ಡಿ.ಎನ್.ಹರ್ಷ
ಮನುಷ್ಯನ ದೇಹವು ಪಂಚಮಹಾಭೂತಗಳಾದ ಭೂಮಿ, ನೀರು, ಅಗ್ನಿ, ಗಾಳಿ ಮತ್ತು ಆಕಾಶಗಳಿಗೆ ಪೂರಕವಾಗಿ ಮಾಡಲ್ಪಟ್ಟಿದೆ ಎಂಬುದನ್ನು ನಾವೆಲ್ಲರೂ ಅರಿತಿದ್ದೇವೆ. ಹಾಗೆಯೇ ನಾವು ತಿನ್ನುವ ಆಹಾರ ಮತ್ತು ಬೆಳೆಯುವ ಬೆಳೆಗಳು ಸಹ ಈ ಐದು ಪಂಚಮಹಾಭೂತಗಳಿಗೆ ಅನುಗುಣವಾಗಿ ಸೃಷ್ಟಿ ಆಗುತ್ತಾ ಇವೆ ಎಂಬುದನ್ನು ಮರೆತವರಂತೆ ವರ್ತಿಸುತ್ತಾ ಇರುವುದು ವಿಪರ್ಯಾಸದ ಸಂಗತಿ.
ಪ್ರಕೃತಿಗೆ ಅನುಗುಣವಾಗಿ ಕಾಡಿನಲ್ಲಿ ಬೆಳೆಯುವ ಮರ, ಗಿಡ, ಬಳ್ಳಿಗಳು, ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳನ್ನು ತಡೆದುಕೊಂಡು ಸಮೃದ್ಧಿಯಾಗಿರುತ್ತವೆ. ನಾವು ಉಳುಮೆ, ನೀರು, ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಯತೇಚ್ಛವಾಗಿ ಕೊಡುತ್ತಾ ಬಂದಿದ್ದರೂ ಅಂದುಕೊಂಡ ಹಾಗೆ ಯಾಕೆ ಇಳುವರಿ ಪಡೆಯಲು ಆಗ್ತಾ ಇಲ್ಲಾ? ದಿನೇ ದಿನೇ ಯಾಕೆ ಭೂಮಿಯ ಫಲವತ್ತತೆ ಕಡಿಮೆ ಆಗ್ತಾ ಇದೆ? ಯಾಕೆ ಕೃಷಿಕರ ಬದುಕು ಕ್ಷೀಣಿಸುತ್ತಲಿದೆ? ಈ ರೀತಿಯ ಅನೇಕ ಪ್ರಶ್ನೆಗಳು ಸಹಜವಾಗಿಯೇ ಕಾಡುತ್ತವೆ. ನಾವೆಲ್ಲಾ ವಿಜ್ಞಾನದಲ್ಲಿ ಓದಿರುವ ಹಾಗೆ ಸಸ್ಯಗಳು ಫೋಟೋ ಸಿಂಥಸಿಸ್ ಅಂದ್ರೆ ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ತಮಗೆ ಬೇಕಾದ ಆಹಾರವನ್ನು ತಯಾರು ಮಾಡಿಕೊಳ್ಳುತ್ತವೆ ಎಂಬುದನ್ನು ಮುಂದೆ ತಿಳಿಯೋಣ.
6 CO2 + 12 H2O + ಬೆಳಕು – C- 6 H12 O 6 + 6 O 2+ 6 H2O2 ಇಂಗಾಲದ ಡೈಆಕ್ಸೈಡ್ + ನೀರು + ಬೆಳಕಿನ ಶಕ್ತಿ ಗ್ಲೂಕೋಸ್ + ಆಮ್ಲಜನಕ + ನೀರು ಈ ಕ್ರಿಯೆಯಲ್ಲಿ ಸಸ್ಯಗಳು ವಾತಾವರಣದಲ್ಲಿರುವ ಗಾಳಿ ಅಂದ್ರೆ ಇಂಗಾಲದ ಡೈಆಕ್ಸೈಡ್, ನೀರು ಮತ್ತು ಸೂರ್ಯನ ಬೆಳಕ(ಸೋಲಾರ್ ಎನರ್ಜಿ) ನ್ನು ಬಳಸಿಕೊಂಡು ತಮಗೆ ಬೇಕಾದ ಗ್ಲೂಕೋಸ್ ಅನ್ನು ತಯಾರಿಸಿಕೊಂಡು, ಪ್ರಾಣಿಗಳಿಗೆ ಅಗತ್ಯವಾದ ಆಮ್ಲಜನಕವನ್ನು ಬಿಡುತ್ತೇವೆ.
ಈ ಕ್ರಿಯೆಗೆ ಮುಖ್ಯವಾಗಿ ಬೇಕಾದ ಗಾಳಿ, ನೀರು, ಬೆಳಕು ಸ್ವಾಭಾವಿಕವಾಗಿಯೇ ದೊರೆಯುತ್ತವೆ.ಆದರೂ ಆಹಾರದ ಸರಪಳಿ ಕ್ರಿಯೆ ಯಾಕೆ ಸರಿಯಾಗಿ ನಡೆಯುತ್ತಾ ಇಲ್ಲಾ ಎಂಬುದು ಕೃಷಿಕರು ಆಲೋಚನೆ ಮಾಡಬೇಕಾದ ವಿಷಯ. ಈ ಮೇಲಿನ ಆಹಾರ ಸರಪಳಿ ಕ್ರಿಯೆ ಸುಗಮವಾಗಿ ನಡೆಯಲು, ಭೂಮಿಯಲ್ಲಿ ಅಗತ್ಯವಾದ ಸೂಕ್ಷ್ಮ ಜೀವಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಾ ಇರುವುದೇ ಮೂಲ ಕಾರಣವಾಗಿದೆ. ಕಳೆದ ೫೦ ವರ್ಷಗಳಿಂದ ಸತತವಾಗಿ ಬಳಸುತ್ತಿರುವ ರಾಸಾಯನಿಕಗಳ ಪರಿಣಾಮದಿಂದ ಉತ್ಪಾದಕ ಮಣ್ಣು, ಅನುತ್ಪಾದಕ ಮಣ್ಣಾಗಿ ಪರಿವರ್ತನೆಯಾಗಲು ಮುಖ್ಯ ಕಾರಣವೇ ಅಗತ್ಯ ಸೂಕ್ಷ್ಮಜೀವಿಗಳ ಕೊರತೆ. ವೆಸಿಕ್ಯುಲರ್-ಆರ್ಬಸ್ಕುಲರ್ ಮೈಕೋರಿಜಾ ಅಥವಾ ಪುಟ್ಟದಾಗಿ ಮೈಕೋರಿಜಾ ಎಂದು ಕರೆಯುವ, ಶಿಲೀಂಧ್ರ ರೂಪದ ಸೂಕ್ಷ್ಮಜೀವಿಯ ಉದಾಹರಣೆ ಮೂಲಕ ಸೂಕ್ಷ್ಮ ಜೀವಿಗಳು ಪರಿಣಾಮಕಾರಿಯಾಗಿ ಹೇಗೆ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಮಾಡುತ್ತವೆ ಎಂಬುದನ್ನು ಮುಂದೆ ತಿಳಿಯೋಣ.
ಮೈಕೋರಿಜಾವು, ಬೇರುಗಳ ಜೊತೆ ಸಹಜೀವನ (ಸಿಂಬಾಯಾಟಿಕ್) ನಡೆಸುವ ಶಿಲೀಂಧ್ರವಾಗಿದ್ದು, ಬಿಳಿ ಬೇರುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದು ಸಸ್ಯಗಳಲ್ಲಿ ಹೆಚ್ಚಾದ ಗ್ಲೂಕೋಸ್‌ಅನ್ನು ಹೀರಿಕೊಂಡು, ಸಸ್ಯಗಳಿಗೆ ಅಗತ್ಯವಾದ ರಂಜಕದ ಜೊತೆ ಸತು, ಕಬ್ಬಿಣ ಮುಂತಾದ ಲಘು ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಇತರೆ ರೋಗಕಾರಕ ಸೂಕ್ಷ್ಮಜೀವಿಗಳಿಂದ ಸಸ್ಯವನ್ನು ರಕ್ಷಿಸುವುದರ ಜೊತೆಗೆ, ನೀರು ಕಡಿಮೆಯಾಗಿ, ಕಾಡುವ ಬರಕ್ಕೆ ಪ್ರತಿರೋಧವನ್ನು ನೀಡುತ್ತದೆ. ಹೆಚ್ಚು ಹೆಚ್ಚು ರಾಸಾಯನಿಕಗಳ ಬಳಕೆ, ಅತಿ ಖರ್ಚು, ರೋಗ, ಕೀಟಬಾಧೆಯ ಉಲ್ಬಣ, ಇಳುವರಿ ಕುಂಠಿತ, ಬೆಳೆಯ ಗುಣಮಟ್ಟ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದೆ ಇರುವುದು, ಕೃಷಿಕರು ನಿತ್ಯ ಅನುಭವಿಸುತ್ತಾ ಇರುವ ಸಾಮಾನ್ಯ ಸಮಸ್ಯೆಗಳಾಗಿವೆ.
ಗ್ಲೋಬಲ್ ವಾರ್ಮಿಂಗ್, ಅತಿವೃಷ್ಟಿ, ಅನಾವೃಷ್ಟಿ, ಪರಿಸರ ಮಾಲಿನ್ಯದಂತಹ ಜಾಗತಿಕ ಸಮಸ್ಯೆಗಳಿಗೆ ಮೂಲ ಕಾರಣವೇ, ಅಗತ್ಯ ಸೂಕ್ಷ್ಮಜೀವಿಗಳ ಕೊರತೆ ದಿನೇ ದಿನೇ ಹೆಚ್ಚಾಗುತ್ತಾ ಇರುವುದು. ಈ ನಿಟ್ಟಿನಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ದೇಸಿ ಪದ್ಧತಿ ಗೊಬ್ಬರಗಳ ಬಳಕೆ, ವಿಧಾನಗಳನ್ನು ಬಳಸಿಕೊಂಡು ಮುಂದುವರಿಯುವ ಬಗ್ಗೆ ಆಲೋಚನೆ ಮಾಡಬೇಕಾಗಿದೆ.
” ಅನೇಕ ರೀತಿಯ ಸೂಕ್ಷ್ಮ ಜೀವಿಗಳಿಂದ ಸಸ್ಯಗಳ ಬೆಳವಣಿಗೆ ಉತ್ತಮವಾಗಿ ಆಹಾರದ ಸರಪಳಿ ರಚನೆ ಆಗುತ್ತದೆ. ಮೊದಲೇ ತಿಳಿಸಿದ ಹಾಗೆ, ನೈಸರ್ಗಿಕವಾಗಿ ಸಿಗುವ ಗಾಳಿ, ನೀರು, ಬೆಳಕು ರೀತಿಯ ಪಂಚ ಮಹಾಭೂತಗಳು, ತ್ಯಾಜ್ಯದ ರೂಪದ ಗೊಬ್ಬರ, ಇತ್ಯಾದಿಗಳು ಹೆಚ್ಚಾಗಿ ಸಿಗುತ್ತಾ ಇದ್ದವು. ಇವುಗಳನ್ನು ಬಳಕೆ ಮಾಡಿಕೊಂಡು, ಆಹಾರ ತಯಾರು ಮಾಡುವ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಗತ್ಯವಾಗಿರುವ ಸೂಕ್ಷ್ಮ ಜೀವಿಗಳ ಕೊರತೆ ಕಾಡುತ್ತಾ ಇದೆ. ಇದರಿಂದ ಆಹಾರ ಸರಪಳಿಯಲ್ಲಿ ಅಸಮತೋಲನ ಉಂಟಾಗುತ್ತಿರುವುದು ನೋವಿನ ಸಂಗತಿ”





