• ಗೌತಮಿ ತಿಪಟೂರು
ಅಂದು ಒಬ್ಬಳೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಏಕೋ ಸ್ವಲ್ಪ ಸಮಯದ ನಂತರ ರೈಲಿನ ಬಾಗಿಲಿನ ಬಳಿ ನಿಂತುಕೊಳ್ಳಬೇಕೆನಿಸಿತು. ನನ್ನ ಪಕ್ಕದಲ್ಲಿದ್ದವರಿಗೆ ನನ್ನ ಬ್ಯಾಗ್ ನೋಡಿಕೊಳ್ಳಲು ಹೇಳಿ ಹೋಗಿ ಬಾಗಿಲ ಬಳಿ ನಿಂತೆ. ನಿಂತ ಕೆಲವು ಕ್ಷಣಗಳ ನಂತರ ಮುಂದೆ ಇದ್ದ ಸೀಟಿನವರು ನನಗೆ ಹೋಗಿ ಕೂಳಿತುಕೋ ಹೀಗೆ ಹುಡುಗಿಯರು ಬಾಗಿಲ ಬಳಿ ನಿಂತುಕೊಳ್ಳಬಾರದು ಎಂದು ಹೇಳಿದರು.
ಆ ಸಮಯದಲ್ಲಿ ಅದೇ ಬೋಗಿಯ ಇನ್ನೊಂದು ಬಾಗಿಲ ಬಳಿ, ಒಬ್ಬ ಹುಡುಗ ಕೂಡ ನಿಂತಿದ್ದ ಆದರೆ ಅವನಿಗೆ ಯಾರೂ ಏನೂ ಹೇಳಲಿಲ್ಲ. ಅದನ್ನು ನೋಡಿ ನನಗೆ ಒಂದು ಕ್ಷಣ ನಾನು ಹುಡುಗ ಆಗಿದ್ದಿದ್ದರೆ ಅನಿಸಿತು. ಹೀಗೆ ಅನ್ನಿಸಿದ್ದು ಇದು ಮೊದಲ ಬಾರಿಯೇನಲ್ಲ. ಬಹಳ ಸಲ ಅನ್ನಿಸಿದೆ.
ವಿದ್ಯಾವಂತಳಾಗಿ ಸ್ವತಂತ್ರವಾಗಿರುವ ನನಗೆ ಏಕೆ ಹೀಗೆ ಅನ್ನಿಸುತ್ತದೆ? ಚಿಕ್ಕವಳಿದ್ದಾಗಿನಿಂದ ಅಪ್ಪ ಅಮ್ಮ ಯಾವುದೇ ನಿರ್ಬಂಧ ಏರದೆ ಸ್ವತಂತ್ರವಾಗಿ ಬೆಳೆಸಿದ್ದಾರೆ. ನನಗೆ ಅನ್ನಿಸಿದ್ದನ್ನು ಮಾಡುವ ಅವಕಾಶ ನೀಡಿದ್ದಾರೆ. ಹುಡುಗಿ ಯರು ಹೀಗಿರಬೇಕು ಹೀಗಿರಬಾರದು ಎಂದೂ ಹೇಳಿಲ್ಲ. ಯಾವುದೇ ಲಿಂಗ ತಾರತಮ್ಯ ತಿಳಿಯದ ಹಾಗೆ ಬೆಳೆಸಿದ್ದಾರೆ. ಆದರೂ ನನಗೆ ಏಕೆ ‘ನಾನು ಹುಡುಗ ಆಗಿದ್ದಿದ್ದರೆ’ ಎಂಬ ಭಾವನೆ ಬಂತು? ಇದು ನನ್ನೊಬ್ಬಳ ಭಾವನೆ ಮಾತ್ರವಲ್ಲ; ಸಾಮಾನ್ಯವಾಗಿ ಬಹುತೇಕ ಹೆಣ್ಣು ಮಕ್ಕಳಿಗೂ ಅನಿಸಿರುವ ಭಾವನೆ.
ಆದರೆ ಅದೇ ಗಂಡು ಎಂದೂ ಕೂಡ ತಾನು ಹೆಣ್ಣಾಗಬೇಕಿತ್ತು, ಹೆಣ್ಣಾಗಿದ್ದಿದ್ದರೆ ಎಂಬುದನ್ನು ಯೋಚಿಸಿದ ಉದಾಹರಣೆಯನ್ನು ನಾನು ಕಂಡಿಲ್ಲ. ಆದರೆ ಎಲ್ಲ ರೀತಿಯ ಅನುಕೂಲಗಳು, ಸ್ವಾತಂತ್ರ್ಯ ವಿದ್ದರೂ ಹೆಣ್ಣು ಮಕ್ಕಳಿಗೆ ಹೀಗೆ ಅನಿಸುತ್ತಿದ್ದರೆ, ನಿರ್ಬಂಧಿತ ವಾತಾವರಣದಲ್ಲಿ ಬೆಳೆದ ಹೆಣ್ಣು ಮಕ್ಕಳಿಗೆ ಹೇಗೆ ಅನಿಸಿರಬಹುದು?
ಆ ಕ್ಷಣದಲ್ಲಿ ಅನಿಸಿದ್ದ ಹುಡುಗನಾಗಿದ್ದರೆ ಎನ್ನುವ ಯೋಚನೆಯೇ ಎಷ್ಟೊಂದು ಅಜ್ಞಾತ ಸಾಧ್ಯತೆಗಳನ್ನು ತೆರೆದುಕೊಡುತ್ತದೆ. ಯಾವುದೋ ಒಂದು ರೀತಿಯಲ್ಲಿ ಕಳೆದುಕೊಂಡಿರುವ ಸ್ವಾತಂತ್ರ್ಯವನ್ನು ಪಡೆಯಬಹುದಾದ ಬಯಕೆಯನ್ನು ಸೂಚಿಸುತ್ತದೆ.
ಅಪ್ಪ ಅಮ್ಮ ಮತ್ತು ಕುಟುಂಬ ಹೇಳದಿದ್ದರೂ ಈ ಸಮಾಜ ನಮ್ಮ ಮೇಲೆ ಹೇರಿರುವ ಒಂದಷ್ಟು ಸಾಮಾಜಿಕ ರೂಢಿಗಳಿಂದಾಗಿ ನಾವು ಕಳೆದುಕೊಂಡಿರುವ ಸ್ವಾತಂತ್ರ್ಯ, ಹುಡುಗರಾಗಿರುವ ಕಾರಣಕ್ಕೆ ಅವರು ಪಡೆದುಕೊಂಡಿದ್ದಾರೆ ಅನಿಸುತ್ತದೆ. ಹುಡುಗರಿಗೆ ತಮ್ಮ ಹಕ್ಕಿನ ಬಗೆಗೆ ಇರುವ ವಿಶ್ವಾಸ ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಏಕೆಂದರೆ ಅವರು ಮಾಡುವ ಕೆಲಸಗಳನ್ನು ನಾವು ಮಾಡಿದರೆ ಉತ್ತರಿಸಬೇಕಾದ ಪ್ರಶ್ನೆಗಳು, ಕೇಳಬೇಕಾದ ಟೀಕೆಗಳಿಗೆ ಲೆಕ್ಕವುಂಟೆ?
ಹೆಣ್ಣು ಮತ್ತು ಗಂಡಿನ ನಡುವೆ ದೈಹಿಕವಾಗಿ ಬೇರೆ ಬೇರೆ ಶಕ್ತಿ-ಸಾಮರ್ಥ್ಯ ಇರಬಹುದು. ಆದರೆ ಸಮಾನತೆ, ಭದ್ರತೆ, ಸ್ವಾತಂತ್ರ್ಯ ಎಂದು ಬಂದಾಗ ಸಮಾನವಾಗಿರಬೇಕಲ್ಲವೇ? ನಾವು ಯಾರನ್ನೇ ಆಗಲಿ ಹೇಗೆ ನಡೆಸಿಕೊಳ್ಳುತ್ತೇವೆ? ಹೇಗೆ ಬೆಳೆಸುತ್ತೇವೆ? ಅವರು ಬೆಳೆದ ಸಾಮಾಜಿಕ ಪರಿಸರ, ಕೌಟುಂಬಿಕ ವಾತಾವರಣ ಮುಂತಾದ ಅಂಶಗಳಿಂದ ಪ್ರಭಾವಿತರಾಗಿರುತ್ತಾರೆ.
ಹೆಣ್ಣು ತಾನು ಎಂತಹ ವಾತಾವರಣದಲ್ಲಿ ಬೆಳೆದಿದ್ದರೂ ತಾನು ಅವಳ ಜೊತೆ ಇರುವ ಗಂಡಿಗೆ ಸಮಾನಳಲ್ಲ ಅಥವಾ ಗಂಡಿಗಿರುವಷ್ಟು ಹಕ್ಕು ಮತ್ತು ಸ್ವಾತಂತ್ರ್ಯ ಅವಳಿಗಿಲ್ಲ ಎಂಬ ಭಾವನೆ ಇಂದಿನ ಸಿನಾರಿಯೋ ಮಾತ್ರವಲ್ಲ ದಶಕಗಳ ಕಾಲ ಹೆಣ್ಣಿನ ಮೇಲೆ ಆಗಿರುವ ಶೋಷಣೆ, ಅವಳನ್ನು ನಡೆಸಿಕೊಂಡಿರುವ ರೀತಿ, ಒಳಪಡಿಸಿರುವ ಕಟ್ಟುಪಾಡುಗಳಿಂದ ಬಂದಿದೆ ಎಂದು ನನ್ನ ಭಾವನೆ. ವಿದ್ಯಾವಂತಳಾಗಿ, ಸ್ವತಂತ್ರವಾಗಿ ದುಡಿಯುತ್ತಿರುವ ಮಹಿಳೆಯರಿಗೇ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗದಿದ್ದರೆ, ಇನ್ನು ಅನಕ್ಷರಸ್ಥ, ಅವಲಂಬಿತ ಮತ್ತು ದಮನಿತ ಸಮುದಾಯಗಳ ಮಹಿಳೆಯರ ಪಾಡು ಏನು? ಹೆಣ್ಣು ಮಕ್ಕಳು ಎಲ್ಲರಂತೆ ಸ್ವತಂತ್ರವಾಗಿ ತಮ್ಮಿಷ್ಟದಂತೆ ಜೀವನ ನಡೆಸಲು ಸಾಧ್ಯವಿಲ್ಲವೇ? ನಾವು ಬಯಸಿದರೂ ಅವುಗಳಲ್ಲಿ ಎಷ್ಟು ಪ್ರಾಯೋಗಿಕವಾಗಿ ಮಾಡಲು ಸಾಧ್ಯ? ಈ ಎಲ್ಲ ಪ್ರಶ್ನೆಗಳೂ ಉತ್ತರವಿಲ್ಲದೆ ನನ್ನಲ್ಲಿಯೇ ಉಳಿದಿವೆ.