Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಕುರಿ ಸಾಕಾಣಿಕೆಯೂ ಈಗ ಒಂದು ಉದ್ದಿಮೆ

• ರಮೇಶ್ ಪಿ. ರಂಗಸಮುದ್ರ
ಪ್ರಪಂಚದಲ್ಲಿನ 900ಕ್ಕೂ ಅಧಿಕ ಕುರಿ ತಳಿಗಳ ಪೈಕಿ ಸುಮಾರು 45ಕ್ಕಿಂತ ಹೆಚ್ಚು ಕುರಿ ತಳಿಗಳನ್ನು ಭಾರತದಲ್ಲಿಯೇ ಕಾಣಬಹುದು. ಉತ್ತರ ಭಾರತದಲ್ಲಿ ಕುರಿಗಳನ್ನು ಉಣ್ಣೆ ಉತ್ಪಾದನೆಗಾಗಿ ಸಾಕಿದರೆ, ದಕ್ಷಿಣ ಭಾರತದಲ್ಲಿ ಮಾಂಸಕ್ಕಾಗಿ ಸಾಕಲಾಗುತ್ತದೆ. ಕೃಷಿಗೆ ಪೂರಕವಾದ ಉಪಕಸುಬಾಗಿದ್ದ ಕುರಿ-ಮೇಕೆಗಳ ಸಾಕಾಣಿಕೆ ಈಗ ಉದ್ಯಮವಾಗಿದೆ. ಇತ್ತೀಚೆಗೆ ಕುರಿ-ಮೇಕೆಗಳ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಕುರಿ ಸಾಕಾಣಿಕೆ ವಾಣಿಜ್ಯ ಉದ್ದೇಶದ ಉದ್ಯಮದಂತೆ ಮಾಡಲಾಗುತ್ತಿದೆ.
ದಿನೇ ದಿನೇ ಹೆಚ್ಚುತ್ತಿರುವ ಮಾಂಸ ಹಾಗೂ ಉಪ ಉತ್ಪನ್ನಗಳ ಬೇಡಿಕೆ, ಎಂದೂ ಕುಗ್ಗದ ಬೆಲೆಯಿಂದಾಗಿ ಕುರಿ ಸಾಕಾಣಿಕೆ ಯುವಕರನ್ನು ಸೆಳೆಯುತ್ತಿದೆ. ಐಟಿ-ಬಿಟಿ ಉದ್ಯೋಗಗಳನ್ನು ಬಿಟ್ಟು, ವಿದೇಶಗಳನ್ನೂ ತೊರೆದು ಭಾರತಕ್ಕೆ ಬಂದು ಕುರಿ ಸಾಕಾಣಿಕೆ ಮಾಡುತ್ತಿರುವ ಅನೇಕ ಯುವಕರನ್ನು ನಾವು ಕಾಣಬಹುದು.

ವೈಜ್ಞಾನಿಕವಾಗಿ ಕುರಿ ಸಾಕಿ ಲಾಭ ಕಾಣುತ್ತಿರುವವರೂ ಇದ್ದಾರೆ. ಸಾಮಾನ್ಯವಾಗಿ ಕುರಿಗಳನ್ನು ಅಲೆದಾಡಿ ಮೇಯಿಸುವ ಪದ್ಧತಿ ಮತ್ತು ಕೂಡುಮನೆ ಪದ್ಧತಿ ಎಂಬ ಎರಡು ಪದ್ಧತಿಯಲ್ಲಿ ಸಾಕಲಾಗುತ್ತದೆ. ಹಿಂದೆ ಗೋಮಾಳ
ಗಳು, ಹೊಲಗದ್ದೆಗಳು ಇದ್ದವು. ದಿನವಿಡೀ ಹತ್ತಾರು ಕಿ.ಮೀ. ಅಲೆದಾಡಿಸಿ ಕುರಿ ಸಾಕಲಾಗುತ್ತಿತ್ತು. ಈಗ ಆ ವ್ಯವಸ್ಥೆ ಇಲ್ಲ. ಇದಕ್ಕೆ ಪರ್ಯಾಯ ವಾಗಿ ಕೂಡುಮನೆ ಪದ್ಧತಿಯಲ್ಲಿ ಕುರಿ ಸಾಕಾಣಿಕೆ ಮಾಡಲಾಗುತ್ತಿದೆ. ಅಲೆದಾಡಿ ಮೇಯಿಸುವಾಗ ಕುರಿಗಳಿಗೆ ವೈವಿಧ್ಯಮಯ ಮೇವು, ಬಿಸಿಲು, ಶುದ್ಧಗಾಳಿ, ನಡೆಯುವಾಗ ಕಾಲುಗಳಿಗೆ ವ್ಯಾಯಾಮ ಸಿಗುತ್ತಿತ್ತು. ಕೂಡು ಮನೆ ಪದ್ಧತಿಯಲ್ಲಿ ಈ ಸವಲತ್ತುಗಳು ಕುರಿಗಳಿಗೆ ಸಿಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ವೈವಿಧ್ಯಮಯವಾದ ಮೇವಿನ ಪೂರೈಕೆ ಕುರಿಗಳಿಗೆ ಹಸಿರು ಮೇವು, ಮರ ಮೇವು, ಒಣ ಮೇವು ಹಾಗೂ ಪರಿಪೂರ್ಣ ಬೆಳವಣಿಗೆಗೆ ಕೈ ತಿಂಡಿ ಮಿಶ್ರಣ ನೀಡಬೇಕಾಗುತ್ತದೆ.

1. ಹಸಿರು ಮೇವು: ವಿವಿಧ ಜಾತಿಯ ಹುಲ್ಲು, ಸೊಪ್ಪುಗಳು, ಮುಸುಕಿನ ಜೋಳದ ಮೇವು, ಸಜ್ಜೆ, ಗಿನಿ, ಪ್ಯಾರಾ, ರೋಡ್ಸ್, ಅಂಜುಂ, ಸೂಪರ್ ನೇಪಿಯರ್ ಮುಂತಾದ ದೀರ್ಘಕಾಲ ಕತ್ತರಿಸಿ ಮೇಯಿಸುವ ಫಾರಂ ಹುಲ್ಲುಗಳು, ದ್ವಿದಳ ಸಸ್ಯಗಳು, ಕುದುರೆ ಮೆಂತ್ಯ, ಹುರುಳಿ, ಹಲಸಂದೆ ಕಾಳುಗಳ ಕಾಂಡ ಎಲೆಗಳು ಮೊದಲಾದ ಮೇವುಗಳು.

2. ಮರ ಮೇವು: ಆಲ, ಅರಳಿ, ಹಾಲವಾಣ, ಅಗಸೆ, ನುಗ್ಗೆ ಸುಬಾಬುಲ್, ಹಿಪ್ಪು ನೇರಳೆ, ಹೆಬ್ಬೇವು, ಅತಿಮರ ಮೊರಿಲಾ, ಮರಗಳ ಎಲೆ, ಕಡ್ಡಿಗಳ ಮೇವು ಕುರಿಗಳ ಆರೋಗ್ಯ ಆಯಸ್ಸನ್ನು ಕಾಪಾಡುತ್ತವೆ.

3. ಒಣ ಮೇವು: ನಾರಿನಂಶ ಪೂರೈಕೆಗೆ ಒಣ ಮೇವುಗಳು ಸಹಾಯ ಮಾಡುತ್ತವೆ. ಉಪ್ಪು ಬೆಲ್ಲದ ನೀರು ಹಾಕಿ ಸಂಸ್ಕರಿಸಿದ ಭತ್ತದ ಹುಲ್ಲು, ರಾಗಿ ಹುಲ್ಲು, ಶೇಂಗಾಬಳ್ಳಿ, ತೊಗರಿ, ಹಲಸಂದೆ, ಅವರೆ, ಹೆಸರು ಮುಂತಾದ ದ್ವಿದಳ ಸಸ್ಯಗಳ ಎಲೆ, ಕಡ್ಡಿ, ಹೊಟ್ಟು, ಒಣಗಿಸಿದ ಜೋಳದ ತುಂಡು ಮಾಡಿದ ಕಡ್ಡಿಗಳು, ಒಣಗಿಸಿದ ಕುದುರೆ ಮೆಂತ್ಯ, ಸೊಪ್ಪು ಹೀಗೆ ಹುಲ್ಲು, ಸೊಪ್ಪುಗಳನ್ನು ಒಣಗಿಸಿ ನೀಡಬೇಕು.

4. ಕೈ ತಿಂಡಿ ಅಥವಾ ಮಾದರಿ ಆಹಾರ ಮಿಶ್ರಣ: ಹಸಿರು ಮೇವಿನ ಜೊತೆಗೆ ಮಾದರಿ ಆಹಾರ ಮಿಶ್ರಣವನ್ನು ತಯಾರಿಸಿ ಕೊಡಬೇಕು. ಶೇ.25 ರಷ್ಟು ಮೆಕ್ಕೆಜೋಳ, ಶೇ.32ರಷ್ಟು ಗೋಧಿ ಕಡ್ಲೆ ಬೇಳೆ ಬೂಸಾ, ಶೇ.15ರಷ್ಟು ಶೇಂಗಾದ ಹಿಂಡಿ, ಶೇ.25ರಷ್ಟು ಹುರುಳಿ ಹೆಸರುಕಾಳು ನುಚ್ಚು, ಶೇ.1 ರಷ್ಟು ಅಡುಗೆ ಉಪ್ಪು, ಶೇ.2ರಷ್ಟು ಖನಿಜ ಮಿಶ್ರಣ ಹೀಗೆ ಸಿದ್ಧಪಡಿಸಿದ ಕೈತುಂಡಿಯನ್ನು ಕುರಿಯ ದೇಹದ ತೂಕ ಶೇ.1 ರಂತೆ ನೀಡಿದರೆ ಕುರಿಗಳ ಮಾಂಸದ ಉತ್ಪಾದನೆ ಹೆಚ್ಚುತ್ತದೆ.

ಕುರಿಗಳ ಆರೋಗ್ಯ ರಕ್ಷಣೆ
ಕುರಿಗಳು ಸದಾ ಗುಂಪಿನಲ್ಲಿ ವಾಸಿಸುವುದ ರಿಂದ ಹಾಗೂ ನೆಲಕ್ಕೆ ಹತ್ತಿರವಾಗಿ ಮೇಯುವು ದರಿಂದ ಆಗಾಗ ತಲೆದೋರುವ ಅತಿವೃಷ್ಟಿ, ಬರಗಾಲ, ಮೇವಿನ ಕೊರತೆ, ವಾತಾವರಣದ ವೈಪರೀತ್ಯಗಳಿಂದಾಗಿ ಕುರಿಗಳಲ್ಲಿ ಅನಾರೋಗ್ಯ ಸಾಂಕ್ರಾಮಿಕ ರೋಗಗಳು, ಜಂತುಹುಳುಗಳ ಬಾಧೆಗೆ ಒಳಪಡುತ್ತವೆ. ಆದ್ದರಿಂದ ಕಾಲಕಾಲಕ್ಕೆ ಲಸಿಕೆ ಕೊಡಿಸುವುದು ಅಗತ್ಯ.

Tags: