ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಕಾಟೇರ ಚಿತ್ರ ಇದೇ ಡಿಸೆಂಬರ್ ೨೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರ ಮೆಚ್ಚಿರುವ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಈ ಬೆನ್ನಲ್ಲೆ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿ ಕಾಟೇರ ಸಿನಿಮಾ ವೀಕ್ಷಿಸಿದ್ದು, ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದರ್ಶನ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹುಬ್ಬಳ್ಳಿಯಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಇವರಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಸಾಥ್ ನೀಡಿದ್ದಾರೆ. ಸಾಮಾಜಿಕ ಬದ್ಧತೆ, ನಟನೆ ಎಲ್ಲದರ ಬಗ್ಗೆಯೂ ಸಚಿವರು ಮೆಚ್ಚುಗೆಯ ಮಾತುಗಳನ್ನಾಡಿದ್ದು, ದರ್ಶನ್ ಅಭಿಮಾನಿಗಳಿಗೆ ಸಂತಸ ತಂದಿದೆ.
ನಟ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಟೇರ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಸಮಾಜಿಕ ಕಳಕಳಿಯಿರುವ ಸಿನಿಮವಾಗಿದ್ದು, ಚಿತ್ರ ರಸಿಕರು, ರಾಜಕಾರಣಿಗಳು ಎಲ್ಲರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಪ್ರಲ್ಹಾದ್ ಜೋಶಿ ಟ್ವೀಟ್ ನಲ್ಲೇನಿದೆ?
ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಕ್‌ಲೈನ್ ವೆಂಕಟೇಶ ಅವರ ನಿರ್ಮಾಣದಲ್ಲಿ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಾಟೇರ ಚಲನಚಿತ್ರವನ್ನು ಹುಬ್ಬಳ್ಳಿಯಲ್ಲಿ ವೀಕ್ಷಿಸಿದೆನು.
ರೈತರಿಗೆ ಪ್ರತಿಯೊಬ್ಬರೂ ನೀಡಬೇಕಾದ ಪ್ರಾಮುಖ್ಯತೆ, ಸಮಾಜದಲ್ಲಿ ಸರ್ವರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂದೇಶವನ್ನು ಚಲನಚಿತ್ರದ ಮೂಲಕ ಅಚ್ಚುಕಟ್ಟಾಗಿ ಅದ್ಭುತವಾಗಿ ತೋರಿಸಲಾಗಿದೆ.
ದರ್ಶನ್ ಅವರ ಅದ್ಭುತ ನಟನೆ ಅಭಿಮಾನಿಗಳನ್ನು ಚಲನಚಿತ್ರ ಪ್ರಿಯರನ್ನು ಮತ್ತೊಮ್ಮೆ ರಂಜಿಸುವುದರ ಜೊತೆಗೆ ಹೊಸ ಸಂದೇಶವನ್ನು ಸಾರಿದ್ದಾರೆ. ಚಲನಚಿತ್ರ ಯಶಸ್ಸು ಕಾಣಲಿ ಎಂದು ಕಾಟೇರ ಚಲನಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕಾಟೇರ ಚಿತ್ರವನ್ನು ಹಾರೈಸಿರುವ ಬಗ್ಗೆ ಬರೆದುಕೊಂಡಿದ್ದಾರೆ.