Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಗಣರಾಜ್ಯ ಎಂಬುದು ಹಲವು ಪ್ರಶ್ನೆಗಳ ಒಂದು ವಾಸ್ತವ

ಚಿಕ್ಕಂದಿನಲ್ಲಿ ನನಗೆ ಭಾರತ ಎಂದರೆ ತುಂಬಾ  ಸುಂದರವಾದ ಕನಸಿನ ದೇಶವಾಗಿತ್ತು. ಶಾಲೆಯಲ್ಲಿ ನಾವು ನೋಡಿದ ಗಣರಾಜ್ಯ ದಿನಾಚರಣೆ, ಧ್ವಜಾರೋಹಣ, ರಾಷ್ಟ್ರಗೀತೆ, ಸಂವಿಧಾನದ ಮಹತ್ವ ಇವೆಲ್ಲವೂ ನನ್ನ ಮನಸ್ಸಿನಲ್ಲಿ ಭಾರತವನ್ನು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ದೇಶವೆಂದು ಕಟ್ಟಿಕೊಟ್ಟಿದ್ದವು. “ಎಲ್ಲರೂ ಸಮಾನರು”, “ಯಾರೂ ಮೇಲು-ಕೀಳು ಅಲ್ಲ” ಎಂಬ ಮಾತುಗಳು ಪುಸ್ತಕದ ಸಾಲುಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಇರುತ್ತವೆ ಎಂದು ನಾನು ನಂಬಿದ್ದೆ. ಬಡವರು, ದಲಿತರು, ದುರ್ಬಲ ವರ್ಗದವರು ಕೂಡ ಗೌರವದಿಂದ ಬದುಕುತ್ತಾರೆ, ಸರ್ಕಾರ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ ಎಂದು ಭಾವಿಸಿದ್ದೆ.

ಆದರೆ ಆನಂತರದ ದಿನಗಳಲ್ಲಿ ನಾನು ಕಂಡ ಭಾರತದ ಗಣರಾಜ್ಯ ಆ ಬಾಲ್ಯದ ಕನಸಿನಿಂದ ತುಂಬಾ ಭಿನ್ನವಾಗಿತ್ತು. ಸಂವಿಧಾನದಲ್ಲಿ ಬರೆದಿರುವ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಸಿಗುತ್ತಿವೆಯೇ ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡಿತು. ನಗರಗಳ ಹೊಳಪಿನ ನಡುವೆ ಫುಟ್‌ಪಾತ್‌ಗಳಲ್ಲಿ ಮಲಗುವ ಕೂಲಿ ಕಾರ್ಮಿಕರು, ಕೆಲಸದ ಸ್ಥಳಗಳಲ್ಲಿ ದಲಿತರನ್ನು ಇನ್ನೂ ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿರುವ ದೃಶ್ಯಗಳನ್ನು ಕಂಡಾಗ, “ನಾವು ಕಂಡ ಗಣರಾಜ್ಯ ಇದೇನಾ?” ಎಂದು ನನ್ನೊಳಗೆ ಪ್ರಶ್ನೆ ಮೂಡುತ್ತಲೇ ಇದೆ.

ಆದಿವಾಸಿಗಳ ಜೀವನ ಇನ್ನೂ ಹೋರಾಟದಿಂದಲೇ ಕೂಡಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಇವುಗಳು ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ವಾಸ್ತವದಲ್ಲಿ ಅವರ ಮಕ್ಕಳು ಇನ್ನೂ ಶಾಲೆ ಬಿಟ್ಟು ಕೆಲಸಕ್ಕೆ ಹೋಗಬೇಕಾಗುತ್ತಿದೆ. ಸರ್ಕಾರಿ ಯೋಜನೆಗಳಿವೆ, ಸಹಾಯಧನಗಳಿವೆ, ಆದರೆ ಅವುಗಳಲಾಭ ಎಲ್ಲರಿಗೂ ತಲುಪುತ್ತಿದೆಯೇ ಎಂಬ ಅನುಮಾನ ಉಳಿಯುತ್ತದೆ. ಕೆಲವರಿಗೆ ಅವಕಾಶಗಳು ದೊರಕಿದರೆ, ಹಲವರಿಗೆ ಅವು ಕಾಗದದಲ್ಲಿಯೇ ಸೀಮಿತವಾಗಿವೆ.

ಆದರೂ ಸಂಪೂರ್ಣ ನಿರಾಶೆಯಲ್ಲ. ಶಿಕ್ಷಣ, ಸಾಮಾಜಿಕ ಚಳವಳಿ ಮತ್ತು ಕಾನೂನು ಸಹಾಯದ ಮೂಲಕ ಅನೇಕರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಅನ್ಯಾಯಗಳನ್ನು ಬಹಿರಂಗಪಡಿಸುತ್ತಿವೆ. ಇಂತಹವುಗಳು ಗಣರಾಜ್ಯದ ಆಶಯ ಇನ್ನೂ ಜೀವಂತವಾಗಿದೆ ಎಂಬ ನಂಬಿಕೆಯನ್ನು ಕೊಡುತ್ತವೆ.

ಇಂದಿನ ಭಾರತದಲ್ಲಿ ಬದಲಾವಣೆಯ ಸಂಕೇತಗಳೂ ಸ್ಪಷ್ಟವಾಗಿವೆ. ಶಿಕ್ಷಣವು ಕೆಲವರಿಗೆ ಸಾಮಾಜಿಕ ಚಲನೆಗೆ ದಾರಿಯಾಗುತ್ತಿದೆ. ಕಾನೂನು ಮತ್ತು ನ್ಯಾಯಾಲಯಗಳ ಮೂಲಕ ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ ಹೆಚ್ಚುತ್ತಿದೆ. ಈ ಎಲ್ಲವೂ ಗಣರಾಜ್ಯ ಸ್ಥಿರವಾದ ಸ್ಥಿತಿ ಅಲ್ಲ, ಅದು ನಿರಂತರ ಹೋರಾಟ ಮತ್ತು ಪರಿವರ್ತನೆಯ ಪ್ರಕ್ರಿಯೆ ಎಂಬುದನ್ನು ಸೂಚಿಸುತ್ತದೆ. ಚಿಕ್ಕಂದಿನ ಗಣರಾಜ್ಯ ಒಂದು ಕನಸಿನ ಚಿತ್ರವಾಗಿದ್ದರೆ, ನಂತರದ ದಿನಗಳಲ್ಲಿ ಕಂಡ ಗಣರಾಜ್ಯ ಒಂದು ಪ್ರಶ್ನೆಗಳೊಂದಿಗೆ ನಿಂತಿರುವ ವಾಸ್ತವ. ಈ ವಾಸ್ತವದಲ್ಲಿ ಸಮಸ್ಯೆಗಳಿದ್ದರೂ, ಪರಿಹಾರದ ಸಾಧ್ಯತೆಗಳೂ ಇವೆ. ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಮೌಲ್ಯಗಳನ್ನು ತನ್ನ ನಡೆ ನುಡಿಯಲ್ಲಿ ಅಳವಡಿಸಿ ಕೊಂಡಾಗ, ನೊಂದ ಸಮುದಾಯಗಳು ಮತ್ತು ದಲಿತರು ಗೌರವದಿಂದ ಬದುಕುವ ಸಮಾಜ ನಿರ್ಮಾಣವಾದಾಗ, ಆಗ ಮಾತ್ರ ಬಾಲ್ಯದ ಕನಸಿನ ಗಣರಾಜ್ಯ ಮತ್ತು ವಾಸ್ತವದ ಗಣರಾಜ್ಯ ಒಂದಾಗಿ ಬೆರೆಯುತ್ತವೆ.

ಡಾ.ಶಿಲಿನಾ ಎನ್. ಜಾನಪದ ಸಂಶೋಧಕಿ ಹೆಗ್ಗಡದೇವನ ಕೋಟೆ ತಾಲ್ಲೂಕು

Tags:
error: Content is protected !!