ಜಿ.ಕೃಷ್ಣ ಪ್ರಸಾದ್
ಸುಮ್ಮನೇ ube ಎಂದು ಗೂಗಲ್ ಮಾಡಿ ನೋಡಿ. ಆಕರ್ಷಕ ನೇರಳೆ ಬಣ್ಣದ ಗೆಡ್ಡೆ ಮತ್ತು ಅದರ ಬಳಕೆಯ ನೂರಾರು ರೂಪ ಗಳು ಮೊಬೈಲ್ ಪರದೆಯ ಮೇಲೆ ಮೂಡುತ್ತವೆ. ‘ಇದ್ಯಾವುದೋ ವಿದೇಶಿ ಗೆಡ್ಡೆ ಇರಬೇಕು’ ಎಂದು ನೀವು ಭಾವಿಸಿದರೆ ತಪ್ಪು. ಇದು ನಮ್ಮದೇ ಬಂಡೀಪುರ, ನಾಗರಹೊಳೆ ಕಾಡಿನ ಹಾಡಿಗಳಲ್ಲಿ ಬೆಳೆಯುವ ‘ನೀಲಿ ಕಾಚಲ್’. ಇಂಗ್ಲಿಷಿನಲ್ಲಿ ಪರ್ಪಲ್ ಯಾಮ್; ಫಿಲಿಫೈನ್‌ನವರಿಗೆ ‘ಉಬೆ’. ಮೈಸೂರಿನವರು ಮರೆತಿರುವ ಈ ನೀಲಿ ಕಾಚಲ್ ಸುತ್ತ ಅಮೆರಿಕ, ಫಿಲಿಫೈನ್ಸ್‌ನಲ್ಲಿ ದೊಡ್ಡ ಉದ್ಯಮಗಳೇ ತಲೆ ಎತ್ತಿ ನಿಂತಿವೆ.
ಏನಿದು ಪರ್ಪಲ್ ಯಾಮ್? : ಪರ್ಪಲ್ ಯಾಮ್ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುವ ಒಂದು ಜಾತಿಯ ಕಂದಮೂಲ. ಡಯೋಸ್ಕೋರಿಯಾ ಅಲಾಟ ಇದರ ವೈಜ್ಞಾನಿಕ ಹೆಸರು. ಕರ್ನಾಟಕದ ಸೋಲಿಗ, ಇರುಳಿಗ, ಬೆಟ್ಟ ಕುರುಬ ಮತ್ತು ಜೇನು ಕುರುಬರು ಇದನ್ನು ಆಹಾರಕ್ಕಾಗಿ ಬೆಳೆಸುತ್ತಾರೆ. ಹೆಗ್ಗಡದೇವನಕೋಟೆ ಮತ್ತು ಹುಣಸೂರು ತಾಲ್ಲೂಕಿನ ಕಾಡು ಹಳ್ಳಿಗಳಲ್ಲಿ ಇದರ ಕೃಷಿ ಇದೆ. ಮಾನಂದವಾಡಿ ರಸ್ತೆಯ ಗುಂಡ್ರೆ, ಆನೆಮಾಳ, ಮಚ್ಚೂರು ಹಾಡಿಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಕೇರಳದಲ್ಲಿ ಪರ್ಪಲ್ ಯಾಮ್‌ಗೆ ಬಹು ಬೇಡಿಕೆ. ನೈಸರ್ಗಿಕವಾಗಿ ಬೆಳೆದ ನೀಲಿ ಕಾಚಲ್ ಕೇರಳಿಗರ ಪಾಲಾಗುತ್ತದೆ. ಮೈಸೂರಿನ ತರಕಾರಿ ಮಾರುಕಟ್ಟೆಯಲ್ಲಿ ನಿಮಗೆ ಇದು ಕಾಣಸಿಗದು. ಮುಂಗಾರಿನ ಮೊದಲ ಮಳೆಗೆ ಮೊಳಕೆ ಕಾಣಿಸಿ ಕೊಳ್ಳುತ್ತವೆ. ನೆಟ್ಟ ಒಂದೆರೆಡು ದಿನಗಳಲ್ಲೇ ಬಳ್ಳಿ ಹರಿಯಲಾರಂಭಿಸುತ್ತದೆ. ಅಗಲವಾದ ಎಲೆಗಳ ಇದರ ಬಳ್ಳಿ ನೋಡುವುದೇ ಒಂದು ಸೊಗಸು. ಅಲಂಕಾರಿಕ ಸಸ್ಯವಾಗಿ ನಗರಗಳ ಮನೆಯಂಗಳದಲ್ಲೂ ಬೆಳೆಸಬಹುದು. ಮಳೆಗಾಲದ ಆರಂಭದಲ್ಲಿ ಸಣ್ಣ ಗುಂಡಿ ಮಾಡಿ ಸಾಕಷ್ಟು ಗೊಬ್ಬರ ಕೊಟ್ಟು ನೆಟ್ಟರೆ ಡಿಸೆಂಬರ್‌ಗೆ ಕೊಯಿಲಿಗೆ ಸಿದ್ಧ. ಸರಿಯಾದ ಆರೈಕೆ ಸಿಕ್ಕರೆ ಬುಟ್ಟಿ ತುಂಬುವಷ್ಟು ಬೇರು, ಗೆಡ್ಡೆಗಳು ಸಿಗುತ್ತವೆ. ಇದು ಹೆಚ್ಚಿನ ಆರೈಕೆ ಮತ್ತು ಸಾಗುವಳಿ ಖರ್ಚು ಬೇಡದ ಬೆಳೆ. ರೋಗ, ಕೀಟಗಳ ಕೋಟಲೆಯಿಲ್ಲ.
ಕಂದು ಬಣ್ಣದ ಸಿಪ್ಪೆಯ ಗೆಡ್ಡೆಗಳನ್ನು ಕತ್ತರಿಸಿದರೆ ನೇರಳೆ ಬಣ್ಣದ ತಿರುಳು ಕಾಣುತ್ತದೆ. ಸಿಪ್ಪೆ ಸುಲಿದು, ತಿರುಳಿನ ಭಾಗವನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿ ಅಡುಗೆಗೆ ಬಳಸುತ್ತಾರೆ. ಬೇಯಿಸಿದ ಯಾಮ್, ಆಲೂಗೆಡ್ಡೆಯಷ್ಟೇ ಮೃದು. ಬೇಯಿಸಿದ ಪರ್ಪಲ್ ಯಾಮ್ ಗಾಢ ನೇರಳೆ ಬಣ್ಣಕ್ಕಿರುತ್ತದೆ; ನೋಡಲು ಬಹು ಆಕರ್ಷಕ. ಇದರ ಪರ್ಪಲ್ ಪುಡಿಯನ್ನು ಅನ್ನ, ಕೇಕ್, ಕ್ಯಾಂಡಿ, ಜಾಮ್‌ಗಳಿಗೆ ನೈಸರ್ಗಿಕ ಬಣ್ಣ ಕೊಡಲು ಬಳಸುತ್ತಾರೆ. ಇದರ ಐಸ್ ಕ್ರೀಂ ಬಹುರುಚಿ. ಪಿಷ್ಟ, ವಿಟಮಿನ್, ಖನಿಜಾಂಶ ಮತ್ತು ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾದ ಪರ್ಪಲ್ ಯಾಮ್ ಆರೋಗ್ಯಕರ ನಿಸರ್ಗದತ್ತ ಆಹಾರ. ಜೀರ್ಣನಾಳವನ್ನು ಶುದ್ದವಾಗಿಡುವ, ಅಸ್ತಮಾ ರೋಗ ನಿವಾರಕ ಗುಣ ಹೊಂದಿದೆ.
ಮರಳಿ ಬಂತು ನೀಲಿ ಕಾಚಲ್: ಸಹಜ ಸಮೃದ್ದ- ಸಾವಯವ ಕೃಷಿಕರ ಬಳಗ, ಮೈಸೂರಿನಲ್ಲಿ ‘ಗೆಡ್ಡೆ ಗೆಣಸು ಮೇಳ’ಗಳನ್ನು ಆರಂಭಿಸಿದ ನಂತರ ನಾಗರಹೊಳೆಯ ನೀಲಿ ಕಾಚಲ್ ಮುಖ್ಯ ವಾಹಿನಿಗೆ ಬಂತು. ‘ಮೊದಲೆಲ್ಲಾ ಕೇರಳದ ದಲ್ಲಾಳಿಗರು ಕೆಜಿಗೆ ೨೦-೩೦ ರೂಪಾಯಿ ಕೊಡುತ್ತಿದ್ದರು. ಈಗ ಮೇಳಗಳಲ್ಲಿ ೧೦೦ ರೂಪಾಯಿಗೆ ಮಾರ್ತಿದ್ದೀವಿ. ತುಂಬಾ ಜನ ಬೆಳೆಸೋಕೆ ಮುಂದೆ ಬರ್ತಿದ್ದಾರೆ’ ಎಂದು ಮಚ್ಚೂರು ಹಾಡಿಯ ಪಾರ್ವತಿ ಖುಷಿಯಿಂದ ಹೇಳುತ್ತಾರೆ.
ಅಂತರಸಂತೆಯ ಹುಲಿಕಾಡು ರೈತ ಉತ್ಪಾದಕರ ಕಂಪೆನಿ ನೀಲಿ ಕಾಚಲ್ ಗೆಡ್ಡೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ‘ಪ್ರತಿ ವರ್ಷ ಒಂದರಿಂದ ಎರಡು ಟನ್ ನೀಲಿ ಕಾಚಲ್ ಮಾರಾಟವಾಗುತ್ತದೆ. ಬೀಜಕ್ಕೆ ಕೊಳ್ಳುವವರೇ ಹೆಚ್ಚು’ ಎಂದು ರೈತ ಕಂಪೆನಿಯ ಕೋಮಲ್ ಕುಮಾರ್ ಹೇಳುತ್ತಾರೆ. ಹಾಸನದ ಕೃಷಿ ಕಾಲೇಜಿನ ಆಹಾರ ತಂತ್ರಜ್ಞಾನ ವಿಭಾಗದ ಪ್ರಿಯಾಂಕ, ಆದ್ಯ ಮತ್ತು ತನುಶ್ರೀ ನೀಲಿ ಕಾಚಲ್‌ನ ದೋಸೆ ಮಿಕ್ಸ್, ಬಣ್ಣದ ಪೌಡರ್, ಜಾಮ್, ಹಪ್ಪಳ ಮತ್ತು ಚಟ್ನಿಪುಡಿ ತಯಾರಿಸಿದ್ದಾರೆ. ಈ ಮೌಲ್ಯವರ್ಧಿತ ಪದಾರ್ಥಗಳನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆದಿದೆ.
ಸಹಜ ಸೀಡ್ಸ್ ರೈತ ಕಂಪೆನಿಯು, ಪರ್ಪಲ್ ಯಾಮ್‌ನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವವರ ಬಳಿ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದೆ. ಆಸಕ್ತರು ಮಧುರವರ ದೂರವಾಣಿ ಸಂಖ್ಯೆ ೬೩೬೨೧-೮೦೭೪೧ ಸಂಪರ್ಕಿಸಬಹುದು





