Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಅಣ್ಣನೆಂಬ ಹೀರೋ, ತಮ್ಮನೆಂಬ ಬಾಡಿಗಾರ್ಡ್

ಡಾ.ಶುಭಶ್ರೀ ಪ್ರಸಾದ್, ಮಂಡ್ಯ

ಅಣ್ಣ ಎಂದರೆ ತಂಗಿಯರಿಗೆ ಯಾವಾಗಲೂ ಹೀರೋ. ಸದಾ ಸಣ್ಣ ಬೆರಳು ಹಿಡಿದು ಅಣ್ಣ ಅಣ್ಣ ಎಂದು ಅಣ್ಣನ ಬೆನ್ನ ಹಿಂದೆಯೇ ಓಡಾಡುವ ಪುಟ್ಟ ತಂಗಿ ಬೆಳೆಯುತ್ತಾ ಹೋಗುವ ಹಾದಿಯಲ್ಲಿ ಅಣ್ಣ ತನ್ನನ್ನು ಕಾಪಾಡುವ ರಕ್ಷಕ ಎಂಬ ಸೆಕ್ಯೂರ್ಡ್ ಫೀಲಿಂಗ್‌ನಲ್ಲಿ ಇರುತ್ತಾಳೆ. ಅಣ್ಣನಿಗೆ ಹೇಳಿಬಿಟ್ಟರೆ ಸಾಕು ತನ್ನ ಆಸೆ ನೆರವೇರಿಸುತ್ತಾನೆ ಎಂಬುದು ಅವಳ ಗಟ್ಟಿ ನಂಬಿಕೆ. ಹೆಣ್ಣುಮಕ್ಕಳಿಗೆ ಅಣ್ಣ ಎಂದು ಕೂಡಲೇ ಅದೊಂದು ಸುಭದ್ರ ಭಾವ.

ಇನ್ನೊಂದೆಡೆ ಸಾಯುವ ಕೊನೆಯ ಕ್ಷಣದಲ್ಲಿ ಬಿಸಿಬೇಳೆ ಬಾತ್ ತಿನ್ನುವ ಆಸೆ ವ್ಯಕ್ತಪಡಿಸಿದ ತಂಗಿಯ ಆಸೆಯನ್ನು ಆ ಕ್ಷಣ ಈಡೇರಿಸಲಾಗದೆ ಹೋದುದರಿಂದ ಜೀವನವಿಡೀ ತಾನು ಬಿಸಿಬೇಳೆ ಬಾತ್ ತಿನ್ನದ ಅಣ್ಣನನ್ನು, ಆ ಪ್ರೀತಿಯನ್ನೂ ನಾನು ನೋಡಿರುವೆ.

ಅಣ್ಣನಾದವನು ತನ್ನ ಬೆನ್ನ ಹಿಂದೆ ಬಿದ್ದ ಪುಟ್ಟ ಹುಡುಗಿಯ ಕಾಲ್ಗೆಜ್ಜೆ ನಾದವನ್ನು ಕೇಳಿ ಕೇಳಿ ಮನಸ್ಸಿನಲ್ಲಿ ಆನಂದವನ್ನು ಹೊಂದಿ ಬಣ್ಣ ಬಣ್ಣದ ಅಂಗಿಗಳನ್ನು ತೊಟ್ಟ ಪುಟ್ಟ ತಂಗಿಯ ಕೈ ಹಿಡಿದು ಸಂಕ್ರಾಂತಿಯ ಎಳ್ಳು ಬೀರಲು, ಗೌರಿ ಹಬ್ಬದ ಮೊರದ ಬಾಗಿನ ಬೀರಿಸಲು, ಮನೆ ಮನೆಯ ಗಣಪತಿ ನೋಡಲು ತಂಗಿಯೊಡನೆ ನಡೆಯುತ್ತಾ ಹೋಗುತ್ತಾನೆ.

ಹಾಗೆ ತನ್ನ ತುದಿ ಬೆರಳ ಹಿಡಿದು ನಡೆದ ತನ್ನ ಸೊಂಟಕ್ಕಿಂತ ಪುಟ್ಟದಾದ ತಂಗಿ ನೋಡನೋಡುತ್ತಿದ್ದಂತೆಯೇ ತನ್ನ ಭುಜದ ಎತ್ತರವನ್ನು ಮೀರಿ ಬೆಳೆದಾಗ ಕಣ್ಮುಂದೆಯೇ ಪವಾಡವೊಂದು ನಡೆದಂತೆ ಆಶ್ಚರ್ಯ ಪಡುತ್ತಾನೆ. ತನ್ನ ತಂಗಿ ತುಂಬಾ ಸುಂದರವಾಗಿ ಕಾಣಬೇಕು, ನಕ್ಷತ್ರದಂತೆ ಹೊಳೆಯಬೇಕು, ಚೆನ್ನಾಗಿ ಓದಬೇಕು, ಒಳ್ಳೆಯ ಮನೆ ಸೇರಬೇಕು, ತನ್ನ ಕಾಲ ಮೇಲೆ ನಿಲ್ಲಬೇಕು ಎಂದು ಕನಸು ಕಾಣುವ ಅಣ್ಣ ಇದ್ದಕ್ಕಿದ್ದಂತೆ ತಂಗಿಯ ಮದುವೆಯಾಗಿ ಗಂಡನ ಮನೆಗೆ ಕಳುಹಿಸುವ ಸಂದರ್ಭದಲ್ಲಿ ಹೇಳಿಕೊಳ್ಳಲಾಗದ ದುಃಖದಲ್ಲಿ ಶಲ್ಯದ ತುದಿಯಿಂದ ಕಣ್ಣನ್ನು ಒರೆಸಿಕೊಳ್ಳುತ್ತಲೇ ತಂಗಿಯನ್ನು ಗಂಡನ ಮನೆಗೆ ಬಿಟ್ಟು ಬರುತ್ತಾನೆ. ಮತ್ತೆ ಯಾವಾಗ ತಂಗಿಯನ್ನು ನೋಡುವುದೋ ಎಂದು ಅವಳು ಬರುವ ಹಾದಿ ಕಾಯುತ್ತಾನೆ.

ಹೆಣ್ಣು ಮಕ್ಕಳಿಗೆ ಮೊದಲ ಆಷಾಢ ತವರು ಮನೆಯಲ್ಲಿಯೇ. ತವರನ್ನು ಬಿಟ್ಟು ಹೋದ ಹೆಣ್ಣು ಮಗಳು ತವರನ್ನು ನೆನೆದು ಕಣ್ಣೀರಿಟ್ಟು ಹೊಸ ಜಾಗಕ್ಕೆ ಹೊಂದಿಕೊಳ್ಳ ಲಾಗದೆ ಪರದಾಡುವ ಸಮಯದಲ್ಲಿ ಹೊಸ ವರ್ಷದ ಮದುಮಗಳ ಹಬ್ಬ ಎಂದು ಆಗಾಗ ತವರಿಗೆ ಬರುವುದು ಮರಳುಗಾಡಿನಲ್ಲಿ ಓಯಸಿಸ್ ಇದ್ದ ಹಾಗೆ. ಹೆಣ್ಣುಮಕ್ಕಳಿಗೆ ಅಮ್ಮನನ್ನು ಬಿಟ್ಟಿರುವುದು ಎಷ್ಟು ಕಷ್ಟವೋ, ಅಣ್ಣನನ್ನು ಬಿಟ್ಟಿರುವುದೂ ಅಷ್ಟೇ ಕಷ್ಟ. ಮೊದಲ ವರ್ಷದ ಆಷಾಢ ಮುಗಿದ ಮೇಲೆ ಮತ್ತೆ ಮತ್ತೆ ಪ್ರತಿ ಆಷಾಢಕ್ಕೂ ತಂಗಿ ತವರಿಗೆ ಬರುವುದಿಲ್ಲವಲ್ಲಾ. ಹಾಗಾಗಿ ಪಂಚಮಿ ಹಬ್ಬಕ್ಕೆಂದು ಅಣ್ಣನೇ ಹೋಗಿ ತಂಗಿ ಯನ್ನು ತವರಿಗೆ ಕರೆದುಕೊಂಡು ಬರುವ ವಾಡಿಕೆ ಇತ್ತು.

ಅಣ್ಣ ಬರುತ್ತಾನೆ ಎಂದು ಕಣ್ಣುಗಳನ್ನು ಹಿರಿದು ಮಾಡಿಕೊಂಡು ಹಾದಿಯುದ್ದಕ್ಕೂ ನೋಡುವ ಹೆಣ್ಣುಮಗಳ ಚಿತ್ರ ಒಂದು ಕಡೆಯಾದರೆ. ಬದಲಾದ ಕಾಲಮಾನದಲ್ಲಿ ನಿತ್ಯವೂ ಫೋನ್ ಮಾಡಬಹುದು, ನೆನೆದಾಗ ಬಸ್ಸು, ಕಾರಿನಲ್ಲಿ ನಿಮಿಷ ಮಾತ್ರದಲ್ಲಿ ಹೊರಡಬಹುದು.

ನೋಡಬೇಕೆನಿಸಿದಾಗ ವಿಡಿಯೋ ಕಾಲ್ ಮಾಡಬಹುದಾದ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹಿಂದಿನಂತೆ ತನ್ನವರನ್ನು ಮಿಸ್ ಮಾಡಿಕೊಳ್ಳುವುದು ಇಲ್ಲವೇ ಇಲ್ಲ. ದಕ್ಷಿಣ ಭಾರತದ ಕಡೆಗೆ ಪಂಚಮಿ ಹಬ್ಬ ಅಣ್ಣ ತಂಗಿಯರ ಹಬ್ಬವಾದರೆ, ಉತ್ತರ ಭಾರತದಲ್ಲಿ ರಕ್ಷಾ ಬಂಧನ ಅಣ್ಣ ತಂಗಿಯರ ಹಬ್ಬ. “ತವರ ಕುಡಿ ಚಿಗುರಲಿ ಗರಿಕೆ ಹುಲ್ಲಾಂಗ” ಎಂದು ತವರು ಮನೆ, ಅಣ್ಣ ತಮ್ಮಂದಿರು, ಅವರ ಮಕ್ಕಳು ಎಲ್ಲರೂ ಸುಖವಾಗಿರಲಿ ಎಂದು ಹಾರೈಸುವ ಕಾಲ ಒಂದಿತ್ತು. ಈಗ ಹಣದ ಮುಂದೆ ಸಂಬಂಧಗಳು ಜಾಳಾಗುತ್ತಿವೆ. ಸಂಬಂಧಗಳು ಜಾಳಾಗದಂತೆ ಒಂದಿಷ್ಟು ಬೆಸುಗೆ ಹಾಕುವ ನಿಟ್ಟಿನಲ್ಲಿ ಇಂತಹ ಹಬ್ಬಗಳು ಸಹಾಯಕಾರಿಯಾಗಿದೆ.

ಮೊಬೈಲ್‌ಗಳು ಕ್ರಾಶ್ ಆಗಬಾರದು ಎಂದು ಆಗಾಗ ಸ್ವಿಚ್ ಆಫ್ ಮಾಡಿ, ಸ್ವಿಚ್ ಆನ್ ಮಾಡುವುದು, ಕಂಪ್ಯೂಟರ್‌ಗಳಿಗೆ ಆಂಟಿವೈರಸ್ ಅಪ್‌ಡೇಟ್ ಮಾಡುವುದು, ಗಿಡಗಳಿಗೆ ಆಗಾಗ ಹೊಸ ಮಣ್ಣು ಗೊಬ್ಬರವನ್ನು ಹಾಕಿಸಿ ಹೊಸ ಚೈತನ್ಯ ನೀಡುವಂತೆ, ಪಂಚಕರ್ಮ ಮಾಡಿಸಿಕೊಂಡು ದೇಹವನ್ನು ಡೀಟಾಕ್ಸಿಫಿಕೇಟ್ ಮಾಡಿಸುವ ಹಾಗೆ, ಅಣ್ಣತಮ್ಮ ಅಕ್ಕ ತಂಗಿಯರ ಹಬ್ಬಗಳು ಬಾಂಧವ್ಯದ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಸಹಕಾರಿಯಾಗುತ್ತವೆ.

ಅಣ್ಣನಾದವನು ಒಂದು ದಿನ ಇದ್ದಕ್ಕಿದ್ದಂತೆಯೇ ತಂಗಿಗೆ ಅಪ್ಪನಾಗಿಬಿಡುತ್ತಾನೆ. ತನ್ನ ಬೆನ್ನ ಹಿಂದೆ ಅಕ್ಕಾ ಅಕ್ಕಾ ಎಂದು ಸಿಂಬಳ ಸುರಿಸಿಕೊಂಡು ತಾ ಓದಿದ ಪುಸ್ತಕಗಳನ್ನೇ ಓದಿ ತನ್ನ ನೆರಳಿನಂತೆ ಇದ್ದ ಪುಟ್ಟ ತಮ್ಮ ದೊಡ್ಡ ಮನುಷ್ಯನಾಗಿ ಅಣ್ಣನಂತೆ, ಅಪ್ಪನಂತೆ ಆಗಿ ಎಲ್ಲಕ್ಕಿಂತ ಮಿಗಿಲಾಗಿ ಓರ್ವ ಬಾಡಿಗಾರ್ಡ್‌ನಂತಾಗಿ ಜವಾಬ್ದಾರಿ ಹೊರುವ ದಿನ ಬಂದಾಗ ಯಾವುದೋ ಒಂದು ಲೋಕದಿಂದ ಮತ್ತೊಂದು ಲೋಕಕ್ಕೆ ಜಿಗಿದ ಅನುಭವ. ಆಗ ಎದೆಯಲ್ಲಿ ಉಳಿಯುವುದು ಹೆಮ್ಮೆಯ ಮಿಂಚು ಮಾತ್ರ.

” ಅಣ್ಣನಾದವನು ಒಂದು ದಿನ ಇದ್ದಕ್ಕಿದ್ದಂತೆಯೇ ತಂಗಿಗೆ ಅಪ್ಪನಾಗಿಬಿಡುತ್ತಾನೆ. ತನ್ನ ಬೆನ್ನ ಹಿಂದೆ ಅಕ್ಕಾ ಅಕ್ಕಾ ಎಂದು ನೆರಳಿನಂತೆ ಇದ್ದ ಪುಟ್ಟ ತಮ್ಮ ದೊಡ್ಡ ಮನುಷ್ಯನಾಗಿ ಅಣ್ಣನಂತೆ ಆಗುತ್ತಾನೆ”

Tags:
error: Content is protected !!