ಅನಿಲ್ ಅಂತರಸಂತೆ
ಹಳ್ಳಿ ಸೊಗಡಿನ ದೇಸಿ ಕಂಠಸಿರಿಯಲ್ಲಿ ಇವರ ಜಾನ ಪದ ಹಾಡುಗಳನ್ನು ಕೇಳುವುದೇ ಬಲು ಹಿತಕರ. ಮೂಲತಃ ಎಚ್.ಡಿ.ಕೋಟೆ ತಾಲ್ಲೂಕಿನ ಚಿಕ್ಕನಂದಿ ಗ್ರಾಮದವರಾದ ಚಾಮಮ್ಮ ಮತ್ತು ಲಕ್ಷ್ಮಮ್ಮ ಸಂಬಂಧದಲ್ಲಿ ವಾರಗಿತ್ತಿಯರು. ಹೀಗೆ ಇವರ ಪರಿಚಯ ಮಾಡಿದರೆ ಬಹುಶಃ ಅಷ್ಟಾಗಿ ತಿಳಿಯದವರು ಅನಿಸುತ್ತದೆ. ಇವರು ಮತ್ಯಾರೂ ಅಲ್ಲ ಇತ್ತೀಚೆಗೆ ನವೀನ್ ಸಜ್ಜು ಮುಖ್ಯ ಭೂಮಿಕೆ ಜಾನಪದ ಹಾಡೊಂದರಲ್ಲಿ ಕಾಣಿಸಿಕೊಂಡು ತಮ್ಮ ದೇಸಿ ಕಂಠದಿಂದಲೇ ಪ್ರಚಲಿತಕ್ಕೆ ಬಂದವರು ಈ ಇಬ್ಬರು.
ಮಾತುಕತೆ ಆರಂಭಿಸಿದಾಗಲೇ ತಮಗೆ ಸಿಕ್ಕ ಪ್ರಖ್ಯಾತಿಯನ್ನು ಆಶ್ಚರ್ಯದಿಂದ ಹೇಳಿಕೊಳ್ಳುವ ಈ ಇಬ್ಬರು, ಅದೇನಂತೀರ ಸಾ… ನಾವು ಉದ್ಬೂರಲ್ಲಿ ಫಂಕ್ಷನ್‌ಗೆ ಹೋಗಿದ್ದೋ… ಅಲ್ಲಿ ಮೈಸೂರೋರೆಲ್ಲ ಇದ್ರು… ಫಂಕ್ಷನ್ ಮುಗಿದ್ಮೇಲೆ ಬಂದು ಇಂಥ ಹಾಡ ನಾವು ಕೇಳೇ ಇಲ್ಲ… ನಮಗೊಂದು ಹೇಳ್ಕೋಡಿ ಅಂತ… ನಮ್ಮ ಫಂಕ್ಷನ್‌ಗೂ ಬನ್ನಿ ಅಂತ ಹೇಳೋರೋ ಸಾ. ಬೆಂಗಳೂರಲ್ಲಿ ಪಿಚ್ಚರ್ ಮುಗಿಸಿ ಬಂದಾಗ್ಲೂ ಆರ್ ಆರ್ ನಗರದಲ್ಲಿದ್ದಾಗ, ಟಿವಿ ಅವರೆಲ್ಲ ಬಂದೂ ಮಾತಾಡಿ ಮಾತಾಡಿ ಅನ್ನೋರು. ನಮಗಂತೂ ಸುಸ್ತೇ ಆಗೋಯ್ತು ಸಾ… ಹೀಗೆ ತಮಗಾದ ಅನು ಭವವನ್ನು ಹಂಚಿಕೊಳ್ಳುತ್ತಾರೆ ಈ ಇಬ್ಬರು. ಇದರ ನಡುವೆ ಚಿತ್ರದಲ್ಲಿ ನಮಗೂ ಕುಣಿಬೇಕು ಅಂಥ ಆಸೆ… ಆದರೆ, ನಿಮ್ ಕಂಠಸ್ವರನೇ ಸಾಕು ಅದೇ ಚಂದಾಗದೇ ಅಂತ ಕುಣಿಯೋಕೆ ಬಿಡಲಿಲ್ಲ ಸಾ… ಅಂತ ಮುಗ್ಧವಾಗಿಯೇ ತಮಗಾದ ಬೇಸರವನ್ನು ಹೇಳಿಕೊಳ್ಳುತ್ತಾರೆ.
ಹೀಗೇ ಮಾತಿನ ಮಧ್ಯೆ ನೀವು ಈಗ ಫೇಮಸ್ ಆಗೋಗಿದ್ದೀರಾ ಶೂಟಿಂಗ್ ಹೋದಾಗ ನಿಮ್ಮ ಮನೆಯವರು ಸಿಟ್ಟು ಮಾಡಿಕೊಳ್ಳಲ್ವ ಎಂಬ ಮಾತಿಗೆ ಅವರ ಉತ್ತರ, ಕಲೆ ಅಂತ ಬಂದಮೇಲೆ ಎಲ್ಲರಿಗೂ ಖುಷಿ ಇರುತ್ತೇ. ಈ ವಯಸ್ಸಿನಲ್ಲಿ ಹೋಗಿ ಪಿಚ್ಚರ್ ತೆಗೆದ್ರಲ್ಲ ಅಂಥ ಖಷಿ ಇರುತ್ತೇ ಅಂತಾರೆ. ಸಿಟ್ಟು ಮಾಡಿಕೊಂಡ್ರೇ ಹಾಡು ಹಾಡ್ತೀನಿ ಅಷ್ಟಕ್ಕೆ ಮರಳಾಗು ತ್ತಾರೆ ಸಾ… ಎಂಬುದು ಲಕ್ಷ್ಮಮ್ಮನವರ ನಾಚಿಕೆಯ ನುಡಿ. ಗಂಡಸು ಕೋಪ ಮಾಡಲ್ಲ, ಗಂಡ್ಸಿನ ಕೋಪ ಹೊಳೆ-ಸಾಗರ, ಹೆಂಗಸಿನ ಕೋಪ ಗುಂಡಿ ನೀರು. ಹೀಗೇ ಪ್ರಾಸವಾಗಿಯೇ ತಮ್ಮ ಕುಟುಂಬದ ಬೆಂಬಲದ ಬಗ್ಗೆ ಹೇಳುತ್ತಾರೆ ಲಕ್ಷ್ಮಮ್ಮ ಹಾಗೂ ಚಾಮಮ್ಮ. ಕಾಲ ಈಗ ಬದಲಾಗಿದೆ. ಎಲ್ಲವೂ ಬದಲಾಗಿ ಹೆಂಗ್ಸು ಮೇಲು ಗಂಡ್ಸು ಕೀಳು ಅನ್ನಂಗಾಗಿದೆ. ಆದರೆ ಬದಲಾದ ಕಾಲ ನಮಗೆ ನಡೆಯಲ್ಲ ಸಾ… ಒಂದೇ ಸಲ ಲಗ್ನ. ಈಗ ಹಂಗ ಬಂದಿರಬಹುದು ಕಾಲ. ಆದರೆ, ನಮಗೆ ಹಂಗೆ ನಡೆಯಲ್ಲ ಸಾ… ನಮ್ಮ ಕಾಲಕ್ಕೆ ಬೇಲಿ ಸೊಪ್ಪು, ಬೇಲಿ ಮುಳ್ಳು ಎಳ್ಕ ಬಂದು ಎರಡು ರೂಪಾಯಿ ಕಾಳುಕಡ್ಡಿ ತಂದು, ಬಾವಿಲಿ ನೀರು ತಂದು, ಅಸಗಲ್ಲಲ್ಲಿ ಖಾರ ತೀಡಿಕೊಂಡು, ಊಟ ಮಾಡ್ಕೊಂಡು ಸಮರಾತ್ರಿಲಿ ತಲೆ ಮಡ್ಗತ್ತಾ ಇದ್ನೋ.
ಇವಾಗ ನಲ್ಲಿ ನೀರು, ಮಿಲ್ಲಿನ ಹಸೀಟು, ಮಿಲ್ಲಿನ ಖಾರ, ಗ್ಯಾಸು, ಎಲ್ಲನೂ ಮಾಡಿಕೊಂಡು ಮಾಡಿದ್ರೂ ಈಗ ಗಂಡಸ್ರು ಕೀಳು, ಹೆಂಗಸ್ರು ಮೇಲು ಎನ್ನುತ್ತಲೇ ಒಂದಿಷ್ಟು ಪೌರಾಣಿಕ ಕಥೆಗಳನ್ನು ಹೇಳುತ್ತಾ, ಗಂಡ-ಹೆಂಡತಿ ಸಂಬಂಧ ಹೇಗಿರಬೇಕು ಎಂದು ವಿವರಿಸುತ್ತಾರೆ. ಅಲ್ಲದೇ ದೇಹದ ಕೆಲವೂ ನ್ಯೂನತೆಗಳನ್ನೂ ದೇವರೇ ಸೃಷ್ಟಿಸಿರುವುದು ಎಂಬುದು ಅವರ ಈಗಲೂ ನಂಬಿಕೆ. ಈ ದಿವ್ಯಾಂಗರಲ್ಲೂ ನಮಗಿಂತ ಹೆಚ್ಚಿನ ಶಕ್ತಿ. ವಿಶೇಷ ಶಕ್ತಿ ಇರಲಿದೆ ಎಂಬುದು ಇವರ ನಂಬಿಕೆ. ಗ್ರಾಮೀಣ ಜನರ ನಂಬಿಕೆ ಕೂಡ.
” ಈ ವಯಸ್ಸಿನಲ್ಲಿ ಬಂದ ವೈರಲ್ ಖ್ಯಾತಿಯನ್ನು ತಲೆಗೆ ಹತ್ತಿಸಿಕೊಳ್ಳದೆ, ಕೊನೆಗೂ ತಮ್ಮಲ್ಲಿರುವ ಕಂಠಸಿರಿಯ ಪ್ರತಿಭೆಗೆ ಒಂದು ಅವಕಾಶ ಸಿಕ್ಕಿತಲ್ಲ ಎಂಬ ಖುಷಿಯಲ್ಲಿರುವ ಹಂಪಾಪುರ ಹಿರೇನಂದಿಯ ವಾರಗಿತ್ತಿ ಹಾಡುಗಾತಿಯರು”




