Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಾಡುಪಾಡು ವಾರದ ಮುಖ

ಇವರು ಗುಂಡ್ಲುಪೇಟೆ ತಾಲ್ಲೂಕು, ಬೇಗೂರು ಹೋಬಳಿ, ನಿಟ್ರೆ ಗ್ರಾಮ, ಬಾಬು ಜಗಜೀವನರಾಂ ಬಡಾವಣೆ ದೊಡ್ಡಮ್ಮ ತಾಯಿ ಜಗುಲಿಯ ಪಕ್ಕ ಬದುಕುತ್ತಿರುವ ಮಾದಯ್ಯ ಬಿನ್ ಮೂಗಯ್ಯ. ವಯಸ್ಸು ಸುಮಾರು ಎಂಬತ್ತರ ಆಚೆ ಮತ್ತು ಈಚೆ. ನೀವೇನಾದರೂ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿ ಬೆಟ್ಟಕ್ಕೆ ಶನಿವಾರ ಭಾನುವಾರಗಳಂದು ಹೋದರೆ ಅಲ್ಲಿ ಗುಡಿಯ ಮುಂದೆ ತಂಬೂರಿ ಮೀಟಿಕೊಂಡು, ‘ಗೋವಿಂದಾ.. ಗೋಪಾಲಾ..’ ಎಂದು ಭಿಕ್ಷಕ್ಕೆ ಕೂತಿರುತ್ತಾರೆ. ಇಂದಿರಾಗಾಂಧಿಯ ಕಾನೂನಿನಿಂದಾಗಿ ಇಪ್ಪತ್ತು ವರ್ಷಗಳ ಜೀತ ಮುಗಿಸಿ ಅದರಿಂದ ಹೊರಬಂದವರು ಇವರು. ಜೀತದಿಂದ ಹೊರಬಂದು, ಆಮೇಲೆ ಮದುವೆಯಾಗಿ, ಇಬ್ಬರು ಮಕ್ಕಳೂ ಆಗಿ, ಅದರಲ್ಲಿ ಒಬ್ಬ ಮಗ ಅಂಧನಾಗಿ ದಮ್ಮಡಿ ಬಾರಿಸಿಕೊಂಡು, ಇನ್ನೊಬ್ಬ ಮಗನೂ ಕಂಸಾಳೆ ಹಾಡುಗಾರನಾಗಿದ್ದಾನೆ. ಮಡದಿ ಸಾಕಮ್ಮ ಈ ಮೂವರಿಗೂ ಬಡಿಸಿ ಹಾಕುತ್ತಾರೆ.

ಮಾದಯ್ಯನವರು ಬಾಯಿಬಿಟ್ಟರೆ ಗಂಟೆಗಟ್ಟಲೆ ಜಾನಪದ ಕಾವ್ಯಗಳನ್ನು ಹಾಡಬಲ್ಲರು. ಮಾದೇಶ್ವರನ ಹಾಡು, ಬೇವಿನ ಕಾಳಮ್ಮನ ಕಥೆ, ಸಂಕಮ್ಮನವರ ಸಾಲು, ನಂಜುಂಡೇಶ್ವರನ ಹಾಡು ಇವರ ಕಂಠದಿಂದ ಪುಂಖಾನುಪುಂಖವಾಗಿ ಹೊರಬಂದರೆ ನಿಮ್ಮಂತಹವರು ಕೊಡುವ ಹತ್ತೋ ಇಪ್ಪತ್ತೋ ಐವತ್ತೋ ರೂಪಾಯಿಗಳು ಇವರ ಬದುಕಿನ ಗಾಡಿಯನ್ನು ಮುಂದಕ್ಕೆ ಓಡಿಸುತ್ತದೆ.

ಸರ್ಕಾರ ಕೊಟ್ಟಿರುವ ಎರಡೆಕೆರೆ ಭೂಮಿಯನ್ನು ಇರುವ ಎರಡು ಮಕ್ಕಳಿಗೆ ಹಂಚಿ ತಾವು ಮಾತ್ರ ಹಾಡುಗಳ ಹಾಡುತ್ತಾ ನಿಸೂರಾಗಿ ಕಳೆಯುವ ಮಾದಯ್ಯನವರು ಮಾತಾಡಲು ತೊಡಗಿದರೆ ಕಣ್ಣೀರುಗರೆಯುತ್ತಾರೆ. ಈ ಕಣ್ಣೀರು ಅವರ ಈ ಇಳಿವಯಸ್ಸಿನ ಪರಿಣಾಮವೋ ಅಥವಾ ಅವರ ಯೌವನವನ್ನೆಲ್ಲ ಕಬಳಿಸಿದ ಜೀತದ ಬದುಕಿನ ಹೆಪ್ಪುಗಟ್ಟಿದ ನೆನಪುಗಳ ಪರಿಣಾಮವೋ ಎಂದು ಗೊತ್ತಾಗದೆ ನೀವೂ ಕಂಗಾಲಾಗುತ್ತೀರಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ