Mysore
19
overcast clouds
Light
Dark

ಮೈಸೂರಿನಲ್ಲಿ ಸೊಪ್ಪು ಮೇಳ

ಜಿ.ಕೃಷ್ಣ ಪ್ರಸಾದ್

ಸೊಪ್ಪಿನ ಲೋಕ ಬಹು ದೊಡ್ಡದು. ದಂಟು, ರಾಜಗೀರ, ಹರಿವೆ, ಅಣ್ಣೆಸೊಪ್ಪು, ಕಿರಿಕಸಾಲಿ, ಸೊಕ್ತತ್ತಿ, ಬಸಳೆ ಹೀಗೆ ನೂರಾರು ಬಗೆಯ ಸೊಪ್ಪಿನ ತಳಿಗಳಿವೆ. ನಿಸರ್ಗದತ್ತವಾಗಿ ಸಿಗುವ ಸಾಗುವಳಿ ಮಾಡದ ‘ಕಳೆ’ ಎಂದು ನಿರ್ಲಕ್ಷ್ಯಕ್ಕೆ ಗುರಿಯಾದ ಸೊಪ್ಪಿನ ತಳಿಗಳು ಬಹಳಷ್ಟಿವೆ. ಸೊಪ್ಪು ಪರಿಪೂರ್ಣ ಆಹಾರ; ದೇಹಕ್ಕೆ ಬೇಕಾದ ಪೋಷಣೆ ಹಾಗೂ ಚೈತನ್ಯವನ್ನು ಕೊಡು ವಂಥದು. ರಕ್ತಹೀನತೆ, ಅಪೌಷ್ಟಿಕತೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸೊಪ್ಪಿನ ಪಾತ್ರ ಹಿರಿದು.

ಹಳ್ಳಿಗಾಡಿನಲ್ಲಿ ಹಲವಾರು ಬಗೆಯ ದಂಟುಸೊಪ್ಪು, ಗಿಡಗಳ ಚಿಗುರೆಲೆ, ಬಳ್ಳಿಗಳ ಕುಡಿ, ಹೊಲದಲ್ಲಿ ತಾನಾಗೇ ಹುಟ್ಟಿಕೊಳ್ಳುವ ಕಳೆಗಳನ್ನು ಆಹಾರವಾಗಿ ಬಳಸುತ್ತಾರೆ. ಹಲಸಿನ ಎಲೆ, ಬಾಳೆ ಎಲೆ, ಅರಿಶಿನದ ಎಲೆ ಹಲವು ಬಗೆಯ ರುಚಿಕರ ಅಡುಗೆಗಳಿಗೆ ಬಳಕೆಯಾಗುತ್ತವೆ. ಸೊಪ್ಪು ವಿಟಮಿನ್, ಖನಿಜಾಂಶ ಹಾಗೂ ಪೋಷಕ ನಾರಿನಿಂದ ಸಮೃದ್ಧವಾಗಿದೆ. ಬೊಜ್ಜು, ಸ್ಕೂಲಕಾಯ, ಹೃದಯ ಸಂಬಂಧಿ ರೋಗಗಳು, ಅಧಿಕ ರಕ್ತದೊತ್ತಡ, ಖಿನ್ನತೆ ಮತ್ತಿತರ ಅನಾರೋಗ್ಯವನ್ನು ಪರಿಹರಿಸುವ ಶಕ್ತಿ ಸೊಪ್ಪಿಗೆ ಇದೆ. ಒಂದು ಕಾಲಕ್ಕೆ ದಂಟಿನಸೊಪ್ಪು ಸಾಮಾನ್ಯವಾಗಿತ್ತು. ಈಗ ದಂಟಿನಸೊಪ್ಪು ಕಾಣುವುದೇ ಅಪರೂಪ ವಾಗಿದೆ. ಕೊಯ್ದಂತೆಲ್ಲಾ ಚಿಗುರುತ್ತಿದ್ದ ಕೀರೆಸೊಪ್ಪು ಇಲ್ಲವಾಗಿದೆ. ರಾಜಗೀರ ಸೊಪ್ಪು ಮತ್ತು ಕಾಳು ಎರಡಕ್ಕೂ ಸೂಕ್ತವಾಗಿತ್ತು. ಧಾನ್ಯಗಳ ಹಿಟ್ಟು ಬಳಸಿ ಮಾಡುವ ಅಡುಗೆ ತಿನಿಸುಗಳಿಗೆ, ಪರ್ಯಾಯವಾಗಿ ರಾಜಗಿರಿ ಕಾಳುಗಳ ಹಿಟ್ಟನ್ನು ಬಳಸುತ್ತಿದ್ದರು. ಈಗ ರಾಜಗೀರ ನೋಡಲೇ ಸಿಕ್ಕದು. ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುವ ಕನ್ನಸೊಪ್ಪು, ತುಂಬೆಸೊಪ್ಪು, ದೋನಿಸೊಪ್ಪು, ಅಣ್ಣೆಸೊಪ್ಪು, ಸೀಗೆಸೊಪ್ಪು,ಮುಳ್ಳುಕೀರೆ, ಗೊರ್ಜಿ ಸೊಪ್ಪು ಮೊದಲಾದ ಸೊಪ್ಪಿನ ಎಳೆಯ ಕುಡಿಗಳನ್ನು ಕಿತ್ತು ಬೆರೆಸಿದರೆ ಬೆರಕೆ ಸೊಪ್ಪು’ ಸಿದ್ಧವಾಗುತ್ತದೆ. ಇದರಿಂದ ಉಪ್ಪಾರು, ಪಲ್ಯ, ಮಸೊಪ್ಪು, ಬಜ್ಜಿ ಮಾಡುತ್ತಾರೆ. ವರ್ಷಕ್ಕೊಮ್ಮೆ ಬೆರಕೆ ಸೊಪ್ಪಿನ ಸಾರು ತಿಂದ್ರೆ ಯಾವ ಕಾಯಿಲೆನೂ ಹತ್ತಿರ ಬರಲ್ಲ ಹೆಗ್ಗಡದೇವನಕೋಟೆ ತಾಲ್ಲೂಕಿನ ನೂರಲಕುಪ್ಪೆಯ ಚಿನ್ನಮ್ಮ ಬೆರಕೆ ಸೊಪ್ಪಿನ ಮಹಿಮೆ ಬಣ್ಣಿಸುತ್ತಾರೆ. ‘ಈಗೆಲ್ಲ ಕಳೆನಾಶಕ ಹಾಕಿ ಕಳನೇ ತೆಗೀತಾರೆ. ವಿಷ ಹಾಕಿರೋ ಸೊಪ್ಪು ಮಾರ್ಕೆಟ್ಟನಿಂದ ತಂದು ತಿನ್ನಾರೆ. ಆರೋಗ್ಯ ಬಾ ಎಂದ್ರೆ ಎಲ್ಲಿಂದ ಬಂದೀತು ಸ್ವಾಮಿ’ ಎಂದು ವಿಷಾದಿಸುತ್ತಾರೆ. ಸೊಪ್ಪಿನ ಕೃಷಿ ಲಾಭದಾಯಕ ಕೂಡ. ಕಡಿಮೆ ಸಮಯದಲ್ಲಿ ಸೊಪ್ಪು ಬೆಳೆಸಿ ಮಾರುಕಟ್ಟೆಗೆ ತರಬಹುದು. ಕಡಿಮೆ ಜಾಗ ಮತ್ತು ನೀರಿನ ಕೊರತೆ ಇರುವ ಸಣ್ಣ ರೈತರು ಸೊಪ್ಪಿನ ಕೃಷಿ ಮಾಡಿ ನಿರಂತರ ಲಾಭ ಮಾಡಿಕೊಳ್ಳಬಹುದು. 115 ಗುಂಟೆ ಜಾಗದಲ್ಲಿ ಕೀರೆ, ಬಸಳೆ, ಕೆಂಪು ದಂಟು, ಹಸಿರು ದಂಟು, ಮೂಲಂಗಿ, ಮೆಂತ್ಯ, ಕೊತ್ತಂಬರಿ ಮೊದಲಾದ ಸೊಪ್ಪು ಬೆಳೀತೀನಿ. ವಾರಕ್ಕೆ 400 ಕಟ್ಟು ಸೊಪ್ಪು ಸಿಗ್ತದೆ. ತಿಂಗಳಿಗೆ ಏನಿಲ್ಲ ಅಂದ್ರೂ 25ರಿಂದ 30 ಸಾವಿರ ರೂ. ಆದಾಯ ಬರ್ತದೆ ಎನ್ನುತ್ತಾರೆ ಪಿರಿಯಾಪಟ್ಟಣದ ಹಿಟ್ಟೆಹೆಬ್ಬಾಗಿಲಿನ ಕಾಳಪ್ಪ. ಸೊಪ್ಪು, ಹಣ್ಣು ಮತ್ತು ತರಕಾರಿ ಬೆಳೆಗಾರರೇ ನೇರ ಗ್ರಾಹಕರಿಗೆ ಮಾರಾಟ ಮಾಡಲು ‘ಸಕತ್ ಸೊಪ್ಪು’ ಭಾನುವಾರದ ರೈತ ಸಂತೆಯನ್ನು ವಿಜಯನಗರದ ಎರಡನೇ ಹಂತದಲ್ಲಿ ಹುಣಸೂರು ರಸ್ತೆಯ ರುಡ್ ಸೆಟ್ ಮುಂಭಾಗದ ನಗರಪಾಲಿಕೆಯ ಕೃಷಿ ಮಾರುಕಟ್ಟೆ ಆವರಣದಲ್ಲಿ ನಡೆಸುತ್ತಾರೆ. ಬೆಳಿಗ್ಗೆ 7ರಿಂದ 11 ಘಂಟೆಯವರೆಗೆ ನಡೆಯುವ ಈ ರೈತ ಸಂತೆಯಲ್ಲಿ 2 ಲಕ್ಷದ ವಹಿವಾಟು ನಡೆಯುತ್ತದೆ. ಸಾಗುವಳಿ ಮಾಡದ ಅಣ್ಣೆಸೊಪ್ಪು, ಸೀಗೆಸೊಪ್ಪು, ಬಿದಿರು ಕಳಲೆ, ಹೊನಗೊನೆ ಸೊಪ್ಪು ಇಲ್ಲಿ ಮಾರಾಟಕ್ಕೆ ಬರುವುದು ವಿಶೇಷ.

ಸೆ.21 ಮತ್ತು 22ರಂದು ಮೇಳ
ಸೊಪ್ಪಿನ ವೈವಿಧ್ಯವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸೆಪ್ಟೆಂಬರ್ 21 ಮತ್ತು 22ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಸೊಪ್ಪಿನ ಮೇಳ ಏರ್ಪಡಿಸಲಾಗಿದೆ. ಸಹಜ ಸಮೃದ್ಧ ಆಯೋ ಜಿಸಿರುವ 2 ದಿನಗಳ ಸೊಪ್ಪಿನ ಮೇಳದಲ್ಲಿ ನೂರಕ್ಕೂ ಹೆಚ್ಚಿನ ಸೊಪ್ಪುಗಳು ಪ್ರದರ್ಶನಕ್ಕೆ ಬರಲಿವೆ. ಕರ್ನಾಟಕದ ವಿವಿಧ ಭಾಗಗಳಿಂದ ಬರುತ್ತಿರುವ ರೈತ ಗುಂಪುಗಳು ಬಗೆ ಬಗೆಯ ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟಕ್ಕೆ ತರಲಿವೆ.

ನೈಸರ್ಗಿಕವಾಗಿ ಬೆಳೆಯುವ ಸೀಗೆ ಸೊಪ್ಪು, ಅಣ್ಣೆಸೊಪ್ಪು, ಸೊಕ್ತತ್ತಿ ಮೊದಲಾದ ಸೊಪ್ಪುಗಳು, ಲೆಟ್ಯೂಸ್, ಕಾಲೆ, ಅಸ್ಟಾರಗಸ್ ನಂತಹ ಹೊಸ ತಲೆಮಾರಿನ ಸೊಪ್ಪುಗಳು ಮಾರಾಟಕ್ಕೆ ಬರಲಿವೆ. ಹೆಗ್ಗಡದೇವನಕೋಟೆಯ ಹಳ್ಳಿಗರು ‘ಬೆರಕೆ ಸೊಪ್ಪನ್ನು ಮೇಳದಲ್ಲಿ ಪರಿಚಯಿಸಲಿದ್ದಾರೆ. ಸೊಪ್ಪಿನ ಅಡುಗೆಗಳು ಸವಿಯಲು ಸಿಗಲಿವೆ. ಸೊಪ್ಪಿನ ಕೃಷಿ ಮತ್ತು ಮಾರುಕಟ್ಟೆಯ ಕುರಿತು ಶನಿವಾರ ರೈತರಿಗೆ ತರಬೇತಿ ಏರ್ಪಡಿಸಲಾಗಿದೆ. ವಿದ್ಯುತ್‌ ಇಲ್ಲದೆ ಸೊಪ್ಪನ್ನು ಸಂಗ್ರಹಿಸಿಡುವ ಸಬ್ ಜೀ ಕೂಲರ್’ನ ಪ್ರಾತ್ಯಕಿಕೆ ಇರುತ್ತದೆ. 5ರಿಂದ 12 ವರ್ಷದ ಮಕ್ಕಳಿಗಾಗಿ ಭಾನುವಾರ ಬೆಳಿಗ್ಗೆ ‘ನಾ ಕಂಡಂತೆ ಸೊಪ್ಪು’ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಅಲ್ಲದೆ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಇವರ ಆಶ್ರಯದಲ್ಲಿ ಸೊಪ್ಪಿನ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ನಿರ್ಲಕ್ಷ್ಯಕ್ಕೆ ಗುರಿಯಾದ ಮತ್ತು ಹೆಚ್ಚು ಪ್ರಚಲಿತದಲ್ಲಿಲ್ಲದ ಸೊಪ್ಪುಗಳನ್ನು ಬಳಸಿ ಮಾಡಿದ ಅಡುಗೆಗಳಿಗೆ ವಿಶೇಷ ಪ್ರಾಶಸ್ತ್ರ ನೀಡಲಾಗುತ್ತದೆ.
ವಿವರಗಳಿಗೆ ಸಂಪರ್ಕಿಸಿ
9482115495/
9880908608