ಇಂದಿರಾ ನಾಯರ್
ರತ್ನಿ ಅಂದ ತಕ್ಷಣ ಸ್ಲೀವ್ ಲೆಸ್ ಬ್ಲೌಸ್, ಬಿಳಿಯ ಕಾಟನ್ ಸೀರೆಗೆ ಬಣ್ಣದ ಬಾರ್ಡರ್ ತೊಟ್ಟ ಚಿತ್ರಣವೇ ನನಗೆ ನೆನಪಾಗುವುದು.
ಆಗ ನಾನು ಆಯಿಷ್ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದೆ. ಇವರ ಪತಿ ವಿಶ್ವನಾಥ್ ಮಿರ್ಲೆ ಅವರು ಸಂಸ್ಥೆಗೆ ನಾಟಕ ಕಲಿಸುವುದಕ್ಕೆಂದು ಬರುತ್ತಿದ್ದರು. ಶಿಕ್ಷಣ ಮುಗಿದ ಬಳಿಕ ಸಮತೆಂತೋ ತಂಡ ಸೇರಿದ್ದೆ. ಅಷ್ಟು ಹೊತ್ತಿಗಾಗಲೇ ರತ್ನಿ ಆ ತಂಡದ ಸಕ್ರಿಯ ಸದಸ್ಯರಾಗಿಬಿಟ್ಟಿದ್ದರು. ಅದ್ಯಾವ ಬಂಧ ನಮ್ಮೊಡನೆ ಬೆಸೆಯಿತೊ, ನನಗಿವರು ದೊಡ್ಡಕ್ಕನೇ ಆಗಿಬಿಟ್ಟರು. ಅಂದಹಾಗೆ, ರತ್ನ ಅವರನ್ನು ರತ್ನಿ ಎನ್ನುತ್ತಿದ್ದಾರಲ್ಲಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಮೊದಲು ನ.ರತ್ನ ಅವರನ್ನು ರತ್ನ ಅನ್ನುತ್ತಿದ್ದುದರಿಂದ, ಇವರಿಗೆ ರತ್ನಿ ಎಂದು ಕರೆಯಬಾರದೇಕೆ?
ಅಂದಿನಿಂದ ಇವರು ನಮಗೆಲ್ಲ ಪ್ರೀತಿಯರತ್ನಿಯೇ ಆಗಿಬಿಟ್ಟರು. ಮದುವೆಗೂ ಮುನ್ನ ಬೆಂಗಳೂರಿನ ಸರಕಾರಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಇವರು ಅನೇಕ ಸಣ್ಣ ಪಾತ್ರಗಳಿಗೆ ಜೀವ ತುಂಬಿದ್ದರು. ರಂಗಭೂಮಿಯ ನಂಟು ಇನ್ನಷ್ಟು ಗಾಢವಾಗಿದ್ದು, ವಿಶ್ವನಾಥ ಮಿರ್ಲೆ ಅವರನ್ನು ಮದುವೆಯಾಗಿ ಮೈಸೂರಿಗೆ ಬಂದ ಮೇಲೇಯೇ. ಸಮತೆಂತೋ ತಂಡದ ಒಡನಾಟದಿಂದ ‘ಹುಲಿಯ ಕಥೆ’, ’ಸತ್ತವರ ನೆರಳು’… ಹೀಗೆ ಅನೇಕ ನಾಟಕಗಳಲ್ಲಿ ಇವರು ಅಭಿನಯಿಸಿದ್ದರು.
ಮಿರ್ಲೆ ಮತ್ತು ರತ್ನಿ ಇಬ್ಬರೂ ಜೊತೆಗೂಡಿ ‘ಚೋರ್ ಚೋರ್ ಚುಪ್ಜಾ’, ಹಿಂದಿ ಚಿತ್ರದಲ್ಲಿ ಗಂಡ ಹೆಂಡತಿಯ ಪಾತ್ರದಲ್ಲಿ ಮಿಂಚಿದ್ದರು. ಬೆಂಗಳೂರಿನಿಂದ ಮೈಸೂರಿನ ರೈಲ್ವೆ ಆಫೀಸಿಗೆ ವರ್ಗಾವಣೆಗೊಂಡು ಬಂದ ರತ್ನಿ ಮೈಸೂರನ್ನು ಬಾಚಿ ತಬ್ಬಿದ್ದರೆಂದು ಅನಿಸುತ್ತಿತ್ತು. ನಾಟಕದ ರಿಹರ್ಸಲ್ ವೇಳೆ ‘ರತ್ನಿ ಇವತ್ತೇನು ತಿಂಡಿ ತರಬಹುದು’ ಎಂದು ಇವರ ಕೈಚೀಲದ ಹಾದಿ ಕಾಯುತ್ತಿದ್ದೆವು.
ಊಟ ಬಡಿಸುವ ಕಾಯಕದಲ್ಲಿ ರತ್ನಿ ಅವರದ್ದು ನಿಸ್ವಾರ್ಥ ಭಾವ. ಜೀವಕ್ಕೆ ಜೀವವೇ ಆಗಿದ್ದ ತನ್ನ ಗಂಡ, ಕಣ್ಮಣಿಗಳಂತಿದ್ದ ಮಕ್ಕಳು ಲಕ್ಷ್ಮೀ ಮತ್ತು ಗೌರಿಯರನ್ನು ಕಳೆದುಕೊಂಡ ಮೇಲೆ ರತ್ನಿ ಕುಗ್ಗಿಹೋದರೆಂದು ಅನಿಸಲೇ ಇಲ್ಲ.
ಹಂಚುವುದಾದರೆ ಪ್ರೀತಿ ಮತ್ತು ನಗುವನ್ನೇ ಎಂದು ಆಗಲೇ ಇವರು ತೀರ್ಮಾನಿಸಿದ್ದರು. ಇಬ್ಬರು ವಿಶೇಷ ಚೇತನ ಮಕ್ಕಳನ್ನು ಸಂಭಾಳಿಸಿಕೊಂಡು, ಅತ್ತ ಉದ್ಯೋಗವನ್ನೂ ಮಾಡುತ್ತಾ, ಇತ್ತ ಸಮತೆಂತೋ ತಂಡಕ್ಕೆ ಆಧಾರವಾಗಿನಿಂತಿದ್ದನ್ನು ಜೀವಮಾನ ಪರ್ಯಂತ ಮರೆಯುವುದಕ್ಕೆ ಸಾಧ್ಯವಿಲ್ಲ ಬಿಡಿ. ಸವಾಲಿನ ಪ್ರವಾಹಕ್ಕೆ ಇದಿರಾಗಿ ಸಾಗಿದ ರತ್ನಿ ಅವರದು ಚುರುಕು ವ್ಯಕ್ತಿತ್ವ, ನಿಸ್ವಾರ್ಥ ಗುಣ. ವಯಸ್ಸು ಎಂಬತ್ತು ವರ್ಷಗಳನ್ನು ಕಳೆದಿದ್ದರೂ ಬದುಕನ್ನು ಅದಮ್ಯ ಉತ್ಸಾಹದೊಂದಿಗೆ ಪ್ರೀತಿಸುತ್ತಲೇ ಇದ್ದಾರೆ
” ಸವಾಲಿನ ಪ್ರವಾಹಕ್ಕೆ ಇದಿರಾಗಿ ಸಾಗಿದ ರತ್ನಿ ಅವರದು ಚುರುಕು ವ್ಯಕ್ತಿತ್ವ, ನಿಸ್ವಾರ್ಥ ಗುಣ. ವಯಸ್ಸು ಎಂಬತ್ತು ವರ್ಷಗಳನ್ನು ಕಳೆದಿದ್ದರೂ ಬದುಕನ್ನು ಅದಮ್ಯ ಉತ್ಸಾಹದೊಂದಿಗೆ ಪ್ರೀತಿಸುತ್ತಲೇ ಇದ್ದಾರೆ”





