ಇವರು ಮೈಸೂರಿನ ಕಾಷ್ಠಶಿಲ್ಪಿ ಕುವಾರ್ ಚಂದ್ರನ್. ಐದು ವರ್ಷದ ಬಾಲಕನಿರುವಾಗ ಕೇರಳದ ತಿರುವನಂತಪುರದಿಂದ ತಂದೆ ನಾಗಪ್ಪ ಆಚಾರಿಯವರೊಂದಿಗೆ ಮೈಸೂರಿಗೆ ಬಂದು ಮರಕ್ಕೆ ಉಳಿ ಹಿಡಿಯಲು ತೊಡಗಿದ ಇವರಿಗೆ ಈಗ ಐವತ್ತಾರು ವರ್ಷ. ದೇವಾನುದೇವತೆಗಳನ್ನೂ, ಶಿಲಾಬಾಲಿಕೆಯರನ್ನೂ ಕಣ್ಣಿಗೆ ಕಟ್ಟುವ ಹಾಗೆ ಒಣಮರದಲ್ಲಿ ಜೀವ ತುಂಬುವ ಇವರಿಗೆ ಇರಲು ಒಂದು ಸ್ವಂತ ಮನೆಯೂ ಇಲ್ಲ. ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಾ ಬಾಡಿಗೆ ಮನೆಯಲ್ಲಿ ತಾವು ಕಡೆದ ವಿಗ್ರಹಗಳೊಂದಿಗೆ ಬದುಕುತ್ತಿರುವ ಇವರು ಸಿಕ್ಕಾಪಟ್ಟೆ ಸ್ವಾಭಿವಾನಿ. ‘ನಾನು ಕಲಾವಿದ. ದೇವರನ್ನು ಬಿಟ್ಟರೆ ಬೇರೆ ಯಾರ ಮುಂದೆಯೂ ತಲೆ ಬಾಗುವುದಿಲ್ಲ, ಹಾಗಾಗಿ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ ನನಗೆ ಮನೆಯೊಂದು ಮಂಜೂರಾಗಿದ್ದರೂ ಅದು ನನಗೆ ಇನ್ನೂ ಸಿಕ್ಕಿಲ್ಲ. ಪರವಾಗಿಲ್ಲ. ನಾನು ಯಾರ ಬಳಿಯೂ ಕೈ ಒಡ್ಡಿ ಕೇಳಿಕೊಳ್ಳುವುದಿಲ್ಲ. ನಾನು ಕಡೆದ ದೇವರ ಮೂರ್ತಿಗಳು ಹಾಗೆ ಬಯಸಿದರೆ ಹಾಗೇ ಆಗಲಿ. ನಾನು ಸ್ವಂತ ಸೂರಿಲ್ಲದವನಾಗಿಯೇ ಈ ಮೈಸೂರಿನಲ್ಲಿ ಬದುಕುತ್ತೇನೆ’ ಎಂದು ಮತ್ತೆ ಮೂರ್ತಿಗಳನ್ನು ಕೆತ್ತಲು ತೊಡಗುತ್ತಾರೆ. ಈ ಚಿತ್ರದಲ್ಲಿ ನೀವು ನೋಡುತ್ತಿರುವ ಬೇಲೂರ ಶಿಲಾಬಾಲಿಕೆಯನ್ನು ಸತತ ಮೂರು ತಿಂಗಳುಗಳ ಕಾಲ ಕೆತ್ತಿ ಮುಗಿಸಿ, ಈಗ ಶಯನಶೀಲನಾಗಿರುವ ಗಣಪತಿಯ ಮೂರ್ತಿಯನ್ನು ಇವರು ಮರದಲ್ಲಿ ಮೂಡಿಸಲು ತೊಡಗಿದ್ದಾರೆ. ಇವರು ಕೆತ್ತಿರುವ ಸರಸ್ವತಿ,ಗಣಪ, ಶ್ರೀ ಕೃಷ್ಣ, ಬುದ್ದ, ಏಸು, ಗಾಂಧಿಯರ ಮೂರ್ತಿಯರು ವಿಗ್ರಹದ ಅಂಗಡಿಗಳವರಿಗೆ ಸಾವಿರಾರು ರೂಪಾಯಿಗಳ ಲಾಭ ತಂದುಕೊಟ್ಟಿದೆ. ಪ್ರಧಾನ ಮಂತಿಗಳವರೆಗೂ ತಲುಪಿವೆ. ಆದರೆ ಇವರ ಶ್ರಮಕ್ಕೆ ಕನಿಷ್ಟ ಸಂಬಳವೂ ದೊರಕುವುದಿಲ್ಲ. ಅದೊಂದು ಸಾತ್ವಿಕ ಸಿಟ್ಟು ಬಿಟ್ಟರೆ ಇವರಿಗೆ ತಾನೊಬ್ಬ ಕಲಾವಿದ ಎಂಬುದರ ಕುರಿತು ಆತ್ಮ ಸಂತೃಪ್ತಿಯಿದೆ. ತನ್ನ ಜೀವನದ ಅರ್ಧ ದಶಕವನ್ನು ಮರದ ದೇವದೇವತೆಗಳೊಂದಿಗೆ ಮೈಸೂರಿನಲ್ಲೇ ಕಳೆದಿರುವ ಇವರಿಗೆ ಇರಲೊಂದು ನೆಲೆ ಸಿಗಲು ಮೈಸೂರಿಗರು ಹಕ್ಕೊತ್ತಾಯ ಮಾಡಬೇಕಾಗಿದೆ.
( mysoorininda@gmail.com )