ಕಳೆದ ವರ್ಷ ತೀರಾ ಬರಗಾಲದ ಪರಿಸ್ಥಿತಿಯಿಂದಾಗಿ ಕೃಷಿ ಭೂಮಿಗಿರಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿತ್ತು. ರಾಜ್ಯ ಸರ್ಕಾರ ಇನ್ನೂರಕ್ಕೂ ಅನೇಕ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಗುರುತಿಸಿತ್ತು. ಆದರೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಕೃಷಿ ಚುಟುವಟಿಕೆಗಳಿಗೆ ಪೂರವಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಬಾರಿ ಸುರಿದ ಉತ್ತಮ ಮಳೆಯನ್ನೇ ಆಶ್ರಯಿಸಿ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸೌತೆಕಾಯಿ, ಬೀನಿಸ್, ಮೆಣಸಿನಕಾಯಿ ಹಾಗೂ ಇತರೆ ತರಕಾರಿಗಳನ್ನು ಬೆಳೆದು ಮಾದರಿ ಅನಿಸಿಕೊಂಡಿದ್ದಾರೆ ವರುಣ ಕ್ಷೇತ್ರದ ಕುಪ್ಪರವಳ್ಳಿ ಗ್ರಾಮದ ರೈತ ಮಲ್ಲೇಶಗೌಡ.
ಈ ಬಾರಿ ಉತ್ತಮ ಮಳೆಯಾಗಿದ್ದು, ನೀರು ಸಮೃದ್ಧಿಯಾಗಿ ಕೃಷಿ ಭೂಮಿಗಳಿಗೆ ಪೂರೈಕೆಯಾಗಿದೆ. ಅಂತರ್ಜಲದ ಮಟ್ಟವೂ ಹೆಚ್ಚಾಗಿದ್ದು, ರೈತರ ಬೆಳೆಗಳಿಗೆ ಬೇಕಾಗುವಷ್ಟು ನೀರು ದೊರೆತ ಪರಿಣಾಮ ರೈತರು ಉತ್ತಮ ಬೆಳೆಗಳನ್ನು ಬೆಳೆದು, ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಬದುಕು ರೂಪಿಸಿಕೊಂಡಿದ್ದಾರೆ. ಈ ಬಾರಿ ಬಹುತೇಕ ಬೆಳೆಗಳು ಯಾವುದೇ ನಷ್ಟವಾಗದಂತೆ ಬೆಳೆದಿವೆ ಎನ್ನುತ್ತಾರೆ ರೈತ ಕುಪ್ಪರವಳ್ಳಿಯ ಮಲ್ಲೇಶಗೌಡ. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸೌತೆ ಕಾಯಿ, ಬೀನ್ಸ್, ಮೆಣಸಿನಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಮಳೆಯ ಆಶ್ರಯದಲ್ಲಿ ಬೆಳೆದಿರುವ ರೈತ ಮಲ್ಲೇಶಗೌಡ ಸ್ವತಃ ತಾವೇ ಹತ್ತಿರದ ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ಸಾಗಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಉತ್ತಮ ಲಾಭವನ್ನು ಪಡೆದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಉತ್ತಮ ಮಳೆಯಾಗದ ಪರಿಣಾಮ ಹಾಕಿದ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡಲಿಲ್ಲ. ಜಮೀನಿನಲ್ಲಿ ಕೊಳವೆ ಬಾವಿಯೂ ಇಲ್ಲದ ಪರಿಣಾಮ ಕೃಷಿ ಬೇಕಾಗುವಷ್ಟು ನೀರು ಪೂರೈಕೆಯಾಗದೆ ಕಳೆದ ಎರಡು ವರ್ಷಗಳಿಂದ ನಷ್ಟದಲ್ಲಿಯೇ ಕೃಷಿ ಮಾಡಿದ್ದರು. ಇದರಿಂದಾಗಿ ಮಲ್ಲೇಶಗೌಡರವರ ಆರ್ಥಿಕ ಮಟ್ಟ ಕುಂಠಿತವಾಗಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಿರುವುದು ಮಲ್ಲೇಶಗೌಡರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹಾಕಿದ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡಿದ್ದು, ಉತ್ತಮ ಲಾಭ ಗಳಿಸಿದ್ದಾರೆ.
ನಾನು ಸಂಪೂರ್ಣ ಮಳೆ ಆಶ್ರಯದಲ್ಲಿ ಕೃಷಿ ಮಾಡುವುದು. ಆದರೆ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆಯಾಗಿರಲಿಲ್ಲ. ಅಲ್ಲದೆ ಕಳೆದ ಬಾರಿ ತೀವ್ರ ಬರಗಾಲವಿದ್ದ ಪರಿಣಾಮ ಕೃಷಿ ಭೂಮಿಗಳೆಲ್ಲ ಬರಡಾಗಿ ಹಾಕಿದ ಬೆಳೆ ಕೈ ಸೇರಲಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಾಗಿದೆ. ಅಂತರ್ಜಲ ಮಟ್ಟವೂ ಹೆಚ್ಚಿದೆ. ಅಲ್ಲದೆ ಕೃಷಿ ಭೂಮಿ ಬೇಕಾಗುವಷ್ಟು ನೀರು ಪೂರೈಕೆಯಾಗಿದ್ದು, ಅಂದುಕೊಂಡಂತೆ ಬೆಳೆ ಬಂದು ಲಾಭ ದೊರಕಿದೆ.
-ಮಲ್ಲೇಶಗೌಡ, ರೈತ





