ಡಿ.ಎನ್.ಹರ್ಷ
ಜನರಿಗೆ ಕುಡಿಯುವ ನೀರು, ಕೃಷಿ ಭೂಮಿಗೆ ನೀರು ಪೂರೈಸುವ ಸಲುವಾಗಿ ಸರ್ಕಾರ ಹರಿಯುವ ನದಿಗೆ ಜಲಾ ಶಯಗಳನ್ನು ನಿರ್ಮಿಸುತ್ತದೆ. ಈ ಜಲಾಶಯಗಳು ಸಾವಿರಾರು ಜನರಿಗೆ ಅನುಕೂಲವಾದರೂ ‘ದೀಪದ ಕೆಳಗೆ ಕತ್ತಲು ಎಂಬಂತೆ ಸಾವಿರಾರು ಕುಟುಂಬಗಳು ಹುಟ್ಟೂರನ್ನು ತೊರೆದು ಜಮೀನು, ಮನೆ-ಮಠ ಗಳನ್ನು ಬಿಟ್ಟು ಬೇರೆಡೆ ಸ್ಥಳಾಂತರಗೊಳ್ಳಬೇಕು
ಎಂಬುದು ನೋವಿನ ಸಂಗತಿ.
ಹೀಗೆ ಸ್ಥಳಾಂತರಗೊಂಡ ಪ್ರದೇಶಗಳಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಸಮೀಪವಿರುವ ಕಿತ್ತೂರು (ಈಗಿನ ತೆರಣಿ ಮುಂಟಿ) ಕೂಡ ಒಂದು. ಸ್ಥಳಾಂತರ ಗೊಂಡರೂ ಕೃಷಿ ಕಾಯಕವನ್ನು ಬಿಡದೆ ಮಾಡಿ ಸಾಧನೆಯ ಹಾದಿಯಲ್ಲಿದ್ದಾರೆ.
ತೆರಣಿಮುಂಟಿ ಗ್ರಾಮದ ಕೆ.ವಿ.ಭಾಸ್ಕರ್ ಮೂಲತಃ ಇಲ್ಲಿನ ರವಿರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕರು. ಕಪಿಲಾ ನದಿಗೆ ಅಡ್ಡಲಾಗಿ ಬೀಚನಹಳ್ಳಿ ಸಮೀಪ ಕಬಿನಿ ಜಲಾಶಯ ನಿರ್ಮಿಸಿದಾಗ ಮನೆ, ತೋಟ ಕಳೆದುಕೊಂಡವರಲ್ಲಿ ಇವರೂ ಒಬ್ಬರು. ಈಗ ಅರ್ಚಕ ವೃತ್ತಿಯ ಜತೆಗೆ ತಮ್ಮ 6 ಎಕರೆ ಜಮೀನಿನಲ್ಲಿ ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ಹೆಚ್ಚಾಗಿ ರಾಗಿ, ಜೋಳ ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುವ ಜತೆಗೆ ವಾಣಿಜ್ಯ ಬೆಳೆ ಹತ್ತಿ ಜತೆಗೆ ಕರಿ ಮುಂಡಗ, ಬಿಳಿ ಮುಂಡಗ ಎನ್ನುವ ನಾಟಿ ತಳಿಯ ರಾಗಿಯನ್ನೂ ಬೆಳೆಯುತ್ತಿದ್ದಾರೆ. ಹೈಬ್ರಿಡ್ ತಳಿಯ ರಾಗಿಗಿಂತ ನಾಟಿ ತಳಿಯ ರಾಗಿಯ ಮುದ್ದೆ ಬೇಗ ಹಳಸುವುದಿಲ್ಲ. ಹೀಗಾಗಿ ಅದನ್ನು ಸೇವಿಸು ವುದರಿಂದ ದೇಹಕ್ಕೆ ತಂಪು, ರಟ್ಟೆಗೆ ಬಲ. ಆ ಕಾರಣದಿಂದಲೇ ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಿಲಿನಲ್ಲಿ ದುಡಿಯಬಹುದು ಎನ್ನುತ್ತಾರೆ ಭಾಸ್ಕರ್.
ಸಾಸಿವೆ, ನವಣೆ, ಸಜ್ಜೆ ಮುಂತಾದ ಕಿರು ಧಾನ್ಯಗಳನ್ನೂ ಬೆಳೆಯುವ ಭಾಸ್ಮರ್‌ರವರಿಗೆ ನಾಟಿ ಹಸುಗಳು ಎಂದರೆ ಬಹಳ ಪ್ರೀತಿ. ತಮ್ಮ ಮನೆಯಲ್ಲಿಯೇ 5-6 ಹಸುಗಳನ್ನು ಸಾಕಿಕೊಂಡಿರುವ ಇವರು, ಮನೆಗೆ ಬೇಕಾದ ಹಾಲು, ಮೊಸರು, ತುಪ್ಪ, ಬೆಣ್ಣೆ ಜತೆಗೆ ಭೂಮಿಗೆ ಬೇಕಾದ ಸಾವಯವ ಗೊಬ್ಬರವನ್ನೂ ಪಡೆದುಕೊಳ್ಳುತ್ತಾರೆ.
ಪಶು ಸಂರಕ್ಷಣೆಗಾಗಿ ವಿನೂತನ ಪದ್ಧತಿ ಯೊಂದನ್ನು ಭಾಸ್ಟರ್ ರೂಢಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಹೆಣ್ಣು ಕರುವಿನ ಜನನ ವಾದರೆ ಅದನ್ನು ಕೆಲವು ತಿಂಗಳು ಬೆಳೆಸಿ, ನಂತರ ಸಾಕುವ ಇಚ್ಛೆ ಇರುವವರಿಗೆ ಕೊಡುತ್ತಾರೆ. ಅವರು ಮುಂದೆ, ಕರು ಹಸುವಾಗಿ, ಅದು ಹಾಕಿದ ಹೆಣ್ಣು ಕರುವನ್ನು ಭಾಸ್ಟರ್‌ರವರಿಗೆ ವಾಪಸ್ಸು ಕೊಡಬೇಕು. ಆ ಕರು ಬೇರೆ ಸಾಕುವ ವರಿಗೆ ಕೊಡಲ್ಪಡುತ್ತದೆ. ಹೀಗೆ ಹಸುವಿನ ಸಂತತಿ ಮುಂದುವರಿಸುವುದು ಭಾಸ್ಕರ್ ರ ಪ್ರಯತ್ನವಾಗಿದೆ.
ಕೃಷಿಕರಾದ ನಾವು ನಮ್ಮ ಸೋಮಾರಿತನ ದಿಂದ ಎತ್ತು, ಹಸು, ಎಮ್ಮೆಗಳನ್ನು ಸಾಕುವುದನ್ನು ಕಡಿಮೆ ಮಾಡಿದ್ದೇವೆ. ಬೆಳೆ ಬೆಳೆಯಲು ಹೆಚ್ಚು ಹಣ ತೆತ್ತು ಸುಲಭವಾಗಿ ಎರಚಬಹುದು ಅಂತಾ ರಾಸಾಯನಿಕ ಗೊಬ್ಬರ ತಂದು ಭೂಮಿಗೆ ಹಾಕಿ ಹಾಳು ಮಾಡುತ್ತಿದ್ದೇವೆ. ಬೆಳೆದು ತಿನ್ನುತ್ತಿದ್ದ ರೈತರಾದ ನಾವು ಈಗ ಸರ್ಕಾರದಿಂದ ಅಕ್ಕಿ ಪಡೆಯುವ ಸ್ಥಿತಿಗೆ ಬಂದಿದ್ದೇವೆ. ಅನ್ನ ಕೊಡುತ್ತಿದ್ದ ಕೈ ಬೇಡುವ ಸ್ಥಿತಿ ತಲುಪುತ್ತಿರುವುದಕ್ಕೆ ಗೋ ಸಾಕಣೆಯನ್ನು ಮರೆತಿರುವುದೇ ಕಾರಣ ಎಂಬ ಅಭಿಪ್ರಾಯವನ್ನು ಭಾಸ್ಕರ್ ಹಂಚಿಕೊಳ್ಳುತ್ತಾರೆ.
ಹಲವು ವರ್ಷಗಳ ಹಿಂದೆ ಮಾಡಿದ ಗೋಬರ್ ಗ್ಯಾಸ್ ಘಟಕ ಈಗಲೂ ಚೆನ್ನಾಗಿ ಕಾರ್ಯನಿರ್ವಸುತ್ತಿದೆ. ಅಲ್ಲದೆ ಈಗಲೂ ಮರದ ಗಾಡಿ ಕಟ್ಟಿಕೊಂಡು ಮೇಲೆ ನೀರು ತುಂಬುವ ಪೀಪಾಯಿ ಇಟ್ಟುಕೊಂಡು, ಬೆಳಿಗ್ಗೆಯೇ ಕಪಿಲ ನದಿಗೆ ಹೋಗಿ ನೀರು ತರುತ್ತಾರೆ.
ಪುರಾಣ ಪ್ರಸಿದ್ಧ ರವಿರಾಮೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿರುವ ಇವರ ನೇತೃತ್ವದಲ್ಲಿ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ವೇಳೆ ಸಂಪೂರ್ಣ ಪೂಜಾ ವಿಧಿ ವಿಧಾನಗಳು ಜರುಗುವುದು ವಿಶೇಷ.
ಕೃಷಿಯಲ್ಲಿ ಸುಸ್ಥಿರ ಸಮಗ್ರ ಕೃಷಿಯನ್ನು ರೂಢಿಸಿಕೊಂಡಿರುವ ಇವರಿಗೆ ಪತ್ನಿ ನಾಗರತ್ನ ರವರ ಸಹಕಾರವೂ ಇದೆ. ಬಾನುಲಿ ಕೃಷಿಕರ ಬಳಗದ ಮುಂಚೂಣಿ ಸದಸ್ಯರಾಗಿರುವ ಭಾಸ್ಟರ್ ಉತ್ತಮ ನಿರೂಪಕರಾಗಿದ್ದು, ನಿತ್ಯ ಜಾಲತಾಣಗಳಲ್ಲಿ ಕೃಷಿ ಸಂಬಂಧಿತ ಉಪಯುಕ್ತ ಮಾಹಿತಿ ಹಂಚಿಕೊಳ್ಳುವ ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.
ಇವರನ್ನು ಭೇಟಿ ಮಾಡಲು ಮೊಬೈಲ್ ಸಂಖ್ಯೆ 9945616044ಗೆ ಸಂಪರ್ಕಿಸಬಹುದು.