ರಾಕಿಂಗ್ ಸ್ಟಾರ್ ಯಶ್.. ಸಿಲ್ಲಿ ಲಲ್ಲಿ ರೀತಿಯ ಧಾರಾವಾಹಿಗಳಲ್ಲಿ ಸಣ್ಣ ಪಾತ್ರ ನಿರ್ವಹಿಸಿ ಬಳಿಕ ತನ್ನ ಪ್ರತಿಭೆಯಿಂದ ಚಲನಚಿತ್ರಗಳಲ್ಲಿ ಸಣ್ಣ ರೋಲ್‌ಗಳನ್ನು ಗಿಟ್ಟಿಸಿಕೊಂಡು ನಾಯಕ ನಟನಾಗಿ ಬಡ್ತಿ ಪೆಡೆದು ಸ್ಟಾರ್ ಆದ ನಟ.
ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಬಣ್ಣದ ಲೋಕಕ್ಕೆ ಕಾಲಿಡುವ ಪ್ರತಿಭೆಗಳನ್ನು ಕೈಬಿಡದ ಕನ್ನಡ ಸಿನಿ ರಸಿಕರು ಯಶ್ ಅವರನ್ನೂ ಸಹ ಮೆಚ್ಚಿಕೊಂಡರು, ಅವರ ಚಿತ್ರಗಳನ್ನು ಒಪ್ಪಿಕೊಂಡರು. ನೋಡ ನೋಡುತ್ತಿದ್ದಂತೆ ಯಶ್ ಕನ್ನಡ ಚಿತ್ರರಂಗದಲ್ಲಿದ್ದ ಬೆರಳೆಣಿಕೆಯಷ್ಟು ಸ್ಟಾರ್ ಹೀರೊಗಳ ಪಟ್ಟಿ ಸೇರಿಬಿಟ್ಟರು.
ಹೀಗೆ ಕನ್ನಡ ಸಿನಿ ರಸಿಕರ ಪಾಲಿಗೆ ರಾಕಿಂಗ್ ಸ್ಟಾರ್ ಆದ ಯಶ್ ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಕೆಜಿಎಫ್ ಚಿತ್ರದ ಯಶಸ್ಸನ್ನು ಕೆಲವರು ಲಕ್ ಎಂದರೆ ಇನ್ನೂ ಕೆಲವರು ಶ್ರಮ ಎಂದು ಕೊಂಡಾಡಿದರು. ಕೆಜಿಎಫ್ ಮಾದರಿಯಲ್ಲಿಯೇ ಬಂದ ಇನ್ನುಳಿದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನೆಲಕಚ್ಚಿದ ಮೇಲೆ ಕೆಜಿಎಫ್ ಗೆದ್ದದ್ದು ಲಕ್‌ನಿಂದ ಎನ್ನುವುದು ಮೂರ್ಖತನವೇ ಸರಿ ಎನ್ನಬಹುದು.
ಇನ್ನು ಕೆಜಿಎಫ್ ಹಿಟ್ ಆದ ಬಳಿಕ ಯಶ್ ಯಾರೆಂದು ಎಲ್ಲರಿಗೂ ತಿಳಿಯಿತು, ಆ ಚಿತ್ರ ಬಾರದೇ ಇದ್ದಿದ್ದರೆ ಆತನ ಹೆಸರು ಬಹುತೇಕರಿಗೆ ತಿಳಿಯುತ್ತಿರಲಿಲ್ಲ ಎಂದು ಇತ್ತೀಚೆಗಷ್ಟೇ ತೆಲುಗು ನಟ ರವಿತೇಜ ಹೇಳಿಕೆಯೊಂದನ್ನು ನೀಡಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ಈ ಸಾಲಿಗೆ ತೆಲುಗು ನಟ ಅಲ್ಲು ಅರ್ಜುನ್ ಅವರ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಸಹ ಸೇರ್ಪಡೆಗೊಂಡಿದ್ದಾರೆ.
ಯುಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಚಿತ್ರಗಳ ಬಜೆಟ್ ನಟರಿಂದ ಹೆಚ್ಚಾಗುತ್ತಿಲ್ಲ, ಹೆಚ್ಚಿನ ಬಜೆಟ್ ಇರುವ ಚಿತ್ರಗಳಲ್ಲಿ ಸ್ಟಾರ್‌ಗಳು ನಟಿಸುತ್ತಿದ್ದಾರೆ ಅಷ್ಟೇ ಎಂದು ಹೇಳಿಕೆಯನ್ನು ನೀಡಿದ ಅಲ್ಲು ಅರವಿಂದ್ ಇದಕ್ಕೆ ಉದಾಹರಣೆಯಾಗಿ ಯಶ್ ಹಾಗೂ ಕೆಜಿಎಫ್ ಚಿತ್ರವನ್ನು ತೆಗೆದುಕೊಂಡಿದ್ದಾರೆ.
“ಕೆಜಿಎಫ್ ಬರುವ ಮುಂಚೆ ಆತ ಎಂತಹ ದೊಡ್ಡ ಸ್ಟಾರ್ ಹೇಳಿ, ಸಿನಿಮಾಗೆ ಹೆಚ್ಚು ಮೊತ್ತ ಹಾಕಿ ನಿರ್ಮಿಸಿದ ಕಾರಣ ಆತ ಸ್ಟಾರ್ ಆದ” ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಯಶ್ ಅಭಿಮಾನಿಗಳು ನಮ್ಮ ನಟ ಸ್ವಂತ ಪ್ರತಿಭೆಯಿಂದ ಬೆಳೆದವರು, ನಿಮ್ಮ ಮಕ್ಕಳ ಹಾಗೆ ನೆಪೋ ಕಿಡ್ ಅಲ್ಲ ಎಂದು ಅಲ್ಲು ಅರವಿಂದ್ ವಿರುದ್ಧ ಟ್ರೋಲ್ ಚಾಟಿ ಬೀಸಿದ್ದಾರೆ.