ರಮೇಶ್ ಪಿ.ರಂಗಸಮುದ್ರ
ಕಳೆದ ವಾರದ ಲೇಖನದಲ್ಲಿ ಕೃಷಿಯಲ್ಲಿ ಜೇನು ಹುಳುಗಳ ಮಹತ್ವ, ಇತರ ಜೀವಿಗಳ ನೆಲೆಗಳ ರಕ್ಷಕನಾಗಿ ಜೇನು ಹುಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರಣಾತ್ಮಕವಾಗಿ ತಿಳಿಸಲಾಗಿತ್ತು. ಅಂತಹದ್ದೇ ಮತ್ತೊಂದು ಜೀವಿಯ ಬಗ್ಗೆ ತಿಳಿದುಕೊಳ್ಳೋಣ.
ಜಗತ್ತಿನ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂಅದರದ್ದೇ ಆದ ಕರ್ತವ್ಯ ಮತ್ತು ಜವಾಬ್ದಾರಿಗಳಿವೆ. ಒಂದು ಜೀವಿಯ ಕಾರ್ಯಕ್ಕೆ ಅಡ್ಡಿಯುಂಟಾದರೂ ಅದು ಜೀವಸಂಕುಲದ ಸುಸ್ಥಿರತೆ ಹಾಗೂ ಪರಿಸರ ಸಮತೋಲನಕ್ಕೆ ಧಕ್ಕೆಯುಂಟು ಮಾಡುತ್ತದೆ. ಹೀಗೆ ಸದ್ದಿಲ್ಲದೆ ಭೂಮಿಯ ಮೇಲ್ಮೆ ನ ಸೃಷ್ಟಿಗೆ ದುಡಿಯುತ್ತಿರುವ ಮತ್ತೊಂದು ಜೀವಿಯೇ ಗೆದ್ದಲು ಹುಳು. ಗೆದ್ದಲು ಹುಳುಗಳು ಮಣ್ಣಿನ ಸ್ನೇಹಿತನಾಗಿ, ಅರಣ್ಯ ವರ್ಧಕನಾಗಿ, ಅಂತರ್ಜಲ ಪೋಷಕನಾಗಿ, ಪರಿಸರ ಸಂರಕ್ಷಕನಾಗಿ, ಶಿಸ್ತು ಕಲಿಸುವ ಶಿಕ್ಷಕನಾಗಿ ಕೆಲಸ ಮಾಡುತ್ತವೆ.
ಮಣ್ಣಿನ ಸ್ನೇಹಿತ: ಗೆದ್ದಲು ಹುಳುಗಳು ಕೃಷಿಯ ನಂತರ ಮಣ್ಣಿನ ಮೇಲ್ಮೆ ನಲ್ಲಿ ಉಳಿಯುವ ಬೆಳೆಗಳ ಉಳಿಕೆಯ ಕಸ ಕಡ್ಡಿಗಳನ್ನು ತಿಂದು ಮಣ್ಣನ್ನು ಪೋಷಕಾಂಶಯುಕ್ತವಾಗಿ ಪರಿವರ್ತಿಸುತ್ತವೆ. ಅಲ್ಲದೇ ತೆಂಗು,ಅಡಕೆ,ಹಣ್ಣಿನ ಗಿಡಮರಗಳ ರೆಂಬೆ ಕೊಂಬೆಗಳ ಮೇಲಿನ ಗರಿ ಹಾಗೂ ಒಣ ತೊಗಟೆಗಳನ್ನು ತಿಂದು ಗಿಡಮರಗಳು ಆರೋಗ್ಯಯುತವಾಗಿ ಬೆಳೆಯಲು ಸಹಕರಿಸುತ್ತವೆ. ಇವು ಕೃಷಿ ಭೂಮಿಯ ಮಣ್ಣಿನ ಒಳಗೆ ಹೊರಗೆ ಸಂಚರಿಸಿ ಮಣ್ಣಿನ ಒಳಗೆ ಗಾಳಿ ಸಂಚರಿಸಿ ಮಣ್ಣು ಹಗುರವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ. ಗೆದ್ದಲು ಹುಳುಗಳು ಎಂದೂ ಜೀವಂತ ಸಸ್ಯ ಹಾಗೂ ಜೀವಿಗಳನ್ನು ತಿನ್ನುವುದಿಲ್ಲ. ಸ್ಮಶಾನದಲ್ಲಿ ಹೂಳುವ ಮಾನವನ ದೇಹವನ್ನು ಕೆಲವೇ ದಿನಗಳಲ್ಲಿ ತಿಂದು ಮುಗಿಸಿ, ಸ್ಮಶಾನ ಭೂಮಿಯನ್ನು ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತವೆ. ಸತ್ತ ಜೀವಿಗಳಿಂದ ವಾಸನೆ ಹರಡದಂತೆ ನೋಡಿ ಕೊಳ್ಳುತ್ತವೆ.
ಅರಣ್ಯವರ್ಧಕ: ಪ್ರತಿವರ್ಷ ಅರಣ್ಯಗಳಲ್ಲಿ ಗಾಳಿ ಮಳೆಯಿಂದಾಗಿ ಬೀಳುವ ಲಕ್ಷಾಂತರ ಮರಗಳು ಭೂಮಿಯ ಮೇಲ್ಮೈನಲ್ಲಿ ಕರಗಲು ಹತ್ತಾರು ವರ್ಷಗಳು ಬೇಕು. ಇದರಿಂದ ಹೊಸ ಗಿಡ, ಮರಗಳು ಹುಟ್ಟಿಕೊಳ್ಳಲು ನಿಧಾನವಾಗಿ ಅರಣ್ಯ ಕ್ಷೀಣಿಸಲು ಕಾರಣವಾಗುತ್ತದೆ. ಆದರೆ ಗೆದ್ದಲು ಹುಳುಗಳು ಬಿದ್ದ ಗಿಡಮರಗಳನ್ನು ತಿಂದು ಹೊಸ ಗಿಡ ಮರಗಳ ಬೆಳವಣಿಗೆಗೆ ಪೂರಕವಾಗಿ, ಅರಣ್ಯ ವರ್ಧಕಗಳಾಗಿ ಕೆಲಸ ಮಾಡುತ್ತವೆ.
ಅಂತರ್ಜಲ ಪೋಷಕ: ಭೂಮಿಯ ಮೇಲ್ಮೆ ಮೇಲೆ ಬೀಳುವ ಮಳೆಯ ನೀರನ್ನು ಭೂಮಿಯ ಆಳಕ್ಕೆ ಇಂಗಿಸುವ ಕೆಲಸವನ್ನು ಗೆದ್ದಲು ಹುಳುಗಳು ಮಾಡುತ್ತವೆ. ಮಣ್ಣನ್ನು ಹಗುರವಾಗಿಸಿ, ನೀರು ಹಿಡಿ ದಿಟ್ಟುಕೊಳ್ಳುವ ಶಕ್ತಿಯನ್ನು ಮಣ್ಣಿಗೆ ನೀಡುತ್ತವೆ. ಇವು ೨೦ ಅಡಿಗಳಿಂದ ೧೦೦ ಅಡಿಗಳ ಆಳದವರೆಗೂ ಗೂಡು(ಹುತ್ತ)ಗಳನ್ನು ನಿರ್ಮಿಸಿಕೊಳ್ಳುತ್ತವೆ. ಅವುಗಳ ಮೂಲಕ ಬಿದ್ದ ಮಳೆ ನೀರು ಅಂತರ್ಜಲಕ್ಕೆ ಇಳಿಯುತ್ತದೆ. ಹೀಗೆ ಊಹಿಸಲಾರದಷ್ಟು ಮಳೆಯ ನೀರನ್ನು ಭೂಮಿಯ ಅಂತರಾಳಕ್ಕೆ ಸಾಗಿಸಿ ಅಂತರ್ಜಲ ಪೋಷಕನಾಗಿ ಕಾರ್ಯನಿರ್ವಹಿಸುವ ಗೆದ್ದಲು ಹುಳುಗಳು ತಮ್ಮ ಕಾರ್ಯವನ್ನು ಎಡಬಿಡದೆ ಮಾಡುತ್ತವೆ. ಕೊಳವೆ ಬಾವಿಗಳನ್ನು ತೆಗೆಯು ವಾಗ ಹುತ್ತದ ಆಸು ಪಾಸನ್ನು ಆಯ್ಕೆ ಮಾಡಿ ಕೊಂಡು ಕೊರೆದ ಬಾವಿಗಳು ಹುಸಿಯಾದ ಉದಾಹರಣೆ ಇಲ್ಲ.
ಪರಿಸರ ಸಂರಕ್ಷಕ: ಜಗತ್ತಿಗೆ ಸ್ವಚ್ಛತೆಯ ಪಾಠವನ್ನು ಹೇಳಿ ಕೊಡುವ ಶಿಕ್ಷಕರಂತೆ ಗೆದ್ದಲು ಹುಳುಗಳು ಕಾರ್ಯನಿರ್ವಹಿಸುತ್ತವೆ. ಪ್ರಾಣಿಗಳು ಸತ್ತಾಗ ಅವು ಕೊಳೆತು ನಾರುವ ಮುನ್ನ ತಿಂದು, ಮಣ್ಣಾಗಿ ಮಾಡುತ್ತವೆ. ಈ ಕೆಲಸವನ್ನು ಅವು ಸಕ್ರಿಯವಾಗಿ ಮಾಡುವುದರಿಂದ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿ, ಅರಣ್ಯ ವರ್ಧನೆ, ಸ್ವಚ್ಛ ಪರಿಸರ, ವಾಯುಮಾಲಿನ್ಯ ತಡೆಯಾಗುತ್ತದೆ.
ಗೆದ್ದಲು ಹುಳುಗಳ ಸಂರಕ್ಷಣೆ: ವಿವಿಧ ಕಾರ್ಯಗಳಲ್ಲಿ ರೈತ ಸ್ನೇಹಿತನಾಗಿ ಕೆಲಸ ಮಾಡುವ ಗೆದ್ದಲು ಹುಳುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಮನೆ ಹಾಗೂ ಉಪಯುಕ್ತ ಮರ ಮುಟ್ಟುಗಳಿಗೆ ಗೆದ್ದಲು ಹತ್ತಿದಾಗ ಮಾತ್ರ ಗೆದ್ದಲು ನಾಶಕಗಳನ್ನು ಬಳಸಬೇಕು. ಹುತ್ತ ಹಾವುಗಳ ಆವಾಸ ಸ್ಥಾನವಲ್ಲ, ಅಂತರ್ಜಲವೃದ್ಧಿಯ ಭಾಗವೆಂದು ತಿಳಿದು ಪೋಷಣೆ ಮಾಡಬೇಕು. ಗೆದ್ದಲು ಹುಳುಗಳು ಎಂದೂ ಜೀವಂತ ಸಸ್ಯ ಗಿಡಮರ ಗಳನ್ನು ತಿನ್ನುವುದಿಲ್ಲ ಎಂಬುದನ್ನು ತಿಳಿದು ಕೊಳ್ಳಬೇಕು. ವಿಷಕಾರಿ ಕೀಟನಾಶಕಗಳು, ಕಳೆ ನಾಶಕಗಳನ್ನು ಬಿಟ್ಟು ಗೋಮೂಲದಿಂದ ತಯಾರಿಸಿದ ಕಷಾಯಗಳು, ಜೀವಾಮೃತ, ಪಂಚಗವ್ಯಗಳನ್ನು ಬಳಸಿ ಮಣ್ಣಿನಲ್ಲಿರುವ ಗೆದ್ದಲು ಹುಳುಗಳಂತಹ ಅನೇಕ ಮಿತ್ರ ಕೀಟಗಳನ್ನು ಸಂರಕ್ಷಿಸಿಕೊಳ್ಳಬೇಕು





