ಸುತ್ತೂರು ನಂಜುಂಡ ನಾಯಕ
ಮಣ್ಣಿನ ಆರೋಗ್ಯ ಹಾಗೂ ರೈತ ಮಿತ್ರ ಎರೆಹುಳುವನ್ನು ಕಾಪಾಡಲು ಕಸದಿಂದ ಗೊಬ್ಬರ ತಯಾರಿಸಿ, ಆ ಮೂಲಕ ತಮ್ಮ ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಂಡಿದ್ದಾರೆ ರೈತ ನಂಜಪ್ಪ.
ವರುಣ ಕ್ಷೇತ್ರದ ಅಳಗಂಚಿಪುರ ಗ್ರಾಮದ ರೈತ ನಂಜಪ್ಪ ತಮ್ಮ ಎರಡು ಎಕರೆ ಕೃಷಿ ಭೂಮಿಯಲ್ಲಿ ಬಾಳೆ, ತೆಂಗು, ಕಬ್ಬು, ಸೌತೆಕಾಯಿ, ಕಲ್ಲಂಗಡಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ತಮ್ಮ ಜಮೀನಿಗೆ ಯಾವುದೇ ರಾಸಾಯನಿಕ ಗಳನ್ನು ಬಳಸದ ನಂಜಪ್ಪ, ಜಮೀನಿನಲ್ಲಿ ವ್ಯರ್ಥವಾಗಿ ಬೀಳುವ ತೆಂಗಿನ ಗರಿ, ಬಾಳೆಪಟ್ಟೆ ಸೇರಿದಂತೆ ಹಲವು ಕಳೆ ವಸ್ತುಗಳನ್ನೇ ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸಿ ಕೃಷಿ ಭೂಮಿಗೆ ಬಳಸಿಕೊಳ್ಳುವ ಮೂಲಕ ಕೃಷಿ ಭೂಮಿಯ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಎರೆಹುಳುಗಳನ್ನೂ ಸಂರಕ್ಷಣೆ ಮಾಡಿಕೊಂಡು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಕಡಿಮೆ ಖರ್ಚಿನಲ್ಲಿ ಒಂದು ಡ್ರಮ್‌ನಲ್ಲಿ ಕಸ ಕಡ್ಡಿಗಳನ್ನು ತುಂಬಿ, ಅದನ್ನು ಕಾಂಪೋಸ್ಟ್ ಗೊಬ್ಬರ ವನ್ನಾಗಿ ಮಾಡಿಕೊಂಡು ಎಲ್ಲ ಬೆಳೆಗಳಿಗೂ ಗೊಬ್ಬರವಾಗಿ ಬಳಸುತ್ತಿದ್ದಾರೆ. ಆ ಮೂಲಕ ಉತ್ತಮ ಇಳುವರಿ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಮೈರಾಡ ಸಂಸ್ಥೆ ಹಾಗೂ ಕೃಷಿ ಇಲಾಖೆಯವರು ನನಗೆ ಕಾಂಪೋಸ್ಟ್ ಗೊಬ್ಬರ ತಯಾರು ಮಾಡುವ ವಿಧಾನದ ಬಗ್ಗೆ ತರಬೇತಿ ನೀಡಿದರು. ಅದರಿಂದ ನಾನು ‘ಕಸದಿಂದ ರಸ’ ಎಂಬ ಮಾತಿನಂತೆ ನಮ್ಮ ತೋಟದಲ್ಲಿ ತೆಂಗಿನ ಗರಿ, ತೆಂಗಿನ ಮಟ್ಟೆ, ಬಾಳೆ ನಾರು ಇತರೆ ತ್ಯಾಜ್ಯ ಪದಾರ್ಥಗಳನ್ನು ಬಳಸಿ ಕೊಂಡು ಜಮೀನಿನಲ್ಲಿಯೇ ಗೊಬ್ಬರ ತಯಾರು ಮಾಡಿಕೊಳ್ಳುತ್ತಿದ್ದೇನೆ. ಈ ಹಿಂದೆ ಅವುಗಳೆಲ್ಲವನ್ನೂ ವ್ಯರ್ಥ ತ್ಯಾಜ್ಯ ಎಂದು ಬೀಸಾಡುತ್ತಿದ್ದೆ. ಈಗ ಅವುಗಳಿಂದಲೇ ನಮ್ಮ ಕೃಷಿ ಭೂಮಿಗೆ ಹೆಚ್ಚಿನ ಉಪಯೋಗ ಎಂಬುದನ್ನು ತಿಳಿದು ಅವುಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸಿಕೊಳ್ಳುತ್ತಿದ್ದೇನೆ. ಇದರ ಬಳಕೆಯಿಂದ ನಮ್ಮ ಭೂಮಿ ಫಲವತ್ತಾಗುವ ಜತೆಗೆ ಭೂಮಿಯಲ್ಲಿರುವ ರೈತ ಮಿತ್ರ ಎರೆಹುಳು ವಿನ ಸಂರಕ್ಷಣೆಯಾಗಲಿದೆ. ಭೂಮಿಯಲ್ಲಿ ಎರೆಹುಳುಗಳು ಇದ್ದಷ್ಟೂ ನಮ್ಮ ಕೃಷಿ ಭೂಮಿ ಹೆಚ್ಚು ಫಲವತ್ತಾಗಿ ಇರುತ್ತದೆ ಎನ್ನುತ್ತಾರೆ ರೈತ ನಂಜಪ್ಪ.
ರೈತ ನಂಜಪ್ಪ ಈವರೆಗೂ ಅವರ ಕೃಷಿ ಭೂಮಿಗೆ ಯಾವ ರಾಸಾಯನಿಕ ರಸಗೊಬ್ಬರಗಳನ್ನೂ ಬಳಕೆ ಮಾಡಿಲ್ಲ. ಸಂಪೂರ್ಣವಾಗಿ ತಾವೇ ತಯಾರಿಸಿಕೊಂಡ ಸಾವಯವ ಗೊಬ್ಬರವನ್ನು ಬಳಸುತ್ತಿದ್ದು, ಇದರಿಂದಾಗಿ ಅವರು ಬೆಳೆಗಳಿಗೆ ಯಾವುದೇ ಕೀಟ ಬಾಧೆ ಇಲ್ಲ ಎನ್ನುತ್ತಾರೆ. ಜತೆಗೆ ಇಳುವರಿಯೂ ಉತ್ತಮವಾಗಿದ್ದು, ಉತ್ತಮ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಕಸದಿಂದ ರಸ ಮಾಡಿಕೊಳ್ಳುವ ಈ ಪದ್ಧತಿಯಿಂದಾಗಿ ರೈತ ನಂಜಪ್ಪವರಿಗೆ ಉತ್ತಮ ಬೆಳೆ ಪಡೆಯಲು ಅನುಕೂಲವಾಗಿದೆ. ಕೃಷಿಗೆ ತಗುಲುವ ಖರ್ಚನ್ನೂ ಕಡಿಮೆ ಮಾಡಿದ್ದು, ಕಡಿಮೆ ಖರ್ಚಿನಲ್ಲಿ ಅಽಕ ಲಾಭ ಪಡೆಯಲು ಸಹಕಾರಿಯಾಗಿದೆ. ಕೃಷಿ ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತಮ ಇಳುವರಿ ಬರುತ್ತಿದೆ ಎಂಬುದು ರೈತ ನಂಜಪ್ಪನವರು ಅಭಿಪ್ರಾಯ. ನಂಜಪ್ಪನವರನ್ನು ಸಂಪರ್ಕಿಸಲು ೯೮೮೦೫-೧೦೫೫೨.





