ ಪ್ರೇಮ ಕತೆಗಳಿವೆ’ ಎಂದು ನಗುತ್ತಾರೆ. ಶೇಖ್‌ಚಾಂದ್‌ರವರು ತಮ್ಮನ ಕಡೆಯಿಂದ ಪ್ರೇಮ ಪತ್ರಗಳನ್ನು ಕಳಿಸಿದರೆ, ಸರಸ್ವತಿ ಅವರು ಮುಲಾಜಿಲ್ಲದೆ ನಿರಾಕರಿಸುತ್ತಿದ್ದರು. ಮದುವೆಗಾಗಿ ಬೇಡಿಕೆ ಇಟ್ಟಾಗಲೂ ಊಹೂಂ ಎಂದಿದ್ದರು. ಆದರೆ ಮದುವೆಯಾಗೆಂದು ಸ್ನೇಹಿತರ ಒತ್ತಡ, ಊಟ ಬಿಟ್ಟು, ಬೆಟ್ಟದಿಂದ ಹಾರುತ್ತೇನೆಂದು ಹೇಳುವಷ್ಟರ ಮಟ್ಟಿಗೆ ಶೇಖ್ ಅವರು ಪ್ರೇಮಕ್ಕೆ ಸಿಲುಕಿದ್ದರು. ಸರಸ್ವತಿಯವರ ಕುಟುಂಬದವರಿಗೆ ಈ ಸುದ್ದಿ ತಿಳಿದು, ಸರಸ್ವತಿ ಅವರಿಗೆ ಊರಿಗೆ ಬಾ ಎಂದು ಆದೇಶ ನೀಡಿದರು. ಶೇಖ್ ಸುಮ್ಮನಿರುತ್ತಾರೆಯೇ? ಇವರು ಹತ್ತಿದ ಬಸ್ಸಿನ ಮುಂದೆಯೇ ಮಲಗಿದರು.
ಅಂತೂ ಪ್ರೀತಿಗೆ ಒಪ್ಪಿ, ಶೇಖ್ ಅವರನ್ನೇ ಮದುವೆಯಾದರು. ತಂಡದ ನಾಯಕ ನಟ ಬದುಕಿನ ನಾಯಕಿಯಾಗುವ ಅಪರೂಪದ ಕ್ಷಣವನ್ನು ಶೇಖ್ ಅವರು ಅದೆಷ್ಟು ಸಂಭ್ರಮಿಸಿರಬೇಕು! ಸರಸ್ವತಿ ಅಲ್ಲಿಂದಾಚೆಗೆ ಜುಲೇಖಾ ಬೇಗಂ ಆದರು. ಮದುವೆಯಾದ ಮೇಲೂ ಸ್ವಾಭಿಮಾನದಿಂದ ಬದುಕನ್ನು ಸಾಗಿಸಿದರು.
ಜೀವನಕ್ಕೆ ನೆರವಾಗಬಲ್ಲ ಹಲವು ಕೆಲಸಗಳನ್ನು ಕಲಿತರು. ಅದರೊಂದಿಗೆ ಗಂಡ ಹೆಂಡತಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದರು. 1969ರಿಂದ 2001 ರವರೆಗೆ ಅಂದರೆ 32ವರ್ಷಗಳವರೆಗೆ ಶೇಖ್ ಮತ್ತು ಜುಲೇಖಾ ಜೋಡಿ ಕನ್ನಡದ ವೃತ್ತಿ ರಂಗಭೂಮಿಯಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ.
ಹಾಸನದಲ್ಲಿ ಶೇಖ್ ಅವರು ನಾಟಕದಲ್ಲಿ ಅಭಿನಯಿಸುತ್ತಿರುವ ವೇಳೆ ಬಿದ್ದು, ಆಸ್ಪತ್ರೆ ಸೇರಿದರು. ಗಂಡನ ಆರೈಕೆ ವೇಳೆಯಲ್ಲಿದ್ದ ಕೆಲವರು ಹವ್ಯಾಸಿ ತಂಡಗಳಿಗೆ ಜುಲೇಖಾ ಅವರನ್ನು ಆಹ್ವಾನಿಸಿದರು. ಬಡತನ ನೀಗುವುದಕ್ಕೆ ಅಭಿನಯಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಳ್ಳಿ ಕೇರಿಗೆ ಹೋಗಿ ನಾಟಕವಾಡುತ್ತಿದ್ದರು. ಅಭಿನಯಿಸಿ ಬಂದ ದುಡ್ಡು ಮೂರು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲು. ಮೈಸೂರಿನ ಯೋಗಾನರಸಿಂಹರವರ ಜೀವನ ಸಂಗ್ರಾಮ ಚಿತ್ರ ಮತ್ತು ಇತರ ನಿರ್ದೇಶಕರ ಅವಳಕಣ್ಣು, ತಾಯಿ ಸಿನೆಮಾಗಳಲ್ಲಿ ಅಭಿನಯಿಸಿದರು (ಅದರಿಂದ ಆರ್ಥಿಕ ಜೀವನ ದ ಮೇಲೆ ಅಂತಹ ಸಹಕಾರವೇನು ಆಗಲಿಲ್ಲ).
ಮೊದಲಿಂದಲೂ ಜುಲೇಖಾ ಅವರದ್ದು ತಿವಿದು ಅಳಿಸುವ ಚಾಳಿ, ಬದುಕೂ ಈ ಪ್ರಯೋಗ ಮಾಡಿತೆನ್ನುವ ಹಾಗೆ ಜಾಂಡಿಸ್ ಕಾಯಿಲೆಗೆ ತುತ್ತಾಗಿ ಕಿರಿಯ ಮಗ ಸಿಕಂದರ್ ಬಾದ್‌ಶಾನನ್ನು ಕಳೆದುಕೊಂಡ ನೋವು ಮಾಸಿರಲಿಲ್ಲ. ಅಷ್ಟರಲ್ಲಿ ಪತಿ ಶೇಖ್ ಅವರು ವಿಧಿವಶರಾದರು. ಮಡುಗಟ್ಟಿದ ದುಃಖದ ನಡುವೆ ಬದುಕುತ್ತಿರುವಾಗ ಇತ್ತೀಚೆಗೆ 2021 ರಲ್ಲಿ ಜನಾನುರಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಮತ್ತೊಬ್ಬ ಮಗ ಮಹಮದ್ ರಫಿ ಕಣ್ಣೆದುರೇ ತೀರಿಹೋದರು. ಇದಕ್ಕಿಂತ ಮಾನಸಿಕ ಯಾತನೆ ಯಾವುದಿದೆ! ಮಾತುಗಳಲ್ಲಿ ಇವರೊಳಗಿನ ಬೇಗುದಿ ಸ್ಪಷ್ಟವಾಗಿ ಕಾಣಿಸುತ್ತದೆ. ಭರವಸೆಯೆಂದರೆ ಅಂದು ರಂಗಾಯಣದ ವೇದಿಕೆಯಲ್ಲಿ ಗಾಂಧಾರಿ ಮತ್ತು ದುರ್ಯೋಧನ ಪಾತ್ರಗಳಲ್ಲಿ ಪರಕಾಯ ಪ್ರವೇಶಿಸಿ, ಎಂಬತ್ತರ ವಯಸ್ಸಿನಲ್ಲೂ ಸೈ ಎನಿಸಿಕೊಂಡಿದ್ದು. 1950ರ ದಶಕದಲ್ಲಿ ಏಳು ವರ್ಷದ ಹೆಣ್ಣು ಮಗಳೊಬ್ಬಳು ರಂಗಭೂಮಿಯ ಸಲುವಾಗಿ ಸಂಪ್ರದಾಯದ ಬೇಲಿ ದಾಟಿ, ಸಾರ್ವಜನಿಕವಾಗಿ ತನ್ನನ್ನು ಗುರುತಿಸಿಕೊಳ್ಳುವುದು ಕಷ್ಟ. ಆದರೆ ಈ ಮಾತನ್ನು ಜುಲೇಖಾ ಅವರು ಇವತ್ತಿಗೂ ಒಪ್ಪುವುದಿಲ್ಲ. ‘ರಂಗಭೂಮಿಯ ಕಲಾವಿದೆಯಾದ ನನ್ನನ್ನು ಸಮಾಜ ಯಾವತ್ತೂ ಅವಮಾನಿಸಿಲ್ಲ. ತುಂಬು ಪ್ರೀತಿ, ಅಭಿಮಾನ ನೀಡಿ, ಜನಪ್ರಿಯರಾಗಿಸಿದೆ’ ಎಂಬ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸುತ್ತಾರೆ.
ಸುಮಾರು 65 ವರ್ಷಗಳಿಗೂ ಹೆಚ್ಚಿನ ಕಲಾಸೇವೆ, ವೃತ್ತಿರಂಗಭೂಮಿ ನಾಟಕಗಳಲ್ಲದೆ, ಗ್ರಾಮೀಣ ಪೌರಾಣಿಕ ನಾಟಕಗಳು, ಹವ್ಯಾಸಿ ರಂಗ ತಂಡಗಳ ನಾಟಕಗಳು, ಆಧುನಿಕ ರಂಗಭೂಮಿ ಸೇರಿ 500ಕ್ಕೂ ಹೆಚ್ಚು ನಾಟಕಗಳು ಮತ್ತು ಕರ್ನಾಟಕದಾದ್ಯಂತ 10,000 ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿರುವ ಹಿರಿಯ ಕಲಾವಿದೆ ಮಲ್ಲಮ ಉರುಫ್ ‘ಸರಸ್ವತಿ ಉರುಫ್’ ಜುಲೇಖಾ ಬೇಗಂ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬದುಕಿದ್ದಾರೆ.