Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನೈಸರ್ಗಿಕ ಕೃಷಿಕರಾಗಿ ಮಣ್ಣಿನ ಜೀವ ಉಳಿಸಿ

ಡಿ.ಎನ್.ಹರ್ಷ
ನೊಬೆಲ್ ಪ್ರಶಸ್ತಿ ಪುರಸ್ಕೃತ ಎಸ್.ಎ.ವಾಕ್ಸ್ ಮಾನ್ 1938ರಲ್ಲಿಯೇ, ಮಣ್ಣು ಮತ್ತು ಸೂಕ್ಷ್ಮಾಣು ಜೀವಿಗಳ ಮಹತ್ವವನ್ನು ವಿವರಿಸಿದ್ದಾರೆ.

ಭೂಮಿಯ ಮೇಲಿನ ಜನರಿಗಿಂತ ಮಣ್ಣಿನಲ್ಲಿ ಹೆಚ್ಚು ಜೀವಿಗಳಿವೆ ಎಂಬ ವಾಸ್ತವಾಂಶ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ. ಮಣ್ಣಿನಲ್ಲಿ ಶೇ.45ರಷ್ಟು ಖನಿಜಗಳು, ಶೇ.5ರಷ್ಟು ಸಾವಯವ ವಸ್ತುಗಳು, ಶೇ.25ರಷ್ಟು ನೀರು ಮತ್ತು ಶೇ.25ರಷ್ಟು ಗಾಳಿ ಅಂಶಗಳಿದ್ದು, ಕೋಟ್ಯಂತರ ಜೀವಿಗಳ ವಾಸಸ್ಥಾನವಾಗಿದೆ. ಇದು ಸಸ್ಯಗಳ ಬೆಳವಣಿಗೆಯ ಮೂಲಕ ಮಾನವರು ಮತ್ತು ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತಾ ಬಂದಿದೆ.

ಮಣ್ಣು ಮತ್ತು ಸುಸ್ಥಿರ ಕೃಷಿ
ಯಾವುದೇ ಕೃಷಿ ವ್ಯವಸ್ಥೆಯು ಸುಸ್ಥಿರವಾಗಿರಬೇಕೆಂದರೆ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ವನ್ನು ನಿರಂತರವಾಗಿ ನಿರ್ವಹಣೆ ಮಾಡುವುದು ಅತ್ಯವಶ್ಯ. ಪ್ರಕೃತಿ ತನ್ನಲ್ಲಿನ ಎಲ್ಲ ಜೀವ ವಾರದ ರಾಶಿಗಳಿಗೂ ಅಗತ್ಯ ಆಹಾರವನ್ನು ಕೊಡುವಷ್ಟು ಶಕ್ತವಾಗಿದೆ.

ಸ್ವಾಭಾವಿಕವಾಗಿ ಸಿಗುವ ಗಾಳಿ, ನೀರು, ಬೆಳಕು, ಭೂಮಿ, ಆಕಾಶ ಪಂಚಭೂತಗಳನ್ನು ಬಳಸಿಕೊಂಡು, ಅತಿವೃಷ್ಟಿ ಅಥವಾ ಅನಾವೃಷ್ಟಿ ಸಮಯದಲ್ಲೂ ಕಾಡುಗಳಲ್ಲಿ ಮರ ಗಿಡಗಳು, ಸದೃಢವಾಗಿ ಬೆಳೆಯುತ್ತವೆ. ಆದರೆ ದುಬಾರಿ ಬೆಲೆಯ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾ ಇದ್ದರೂ ಇದರಿಂದ ಮಣ್ಣು ಅನುತ್ಪಾದಕವಾಗಿ, ಅವನತಿಯತ್ತಾ ಸಾಗುತ್ತಿರುವ ಬಗ್ಗೆ ಎಲ್ಲರೂ ಆಲೋಚಿಸಬೇಕಾದದ್ದು ತುರ್ತು.

ಮಣ್ಣಿನ ಅವನತಿಯು ಒಂದು ಪ್ರಮುಖ ಜಾಗತಿಕ ಸಮಸ್ಯೆಯಾಗಿದ್ದು, ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳ ಕ್ಷೀಣಿಸುವಿಕೆಯಿಂದ, ಕೃಷಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲ. ಮಣ್ಣಿನ ಆಹಾರ ಸರಪಳಿಯಲ್ಲಿ, ಮಣ್ಣಿನ ಉಪಕಾರಿ ಜೀವಿಗಳು ನಶಿಸಿ ಹೋಗುವ ಕ್ರಿಯೆಯನ್ನು ಮಣ್ಣಿನ ಅವನತಿ ಅಥವಾ ಅನುತ್ಪಾದಕತೆ ಎನ್ನಲಾಗುತ್ತದೆ. ಮಣ್ಣಿನ ಅನುತ್ಪಾದಕತೆಗೆ ಎನ್ನಲಾಗುತ್ತದೆ.

ಮಣ್ಣಿನ ಅನುತ್ಪಾದಕತೆಗೆ ಕಾರಣಗಳು:
ಕೃಷಿಯಲ್ಲಿ ಏಕ ಬೆಳೆ ಬೇಸಾಯ ಪದ್ಧತಿಗಳು
ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ
ಅತಿಯಾದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ
ಭಾರೀ ಯಂತ್ರೋಪಕರಣಗಳ ಬಳಕೆ ಮತ್ತು ಆಳವಾದ ಉಳುಮೆ

ಮಣ್ಣನ್ನು ತ್ವರಿತವಾಗಿ ಪುನರುತ್ಪಾದನೆ ಮಾಡುವುದು ಹೇಗೆ?
ನೈಸರ್ಗಿಕವಾಗಿ ಮಣ್ಣನ್ನು ಪುನರುತ್ಪಾದಿಸಲು ಸುಮಾರು 2ರಿಂದ 3 ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ನಾಟಿ ಹಸುಗಳ ಕರುಳಿ ನಲ್ಲಿ ಇರುವ ಬ್ಯಾಕ್ಟಿರಿಯ ರೀತಿಯ ಸೂಕ್ಷ್ಮ ಜೀವಿಗಳು, ಸೆಗಣಿ ಮತ್ತು ಗಂಜಲದಲ್ಲಿ ಲಕ್ಷಗಟ್ಟಲೆ ಇದ್ದು, ಇವುಗಳ ಸಂಖ್ಯೆಯನ್ನು ಜೀವಾಮೃತ, ಗೊಕೃಪಾಮೃತಾ ಇತ್ಯಾದಿ ರೂಪದಲ್ಲಿ ಹೆಚ್ಚಿಸಿ ಭೂಮಿಯಲ್ಲಿ ಬಳಕೆ ಮಾಡುವುದರಿಂದ ಅಥವಾ ಸೂಕ್ತ ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಪುನರುತ್ಪಾದನೆ ಮಾಡಬಹುದಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದ ರಾಧಾಕೃಷ್ಣ ದಂಪತಿ, ತಮ್ಮ ಫಾರ್ಮ್ ನಲ್ಲಿ, ಯಾವುದೇ ರಾಸಾಯನಿಕ ಬಳಸದೆ ಮೇಲೆ ತಿಳಿಸಿದ ಹಾಗೆ, ನೈಸರ್ಗಿಕ ಕೃಷಿಯಿಂದ ಮಣ್ಣಿನ ಪುನರುತ್ಪಾದನೆ ಮಾಡಿ, ತಮ್ಮ ನಾಲ್ಕು ಎಕರೆಯ ತೋಟದಲ್ಲಿ ವಾರ್ಷಿಕವಾಗಿ ಹತ್ತು ಲಕ್ಷ ರೂ.ಗಳಿಗೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಸೆ. 26 ರಂದು ಅವರ ಜಮೀನಿನಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಮಣ್ಣಿನ ಪುನರುತ್ಪಾದನೆ:
ಅನುತ್ಪಾದಕ ಮಣ್ಣಿನ ಗುಣಿಮಟ್ಟ ಹಾಗೂ ಆರೋಗ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಮಣ್ಣಿನ ಪುನರುತ್ಪಾದನೆ ಎನ್ನಲಾಗುತ್ತದೆ. ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಕ್ರಿಯೆಯನ್ನು ಉತ್ತಮಗೊಳಿಸುವ ಉಪಕಾರಿ ಸೂಕ್ಷಾಣು ಜೀವಿಗಳು ಹಾಗೂ ಎರೆ ಹುಳುಗಳ ಋಣ ಪುನರುತ್ಪಾದನೆ ಮಾಡಬಹುದಾಗಿದೆ. ಸೂಕ್ಷ್ಮಾಣು ಜೀವಿಗಳ ಹೆಚ್ಚಳದಿಂದ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸುವ ಪ್ರಕ್ರಿಯೆ ಹೆಚ್ಚುತ್ತದೆ, ತ್ಯಾಜಗಳ ಕಳಿಯುವಿಕೆ ಹೆಚ್ಚುವುದರಿಂದ, ಮಣ್ಣಿನ ರಸಸಾರ ಸ್ಥಿರವಾಗಿರುತ್ತದೆ, ಮಣ್ಣು ಮೃದು ಮತ್ತು ಸಡಿಲ ಆಗುತ್ತದೆ ಇದರಿಂದ ಗಾಳಿಯಾಡಿ, ನೀರು ಇಂಗುವ ಸಾಮರ್ಥ್ಯ ಹೆಚ್ಚುತ್ತದೆ.

ಅನುತ್ಪಾದಕ ಮಣ್ಣಿನ ದುಷ್ಪರಿಣಾಮಗಳು:
ಮಣ್ಣಿನ ಕಣಗಳು ಒಂದಕ್ಕೊಂದು ಅಂಟಿಕೊಂಡು, ಮಣ್ಣು ಬಿಗಿಯಾಗಿರುತ್ತದೆ.
ಮಣ್ಣಿನ ಒಳಗೆ ಗಾಳಿಯ ಸಂಚಾರ ಕಡಿಮೆಯಾಗಿರುತ್ತದೆ.
ಬಿಳಿಬೇರುಗಳ ಬೆಳವಣಿಗೆ ಕುಂಠಿತಗೊಂಡಿರುತ್ತದೆ.
ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ.
ತಾಜ್ಯಗಳ ಕಳಿಯುವಿಕೆಯ ಪ್ರಮಾಣ ಕಡಿಮೆಯಾಗಿ, ಮಣ್ಣಿನ ರಸಸಾರ ಬದಲಾವಣೆ ಆಗಿರುತ್ತದೆ.
ಪೋಷಕಾಂಶಗಳ ಅಲಭ್ಯತೆಯ ಪ್ರಮಾಣ ಹೆಚ್ಚಾಗಿರುತ್ತದೆ.
ಮಣ್ಣಿನಲ್ಲಿ, ವಾತಾವರಣದಲ್ಲಿರುವ ಸಾರಜನಕ ಸ್ಥಿರೀಕರಿಸುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ.
ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿರುತ್ತದೆ.
ಬೆಳೆಗಳಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆಯ ಪ್ರಮಾಣ ಕಡಿಮೆಯಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ರಾಧಾಕೃಷ್ಣರ ಮೊಬೈಲ್ ಸಂಖ್ಯೆ: 9902010767

 

Tags: