Mysore
24
scattered clouds

Social Media

ಸೋಮವಾರ, 12 ಜನವರಿ 2026
Light
Dark

ಬಡವರ ಬಾದಾಮಿ ಬೇಸಿಗೆಯಲ್ಲಿ ಬೆಳೆಯಿರಿ

ಎನ್.ಕೇಶವಮೂರ್ತಿ

ಚಾಮರಾಜನಗರದ ಸಮೀಪದ ಒಂದು ಹಳ್ಳಿಯಲ್ಲಿ ಒಬ್ಬ ಕೃಷಿಕರು ನೆಲಗಡಲೆಯನ್ನು ಬೆಳೆದಿದ್ದರು. ಗೊಬ್ಬರ, ಗೋಡು, ನೀರು ದಂಡಿಯಾಗಿ ನೀಡಿದ್ದರು. ಬೆಳೆ ಎತ್ತರವಾಗಿ, ಹಸಿರಾಗಿ ಸಾಕಷ್ಟು ಹುಲುಸಾಗಿ ಬೆಳೆದಿತ್ತು. ಆ ರೈತರೂ ಬಹಳ ಖುಷಿಯಾಗಿದ್ದರು.

ಅವರ ಖುಷಿಗೆ ಕಾರಣ ಈ ಬಾರಿ ಬಂಪರ್ ಇಳುವರಿಬರುವುದು ಖಚಿತವಾಗಿತ್ತು. ನನ್ನೊಂದಿಗೆ ಬಂದಿದ್ದ  ಸ್ನೇಹಿತ ಗಿಡದಲ್ಲಿ ನೂರಾರು ಕಡಲೇ ಬೀಜಗಳಿರಬಹುದು ಎಂದು ಒಂದು ಗಿಡಕಿತ್ತರು. ಆದರೆ ಆಶ್ಚರ್ಯವೆಂಬಂತೆ ಆ ಗಿಡದಲ್ಲಿ ಇದ್ದದ್ದು ಕೇವಲ ಎರಡೇ ಕಾಯಿಗಳು. ಆಗ ರೈತ ಮತ್ತೊಂದು ಗಿಡ ಕಿತ್ತ. ಅದರಲ್ಲಿ ನಾಲ್ಕೇ ಕಾಯಿಗಳು. ಗಾಬರಿಯಿಂದ ನಾನೊಂದು ಗಿಡ ಕಿತ್ತೇ ಅದರಲ್ಲಿ ಕೇವಲ ಆರೇ ಕಾಯಿಗಳು ಇದ್ದವು. ಆ ರೈತ ತಾಳ್ಮೆ ಗೆಟ್ಟು ನೂರಾರು ಗಿಡಗಳನ್ನು ಕಿತ್ತ ಅಷ್ಟರ ಪೈಕಿ ಅತೀ ಹೆಚ್ಚು ಕಾಯಿ ಎಂದರೆ ಒಂದು ಗಿಡದಲ್ಲಿ ಆರು ಕಾಯಿ ಇದ್ದದ್ದೇ ಆಗಿತ್ತು. ಏಕೆ ಹೀಗಾಯ್ತು? ನೆಲೆಗಡಲೆ ಊಹೆ ಮಾಡಲಾಗದ ದ್ವಿದಳ ಧಾನ್ಯ ಎಂದು ಕರೆಯುತ್ತಾರೆ. ಅದು ಏಕೆ ಎಂದು ಗೊತ್ತೇ? ಕೆಲವೊಮ್ಮ ಗಿಡ ಸೊರ ಗಿದೆ, ಹಸಿರಿಲ್ಲ ಎನ್ನುವ ಕಡೆ ಉತ್ತಮವಾದ ಕಾಯಿಗಳಿರುತ್ತವೆ. ಗಿಡ ಸೊಗಸಾಗಿದೆ, ಹಸಿರಾಗಿದೆ ಎಂದರೆ ಅದರಲ್ಲಿ ಕಾಯಿಗಳೇ ಇರದಿರಬಹುದು.

ಹಾಗಂಥ ನೆಲ ಗಡಲೆಯ ಸಹವಾಸ ಬೇಡ ಎನ್ನುವ ತೀರ್ಮಾನಕ್ಕೆ ಬರಬೇಡಿ. ಮೂಲತಃ ದಕ್ಷಿಣ ಅಮೆರಿಕ ಪ್ರಾಂತ್ಯದ ಬ್ರೆಜಿಲ್ ದೇಶ ನೆಲಗಡಲೆ ತವರೂರು. ನೆಲಗಡಲೆ ೧೬ನೇ ಶತಮಾನದಲ್ಲಿ ಭಾರತಕ್ಕೆ ಪರಿಚಯವಾದ ಬೆಳೆ. ಈಗ ಭಾರತದಲ್ಲಿ ೮.೫ ಮಿಲಿಯನ್ ಹೆಕ್ಟೆರ್ ಪ್ರದೇಶದಲ್ಲಿ, ೮.೪ ಮಿಲಿಯನ್ ಟನ್ ನೆಲಗಡಲೆ ಉತ್ಪಾದನೆ ಮಾಡಲಾಗುತ್ತಿದೆ. ವಿಶ್ವದಲ್ಲಿ ೩೩ರಷ್ಟು ವಿಸ್ತೀರ್ಣದೊಂದಿಗೆ ಮೊದಲ ಸ್ಥಾನದಲ್ಲಿದೆ. ಆದರೆ, ಉತ್ಪಾದಕತೆ ಎಕರೆಗೆ ನಾಲ್ಕು ಕ್ವಿಂಟಾಲ್ ಮಾತ್ರ. ನೆಲೆಗಡಲೆ ಬೆಳೆಯ ವಿಸ್ತೀರ್ಣದಲ್ಲಿ ರಾಜ್ಯವಾರು ಪೈಕಿ ಕರ್ನಾಟಕ ಮೂರನೇ ಸ್ಥಾನ ಮತ್ತು ಉತ್ಪಾದಕತೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಸರಾಸರಿ ಹದಿಮೂರು ಕಿ.ಗ್ರಾಂ. ನೆಲಗಡಲೆ ಎಣ್ಣೆ ಸೇವಿಸಬೇಕು. ಆದರೆ ಈಗ ದೇಶದಲ್ಲಿ ಒಬ್ಬ ಮನುಷ್ಯನಿಗೆ ಇದು ೫ ಕಿ.ಗ್ರಾಂ.ನಷ್ಟು ಇದೆ. ನೆಲಗಡಲೆಯಲ್ಲಿ ಶೇ.೪೭ರಿಂದ ೪೯ರಷ್ಟು ಎಣ್ಣೆ ಅಂಶ, ೨೦ರಷ್ಟು ಪ್ರೋಟೀನ್ ಇದೆ. ಹಾಲಿನಲ್ಲಿರುವಷ್ಟು ಪ್ರೋಟೀನ್ ನೆಲಗಡಲೆಯಲ್ಲಿದೆ.

ನೆಲಗಡಲೆಯು ನಿಜವಾಗಿಯೂ ಬಡವರ ಬಾದಾಮಿಯೇ. ಆದರೆ ಬೇಸಿಗೆಯಲ್ಲಿ ಈ ನೆಲಗಡಲೆಯನ್ನು ಬೆಳೆಯುವವರು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ನೆಲಗಡಲೆ ಹುಲುಸಾಗಿ ಬೆಳೆದ ಮೇಲೆ ಇಪ್ಪತ್ತೈದು ದಿನ ನೀರು ಕೊಡಬಾರದು. ಗಿಡ ನೀರಿಲ್ಲದೆ ಒತ್ತಡದಲ್ಲಿರುವಂತೆ ನೋಡಿಕೊಳ್ಳಬೇಕು. ಗಿಡವನ್ನು ಎತ್ತರಕ್ಕೆ ಬೆಳೆಯಲು ಬಿಡಬಾರದು. ನಂತರ ಒಮ್ಮೆಗೆ ನೀರು ಕೊಟ್ಟರೆ ಹುಲುಸಾಗಿ ಹೂ ಅರಳಿ, ಬಾರಂಗಿ ಮಣ್ಣಿನಾಳಕ್ಕೆ ಇಳಿದು ಫಸಲು ಹೆಚ್ಚಾಗುತ್ತದೆ. ಬಿತ್ತನೆಯಾಗಿ, ಮೊಳಕೆಯೊಡೆದ ಇಪ್ಪತ್ತೈದು ದಿನಗಳಲ್ಲಿ ಹೂ ಅರಳುತ್ತದೆ. ನಲವತ್ತು ದಿನಗಳ ಒಳಗೆ ಎಲ್ಲ ಬಗೆಯ ಬೇಸಾಯ ಮುಗಿಸಿ, ಬುಡಕ್ಕೆ ದಪ್ಪನಾದ ಮಣ್ಣು ಏರಿಸಿದರೆ, ಬಾರಂಗಿ ಮಣ್ಣಿಗಿಳಿಯಲು ಸಹಾಯವಾಗುತ್ತದೆ.

ಬೇಸಿಗೆಕಾಲದಲ್ಲಿ ನೆಲಗಡಲೆಯ ಬೆಳೆ ಅವಧಿ ನೂರಾ ಹತ್ತರಿಂದ ನೂರಾ ಇಪ್ಪತ್ತು ದಿನಗಳು ಆಗಬಹುದು. ಏಕೆಂದರೆ ಬೀಜ ಮೊಳಕೆ ಹೊಡೆಯಲು ಹತ್ತರಿಂದ ಹದಿನೈದು ದಿನಗಳು ಬೇಕು. ಈ ಅಂಶ ಗಮನದಲ್ಲಿರಲಿ. ಬೆಳೆ ಅವಧಿಯಲ್ಲಿ ಎಂಟರಿಂದ ಒಂಬತ್ತು ಬಾರಿ ನೀರು ಬೇಕಾಗಬಹುದು. ಹೂ ಅರಳುವ, ಬಾರಂಗಿ ಇಳಿಯುವ ಹಾಗೂ ಕಾಯಿ ತುಂಬುವ ಅವಧಿ ನೀರಾವರಿ ಸಂದಿಗ್ಧ ಹಂತಗಳು. ಈ ಹಂತದಲ್ಲಿ ನೀರಿನ ಕೊರತೆಯಾಗಬಾರದು. ನೆಲಗಡಲೆ ಬೇಸಾಯದಲ್ಲಿ ಒಂದು ಹಂತ ಮುಂದಿರುವ ಸೌರಾಷ್ಟ್ರದ ರೈತರು ನೆಲದಾಳದ ಹನಿನೀರಾವರಿ ಪದ್ಧತಿ ಮೂಲಕ ನೆಲಗಡಲೆ ಬೆಳೆದು ಗರಿಷ್ಟ ಇಳುವರಿ ಪಡೆಯುತ್ತಿದ್ದಾರೆ. ಸುತ್ತಾಮುತ್ತಾ ಕಣ್ಣು ಹಾಯಿಸಿದರೆ, ನಮ್ಮ ನಿಮ್ಮಲ್ಲೂ ವಿಭಿನ್ನವಾಗಿ ನೆಲಗಡಲೆ ಬೆಳೆಯುವವರು ಸಿಗಬಹುದು. ಬೇಸಿಗೆ ನೆಲಗಡಲೆ ಬೆಳೆದು ಮುಂಗಾರಿನ ಅವಧಿಯ ಬೆಳೆಗಿಂತ ಹೆಚ್ಚು ಇಳುವರಿ ಪಡೆಯಬಹುದು. ಕೀಟ ರೋಗದ ಬಾಧೆ ಅಷ್ಟಾಗಿ ಇರಲ್ಲ. ಮತ್ತೇಕೆ ತಡ, ಬೆಳೆದೇ ಬಿಡಿ ನೆಲಗಡಲೆ.

Tags:
error: Content is protected !!