ಸಿ.ಎಂ. ಸುಗಂಧರಾಜು
ಓದಿಲ್ಲ ಬರೆದಿಲ್ಲ ಅನಕ್ಷರಸ್ಥರಾದರೂ ಇವರಲ್ಲಿರುವ ಜ್ಞಾನಕ್ಕೇನೂ ಕಡಿಮೆ ಇಲ್ಲವೇ ಇಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಬದುಕಿನ ಪಾಠ ಕಲಿಸುವ ಜತೆಗೆ ಸದ್ಗುಣಗಳನ್ನೂ ಬೋಽಸುವ ಅಜ್ಜ ಅಜ್ಜಿಯರೇ ನಮ್ಮೆಲ್ಲರ ಮೊದಲ ಯೂನಿವರ್ಸಿಟಿ.
ಹೌದು ಮನೆಯು ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎನ್ನುತ್ತೇವೆ. ಆದರೆ, ತಾಯಿಯಂತೆಯೇ ನಮಗೆ ಬದುಕಿನ ಪಾಠ ಕಲಿಸುವ ಹಿರಿಯರಾದ ನಮ್ಮ ಅಜ್ಜ ಅಜ್ಜಿಯರೂ ನಮ್ಮ ಗುರುಗಳೇ. ಬಹುತೇಕ ಅಜ್ಜ ಅಜ್ಜಿಯರು ತಮ್ಮ ಹೆಚ್ಚಿನ ಸಮಯವನ್ನು ಮೊಮ್ಮಕ್ಕಳಿಗಾಗಿಯೇ ಕಳೆಯುತ್ತಾರೆ. ಅವರ ಜೀವನದ ಅಂತಿಮ ಹಂತದಲ್ಲಿ ಮೊಮ್ಮಕ್ಕಳೇ ಅವರ ಬದುಕಾಗಿರುತ್ತಾರೆ. ನಾವೂ ನೀವೂ ಅಜ್ಜ-ಅಜ್ಜಿಯ ಮಾತುಗಳನ್ನು ಅವರ ತೋಳಲ್ಲಿ ಆಡಿ ಬೆಳೆದಿರುವವರೇ ಆಗಿದ್ದರೆ ಅದರ ಅನುಭವ ಇನ್ನೂ ನಮ್ಮ ಮನಸ್ಸಿನಲ್ಲಿ ನಾಟಿರುತ್ತದೆ.
ಅವಿಭಕ್ತ ಕುಟುಂಬಗಳಲ್ಲಿ ಎಲ್ಲರೂ ಒಟ್ಟಾಗಿ ಜೀವನ ಮಾಡುವುದರಿಂದ ಅಜ್ಜ-ಅಜ್ಜಿಯ ಪ್ರೀತಿ ಮೊಮ್ಮಕ್ಕಳಿಗೆ ಹೆಚ್ಚಾಗಿ ಸಿಗುತ್ತದೆ. ಆ ಮನೆಯಲ್ಲಿ ಮಕ್ಕಳು ಹಿರಿಯರು ಇದ್ದಾರೆ ಎಂದರೆ ಅದು ಸಮತೋಲನದ ಕುಟುಂಬ ಎಂದು ಹೇಳಿ ಬಿಡಬಹುದು. ಮೊಮ್ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಅವರನ್ನು ಊಟ ಮಾಡಿಸಿ ಮಲಗಿಸುವವರೆಗೂ ಅಜ್ಜ-ಅಜ್ಜಿಯರು ವಿಶೇಷ ಕಾಳಜಿ ವಹಿಸುತ್ತಾರೆ. ಹಳ್ಳಿಗಳಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದೂ ಒಂದು ಕಲೆ. ಸ್ನಾನ ಮಾಡಿಸುವಾಗ ತನ್ನ ಮೊಮ್ಮಗನ ಮೂಗು ಚಪ್ಪಟೆಯಾಗಿರದೆ ಅದನ್ನು ಎತ್ತಿ ಎತ್ತಿ ಗಿಳಿ ಮೂಗಿನಂತೆ ಮಾಡುವುದು, ಕಿವಿಗಳನ್ನು ಅರಳಿಸುವುದು, ತಲೆ ಬುರುಡೆಯನ್ನು ತಟ್ಟಿ ತಟ್ಟಿ ಸ್ನಾನ ಮಾಡಿಸುವ ಅಜ್ಜಿಯ ಜ್ಞಾನದ ಹಿಂದೆ ವೈಜ್ಞಾನಿಕ ಉದ್ದೇಶವೂ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ಇದನ್ನು ಈಕೆ ಯಾವುದೇ ಶಾಲೆಯಿಂದ ಕಲಿತ್ತದ್ದಲ್ಲ.
ಮಗು ಅತ್ತರೆ ಜೋಗುಳ ಹಾಡುವುದನ್ನೂ ಆಕೆ ಯಾವುದೇ ಸಂಗೀತ ಶಾಲೆಯಿಂದ ಕಲಿತದ್ದಲ್ಲ. ಮಗು ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಗೆ ಓಡುವವಳೂ ಅವಳಲ್ಲ. ಬದಲಿಗೆ ತನ್ನ ಸೀರೆಯ ಸೆರಗಿನಿಂದಲೋ, ಪೊರಕೆಯಿಂದಲೋ ಮಗುವಿಗೆ ದೃಷ್ಟಿ ತೆಗೆದು, ತಲೆ ಮತ್ತು ಹೊಟ್ಟೆಯ ಮೇಲೆ ಹರಳೆಣ್ಣೆ ಹಾಕಿ, ಮನೆ ದೇವರಿಗೆ ಕಾಣಿಕೆ ಕಟ್ಟಿ ನನ್ನ ಮೊಮ್ಮಗೂಸು ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತಾಳೆ. ಇದೆಲ್ಲ ಅಜ್ಜಿ ಯಾವ ಶಾಲೆಗೂ ಹೋಗಿ ಕಲಿಯದಿದ್ದರೂ ಮಗುವನ್ನು ಆರೋಗ್ಯಕರವಾಗಿ ಹೇಗೆ ಬೆಳೆಸಬೇಕು ಎಂಬದನ್ನು ಕಲಿತಿರುವ ಜೀವನದ ಪಾಠ.
ಮೊಮ್ಮಕ್ಕಳ ಪಾಲಿಗೆ ಅಜ್ಜಿ ಆಗಾಗ್ಗೆ ವೈದ್ಯೆಯಾಗುವುದು, ಅವರಿಗೆ ಮಾರ್ಗದರ್ಶನ ನೀಡುವ ಗುರುವಾಗುವುದನ್ನು ನಾವು ಅವಿಭಕ್ತ ಕುಟುಂಬಗಳಲ್ಲಿ ಮಾತ್ರ ಕಾಣಲು ಸಾದ್ಯ. ಪ್ರಸ್ತುತದ ಪೀಳಿಗೆಯಲ್ಲಿ ಇದನ್ನು ನೋಡಲು ಸಾಧ್ಯವೇ? ಮಗುವಿಗೆ ಸಣ್ಣಗೆ ಮೈ ಬಿಸಿಯಾದರೂ ಆಸ್ಪತ್ರೆಗೆ ಓಡುವ ಮಂದಿಯೇ ಹೆಚ್ಚು. ಮೊಮ್ಮಗಳು ಸೀರೆ ಉಡುವ ತನಕ ನಾನಿರಬೇಕು. ಮೊಮ್ಮಗ ಪಂಚೆ ಉಡುವುದನ್ನು ನಾ ನೋಡಿ ಖುಷಿಪಡಬೇಕು ಎನ್ನುವುದು ಎಲ್ಲ ಅಜ್ಜ-ಅಜ್ಜಿಯರ ಬಯಕೆ. ಎದೆ ಎತ್ತರಕ್ಕೆ ಬೆಳೆದ ಮೊಮ್ಮಕ್ಕಳು ಜೀವನದಲ್ಲಿ ಸಾಧನೆಯ ಹಾದಿ ಹಿಡಿಯಬೇಕು ಎಂದರೆ ಅಲ್ಲಿ ಅಜ್ಜ-ಅಜ್ಜಿ ಕಲಿಸಿದ ಜೀವನದ ಪಾಠಗಳಿರುತ್ತವೆ.
ತನ್ನ ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ಬರುವ ತಾತ ತನ್ನ ಮೊಮ್ಮಕ್ಕಳಿಗೆ ಅದಾ ಗಲೇ ಶಾಲೆಯಲ್ಲಿ ಕಲಿಸುವುದಕ್ಕಿಂತ ಹೆಚ್ಚಾಗಿ ಜೀವನದ ಪಾಠ ಕಲಿಸಿರುತ್ತಾನೆ. ಈ ಪಾಠಗಳೆಲ್ಲ ಇಂದಿನ ಪೀಳಿಗೆಗೆ ಎಲ್ಲಿಂದ ಸಿಗಬೇಕು ಹೇಳಿ? ಶಾಲೆಗೆ ವಾಹನದಲ್ಲಿ ಹೋಗಿ ವಾಹನದಲ್ಲಿ ಬರುವ ಮಕ್ಕಳಿಗೆ ಅದಾಗಲೇ ಒತ್ತಡದ ಬದುಕು ಆರಂಭವಾಗಿರುತ್ತದೆ. ಮೊಬೈಲ್, ಕಂಪ್ಯೂಟರ್ ಗೀಳಿಗೆ ಬಿದ್ದಿರಂತೂ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯರ ಸಂಗವೇ ಬೇಡವೆನಿಸಿಬಿಟ್ಟಿರುತ್ತದೆ. ಹೀಗಿರುವಾಗ ಅಜ್ಜ-ಅಜ್ಜಿಯ ಯೂನಿವರ್ಸಿಟಿಯಲ್ಲಿ ಪಳಗಿ ಬದುಕಿನ ಮೌಲ್ಯ ಅರಿಯಲು ಹೇಗೆ ಸಾಧ್ಯ?