Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

17 ವರ್ಷಗಳ ಹಿಂದೆ ಚಿತ್ರಿತವಾದ ಉಪೇಂದ್ರ-ರಮ್ಯ ಜೋಡಿಯ ಚಿತ್ರ

ಉಪೇಂದ್ರ ಅಭಿನಯದ ‘ಯುಐ’ ಚಿತ್ರವು ಡಿಸೆಂಬರ್.೨೦ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಉಪೇಂದ್ರ ಅಭಿನಯದ ಹಳೆಯ ಚಿತ್ರವೊಂದು, ಜನವರಿಯಲ್ಲಿ ಬಿಡುಗಡೆ ಆಗುತ್ತಿರುವ ಸುದ್ದಿಯೊಂದು ಕೇಳಿಬಂದಿದೆ.

೨೦೦೭ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಉಪೇಂದ್ರ ಮತ್ತು ರಮ್ಯಾ ಅಭಿನಯದಲ್ಲಿ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಎಂಬ ಚಿತ್ರ ಪ್ರಾರಂಭವಾಗಿತ್ತು. ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸಮ್ಮುಖದಲ್ಲಿ ಈ ಚಿತ್ರವು ಅಶೋಕ ಹೋಟೆಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸೆಟ್ಟೇರಿತ್ತು. ಈ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದರೂ, ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ.

ಆ ಕಾಲಕ್ಕೆ ಅತ್ಯಂತ ದುಬಾರಿ ಬಜೆಟ್‌ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’, ೧೭ ವರ್ಷಗಳನಂತರ ‘ರಕ್ತ ಕಾಶ್ಮೀರ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.

ಆಗ ಅದನ್ನು ಮಕ್ಕಳ ಚಿತ್ರ ಎಂದು ಹೇಳಲಾಗಿತ್ತು. ಈಗ ಅದಕ್ಕೆ ಬೇರೆಯೇ ರೀತಿಯ ಪ್ರಚಾರ ನಡೆದಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇದೇ ಚಿತ್ರದ ಪ್ರಮುಖ ಕಥಾ ಹಂದರವಾಗಿದೆ. ಗಡಿ ಪ್ರದೇಶ ಅಷ್ಟೇ ಅಲ್ಲ. ಬೆಂಗಳೂರಿನಲ್ಲೂ ಉಗ್ರಗಾಮಿಗಳ ಕಾಟವಿದೆ.

ಅದರ ನಿರ್ಮೂಲನೆಗೆ ಸಂಬಂಧಿಸಿದ ಕಥಾವಸ್ತುವನ್ನೂ ಈ ಚಿತ್ರ ಹೊಂದಿದೆ. ಭಯೋತ್ಪಾದನೆ ವಿರುದ್ಧ ಮಕ್ಕಳು ಹೇಗೆ ಹೋರಾಡುತ್ತಾರೆ ಎಂಬ ಕಥೆ ಈ ಚಿತ್ರದಲ್ಲಿದೆ.

ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರೆ ‘ರಕ್ತ ಕಾಶ್ಮೀರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಎಸ್. ರಮೇಶ್ ಸಂಭಾಷಣೆ ಬರೆದರೆ, ಗುರುಕಿರಣ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಉಪೇಂದ್ರ, ರಮ್ಯ, ಪಾರ್ವತಿ ಮಿಲ್ಟನ್, ದೊಡ್ಡಣ್ಣ, ಓಂಪ್ರಕಾಶ್ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tags: