ಜಗತ್ತಿನ ಜೀವರಾಶಿಯ ಹುಟ್ಟು ಮತ್ತು ಬೆಳವಣಿಗೆ ನಿಂತಿರುವುದು ಜೀವ ಸರಪಳಿಯಿಂದ. ಒಂದು ಜೀವಿ ಇನ್ನೊಂದು ಜೀವಿಯ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಜೀವ ಸರಪಳಿಯ ಒಂದು ಕೊಂಡಿ ಕಳಚಿದರೂ ಇಡೀ ಜೀವ ಸಮೂಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಜಗತ್ತಿನ ವಿನಾಶಕ್ಕೆ ಯುದ್ಧ, ಸೋಟಕಗಳೇ ಬೇಕೆಂದಿಲ್ಲ. ಭೂಮಿಯ ಮೇಲಿನ ಈ ಎರಡು ಸಣ್ಣ ಜೀವಿಗಳು ಸಂಪೂರ್ಣವಾಗಿ ನಾಶವಾದರೆ, ಇಡೀ ಜೀವ ಜಗತ್ತು ಅನ್ನ-ಆಹಾರವಿಲ್ಲದೆ ನಾಶವಾಗುತ್ತದೆ. ಆ ಎರಡು ಹುಳುಗಳೇ ಒಂದು ಜೇನುಹುಳು, ಮತ್ತೊಂದು ಗೆದ್ದಲು ಹುಳು. ಈ ಲೇಖನದಲ್ಲಿ ಜೇನುಹುಳುಗಳ ಬಗ್ಗೆ ತಿಳಿದುಕೊಳ್ಳೋಣ. ಜೇನುಹುಳುಗಳ ಕಾರ್ಯ ಸಿಹಿಯಾದ ಜೇನು ತುಪ್ಪ ನೀಡುವ ಜತೆಗೆ ಮತ್ತೊಂದು ಮಹತ್ವದ ಕಾರ್ಯವೆಂದರೆ ಪರಾಗಸ್ಪರ್ಶ ಕ್ರಿಯೆಯ ಮೂಲಕ ಎಲ್ಲ ಆಹಾರ ಪದಾರ್ಥಗಳ ಇಳುವರಿಗೆ ನೆರವಾಗುವುದು.
ಜೇನು ಹುಳುಗಳ ನಾಶದಿಂದಾಗುವ ದುಷ್ಪರಿಣಾಮಗಳು: ಜೇನು ಹುಳುಗಳು ನಾಶವಾಗಿ ಪರಾಗ ಸ್ಪರ್ಶ ಕ್ರಿಯೆ ನಿಂತರೆ ಮನುಷ್ಯರ ಹಾಗೂ ಇತರೆ ಜೀವಿಗಳ ಆವಾಸ ಸ್ಥಾನ ನಾಶವಾಗಿ ಜೀವ ಸಂಕುಲವೇ ನಾಶವಾಗುತ್ತದೆ. ಅಲ್ಲದೇ ಸಸ್ಯ ಸಂವಹನ ಮತ್ತು ಸಸ್ಯ ಪ್ರಭೇದಗಳ ನಾಶದಿಂದ ಹವಾಮಾನದಲ್ಲಿ ಬದಲಾವಣೆಯಾಗಿ, ಆಹಾರ ಅಭಾವ ಹೆಚ್ಚಾಗುತ್ತದೆ. ಜೊತೆಗೆ ಜಗತ್ತಿನ ವಿನಾಶವು ಪ್ರಾರಂಭವಾಗುತ್ತದೆ.
ಇಂತಹ ಜೇನು ಹುಳುಗಳ ಉಳಿಕೆ, ಅವುಗಳ ಪರಾಗಸ್ಪರ್ಶ ಕ್ರಿಯೆಯನ್ನು ಹೆಚ್ಚಿಸಲು ಕೆಲವೊಂದು ಸೂಕ್ತ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಜೇನುಹುಳುಗಳ ಪರಾಗ ಸ್ಪರ್ಶ ಸ್ನೇಹಿಯಾದ ಹೂಗಳು, ಹೂ ಬಿಡುವ ಮರಗಳು, ಹಣ್ಣು, ತರಕಾರಿ ಜಾತಿಯ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಅಲ್ಲದೆ ಕೃಷಿ ಭೂಮಿಗಳಿಗೆ ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸುವುದನ್ನು ಕೈಬಿಟ್ಟು ಸಾವಯವ ಕೀಟನಾಶಕ ಹಾಗೂ ಕಷಾಯಗಳನ್ನು ಸಿಂಪಡಿಸಬೇಕು. ಆ ಮೂಲಕ ಜೇನುನೊಣಗಳ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸಬೇಕು. ಜೇನು ಗೂಡಿಗೆ ಬೆಂಕಿ ಇಡುವುದನ್ನು ಅಪರಾಧವೆಂದು ಪರಿಗಣಿಸಬೇಕು. ಜತೆಗೆ ಸುಸ್ಥಿರ, ಸಾವಯವ ಕೃಷಿಯನ್ನು ಅತ್ಯಂತ ಜರೂರು ಎಂದು ಪರಿಭಾವಿಸಿ ಆಚರಿಸಬೇಕು. ಪರಾಗಸ್ಪರ್ಶವಾಗಿರುವ ಕೀಟಗಳು ಜೇನುಹುಳು ಚಿಟ್ಟೆಯಂತಹ ಮಿತ್ರ ಕೀಟಗಳ ಸಂರಕ್ಷಣೆಯನ್ನು ಎಲ್ಲರೂ ಉತ್ತೇಜಿಸಬೇಕು.
- ಜೀವಿಗಳ ಉಳಿವಿಗೆ ಜೇನು ಹುಳುಗಳ ಪ್ರಮುಖ್ಯತೆ
ಸಸ್ಯಗಳ ಸಂತಾನೋತ್ಪತ್ತಿಗೆ ಪರಾಗ ಸ್ಪರ್ಶವು ಅತ್ಯಂತ ನಿರ್ಣಾಯಕ ಅಂಶವಾಗಿದ್ದು, ಜೇನುಹುಳುಗಳ ಪರಾಗಸ್ವರ್ಶ ಮಾಡುವುದರಿಂದ ಹೆಚ್ಚು ಆಹಾರ ಉತ್ಪಾದನೆಯಾಗುತ್ತದೆ. - ಜೀವ ವ್ಯವಸ್ಥೆಯ ಸಮತೋಲನ ಜೀವನ ನಿರ್ವಹಣೆಯನ್ನು ಬೆಂಬಲಿಸುವಲ್ಲಿ ಜೇನು ಹುಳುಗಳ ಪಾತ್ರ ಪ್ರಮುಖ.
- ಪರಾಗಸ್ವರ್ಶದ ಮೂಲಕ ಬೀಜ ಮತ್ತು ಹಣ್ಣುಗಳ ಉತ್ಪಾದನೆಯನ್ನು ವೃದ್ಧಿಸುತ್ತವೆ ಹಾಗೂ ಸಸ್ಯಗಳನ್ನು ಶಕ್ತಗೊಳಿಸುತ್ತವೆ. ಬೆಳೆಗಳ ಉತ್ಪಾದನೆ ಹೆಚ್ಚಿಸಿ ಇಳುವರಿಯನ್ನು ಹೆಚ್ಚಿಸುತ್ತವೆ.
- ಪರಾಗಸ್ಪರ್ಶದ ಮೂಲಕ ಅಪಾರವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಉಳಿಸಿ, ಬೆಳೆಸಿ ಆ ಮೂಲಕ ಪರಿಸರ ವ್ಯವಸ್ಥೆಯ ವೈವಿಧ್ಯತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ.
- ಪರಾಗಸ್ಪರ್ಶದ ಮೂಲಕ ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವಕ್ಕೆ ನೆರವಾಗಿ ಜೀವ ವೈವಿಧ್ಯತೆಯ ಹಾಟ್‌ಸ್ಪಾಟ್‌ಗಳನ್ನು ನಿರ್ವಹಿಸುವಲ್ಲಿ ಪ್ರಾದೇಶಿಕ ಭಿನ್ನತೆಯನ್ನು ರಕ್ಷಿಸುತ್ತವೆ.
- ಪರಾಗ ಸ್ಪರ್ಶದಿಂದ ವಾತಾವರಣದಲ್ಲಿ ಆಮ್ಲಜನಕದ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಹವಾಮಾನ ನಿಯಂತ್ರಣದ ಮೇಲೆ ಪ್ರಭಾವ ಬೀರುತ್ತವೆ.
- ಜೇನುಗಳ ಪರಾಗಸ್ವರ್ಶವು ಬಾಷ್ಟೀಕರಣದ ಮೂಲಕ ನೀರಿನ ಲಭ್ಯತೆಯನ್ನು ಹೆಚ್ಚಿಸಿ ಜಲಚಕ್ರದ ಮೇಲೆ ಪರಿಣಾಮ ಬೀರುತ್ತದೆ.
- ಸಸ್ಯವರ್ಗವು ಸದೃಢವಾಗಿ ಬೇರುಗಳು ವಿಶಾಲವಾಗಿ ಹರಡಿ ಮಣ್ಣಿನ ಸವೆತವನ್ನು ತಡೆಯಲು ಸಹಾಯಕವಾಗಿವೆ.
- ಆ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಲು, ಪೋಷಕಾಂಶಗಳ ಹರಡುವಿಕೆ ಮೂಲಕ ಮಣ್ಣಿನೊಳಗೆ ಚಲನೆ ಮಾಡಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಹಣ್ಣು, ತರಕಾರಿಗಳು, ಕಾಳು, ಧಾನ್ಯಗಳು, ಬೀಜಗಳು ಸೇರಿದಂತೆ ಅನೇಕ ಬೆಳೆಗಳ ಉತ್ಪಾದನೆಯು ಹೆಚ್ಚಾಗಿ ಆಹಾರ ಭದ್ರತೆ ಯನ್ನು ಸುಸ್ಥಿರಗೊಳಿಸುವಲ್ಲಿ ನೆರವಾಗುತ್ತವೆ.
- ಪರಾಗ ಸ್ಪರ್ಶವು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ಜಾಗತಿಕ ಆರ್ಥಿಕತೆಗೆ ೨೦೦ ಶತಕೋಟಿ ಡಾಲರ್‌ಗಳಷ್ಟು ಕೊಡುಗೆ ನೀಡುತ್ತದೆ.
- ಅರಣ್ಯ, ಕೃಷಿ ಸಂಬಂಧಿತ ಉದ್ಯಮಗಳಲ್ಲಿ ಜೀವನೋಪಾಯ ಮತ್ತು ಉದ್ಯೋಗ ಸೃಷ್ಟಿಗೆ ಜೇನು ಹುಳುಗಳು ಆಧಾರವಾಗಿವೆ.
- ಅನೇಕ ಬಗೆಯ ಸಾಂಸ್ಕೃತಿಕ ಮೌಲ್ಯಗಳಾದ ವಸತಿ, ಉಡುಪು, ಆಹಾರ, ಆಚಾರ-ವಿಚಾರ ಪರಂಪರೆಗೆ ವೈವಿಧ್ಯತೆಯನ್ನು ನೀಡಿ ಸಾಂಸ್ಕೃತಿಕ ಮಹತ್ವಕ್ಕೆ ಕಾರಣವಾಗಿವೆ.





