ಡಿ.ಎನ್.ಹರ್ಷ
ಆಹಾರಕ್ಕಾಗಿ ಅಲೆದಾಡುತ್ತಿದ್ದ ಮಾನವ ಈಗ ಹೊಸ ಪ್ರದೇಶಗಳ ಅನ್ವೇಷಣೆಯಲ್ಲಿ ತೊಡಗಿದ್ದಾನೆ. ಈ ಅಲೆದಾಟವೇ ಇಂದು ಪ್ರವಾಸ ಎಂದು ಕರೆಸಿಕೊಳ್ಳುತ್ತಿದೆ. ಇಂತಹ ಪ್ರವಾಸೋದ್ಯಮ ಈಗ ಆದಾಯ ತಂದುಕೊಡುವ ಒಂದು ಉದ್ಯಮವಾಗಿಯೂ ಬದಲಾಗಿದೆ. ಇಂತಹ ಪ್ರವಾಸೋದ್ಯಮವನ್ನು ಕೃಷಿಗೂ ಪರಿಚಯಿಸಿದರೆ ಹೇಗೆ? ಹವಾಮಾನ ವೈಪರೀತ್ಯ, ಮಧ್ಯವರ್ತಿಗಳ ಹಾವಳಿಯಿಂದಾಗಿ ಸಾಕಷ್ಟು ರೈತರು ನಷ್ಟ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ‘ಕೃಷಿ ಪ್ರವಾಸೋದ್ಯಮ‘ ರೈತರಿಗೆ ಪರ್ಯಾಯ ಆದಾಯದ ಮೂಲವಾಗುವ ಎಲ್ಲ ಲಕ್ಷಣಗಳಿವೆ.
ಆಗ್ರೋ ಟೂರಿಸಂ ಎನ್ನುವ ದೇಶಿ ಪದ್ದತಿಯ ಪ್ರವಾಸಕ್ಕೆ ಜನರು ಈಗ ಆಕರ್ಷಿತರಾಗುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಕೃಷಿ ಭೂಮಿಗಳ ಪ್ರವಾಸ ಮಾಡುತ್ತಾ ಹಿಂದಿನ ತಲೆಮಾರುಗಳ ಕೃಷಿ ಬದುಕಿನಿಂದ ಇಂದಿನ ಕೃಷಿ ಪದ್ಧತಿಯವರೆಗೂ ಕಲಿಯಬಹುದಾಗಿದ್ದು, ಮನುಷ್ಯನ ಮೊದಲ ಕಸುಬು ಕೃಷಿ ಎನ್ನುವ ತತ್ವವನ್ನು ಎಲ್ಲರಲ್ಲಿಯೂ ಮೂಡಿಸಲು ಕೃಷಿ ಪ್ರವಾಸೋದ್ಯಮ ಸಹಾಯಕವಾಗಿದೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿರುವ ಎನ್.ಕೇಶವಮೂರ್ತಿಯವರು ದಶಕಗಳ ಹಿಂದೆಯೇ ‘ಕೃಷಿ ಪ್ರವಾಸ’ ಎನ್ನುವ ಕಲ್ಪನೆಯನ್ನು ಹುಟ್ಟು ಹಾಕಿದ್ದರು. ಅದಕ್ಕಾಗಿಯೇ ಕಾರ್ಯಕ್ರಮ ವೊಂದನ್ನೂ ರೂಪಿಸಿ ಹೊಸ ಆಯಾಮ ನೀಡಿದರು. ಇಂದು ಆ ಕೃಷಿ ಪ್ರವಾಸೋದ್ಯಮ ಮತ್ತಷ್ಟು ಬೆಳೆದಿದೆ. ಜನರು ಪ್ರವಾಸ ಕೈಗೊಳ್ಳುವುದನ್ನು ರೂಢಿಸಿಕೊಳ್ಳುತ್ತಿದ್ದಂತೆಯೇ ಸರ್ಕಾರವೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಯಿತು. ಇದರಿಂದ ಪ್ರವಾಸೋದ್ಯಮ ಇಲಾಖೆಯೂ ಅಭಿವೃದ್ಧಿ ಹೊಂದಿತು. ಈಗ ಇಲಾಖೆಯ ಕೃಷಿ ಪ್ರವಾಸೋದ್ಯಮವನ್ನು ಪರಿಚಯಿಸಲು ಮುಂದಾಗಿದೆ.
ಹೋಂ-ಸ್ಟೇಗಳು ಈ ಕೃಷಿ ಪ್ರವಾಸೋದ್ಯಮದ ಒಂದು ಭಾಗ. ಕೃಷಿ ಪ್ರವಾಸೋದ್ಯಮದಲ್ಲಿ ರೈತ, ಆತನ ಕುಟುಂಬ ಹಾಗೂ ಆತನ ಕೃಷಿ ಜಮೀನು ಪ್ರಧಾನವಾಗಿರುತ್ತದೆ. ರೈತನ ಕುಟುಂಬ ಜಮೀನಿನಲ್ಲಿಯೇ ವಾಸವಿರಬೇಕು. ಬಂದಂತಹ ಅತಿಥಿಗಳಿಗೆ ರೈತನ ಮನೆಯಲ್ಲಿಯೇ ಆಹಾರ ತಯಾರಾಗಬೇಕು. ಅದೂ ಸ್ಥಳೀಯ ಸೊಗಡಿನ ಆಹಾರವೇ ಆಗಿರಬೇಕು. ಬಂದಂತಹ ಅತಿಥಿಗಳು ಉಳಿಯಲು, ಉತ್ತಮ ಸೌಲಭ್ಯ ಇರುವ ಕೊಠಡಿಗಳನ್ನು ನಿರ್ಮಿಸಬೇಕು. ಜಮೀನಿನಲ್ಲಿ ಸಮಗ್ರ ಕೃಷಿ ಇರಬೇಕು. ಬಂದಂತಹ ಅತಿಥಿಗಳು ಹಾಲು ಕರೆಯುವುದು, ಕೊಟ್ಟಿಗೆ ನಿರ್ವಹಣೆ, ಜಮೀನಿನ ಕಟ್ಟೆಯಲ್ಲಿ ರಾಸುಗಳ ಮೈ ತೊಳೆಯುವುದು, ಮರ ಹತ್ತುವುದು, ತೆಂಗಿನಕಾಯಿ ಕೆಡಹುವುದು, ಬೆಳೆಗೆಗೊಬ್ಬರ ಹಾಕುವುದು, ಸಸಿ ನಾಟಿ, ಔಷಧ ಸಿಂಪಡಣೆ ಹೀಗೆ ಹತ್ತು ಹಲವು ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳು ವಂತಿರಬೇಕು. ಇದರೊಂದಿಗೆ ಸಮೀಪದ ಪ್ರವಾಸಿ ತಾಣಗಳಿಗೆ ಅತಿಥಿಗಳನ್ನು ಕರೆದುಕೊಂಡು ಹೋಗಬಹುದು. ಹತ್ತಿರದ ಜಾಗಗಳಿಗೆ ಎತ್ತಿನ ಗಾಡಿಯಲ್ಲಿ ಸಂಚಾರ ಮಾಡಿಸಬಹುದು. ಗ್ರಾಮೀಣ ಆಟಗಳಾದ ಚಿನ್ನಿ ದಾಂಡು, ಲಗೋರಿ, ಕೊಕ್ಕೆ ಕೋಲು, ಉಯ್ಯಾಲೆ, ಮರಕೋತಿ ಆಟ ಆಡಿಸಬಹುದು. ಹೆಣ್ಣುಮಕ್ಕಳಿಗೆ ಚೌಕಾಬಾರ, ಚೆನ್ನೆಮಣೆ, ಹುಲಿಕಲ್ಲು, ಕುಂಟೇಬಿಲ್ಲೆ ಆಡಿಸಬಹುದು. ಸ್ಥಳೀಯ ಆಹಾರದ ಜತೆ ಸ್ಥಳೀಯ ಕಲೆಗಳನ್ನೂ ಪೋಷಿಸುವುದು ಕೃಷಿ ಪ್ರವಾಸೋದ್ಯಮದ ಮೂಲ ಉದ್ದೇಶವಾಗಿರಬೇಕು. ಇದರೊಟ್ಟಿಗೆ ಜನಪದ ಕಲೆಯ ಪ್ರದರ್ಶನಕ್ಕೂ ವೇದಿಕೆ ಇರಬೇಕು. ಸೋಬಾನೆ, ಜನಪದ ನೃತ್ಯ, ಕೋಲಾಟ ಹೀಗೆ ಸ್ಥಳೀಯ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಆ ಮೂಲಕ ಅತಿಥಿಗಳಿಗೆ ರೈತಾಪಿ ಜೀವನವನ್ನು ಅರ್ಥ ಮಾಡಿಸಬೇಕು.
ಕೃಷಿ ಪ್ರವಾಸೋದ್ಯಮದಿಂದ ರೈತನ ಸಂಪೂರ್ಣ ಕುಟುಂಬ ಜಮೀನಿನಲ್ಲಿಯೇ ನೆಲೆಸುವಂತಾಗುತ್ತದೆ. ಹಸು, ಕುರಿ, ಕೋಳಿ, ಗಿಡ ಮರಗಳಿಂದ ಜೀವ ಹಾಗೂ ಸಸ್ಯ ವೈವಿಧ್ಯ ಸೃಷ್ಟಿಯಾಗುತ್ತದೆ. ರೈತನ ಆದಾಯವೂ ಹೆಚ್ಚಾಗಲಿದ್ದು, ರೈತಾಪಿ ಕುಟುಂಬದ ಯುವಕರಿಂದ ಹಿಡಿದು ವೃದ್ಧರವರೆಗೂ ಕೆಲಸ ಸಿಗಲಿದೆ. ಇದರೊಂದಿಗೆ ಬರುವ ಪ್ರವಾಸಿಗಳಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ್ನು ನೇರವಾಗಿ ಮಾರಾಟ ಮಾಡಬಹುದು. ಇದರಿಂದ ಮಾರುಕಟ್ಟೆಯು ಸೃಷ್ಟಿಯಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಪ್ರತಿ ಕೃಷಿ ಕುಟುಂಬವೂ ಕೃಷಿ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡರೆ ಕೃಷಿ ಬದುಕು ಹೊಸ ಆಯಾಮದತ್ತ ಹೊರಳಲಿದೆ